ಶನಿವಾರ, ನವೆಂಬರ್ 23, 2019
18 °C

ಯುದ್ಧದ ಕುದಿಯಲ್ಲಿ ಬೇಯುತ್ತಿರುವ ಕೊರಿಯಾ

Published:
Updated:

ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ನಡುವೆ ಯುದ್ಧದ ಸನ್ನಿವೇಶ ನಿರ್ಮಾಣವಾಗಿದೆ. ಪ್ರಸ್ತುತ ಎರಡೂ ದೇಶಗಳ ನಡುವೆ ಮಾತಿನ ಕಾದಾಟವೂ ನಡೆಯುತ್ತಿದೆ. ಈ ಕಸರತ್ತು ಉಭಯ ದೇಶಗಳ ಹೊಸ ನಾಯಕರ ಶಕ್ತಿ ಪ್ರದರ್ಶನಕ್ಕೆ, ಅವರ ಸಾಮರ್ಥ್ಯ ಒರೆಹಚ್ಚುವುದಕ್ಕೆ ಮಾನದಂಡವಾಗುತ್ತಿದೆ.ದಕ್ಷಿಣ ಕೊರಿಯಾದ ನಾಯಕಿ, ಅಧ್ಯಕ್ಷೆ ಪಾರ್ಕ್ ಜೆಯುನ್ ಹೈ, ಉತ್ತರ ಕೊರಿಯಾ ಸೇನಾ ದಾಳಿ ನಡೆಸುವ ಸಣ್ಣ ಸೂಚನೆ ಸಿಕ್ಕಿದರೂ ರಾಜಕೀಯ ಆದೇಶಕ್ಕೆ ಕಾಯದೇ ಪ್ರತಿದಾಳಿ ನಡೆಸುವಂತೆ ತಮ್ಮ ಸೇನಾಧಿಕಾರಿಗಳಿಗೆ ಆದೇಶಿಸಿದ್ದಾರೆ.ಕಳೆದ ವರ್ಷವಷ್ಟೇ ಅಧಿಕಾರ ಸ್ವೀಕರಿಸಿರುವ ಉತ್ತರ ಕೊರಿಯಾದ ಯುವ ನಾಯಕ ಕಿಮ್ ಜಾಂಗ್ ಉನ್ ಅವರು ತಮ್ಮ ತಂದೆ ಕಿಮ್ ಜಾಂಗ್-2 ಅವರಿಗಿಂತ ಉಗ್ರವಾಗಿ ಅಮೆರಿಕ ಮತ್ತು ದಕ್ಷಿಣ ಕೊರಿಯಾ ವಿರುದ್ಧ ಗುಡುಗು ಹಾಕುತ್ತಿದ್ದಾರೆ. ವಿಶ್ವದ ಅತಿ ಆಕ್ರಮಣಕಾರಿ ಸೈನಿಕರು, ಸೇನಾಪಡೆ ಅವರ ಬೆನ್ನಿಗೆ ಇದೆ. ಅವರ ನಾಯಕತ್ವದಲ್ಲಿ ಉತ್ತರ ಕೊರಿಯಾ ಮೂರು ಹಂತದ ರಾಕೆಟ್ ಹಾಗೂ ಅಣ್ವಸ್ತ್ರ ಪರೀಕ್ಷೆ ನಡೆಸಿದೆ. ಅಷ್ಟೇ ಅಲ್ಲ ಕೊರಿಯಾ ಪರ್ಯಾಯ ದ್ವೀಪ `ಯುದ್ಧ ಸನ್ನಿವೇಶ'ಕ್ಕೆ ಮರಳಿದೆ ಎಂದು ಘೋಷಿಸಿದೆ.ಅಮೆರಿಕದ ಪ್ರಮುಖ ನಗರಗಳನ್ನು ಖಂಡಾಂತರ ಕ್ಷಿಪಣಿಯ ಮೂಲಕ ಉಡಾಯಿಸುವುದಾಗಿ ಸಹ ಬೆದರಿಕೆ ಹಾಕಿದೆ.

ಆದರೆ, ಬಹುತೇಕ ವಿಶ್ಲೇಷಕರು ಉತ್ತರ ಕೊರಿಯಾ ಬಳಿ ಅಷ್ಟು ಪ್ರಬಲ ಕ್ಷಿಪಣಿಗಳಿವೆಯೇ ಎಂಬ ಅನುಮಾನ ವ್ಯಕ್ತಪಡಿಸುತ್ತಾರೆ.ಸ್ವದೇಶದಲ್ಲಿ ತನ್ನ ಸ್ಥಾನ ಭದ್ರಗೊಳಿಸಿಕೊಳ್ಳಲು ಯುವ ನಾಯಕ ಕಿಮ್, ಹೀಗೆ ಮೇಲಿಂದ ಮೇಲೆ ಬೆದರಿಕೆ ಹಾಕುತ್ತಿರಬಹುದು. ಅದಕ್ಕಾಗಿಯೇ ತನ್ನ ವೈರಿ ದೇಶದ ನೀತಿಗಳ ಬಗ್ಗೆ ಕೆಂಡಕಾರುತ್ತಿರಬಹುದು ಎಂದು ಕೆಲವರು ಹೇಳುತ್ತಾರೆ. ಸಾಂಪ್ರದಾಯಿಕ ವೈರಿ ದಕ್ಷಿಣ ಕೊರಿಯಾ ಮೇಲೆ ವಿಜಯ ಸಾಧಿಸುವ ಅತೀವ ಆಂತರಿಕ ಒತ್ತಡದಿಂದಾಗಿ ಕಿಮ್ ಹೀಗೆ ವರ್ತಿಸುತ್ತಿರಬಹುದು. ಆತ ತನ್ನ ಗುಂಡಿಯನ್ನು ತಾನೇ ತೋಡಿಕೊಳ್ಳುತ್ತಿರಬಹುದು ಎಂಬುದೂ ಕೆಲವರ ಅಭಿಮತ.ಕಿಮ್ ಜಾಂಗ್ ಉನ್ ತನ್ನ ತಂದೆಗಿಂತ ಆಕ್ರಮಣಕಾರಿ ನಾಯಕ. ಅಣ್ವಸ್ತ್ರ ಪರೀಕ್ಷೆ ಹಾಗೂ ದೂರಗಾಮಿ ರಾಕೆಟ್‌ನ ಯಶಸ್ವಿ ಉಡಾವಣೆ ಅವರಿಗೆ ಈ ಆತ್ಮವಿಶ್ವಾಸ ತಂದುಕೊಟ್ಟಿದೆ ಎಂದು ಸೆಜಾಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಹಿರಿಯ ಪ್ರಾಧ್ಯಾಪಕರಾಗಿರುವ ಚೆಯಾಂಗ್ ಸೆಯಾಂಗ್ ಚಾಂಗ್ ಹೇಳುತ್ತಾರೆ.`ಆದರೆ, ಕಿಮ್ ತಂದೆ ಭಾರಿ ಪ್ರಭಾವಿ ನಾಯಕರಾಗಿದ್ದರು. ಸೇನೆಯ ಮೇಲೆ, ಸರ್ಕಾರದ ಮೇಲೆ ಅವರಿಗೆ ಸಂಪೂರ್ಣ ಹಿಡಿತವಿತ್ತು. ಕಿಮ್ ಜಾಂಗ್ ತನ್ನ ಅಧಿಕಾರ ಭದ್ರಪಡಿಸಿಕೊಳ್ಳಲು, ಬಲ ತೋರ್ಪಡಿಸಲು ಅಣ್ವಸ್ತ್ರದ ಮೊರೆ ಹೋಗಿದ್ದಾರೆ' ಎಂದೂ ಅವರು ಟೀಕಿಸುತ್ತಾರೆ.ಇತ್ತ ದಕ್ಷಿಣ ಕೊರಿಯಾದಲ್ಲಿ ತಿಂಗಳ ಹಿಂದಷ್ಟೇ ಪಾರ್ಕ್ ಜೆಯುನ್ ಹೈ ಅಧಿಕಾರ ಸ್ವೀಕರಿಸಿದ್ದಾರೆ. ದಕ್ಷಿಣ ಕೊರಿಯಾದ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಯೂ ಅವರಿಗಿದೆ.ಸಾಮಾನ್ಯವಾಗಿ ದಕ್ಷಿಣ ಕೊರಿಯಾ, ಉತ್ತರ ಕೊರಿಯಾದ ಬೆದರಿಕೆಗಳನ್ನು ಸವಾಲಾಗಿ ಸ್ವೀಕರಿಸುತ್ತಿರಲಿಲ್ಲ. ಆದರೆ, ಹೊಸ ನಾಯಕಿ ಪಾರ್ಕ್ ಈ ಸಮಸ್ಯೆಯನ್ನು ತುಸು ಗಂಭೀರವಾಗಿಯೇ ಸ್ವೀಕರಿಸಿದ್ದಾರೆ.ಇತ್ತೀಚೆಗಷ್ಟೇ ಸೇನೆಯ ಜನರಲ್‌ಗಳ ಸಭೆ ಕರೆದ ಆಕೆ, `ಉತ್ತರ ಕೊರಿಯಾದ ಈಗಿನ ಬೆದರಿಕೆಯನ್ನು ನಾನು ಗಂಭೀರವಾಗಿಯೇ ಪರಿಗಣಿಸಿದ್ದೇನೆ. ನಮ್ಮ ದೇಶದ ವಿರುದ್ಧ, ನಮ್ಮ ಜನರ ವಿರುದ್ಧ ಅವರು ಆಕ್ರಮಣ ಮಾಡಿದಲ್ಲಿ ರಾಜಕೀಯ ಆದೇಶಕ್ಕೆ ಕಾಯದೇ ಯುದ್ಧ ಮಾಡಿ' ಎಂದು ಸೇನಾಧಿಕಾರಿಗಳಿಗೆ ಹೇಳಿದ್ದಾರೆ.ಉತ್ತರ ಕೊರಿಯಾ ಅನಿರೀಕ್ಷಿತವಾಗಿ ದಾಳಿ ಮಾಡಿದಲ್ಲಿ ನನ್ನನ್ನು ಕೇಳುವ ಅಗತ್ಯವಿಲ್ಲ. ಈ ಸೇನೆಯ ಸರ್ವೋಚ್ಛ ನಾಯಕಿಯಾಗಿ ನಾನು ನಿಮ್ಮ ನಿರ್ಧಾರಗಳ ಮೇಲೆ ನಂಬಿಕೆ ಇಡುತ್ತೇನೆ ಎಂದೂ ಸೇನಾ ಜನರಲ್‌ಗಳಿಗೆ ಅವರು ತಿಳಿಸಿದ್ದಾರೆ.ಈ ಸೇನಾ ಸಂಘರ್ಷ ಮಿತಿಮೀರಿ ಹೋಗುವ ಭಯದಿಂದಾಗಿ ಅಮೆರಿಕ ಕಳೆದ ತಿಂಗಳಷ್ಟೇ ದಕ್ಷಿಣ ಕೊರಿಯಾ ಜತೆ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಉತ್ತರ ಕೊರಿಯಾ ಏನಾದರೂ ದಾಳಿ ನಡೆಸಿದಲ್ಲಿ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಒಂದಾಗಿ ಪ್ರತಿದಾಳಿ ನಡೆಸಬೇಕು ಎಂಬುದು ಈ ಒಪ್ಪಂದದ ತಿರುಳು. ಉತ್ತರ ಕೊರಿಯಾ ಸೈನ್ಯದ ಸ್ಥೈರ್ಯ ನುಚ್ಚುನೂರು ಮಾಡಬೇಕು ಮತ್ತು ತಮ್ಮ ಸೇನೆಯ ಗಾತ್ರವನ್ನು ಅನಗತ್ಯವಾಗಿ ಹೆಚ್ಚಿಸಿಕೊಳ್ಳಬಾರದು ಎಂಬುದು ಒಪ್ಪಂದಕ್ಕೆ ಕಾರಣವಾಗಿರುವ ಅಂಶವಾಗಿರಬಹುದು.ವಿಷಮ ಸ್ಥಿತಿ

ಈ ಎರಡೂ ಕೊರಿಯಾಗಳಲ್ಲಿ ಇರುವ ಸನ್ನಿವೇಶದಿಂದಾಗಿ ವಿಷಮ ಸ್ಥಿತಿ ಉದ್ಭವಿಸಿದೆ. ವೈರಿ ದೇಶಗಳ ಸೈನಿಕರು ಆಗಾಗ ಗುಂಡಿನ ಚಕಮಕಿ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಕೊರಿಯಾ ದ್ವೀಪಕಲ್ಪದ ನೆಮ್ಮದಿಗೆ ಭಂಗ ಬಂದಿದೆ.ಉತ್ತರ ಕೊರಿಯಾ ಜನರಲ್ಲಿ ದಿನೇದಿನೇ ಬೆಳೆಯುತ್ತಿರುವ ಹತಾಶೆಯ ಹಿನ್ನೆಲೆಯಲ್ಲಿ ಯುವ ನಾಯಕ ಕಿಮ್ ಕಳೆದ ಡಿಸೆಂಬರ್‌ನಲ್ಲಿ ರಾಕೆಟ್ ಉಡಾವಣೆ ಮಾಡಿದ್ದರು. ಈ ವರ್ಷದ ಫೆಬ್ರುವರಿಯಲ್ಲಿ ಅಣ್ವಸ್ತ್ರ ಪರೀಕ್ಷೆ ಮಾಡಿದ್ದಾರೆ. ಈ ತಂತ್ರವನ್ನು ಉತ್ತರ ಕೊರಿಯಾ ಲಾಗಾಯ್ತಿನಿಂದ ಅನುಸರಿಸಿಕೊಂಡುಬಂದಿದೆ.ಹೀಗೆ ಬೆದರಿಕೆ ಹಾಕುವ ಮೂಲಕ ಉತ್ತರ ಕೊರಿಯಾವು ಅಮೆರಿಕ ಮತ್ತು ದಕ್ಷಿಣ ಕೊರಿಯಾ ಜತೆ ಕೆಲ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ, ಈ ಬಾರಿ ಅಮೆರಿಕ ಮತ್ತು ಮಿತ್ರಪಕ್ಷಗಳು ಈ ಹಳೆಯ ತಂತ್ರಕ್ಕೆ ಶರಣಾಗಿಲ್ಲ. ಉತ್ತರ ಕೊರಿಯಾದ ಉದ್ಧಟತನಕ್ಕೆ ಬುದ್ದಿ  ಕಲಿಸಲು ವಿಶ್ವಸಂಸ್ಥೆಯ ಮೂಲಕ ಹೆಚ್ಚೆಚ್ಚು ತೀವ್ರವಾದ ಆರ್ಥಿಕ ದಿಗ್ಬಂಧನ ವಿಧಿಸಿವೆ.ಇದೇ ಸಂದರ್ಭದಲ್ಲಿ ಕಾಕತಾಳೀಯ ಎಂಬಂತೆ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಜಂಟಿ ಸಮರಾಭ್ಯಾಸ ಸಹ ನಡೆಸಿವೆ.ಯಾವಾಗಲೂ ಈ ಸೇನಾಭ್ಯಾಸಗಳನ್ನು ಜನರಿಂದ ದೂರ ಇಡುತ್ತಿದ್ದ ಅಮೆರಿಕ, ಇದೇ ಮೊದಲ ಬಾರಿ ಅಣ್ವಸ್ತ್ರ ಹೊತ್ತೊಯ್ಯಬಲ್ಲ ಬಿ-52, ಬಿ2 ಬಾಂಬರ್ ಹಾಗೂ ಬಿ-22 ಫೈಟರ್ ಜೆಟ್‌ಗಳನ್ನು ಬಹಿರಂಗವಾಗಿ ಪ್ರದರ್ಶಿಸಿದೆ. ತನ್ನ ಮೇಲೆ ದಾಳಿ ನಡೆಸಿದಲ್ಲಿ ಪ್ರತೀಕಾರ ತೆಗೆದುಕೊಳ್ಳುತ್ತಿದ್ದು, ಮೊದಲಿಗೆ ಉತ್ತರ ಕೊರಿಯಾ ನಾಯಕ ಕಿಮ್‌ನ ಅಜ್ಜ ಹಾಗೂ ಅಪ್ಪನ ಪ್ರತಿಮೆಗಳನ್ನು ಉರುಳಿಸುವುದಾಗಿ ದಕ್ಷಿಣ ಕೊರಿಯಾ ಹೇಳಿದೆ. ದಕ್ಷಿಣ ಕೊರಿಯಾದ ಈ ಹೇಳಿಕೆಗೆ ಕಿಮ್ ನಿಷ್ಠಾವಂತರು ಭಾರಿ ಕೋಪತಾಪ ವ್ಯಕ್ತಪಡಿಸಿದ್ದಾರೆ.ದಕ್ಷಿಣ ಕೊರಿಯಾ ನಾಯಕಿ ಪಾರ್ಕ್ ಅವರು ಸಂಪುಟಕ್ಕೆ ಕೆಲ ವಿವಾದಾತ್ಮಕ ವ್ಯಕ್ತಿಗಳನ್ನು ಸೇರಿಸಿಕೊಂಡಿದ್ದರಿಂದ ಆರಂಭದಲ್ಲಿ ಅವರ ಜನಪ್ರಿಯತೆ ಕಡಿಮೆಯಾಗಿತ್ತು. ಉತ್ತರ ಕೊರಿಯಾದ ಅಣ್ವಸ್ತ್ರ ಬೆದರಿಕೆಯನ್ನು ಸಮರ್ಥವಾಗಿ ಎದುರಿಸುತ್ತಲೇ, ಉಭಯ ದೇಶಗಳ ನಡುವೆ ಈಗ ಉದ್ಭವಿಸಿರುವ `ಕುದಿಮೌನ'ದ ವಾತಾವರಣ ತಿಳಿಗೊಳಿಸುವ ಹೊಣೆ ಅವರ ಮೇಲಿದೆ.`ಉತ್ತರ, ದಕ್ಷಿಣ ಕೊರಿಯಾ ನಡುವಿನ ಸಂಬಂಧ ಸಂಪೂರ್ಣ ಹದಗೆಟ್ಟಿದೆ. ಆದರೆ, ಇದೇ ಅಂತ್ಯವಲ್ಲ. ಜಾಗತಿಕ ಸಮುದಾಯದ ಜವಾಬ್ದಾರಿಯುತ ಸದಸ್ಯನಾಗಿ ಸರಿಯಾಗಿ ನಡೆದುಕೊಂಡಲ್ಲಿ ನಾವು ನೆರೆಯ ದೇಶದೊಂದಿಗೆ ಸಹಕರಿಸಲು ಸಿದ್ಧರಿದ್ದೇವೆ. ಈ ಆಹ್ವಾನವನ್ನು ಉ. ಕೊರಿಯಾ ಗಂಭೀರವಾಗಿ ಪರಿಗಣಿಸಲಿದೆ ಎಂಬ ಆಶಯ ಹೊಂದಿದ್ದೇವೆ' ಎಂದು ದಕ್ಷಿಣ ಕೊರಿಯಾದ ಉತ್ತರ ಕೊರಿಯಾ ವ್ಯವಹಾರಗಳ ಸಚಿವಾಲಯದ ವಕ್ತಾರ ಕಿಮ್ ಹ್ಯೂಂಗ್ ಸಕ್ ಹೇಳಿದ್ದಾರೆ.ಜಾಗತಿಕ ಸಮುದಾಯ ಹೇರಿರುವ ಆರ್ಥಿಕ ದಿಗ್ಬಂಧನದ ನಡುವೆಯೂ ತನ್ನ ಆರ್ಥಿಕತೆಯನ್ನು ಬಲವಾಗಿ ಕಟ್ಟುವ ಹಾಗೂ ಅಣ್ವಸ್ತ್ರ ದಾಸ್ತಾನು ಹೆಚ್ಚಿಸಿಕೊಳ್ಳುವ ಅಚಲ ಗುರಿ ಹೊಂದಿರುವುದಾಗಿ ಉತ್ತರ ಕೊರಿಯಾ ಘೋಷಿಸಿರುವುದಕ್ಕೆ ದಕ್ಷಿಣ ಈ ರೀತಿ ಪ್ರತಿಕ್ರಿಯಿಸಿದೆ. ಇದು ತನ್ನ ಹೊಸ ತಂತ್ರ ಎಂದು ಹೇಳಿರುವ ಉತ್ತರ ಕೊರಿಯಾದ ಆಡಳಿತ ಪಕ್ಷ, ಅಣ್ವಸ್ತ್ರಗಳನ್ನು ದೇಶದ ಜೀವನಾಡಿ ಎಂದು ಕರೆದಿದೆ.ಇದೇ ಸಮಯದಲ್ಲಿ ಕಿಮ್ ನಾಯಕತ್ವದಲ್ಲಿ ನಡೆದ ಉತ್ತರ ಕೊರಿಯಾದ ಆಡಳಿತಾರೂಢ ಕಾರ್ಮಿಕರ ಪಕ್ಷದ ಕೇಂದ್ರ ಸಮಿತಿಯ ಕಾರ್ಯಕಾರಿ ಸಭೆಯ ಬಗ್ಗೆ ವರದಿ ಮಾಡಿದ ಕೊರಿಯಾ ಸುದ್ದಿ ಸಂಸ್ಥೆ, ಆ ಸಭೆಯಲ್ಲಿ ಅಂಗೀಕರಿಸಲಾದ ಗೊತ್ತುವಳಿಯನ್ನು ಉದಾಹರಿಸಿ, ಅಣ್ವಸ್ತ್ರಗಳು ಉತ್ತರ ಕೊರಿಯಾಕ್ಕೆ ರಾಜಕೀಯ ಚೌಕಾಸಿಯ ಸಾಧನಗಳು ಆಗುತ್ತಿಲ್ಲ. ಆ ದೇಶದ ಆರ್ಥಿಕ ಸ್ಥಿತಿಗೂ ಕೊಡುಗೆ ನೀಡುತ್ತಿಲ್ಲ. ಅದೊಂದು ವ್ಯರ್ಥ ಕಸರತ್ತು ಎಂಬ ಧಾಟಿಯಲ್ಲಿ ವಿಶ್ಲೇಷಣೆ ಮಾಡಿದೆ.ಮ್ಯೋನ್ಮಾರ್‌ನ ಉದಾಹರಣೆಯಿಂದ ಪಾಠ ಕಲಿಯಿರಿ ಎಂದು ಅಮೆರಿಕ ಮತ್ತು ದಕ್ಷಿಣ ಕೊರಿಯಾ, ಉ. ಕೊರಿಯಾಕ್ಕೆ ಹೇಳಿದ ಕಿವಿಮಾತು, `ಗೋರ್ಕಲ್ಲ ಮೇಲೆ ಮಳೆ ಸುರಿದಂತೆ' ಆಗಿದೆ. ಮ್ಯೋನ್ಮಾರ್‌ನ ಹೊಸ ಸೇನಾ ನಾಯಕರು ಅನುಸರಿಸಿದ ಸುಧಾರಣಾ ನೀತಿಯಿಂದಾಗಿ ಆ ದೇಶಕ್ಕೆ ಈಗ ಕೋಟ್ಯಂತರ ಡಾಲರ್ ವಿದೇಶಿ ಹೂಡಿಕೆ ಹರಿದುಬರುತ್ತಿದೆ. ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ.ಉತ್ತರ ಕೊರಿಯಾ ಇದೇ ಹಟಮಾರಿ ಧೋರಣೆ ಮುಂದುವರಿಸಿದಲ್ಲಿ ಮತ್ತಷ್ಟು ಆರ್ಥಿಕ ದಿಗ್ಬಂಧನ ಎದುರಿಸಲಿದೆ. ಜಾಗತಿಕ ಮಟ್ಟದಲ್ಲಿ ಏಕಾಂಗಿಯಾಗಲಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.ಕಿಮ್ ಜಾಂಗ್ ಉನ್ ತನ್ನ ಗೋರಿ ತಾನೇ ತೋಡಿಕೊಳ್ಳುವಂತಹ ನಾಯಕನಲ್ಲ. ತನ್ನ ದೇಶದ ಸ್ಥಾನಮಾನ ಭದ್ರಪಡಿಸಿಕೊಳ್ಳಲು ಈ ರೀತಿ ಆಟವಾಡುತ್ತಿದ್ದಾರೆ ಎಂಬುದು ಕೆಲವರ ಅಭಿಪ್ರಾಯ.`ಉತ್ತರ ಕೊರಿಯಾಕ್ಕೆ ಅಣ್ವಸ್ತ್ರ ಹೊಂದಿದ ದೇಶದ ಸ್ಥಾನಮಾನ ದೊರಕಿಸಿಕೊಳ್ಳುವ ಆಕಾಂಕ್ಷೆಯಿಂದಾಗಿ ಕಿಮ್ ಪದೇಪದೇ ಅಣ್ವಸ್ತ್ರ ಬೆದರಿಕೆ ಹಾಕುತ್ತಿದ್ದಾರೆ' ಎಂದು  ಸೋಲ್‌ನ ಡಾಂಗುಕ್ ವಿಶ್ವವಿದ್ಯಾಲಯದ ಉತ್ತರ ಕೊರಿಯಾ ತಜ್ಞರಾಗಿರುವ ಕೊ ಯುವ್ಹಾನ್ ಹೇಳುತ್ತಾರೆ. ಕಿಮ್ ತಂದೆ ಗೋಪ್ಯವಾಗಿ ನಿರ್ಧಾರಗಳನ್ನು ತೆಗೆದುಕೊಂಡು ಅದನ್ನು ಪಕ್ಷದ ಮೇಲೆ, ಜನರ ಮೇಲೆ ಹೇರುತ್ತಿದ್ದರೆ, ಕಿಮ್ ಜಾಂಗ್ ಈ ವಿಚಾರದಲ್ಲಿ ಮುಕ್ತ ನೀತಿ ಅನುಸರಿಸುತ್ತಿದ್ದಾರೆ.ವಿವಿಧ ಪ್ರಾಂತ್ಯಗಳಲ್ಲಿ ನಾಯಕರ, ಪಕ್ಷದ ಸಭೆ ಕರೆಯುತ್ತಿದ್ದಾರೆ. ಆ ಸಭೆಗಳಲ್ಲಿ ತಮ್ಮ ನಿರ್ಧಾರಗಳನ್ನು ಪ್ರಕಟಿಸಿ ಅವೆಲ್ಲ ಆ ಸಭೆಯ ನಿರ್ಧಾರಗಳು ಎಂಬಂತೆ ಬಿಂಬಿಸುತ್ತಿದ್ದಾರೆ. ಒಂದು ವೇಳೆ ತಮ್ಮ ನೀತಿಗಳು ವಿಫಲವಾದಲ್ಲಿ ಅದೊಂದು ಸಾಮೂಹಿಕ ನಿರ್ಧಾರವಾಗಿತ್ತು ಎಂದು ಹೇಳಿಕೊಳ್ಳುವ ತಂತ್ರ ಅನುಸರಿಸುವಂತೆ ಕಾಣುತ್ತದೆ.ಅಣ್ವಸ್ತ್ರದ ಬೆದರಿಕೆ ಇರುವುದರಿಂದ ಬೇರೆ ಯಾವ ದೇಶವೂ ತಮ್ಮ ಮೇಲೆ ದಾಳಿ ನಡೆಸುವುದಿಲ್ಲ. ಹಾಗಾಗಿ ಸೇನಾ ವೆಚ್ಚ ತಗ್ಗಿಸಿ, ಜನರ ಜೀವನ ಮಟ್ಟ ಸುಧಾರಿಸುವಂತೆ ಕೃಷಿ ಕ್ಷೇತ್ರದ ಮೇಲೆ ಹಾಗೂ ಲಘು ಕೈಗಾರಿಕೆಗಳ ಮೇಲೆ ಹೂಡಿಕೆ ಮಾಡುವುದಾಗಿ ಉತ್ತರ ಕೊರಿಯಾದ ಯುವನಾಯಕ ಕಿಮ್ ಹೇಳುತ್ತಿದ್ದಾರೆ.ಅಣ್ವಸ್ತ್ರ ಬೆದರಿಕೆ ಒಡ್ಡುವ ಮೂಲಕ ತಮ್ಮ ದೇಶ ಸಮೃದ್ಧ ದಕ್ಷಿಣ ಕೊರಿಯಾಕ್ಕೆ ಸಮನಾದ ಸೇನಾಬಲ ಗಳಿಸಿಕೊಂಡಿದೆ ಎಂಬ ಭಾವನೆಯನ್ನು ಎಲ್ಲರಲ್ಲಿ ಹುಟ್ಟಿಸುವುದು. ಆನಂತರ ದೇಶದ ಆರ್ಥಿಕ ಸ್ಥಿತಿ ಸುಧಾರಣೆಯತ್ತ ಗಮನ ನೀಡುವುದು ಕಿಮ್ ಉಪಾಯವಾಗಿದೆ. ಆತ ಪಕ್ಕಾ ಲೆಕ್ಕಾಚಾರಸ್ಥ ಎನ್ನುತ್ತಾರೆ ಚೆಯಾಂಗ್.

 

ಪ್ರತಿಕ್ರಿಯಿಸಿ (+)