ಶನಿವಾರ, ಮೇ 15, 2021
23 °C

ಯುದ್ಧ ಎದುರಿಸಲು ದೇಶ ಸಶಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ/ಐಎಎನ್‌ಎಸ್): ಸೇನಾ ಪಡೆಗಳಲ್ಲಿ ಮದ್ದುಗುಂಡುಗಳ ಕೊರತೆಯಿದೆ ಎಂಬ ವರದಿಗಳು ಕೇವಲ `ವದಂತಿ~ ಎಂದು ತಳ್ಳಿಹಾಕಿರುವ ರಕ್ಷಣಾ ಸಚಿವ ಎ.ಕೆ. ಆಂಟನಿ, `ಯುದ್ಧದಂತಹ ಸನ್ನಿವೇಶದಲ್ಲಿ ಹೋರಾಡಲು ದೇಶ ಸಶಕ್ತವಾಗಿದೆ~ ಎಂದು ಪ್ರತಿಪಾದಿಸಿದ್ದಾರೆ.ಭಾರತೀಯ ವಾಯುಪಡೆ ಮಂಗಳವಾರ ಇಲ್ಲಿ ಆಯೋಜಿಸಿದ್ದ ಸಮಾರಂಭದ ಸಂದರ್ಭದಲ್ಲಿ ವರದಿಗಾರರ ಜೊತೆ ಮಾತನಾಡಿದ ಸಚಿವರು, `ಸೇನೆಯ ಬಳಿ ಕೇವಲ ನಾಲ್ಕು ದಿನಗಳಿಗೆ ಆಗುವಷ್ಟು ಮದ್ದುಗುಂಡುಗಳ ಸಂಗ್ರಹವಿದೆ ಎಂಬ ವರದಿಗಳೆಲ್ಲ ಊಹಾಪೋಹದಿಂದ ಕೂಡಿವೆ ಎಂದರು. ಕೆಲವು ಕೊರತೆಗಳು ಇರಬಹುದು. ಆದರೆ, ಹಿಂದಿನ ದಿನಗಳಿಗೆ ಹೋಲಿಸಿದರೆ ಭಾರತ ಯುದ್ಧ ಎದುರಿಸುವಲ್ಲಿ ಹಿಂದೆಂದಿಗಿಂತಲೂ ಸಶಕ್ತವಾಗಿದೆ, ಸರ್ವಸನ್ನದ್ಧವಾಗಿದೆ~ ಎಂದು ಹೇಳಿದರು.`ಸೇನೆಯ ಶೇ 100ರಷ್ಟು ಅಗತ್ಯ ಪೂರೈಸಲು ಸಾಧ್ಯವಾಗುವುದಿಲ್ಲ. ಅಲ್ಲದೇ ಇಡೀ ಸೇನಾ ಪಡೆ ಗಡಿಗಳಲ್ಲಿ ನಿಯೋಜಿತವಾಗಿಲ್ಲ. ಅದು ಎಲ್ಲೆಡೆ ಹರಡಿದೆ. ದೇಶದ ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುವ ಯಾವುದೇ ಸವಾಲು ಎದುರಿಸಲು ಸೇನೆ ಸಿದ್ಧವಾಗಿದೆ~ ಎಂದು ಅವರು ತಿಳಿಸಿದರು.ರಕ್ಷಣೆಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿ ಮೂರು ಸೇನಾ ಪಡೆಗಳ ಮುಖ್ಯಸ್ಥರನ್ನು ಕರೆಯಿಸಿ ಯುದ್ಧ ಸನ್ನದ್ಧತೆ ಬಗ್ಗೆ ವಿವರ ನೀಡುವಂತೆ ಕೇಳಲು ನಿರ್ಧರಿಸಿರುವ ಕುರಿತು ಪ್ರಶ್ನಿಸಿದಾಗ, `ಅದನ್ನು ನಿರ್ಧರಿಸುವವನು ನಾನಲ್ಲ, ಅದು ಸ್ಥಾಯಿ ಸಮಿತಿಗೆ ಸಂಬಂಧಿಸಿದ್ದು~ ಎಂದು ಅವರು ಉತ್ತರಿಸಿದರು.ಭೂಸೇನೆ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಈಚೆಗೆ ಬರೆದ ಪತ್ರ ಸೋರಿಕೆಯಾಗಿತ್ತು. ಈ ಪತ್ರದಲ್ಲಿ ಸೇನಾ ತುಕಡಿಗಳಲ್ಲಿ ಮದ್ದುಗುಂಡುಗಳ ತೀವ್ರ ಕೊರತೆಯಿದೆ ಎಂದು ಜನರಲ್‌ರವರು ಕಳವಳ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.