ಯುದ್ಧಕ್ಕೂ ಮುನ್ನ ಭಾರತದಲ್ಲಿ ಅಕ್ರಮ ವಾಸ್ತವ್ಯ

7
ಪಾಕ್ ನಿವೃತ್ತ ಸೇನಾ ಅಧಿಕಾರಿಯಿಂದ ಮುಷರಫ್ ವಿರುದ್ಧ ಮತ್ತೊಂದು ಬಾಂಬ್

ಯುದ್ಧಕ್ಕೂ ಮುನ್ನ ಭಾರತದಲ್ಲಿ ಅಕ್ರಮ ವಾಸ್ತವ್ಯ

Published:
Updated:
ಯುದ್ಧಕ್ಕೂ ಮುನ್ನ ಭಾರತದಲ್ಲಿ ಅಕ್ರಮ ವಾಸ್ತವ್ಯ

ಇಸ್ಲಾಮಾಬಾದ್ (ಪಿಟಿಐ):ಕಾರ್ಗಿಲ್‌ನಲ್ಲಿ 1999ರಲ್ಲಿ ಭಾರತ ಮತ್ತು ಪಾಕಿಸ್ತಾನ ಸೇನಾಪಡೆಗಳ ನಡುವೆ ಯುದ್ಧ ಆರಂಭಕ್ಕೆ ಒಂದು ತಿಂಗಳ ಮೊದಲೇ ಹೆಲಿಕಾಪ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಬಂದ ಪರ್ವೇಜ್ ಮುಷರಫ್, ಭಾರತದಲ್ಲಿ ಒಂದು ರಾತ್ರಿ ತಂಗಿದ್ದರು ಎಂಬ ವಾಸ್ತವ ಸಂಗತಿಯನ್ನು ಅವರ ನಿಕಟವರ್ತಿಯೊಬ್ಬರು ಹೊರಗೆಡಹಿದ್ದಾರೆ.

ಆಗ ಪಾಕ್ ಸೇನಾ ಮುಖ್ಯಸ್ಥರಾಗಿದ್ದ ಪರ್ವೇಜ್ ಮುಷರಫ್,1999ರ ಮಾರ್ಚ್ 28ರಂದು ಗಡಿ ನಿಯಂತ್ರಣ ರೇಖೆಯನ್ನು ದಾಟಿದ್ದಲ್ಲದೆ, ಭಾರತದೊಳಗೆ 11 ಕಿ. ಮೀ. ದೂರ ಬಂದು ಒಂದು ರಾತ್ರಿ ತಂಗಿದ್ದರು ಎಂದು ಪಾಕಿಸ್ತಾನ ಸೇನೆಯ ನಿವೃತ್ತ ಹಿರಿಯ ಅಧಿಕಾರಿ ಅಶ್ಫಕ್ ಹುಸೇನ್ ಬಹಿರಂಗಪಡಿಸುವುದರೊಂದಿಗೆ ಕಾರ್ಗಿಲ್ ಯುದ್ಧದ ಹಿಂದಿನ ಬೆಚ್ಚಿಬೀಳುವ ರಹಸ್ಯದ ಸುರುಳಿ ಒಂದೊಂದಾಗಿ ಬಿಚ್ಚಿಕೊಳ್ಳಲು ತೊಡಗಿದೆ.ಮುಷರಫ್ ಅವರೇ ಕಾರ್ಗಿಲ್ ಯುದ್ಧದ ಪ್ರಮುಖ ಸೂತ್ರಧಾರ ಎಂಬ ನಿವೃತ್ತ ಲೆ.ಜ. ಶಹೀದ್ ಅಜೀಜ್ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಟೆಲಿವಿಷನ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹುಸೇನ್ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದರು.ಭಾರತಕ್ಕೆ ಸೇರಿದ ಜಿಕ್ರಿಯಾ ಮುಸ್ತಖರ್ ಪ್ರದೇಶದಲ್ಲಿ ಬ್ರಿಗೇಡಿಯರ್ ಮಸೂದ್ ಅಸ್ಲಾಮ್ ಜೊತೆಗೆ ತಂಗಿದ ಮುಷರಫ್, ಮಾರನೇ ದಿನ ಅಲ್ಲಿಂದ ತೆರಳಿದರು. ಅದೇ ವೇಳೆ ಅಲ್ಲಿ ಪಾಕ್ ಪಡೆಗಳ ಕರ್ನಲ್ ಅಮ್ಜದ್ ಶಬ್ಬೀರ್ ಕೂಡ ಹಾಜರಿದ್ದರು ಎಂದು ಹುಸೇನ್ 2008ರ ಅಂತ್ಯದಲ್ಲಿ ಪ್ರಕಟಗೊಂಡ ತಮ್ಮ `ವಿಟ್‌ನೆಸ್ ಟು ಬ್ಲಂಡರ್: ಕಾರ್ಗಿಲ್ ಸ್ಟೋರಿ ಅನ್‌ಫೋಲ್ಡ್ಸ್' ಪುಸ್ತಕದಲ್ಲಿ ಬಹಿರಂಗಪಡಿಸ್ದ್ದಿದರು.1998ರ ಡಿಸೆಂಬರ್ 18ರಂದು ಪಾಕಿಸ್ತಾನ ಸೇನೆ ಮೊದಲ ಬಾರಿಗೆ ಭಾರತದ ಗಡಿ ನಿಯಂತ್ರಣ ರೇಖೆಯೊಳಗೆ ನುಸುಳಿತ್ತು. ಕ್ಯಾಪ್ಟನ್‌ಗಳಾದ ನದೀಮ್, ಅಲಿ ಹಾಗೂ ಹವಾಲ್ದಾರ್ ಲಲಿಕ್ ಜನ್ ಅವರನ್ನೊಳಗೊಂಡ ತಂಡವನ್ನು ಇದಕ್ಕಾಗಿ ನಿಯೋಜಿಸಲಾಗಿತ್ತು.

ಆದರೆ ಕಾರ್ಯಾಚರಣೆಯ ಹಿಂದಿನ ಉದ್ದೇಶ ಮಾತ್ರ ಅವರಿಗೆ ತಿಳಿದಿರಲಿಲ್ಲ, ಮಾತ್ರವಲ್ಲ, ಬಾಯಿಮಾತಿಗೂ ಕೂಡ ಅದನ್ನು ವಿವರಿಸಿರಲಿಲ್ಲ ಎಂದು ಹುಸೇನ್ ವಿವರಿಸಿದರು. ಇದಾದ ಕೆಲವೇ ಹೊತ್ತಿನಲ್ಲಿ ಗಡಿ ನಿಯಂತ್ರಣ ರೇಖೆಯ ಭಾರತೀಯ ಗಡಿ ಉದ್ದಕ್ಕೂ ನೆಲೆಗಳನ್ನು ವಶಪಡಿಸಿಕೊಳ್ಳಲು ಸೇನಾಪಡೆಗೆ ಆದೇಶಿಸಲಾಯಿತು ಎಂದರು.

ಭಾರತೀಯ ನೆಲೆಗಳನ್ನು ವಶಪಡಿಸಿಕೊಳ್ಳುವ ತಂತ್ರವನ್ನು ಹೆಣೆದ ಮೇಜರ್ ಜನರಲ್ ಜಾವೇದ್ ಹಸನ್, ಬಳಿಕ ಅದನ್ನು ರಾವಲ್ಪಿಂಡಿ ಕಮಾಂಡರ್ ಲೆ.ಜ. ಮಹಮೂದ್ ಅಹಮದ್, ಲೆ.ಜ. ಮೊಹಮದ್ ಅಜೀಜ್ ಮತ್ತು ಮುಷರಫ್ ಅವರಿಗೆ ವಿವರಿಸಿದ್ದರು ಎಂದು ಹುಸೇನ್ ತಿಳಿಸಿದ್ದಾರೆ.ಈ ಮಧ್ಯೆ, ಕಾರ್ಗಿಲ್ ಯುದ್ಧವು ಸೇನಾಪಡೆಯ ವಿಜಯ ಎಂಬ ಮುಷರಫ್ ಅವರ ಸಮರ್ಥನೆಯನ್ನು ಹುಸೇನ್ ಅಲ್ಲಗಳೆದಿದ್ದಾರೆ. `ಶತ್ರು ಸೈನಿಕರೊಂದಿಗೆ ಮುಖಾಮುಖಿಯಾಗುವವರೆಗೆ ಅದು ಜಯವಾಗಿತ್ತು. ಶತ್ರು ಸೈನಿಕರ ಅನುಪಸ್ಥಿತಿಯಲ್ಲಿ ನಮ್ಮ ಸೇನಾಪಡೆ ಗಡಿ ನಿಯಂತ್ರಣ ರೇಖೆಯನ್ನು ದಾಟಿತ್ತಲ್ಲದೆ ಅವರನ್ನು ಅಲ್ಲಿಗೆ ಕಳುಹಿಸಿದ ಉದ್ದೇಶವನ್ನು ಅವರಿಂದ ರಹಸ್ಯವಾಗಿರಿಸಲಾಗಿತ್ತು ಎಂದು ಹುಸೇನ್ ಅವರು ಮುಷರಫ್‌ಗೆ ತಿರುಗೇಟು ನೀಡಿದರು. ಕಾರ್ಗಿಲ್ ಕಾರ್ಯಾಚರಣೆಯ ಹಿಂದಿನ ಉದ್ದೇಶ ಏನಾಗಿತ್ತು ಎಂಬ ತಮ್ಮ ಪ್ರಶ್ನೆಗೆ ಅಧಿಕಾರಿಗಳು ಕೂಡ ನಿರುತ್ತರರಾಗಿದ್ದರು ಎಂದು ವಿವರಿಸಿದರು.ಪಾಕ್ ಸೈನಿಕರ ಒಳನುಸುಳುವಿಕೆ ಮೇ ಕೊನೆಯವರೆಗೆ ಅಥವಾ ಜೂನ್ ಆರಂಭದವರೆಗೆ ಭಾರತದ ಗಮನಕ್ಕೆ ಬಾರದು ಎಂದೇ ಪಾಕ್ ಊಹಿಸಿತ್ತು. ಆದರೆ ಅವರ ಊಹೆ ಸುಳ್ಳಾಯಿತು ಎಂದು ಹುಸೇನ್ ಹೇಳಿದರು.ಕಾರ್ಗಿಲ್ ಯುದ್ಧದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂಬ ವಿರೋಧಪಕ್ಷ ಪಿಎಂಎಲ್‌ಎನ್ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಹುಸೇನ್, ನ್ಯಾಯಾಂಗ ತನಿಖೆ ನಡೆಸುವ ತಂಡವು ಸೇನೆಯ ಮುಖ್ಯ ಕಚೇರಿಯಿಂದ ಯುದ್ಧಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry