ಬುಧವಾರ, ನವೆಂಬರ್ 20, 2019
20 °C

ಯುನೆಸ್ಕೊ ನಂಟು ಬೇಡವೇ ಬೇಡ ಜನಪ್ರತಿನಿಧಿಗಳ ವಿರೋಧ

Published:
Updated:

ಬೆಂಗಳೂರು: ಪಶ್ಚಿಮಘಟ್ಟ ಪ್ರದೇಶದ 10 ತಾಣಗಳನ್ನು `ಯುನೆಸ್ಕೊ~ ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆ ಮಾಡಲು ಆ ಭಾಗದ ಜನಪ್ರತಿನಿಧಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.ಈ ಸಂಬಂಧ ಮಂಗಳವಾರ ನಡೆದ ಸಭೆಯಲ್ಲಿ ಹಾಜರಿದ್ದ ಚಿಕ್ಕಮಗಳೂರು- ಉಡುಪಿ ಸಂಸದ ಡಿ.ವಿ.ಸದಾನಂದಗೌಡ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರು ತಮ್ಮ ಅಭಿಪ್ರಾಯಗಳನ್ನು `ಪ್ರಜಾವಾಣಿ~ ಜತೆ ಹಂಚಿಕೊಂಡಿದ್ದಾರೆ.ಡಿ.ವಿ.ಸದಾನಂದಗೌಡ: `ಕಾಡಿನಲ್ಲೇ ನೆಲೆಸಿರುವ ಮಲೆಕುಡಿಯರು, ಸಿದ್ಧಿಗಳು ಮುಂತಾದವರನ್ನು ಇನ್ನೂ ಕಾಡಿನಲ್ಲೇ ಬಿಡಬೇಕೇ. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಬೇಡವೇ. ಪಶ್ಚಿಮಘಟ್ಟ ಪ್ರದೇಶವನ್ನು ವಿಶ್ವಪರಂಪರೆ ಪಟ್ಟಿಗೆ ಸೇರಿಸಿದ ನಂತರ ಇವರ ಗತಿ ಏನು. ಇನ್ನೂ ಅವರು ಲಂಗೋಟಿ ಇಟ್ಟುಕೊಂಡೇ ಜೀವನ ನಡೆಸಬೇಕೇ?ಹೀಗೆ ಹತ್ತಾರು ಪ್ರಶ್ನೆ ಹಾಕಿದ್ದು ಸಂಸದ ಡಿ.ವಿ.ಸದಾನಂದಗೌಡ.ಪಶ್ಚಿಮ ಘಟ್ಟವನ್ನು ಯುನೆಸ್ಕೊ ಪಟ್ಟಿಗೆ ಸೇರಿಸಿದ ತಕ್ಷಣವೇ ಅಲ್ಲಿನ ಜನರು ಒಂದು ಕಲ್ಲು ಎತ್ತಲು, ಶೆಡ್ ಹಾಕಿಕೊಳ್ಳಲು ಅದರ ಅನುಮತಿ ಪಡೆಯಬೇಕಾಗುತ್ತದೆ. ಅಂಗಿ ಬದಲಿಸಲೂ ಅನುಮತಿ ಪಡೆಯಬೇಕು. ಯಾರಿಗೋ ಅಧಿಕಾರ ಏಕೆ ಕೊಡಬೇಕು. ನಾವು ಎಲ್ಲಿದ್ದೇವೆ ಎಂದು ಪ್ರಶ್ನಿಸಿದರು.ನಾನು ನಿನ್ನೆಯ ಸಭೆಯಲ್ಲೂ ಒಂದೂವರೆ ಗಂಟೆ ಮಾತನಾಡಿದೆ. ಕಾಡು ಜನರ ಅಭಿವೃದ್ಧಿಗೆ ಸರ್ಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ. ಯುನೆಸ್ಕೊ ಪಟ್ಟಿಗೆ ಸೇರಿದ ನಂತರ ಇದು ಸಾಧ್ಯ ಇಲ್ಲ. ಆಮೇಲೆ ಈ ಜನರನ್ನು ಏನು ಮಾಡುವುದು ಎಂದು ಕೇಳಿದರು.ಈಗ ಇರುವ ಕಾನೂನುಗಳೇ ನಮ್ಮ ಕಾಡು ರಕ್ಷಿಸಲು ಸಾಕು. ಯುನೆಸ್ಕೊಗೆ ಕೊಟ್ಟು, ಅದರ ಗುಲಾಮರಾಗುವುದು ಬೇಡ. ಇದಕ್ಕೆ ನನ್ನ ಸಂಪೂರ್ಣ ವಿರೋಧ ಇದ್ದು, ಯಾವುದೇ ಕಾರಣಕ್ಕೂ ಇದನ್ನು ಜನ ಒಪ್ಪುವುದಿಲ್ಲ ಎಂದು ಹೇಳಿದರು.ಅಪ್ಪಚ್ಚು ರಂಜನ್: `ಪರಿಸರ ಉಳಿಸುವ ಬಗ್ಗೆ ಮಾತನಾಡುವ ಪರಿಸರವಾದಿಗಳು ಮೊದಲು ಹಳ್ಳಿಗೆ ಬಂದು ವಾಸ ಮಾಡಲಿ. ಅದು ಬಿಟ್ಟು ಬರಿ ಬೊಗಳೆ ಬಿಡುವುದು ಬೇಡ. ಎಲ್ಲ ಪರಿಸರವಾದಿಗಳೂ ನಗರ/ಪಟ್ಟಣ ಪ್ರದೇಶಗಳಲ್ಲಿ ನೆಲೆಸಿದ್ದು, ನಿಜವಾಗಲೂ ಪರಿಸರ ರಕ್ಷಣೆ ಮಾಡಿಕೊಂಡು, ವಿದ್ಯುತ್, ಕುಡಿಯಲು ನೀರು, ರಸ್ತೆ ಇಲ್ಲದೆ ವಾಸಿಸುತ್ತಿರುವವರ ಬಗ್ಗೆ ಇವರಿಗೆ  ಕನಿಕರ ಇಲ್ಲ.ಸ್ವಾತಂತ್ರ್ಯ ಬಂದು 60 ವರ್ಷ ಕಳೆದರೂ ಕೊಡಗಿನ ಅನೇಕ ಕಡೆ ವಿದ್ಯುತ್ ಸಂಪರ್ಕ ಇಲ್ಲ, ನೀರಿಲ್ಲ, ರಸ್ತೆ ಇಲ್ಲ. ಯುನೆಸ್ಕೊಗೆ ಕೊಟ್ಟ ನಂತರ ಇವೆಲ್ಲ ಮಾಡಲು ಎಲ್ಲಿ ಬಿಡುತ್ತಾರೆ? ಪ್ಯಾರಿಸ್‌ನಲ್ಲಿರುವ ಎನ್.ಜಿ.ಓ.ಗಳಿಗೆ ಅನುಕೂಲ ಮಾಡಲು ಏಕೆ ಪಶ್ಚಿಮ ಘಟ್ಟ ಪ್ರದೇಶಗಳನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಬೇಕು. ಇದರಿಂದ ಆಗುವ ಲಾಭವಾದರೂ ಏನು?~`ವನ್ಯ ಪ್ರಾಣಿಗಳು ನಾಡಿಗೆ ಬರುತ್ತಿರುವುದಕ್ಕೂ ಒಂದು ಕಾರಣ ಇದೆ. ಹಣದ ಮುಖ ನೋಡಿ ಐಎಫ್‌ಎಸ್ ಅಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ತೇಗ, ಅಕೇಶಿಯಾ ಬೆಳೆಸಿದರು. ಈ ಮರಗಳಲ್ಲಿ ಒಂದೇ ಒಂದು ಪಕ್ಷಿಯೂ ಗೂಡು ಕಟ್ಟುವುದಿಲ್ಲ. ಇದರಿಂದ ಆಹಾರವೂ ಇಲ್ಲ. ಹೀಗಾಗಿ ಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಬಂದವು. ಇದನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಮೊದಲು ಪ್ರಾಣಿಗಳಿಗೆ ಆಹಾರವಾಗುವಂತಹ ಮರಗಳನ್ನು ಬೆಳೆಸಬೇಕು. ಆಗ ಅವು ಕಾಡಿನಲ್ಲೇ ಇರುತ್ತವೆ~.ಸಿ.ಟಿ.ರವಿ: `ಪಶ್ಚಿಮಘಟ್ಟ ಪ್ರದೇಶದ 10 ಜಾಗಗಳನ್ನು ಯುನೆಸ್ಕೊ ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವುದನ್ನು ನಾನು ಕಣ್ಣು ಮುಚ್ಚಿ ಸ್ವಾಗತಿಸುವುದೂ ಇಲ್ಲ, ವಿರೋಧಿಸುವುದೂ ಇಲ್ಲ. ಪಶ್ಚಿಮ ಘಟ್ಟ ಸಂರಕ್ಷಿಸಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಸಮಗ್ರ ಅಧ್ಯಯನದ ನಂತರ ಸೂಕ್ತ ತೀರ್ಮಾನಕ್ಕೆ ಬರಲಿ~.

`ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವುದರಿಂದ ಆಗುವ ಲಾಭ ಮತ್ತು ನಷ್ಟದ ಬಗ್ಗೆಯೂ ಅಧ್ಯಯನ ನಡೆಯಲಿ. . ಆ ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ~.ಅರಣ್ಯ ಸಚಿವರ ಸಮರ್ಥನೆ: `ಹಂಪಿ~ ವಿಶ್ವ ಪರಂಪರೆ ಪಟ್ಟಿಗೆ ಸೇರಿದ ನಂತರ ಅದು ಮದ್ಯ ವ್ಯಸನಿಗಳು ಹಾಗೂ ಅರೆ ನಗ್ನ ವಿದೇಶಿಯರ ತಾಣವಾಗಿದ್ದು ಬಿಟ್ಟು ಬೇರೇನು ಆಗಿದೆ? ನಮ್ಮ ಸಂಪತ್ತನ್ನು ಉಳಿಸಿಕೊಳ್ಳುವುದು ಗೊತ್ತಿರುವಾಗ ಯುನೆಸ್ಕೊ ಏಕೆ ಬೇಕು?ಹೀಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್. ಪಶ್ಚಿಮ ಘಟ್ಟ ಪ್ರದೇಶದ 10 ತಾಣಗಳನ್ನು ಯುನೆಸ್ಕೊ ಪಟ್ಟಿಗೆ ಸೇರ್ಪಡೆ ಮಾಡಲು ಅವರು  ವಿರೋಧ ವ್ಯಕ್ತಪಡಿಸಿದ್ದಾರೆ.

ವಿಶ್ವ ಪರಂಪರೆ  ಪಟ್ಟಿಗೆ ಸೇರುವುದರಿಂದ ಯಾವುದೇ ಲಾಭ ಇಲ್ಲ.  ತಾಂತ್ರಿಕ ಸಲಹೆಗಳೂ ಇಲ್ಲ. ಹೀಗಿದ್ದ ಮೇಲೆ ಯುನೆಸ್ಕೊಗೆ ಏಕೆ ನೀಡಬೇಕು ಎಂದು ಪ್ರಶ್ನೆ ಮಾಡಿದರು.`ಕರ್ನಾಟಕದ್ದೇ ತಕರಾರು...~: ಜೀವವಿಜ್ಞಾನ ಮತ್ತು ಪರಿಸರ ಸಂಶೋಧನೆಯ ಅಶೋಕ ಟ್ರಸ್ಟ್‌ನ ಡಾ. ಜಗದೀಶ ಕೃಷ್ಣಸ್ವಾಮಿ ಪ್ರಕಾರ `ಇಡೀ ಪಶ್ಚಿಮ ಘಟ್ಟ ಶ್ರೇಣಿಯನ್ನು ಯುನೆಸ್ಕೊ ವಿಶ್ವ ಪರಂಪರೆ ತಾಣ ಪಟ್ಟಿಗೆ ಸೇರಿಸಲು ವರದಿ ನೀಡಲಾಗಿದೆ.ಕರ್ನಾಟಕವನ್ನು ಹೊರತುಪಡಿಸಿ ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡು ರಾಜ್ಯಗಳು ಪಶ್ಚಿಮ ಘಟ್ಟವನ್ನು ಈ ಪಟ್ಟಿಗೆ ಸೇರಿಸಲು ಯಾವುದೇ ತಕರಾರು ತೆಗೆದಿಲ್ಲ. ಈ ವಿಚಾರದಲ್ಲಿ ಸರ್ಕಾರೇತರ ಸಂಘಟನೆಗಳಿಗೆ (ಎನ್‌ಜಿಒ) ಯಾವುದೇ ಸ್ಥಾಪಿತ ಹಿತಾಸಕ್ತಿ ಇಲ್ಲ.ಕಡತ ಸಿಎಂ ವಿವೇಚನೆಗೆ

ಬೆಂಗಳೂರು: ಪಶ್ಚಿಮಘಟ್ಟ ವ್ಯಾಪ್ತಿಯ 10 ಪ್ರಮುಖ ಜೀವ ವೈವಿಧ್ಯ ತಾಣಗಳನ್ನು `ಯುನೆಸ್ಕೊ~ ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವುದಕ್ಕೆ ಸ್ಥಳೀಯ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ಕಡತವನ್ನು ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರಿಶೀಲನೆಗೆ ಕಳುಹಿಸಿದ್ದಾರೆ.ಮಂಗಳವಾರ ನಡೆದ ಸಭೆಯ ಅಭಿಪ್ರಾಯಗಳನ್ನು ಉಲ್ಲೇಖಿಸಿ, ಮಾರ್ಗದರ್ಶನ ನೀಡುವಂತೆ ಮುಖ್ಯಮಂತ್ರಿಯವರನ್ನು ಕೋರಿದ್ದಾರೆ. ಯುನೆಸ್ಕೊ ಪಟ್ಟಿ ಕುರಿತು ನಿರ್ಧಾರ ಪ್ರಕಟಿಸಲು ಇದೇ 19ರಂದು ಪ್ಯಾರಿಸ್‌ನಲ್ಲಿ ಸಭೆ ನಡೆಯಲಿದ್ದು, ಅಷ್ಟರೊಳಗೆ ಕೇಂದ್ರಕ್ಕೆ ರಾಜ್ಯದ ಅಭಿಪ್ರಾಯ ತಿಳಿಸಬೇಕಾಗಿದೆ. 

ಪ್ರತಿಕ್ರಿಯಿಸಿ (+)