ಯುಜಿಸಿ ವೇತನಕ್ಕೆ ಒತ್ತಾಯಿಸಿ ಪ್ರತಿಭಟನೆ

7

ಯುಜಿಸಿ ವೇತನಕ್ಕೆ ಒತ್ತಾಯಿಸಿ ಪ್ರತಿಭಟನೆ

Published:
Updated:

ಬೆಂಗಳೂರು: ಯು.ಜಿ.ಸಿ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ವಿಶ್ವವಿದ್ಯಾಲಯ ಶಿಕ್ಷಕೇತರ ನೌಕರರ ಸಂಘದ ಸದಸ್ಯರು ಬೆಂಗಳೂರು ವಿ.ವಿಯ ಆಡಳಿತ ಕಚೇರಿ ಮುಂದೆ ಶುಕ್ರವಾರ ಧರಣಿ ನಡೆಸಿದರು.ಸಂಘದ ಅಧ್ಯಕ್ಷ ಮಹಾಲಿಂಗಯ್ಯ ಮಾತನಾಡಿ, `ಕೆಂದ್ರ ಸರ್ಕಾರದ 6ನೇ ವೇತನ ಆಯೋಗವು ವೇತನ ಪರಿಷ್ಕರಣೆ ಮಾಡುವಾಗ ಪ್ರೊ. ಚಡ್ಡಾ ನೇತೃತ್ವದ ಸಮಿತಿ ರಚಿಸಿ ಶಿಕ್ಷಕರಿಗೆ ಮಾತ್ರ ವೇತನ ಹೆಚ್ಚಳ ಮಾಡಿದ್ದು, ಶಿಕ್ಷಕೇತರ ನೌಕರಿಗೆ ಅನ್ಯಾಯ ಮಾಡಿದೆ. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರಿಗೆ ಯು.ಜಿ.ಸಿ ವೇತನ ನೀಡುತ್ತಿರುವಂತೆ, ಶಿಕ್ಷಕೇತರ ನೌಕರರಿಗೂ ವೇತನ ಮಂಜೂರು ಮಾಡಬೇಕು~ ಎಂದರು.ರಾಜ್ಯದ ಎಲ್ಲಾ ವಿ.ವಿಗಳಲ್ಲಿ ವೇತನ ಹಾಗೂ ಸೇವಾ ನಿಯಮಗಳಲ್ಲಿ ಭಿನ್ನತೆ ಇದೆ. ಈ ನೀತಿಯನ್ನು ತೆಗೆದು ಹಾಕಿ ಏಕರೂಪದ ವ್ಯವಸ್ಥೆಯನ್ನು ಜಾರಿ ಮಾಡಬೇಕು. ವಿ.ವಿಗಳಲ್ಲಿ ಕೆಲಸ ಮಾಡುವ ಮಹಿಳಾ ನೌಕರರಿಗೆ ವಸತಿ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ವಿಶ್ವವಿದ್ಯಾಲಯಗಳಲ್ಲಿ ಸರ್ಕಾರವು ಯೋಜನಾ ಹಾಗೂ ಯೋಜನೇತರದ ಅಡಿಯಲ್ಲಿ ನೀಡುತ್ತಿರುವ ಅನುದಾನವನ್ನು ಕಡಿತ ಮಾಡಿರುವುದರಿಂದ ವಿ.ವಿಗಳಿಗೆ ಆರ್ಥಿಕ ಸಮಸ್ಯೆ ಎದುರಾಗಿದೆ. ಆದ್ದರಿಂದ  ಈ ಸ್ವಾಧೀನ ನೀತಿಯನ್ನು ಕೈಬಿಟ್ಟು, ಸಕಾಲಕ್ಕೆ ಹಣ ಬಿಡುಗಡೆ ಮಾಡಿ ವಿ.ವಿಗಳ ಅಭಿವೃದ್ಧಿಗೆ ಸಹಾಯ ಮಾಡಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದರು.ಸಂಘದ ಉಪಾಧ್ಯಕ್ಷ ವೆಂಕಟಯ್ಯ, ಪ್ರಧಾನ ಕಾರ್ಯದರ್ಶಿ ಆರ್. ರಂಗಧಾಮ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry