ಬುಧವಾರ, ಏಪ್ರಿಲ್ 14, 2021
24 °C

ಯುನೆಸ್ಕೊ ಮಾನ್ಯತೆ ಬೇಡ ಎನ್ನುವುದು ಸರಿಯಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  `ಪಶ್ಚಿಮಪಟ್ಟದ ಮೇಲೆ ಹೇರುತ್ತಿರುವ ಸರಣಿ ಅಭಿವೃದ್ಧಿ ಯೋಜನೆಗಳ ಫಲವಾಗಿ ಇಂದು ಆ ಪ್ರದೇಶದಲ್ಲಿ ಶೇ 23 ರಷ್ಟು ಕಾಡು ಮಾತ್ರ ಉಳಿದುಕೊಂಡಿದೆ. ಅಲ್ಪಸ್ವಲ್ಪ ಕಾಡನ್ನು ಉಳಿಸಿಕೊಂಡಿರುವುದಕ್ಕೆ ಈಗ ಯುನೆಸ್ಕೊ ಮಾನ್ಯತೆ ಸಿಕ್ಕಿದೆ. ಆದರೆ, ನಮಗೆ ಆ ಗೌರವವೇ ಬೇಡ ಎನ್ನುವುದು ಸರಿಯಲ್ಲ~ ಎಂದು `ವೈಲ್ಡ್ ಲೈಫ್ ಫಸ್ಟ್~ನ ಮ್ಯಾನೇಜಿಂಗ್ ಟ್ರಸ್ಟಿ ಪ್ರವೀಣ್ ಭಾರ್ಗವ್ ಬೇಸರ ವ್ಯಕ್ತಪಡಿಸಿದರು.`ಅದಮ್ಯ ಚೇತನ~ ಸ್ವಯಂಸೇವಾ ಸಂಘಟನೆಯ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ನಡೆದ `ಪಶ್ಚಿಮಘಟ್ಟ-ನಮಗೆಷ್ಟು ಗೊತ್ತು~ ಭಾಷಣ-ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಅವರು ವಿಷಯ ಮಂಡಿಸಿ, `ವಿಧಾನಸೌಧ ನೋಡಿ ವಿಕಾಸಸೌಧ ಕಟ್ಟಿದ್ದೇವೆ. ಆದರೆ, ಒಂದು ಬಾರಿ ನಾಶವಾದರೆ ಪಶ್ಚಿಮ ಘಟ್ಟವನ್ನು ಕಟ್ಟಲು ಸಾಧ್ಯವಿಲ್ಲ~ ಎಂದರು.`ಪಶ್ಚಿಮ ಘಟ್ಟವನ್ನು ಬಗೆದು ರಸ್ತೆ, ರಾಷ್ಟ್ರೀಯ ಹೆದ್ದಾರಿ, ಜಲವಿದ್ಯುತ್ ಯೋಜನೆ, ರೈಲು ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ. ಬೃಹತ್ ಪ್ರಮಾಣದಲ್ಲಿ ಅರಣ್ಯದ ಛಿದ್ರೀಕರಣ ನಡೆಯುತ್ತಿದೆ. ಕಾಡು ಕಡಿದು ಗಿಡಗಳನ್ನು ನೆಟ್ಟರೆ ಅರಣ್ಯ ಸಂರಕ್ಷಣೆ ಮಾಡಿದಂತೆ ಆಗುವುದಿಲ್ಲ. ಈ ಭಾಗದಲ್ಲಿ ಎಚ್ಚರ ವಹಿಸಿ, ವೈಜ್ಞಾನಿಕ ವಿಶ್ಲೇಷಣೆ ಮಾಡದೆ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡರೇ ಒಂದು ದಿನ ಇಡೀ ಘಟ್ಟ ಪ್ರದೇಶವೇ ನಾಶವಾಗಲಿದೆ~ ಎಂದು ಅವರು ಎಚ್ಚರಿಸಿದರು.`ಪಶ್ಚಿಮಘಟ್ಟದಲ್ಲಿ 650ಕ್ಕೂ ಹೆಚ್ಚು ಪ್ರಬೇದದ ಮರಗಳಿದ್ದು, ಇದರಲ್ಲಿ 352 ಪ್ರಭೇದಗಳು ಕಣ್ಮರೆಯಾಗುತ್ತಿವೆ. ವಿಶಿಷ್ಟ ಜಾತಿಯ ಆರು ಬಿದಿರು ಜಾತಿಗಳು ಇವೆ. 139 ಸಸ್ತನಿಗಳ ಪೈಕಿ 17 ಪ್ರಭೇದಗಳು ಕಣ್ಮರೆಯಾಗುತ್ತಿರುವ ಪಟ್ಟಿಗೆ ಸೇರಿವೆ. 508 ಪ್ರಭೇದದ ಪಕ್ಷಿಗಳು ಇವೆ. ಅಭಿವೃದ್ಧಿ ಯೋಜನೆಗಳಿಂದಾಗಿ ಇವುಗಳಿಗೆ ಕುತ್ತು ಬಂದಿದೆ~ ಎಂದು ಅವರು ಕಳವಳ ವ್ಯಕ್ತಪಡಿಸಿದರು.`ಭದ್ರಾ ನದಿಯ ಮೂಲದಲ್ಲಿ 7,000 ಮಿ.ಮೀ. ಮಳೆಯಾಗುತ್ತದೆ. ಆದರೆ, ಇಲ್ಲಿ ಗಣಿಗಾರಿಕೆ ನಡೆಸಲಾಗಿದೆ. ಇಲ್ಲಿ ಗಣಿಗಾರಿಕೆ ನಡೆಸಬಾರದು ಎಂದು 2002ರ ಅಕ್ಟೋಬರ್ 30ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಗಣಿ ಕಂಪೆನಿಯಿಂದ ಸರ್ಕಾರಕ್ಕೆ ನಯಾಪೈಸೆ ಲಾಭ ಇಲ್ಲ. ಇಂದಿಗೂ ಸಹ ಆ ಕಂಪೆನಿಯ ಪರಿಕರಗಳನ್ನು ತೆಗೆದಿಲ್ಲ. ಆ ಕಂಪೆನಿಯನ್ನು ಉಳಿಸುವುದು ಹೇಗೆ ಎಂಬ ಬಗ್ಗೆ ಪರಿಶೀಲಿಸಲು ಸರ್ಕಾರವೇ ಇತ್ತೀಚೆಗೆ ಸಮಿತಿ ರಚನೆ ಮಾಡಿದೆ~ ಎಂದು ಅವರು ಬೇಸರ ವ್ಯಕ್ತಪಡಿಸಿದರು.`ಅರಣ್ಯ ಪ್ರದೇಶದಲ್ಲಿ ಅಕೇಶಿಯಾ ಗಿಡಗಳನ್ನು ನೆಡಲಾಗುತ್ತಿದೆ. ಪಶ್ಚಿಮ ಘಟ್ಟದಲ್ಲಿ ಅವುಗಳ ಸಂಖ್ಯೆ ವ್ಯಾಪಕವಾಗಿದೆ. ರಾಜ್ಯದಲ್ಲಿ ಕಾಡು ಉಳಿಸಲು ಜಪಾನ್ ಬ್ಯಾಂಕ್ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಒಂದು ಸಾವಿರ ಕೋಟಿ ರೂಪಾಯಿ ಸಾಲ ದೊರಕಿತ್ತು. ಆದರೆ, ಎಲ್ಲಿಯೂ ಅರಣ್ಯ ಹೆಚ್ಚಾಗಿಲ್ಲ~ ಎಂದು ಅವರು ಅಭಿಪ್ರಾಯಪಟ್ಟರು.`ಪಶ್ಚಿಮ ಘಟ್ಟದ ಸಂರಕ್ಷಣೆಗೆ ರಾಜ್ಯ ಸರ್ಕಾರ ವೈಜ್ಞಾನಿಕ ಭೂಮಿ ಬಳಕೆ ನೀತಿ ಜಾರಿಗೆ ತರಬೇಕು. ಅರಣ್ಯಗಳ ಛಿದ್ರೀಕರಣ ಆಗದಂತೆ ನೋಡಿಕೊಳ್ಳಬೇಕು. ವಿಜ್ಞಾನಿಗಳ ನೆರವು ಪಡೆದು ಈ ಪ್ರದೇಶಗಳಿಗೆ ಸೂಕ್ತ ಆಗುವಂತಹ ಯೋಜನೆಗಳನ್ನು ಅನುಷ್ಠಾನ ಮಾಡಬೇಕು. ಈಗಿರುವ ಅರಣ್ಯ ಕಾನೂನುಗಳು ಕಟ್ಟುನಿಟ್ಟಾಗಿವೆ. ಅವುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು. ಈ ಎಲ್ಲ ಕಾರ್ಯಕ್ಕೂ ಜನಪ್ರತಿನಿಧಿಗಳು ರಾಜಕೀಯ ಇಚ್ಛಾಶಕ್ತಿ ತೋರಬೇಕು~ ಎಂದು ಅವರು ಕಿವಿಮಾತು ಹೇಳಿದರು.

`ವಿರೋಧ ಹಾಸ್ಯಾಸ್ಪದ~

`ನೊಬೆಲ್ ಪ್ರಶಸ್ತಿಯನ್ನು ನಿರಾಕರಿಸಿದ ರೀತಿ ಪಶ್ಚಿಮಘಟ್ಟಕ್ಕೆ ಯುನೆಸ್ಕೊ ಮಾನ್ಯತೆ ನೀಡಿದಾಗ ವಿರೋಧಿಸುವುದು ಹಾಸ್ಯಾಸ್ಪದ~ ಎಂದು ಸಂಸದ ಅನಂತ ಕುಮಾರ್ ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಮಾತನಾಡಿದ ಅವರು, `ನೊಬೆಲ್ ಪ್ರಶಸ್ತಿ ಸಿಕ್ಕ ಬಳಿಕವೂ ಲೇಖಕರು ತಮ್ಮ ಸಾಹಿತ್ಯ ಚಟುವಟಿಕೆಯನ್ನು ಮುಂದುವರಿಸುತ್ತಾರೆ. ಯುನೆಸ್ಕೊ ಮಾನ್ಯತೆ ಕೂಡ ಗೌರವವೇ.ಮಾನ್ಯತೆ ನೀಡಿದ ಬಳಿಕ ಯುನೆಸ್ಕೊ ಹಸ್ತಕ್ಷೇಪ ಮಾಡುವುದಿಲ್ಲ. ಯುನೆಸ್ಕೊ ಮಾನ್ಯತೆಯನ್ನು ಒಪ್ಪಿ ಆಡಳಿತ ನಡೆಸುವವರು ಪರಿಸರ ಸಂರಕ್ಷಣೆ ಮಾಡುತ್ತೇವೆ ಎಂಬ ಪ್ರಜ್ಞೆ ಬೆಳೆಸಿಕೊಳ್ಳಬೇಕು~ ಎಂದು ಅವರು ಕಿವಿಮಾತು ಹೇಳಿದರು. `ಉಳಿದ ಪ್ರದೇಶದಲ್ಲಿ ಅಭಿವೃದ್ಧಿ ಮಾಡಿ~

`ರಾಜ್ಯದ ಒಟ್ಟು ವಿಸ್ತಾರ 1,91,799 ಚ.ಕಿ.ಮೀ. ಪ್ರದೇಶ. ರಾಜ್ಯದಲ್ಲಿ `ಯುನೆಸ್ಕೊ~ ಮಾನ್ಯತೆ ಪಡೆದಿರುವ ಪಶ್ಚಿಮಘಟ್ಟ ಇರುವುದು 1,533 ಚ.ಕಿ.ಮೀ. ಪ್ರದೇಶ. ಶೇ 1ರಷ್ಟು ಈ ಪ್ರದೇಶವನ್ನು ಸಂರಕ್ಷಿಸಿ ಉಳಿದ ಶೇ 99 ಪ್ರದೇಶದಲ್ಲಿ ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಬಹುದು~ ಎಂದು ಪ್ರವೀಣ್ ಭಾರ್ಗವ್ ಸಲಹೆ ನೀಡಿದರು.`ಯುನೆಸ್ಕೊ ಮಾನ್ಯತೆಯನ್ನೇ ಶಾಪ ಎಂದು ಪರಿಗಣಿಸುತ್ತಿದ್ದೇವೆ. ದೇಶದಲ್ಲಿ ಯುನೆಸ್ಕೊ ಮಾನ್ಯತೆ ನೀಡುವ ಕಾರ್ಯಕ್ಕೆ ಚಾಲನೆ ನೀಡಿದವರೇ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು. ಆದರೆ, ಇಂದು ಅವರ ನಿರ್ಣಯವನ್ನೇ ರಾಜ್ಯ ಸರ್ಕಾರ ಒಪ್ಪುತ್ತಿಲ್ಲ~ ಎಂದು ಬೇಸರಿಸಿದರು.`ಯುನೆಸ್ಕೊ ಮಾನ್ಯತೆಯಿಂದ ಆ ಪ್ರದೇಶದ ಅಭಿವೃದ್ಧಿ ಕಾರ್ಯಕ್ಕೆ ಧಕ್ಕೆ ಉಂಟಾಗುವುದಿಲ್ಲ. ಜನರನ್ನು ಒಕ್ಕಲೆಬ್ಬಿಸಲಾಗುತ್ತದೆ ಎಂದು ಅಪಪ್ರಚಾರ ನಡೆಸಲಾಗುತ್ತಿದೆ. ಯುನೆಸ್ಕೊ ಮಾನ್ಯತೆಯನ್ನು ಗೌರವ ಎಂದು ಸ್ವೀಕರಿಸಬೇಕು~ ಎಂದು ಅವರು ಇದೇ ವೇಳೆ ಹೇಳಿದರು.`ಮಾನ್ಯತೆ ಸಿಕ್ಕ ಬಳಿಕ ಸ್ವಯಂಸೇವಾ ಸಂಘಟನೆಗಳಿಗೆ ಅನುದಾನ ದೊರಕುತ್ತದೆ ಎಂಬುದು ತಪ್ಪು ಕಲ್ಪನೆ. ಅನುದಾನ ದೊರಕುವುದು ಸರ್ಕಾರಕ್ಕೆ ಮಾತ್ರ~ ಎಂದು ಅವರು ಸ್ಪಷ್ಟಪಡಿಸಿದರು.ಈಗ ಕಾಳಿದಾಸ ಇದ್ದಿದ್ದರೆ...`ಸುಂದರ ಸ್ತ್ರೀ ಕೈ ಮುಗಿದು ನಿಂತ ಹಾಗಿದೆ ಎಂಬುದಾಗಿ ಕಾಳಿದಾಸ ಕವಿ ಪಶ್ಚಿಮಘಟ್ಟವನ್ನು ವರ್ಣಿಸಿದ್ದರು. ಈಗ ಕಾಳಿದಾಸ ಇದ್ದಿದ್ದರೆ ಪಶ್ಚಿಮ ಘಟ್ಟದ ಸ್ಥಿತಿಯನ್ನು ನೋಡಿ ಕೈ ಮುಗಿದು ನಿಂತ ಕುರೂಪಿ ಮಹಿಳೆ ಎಂದು ಕವಿತೆ ಬರೆಯುತ್ತಿದ್ದರೇನೋ...ಹೀಗೆಂದು ಪಶ್ಚಿಮ ಘಟ್ಟದ ಈಗಿನ ಸ್ಥಿತಿಯನ್ನು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಪ್ರೊ. ಹರೀಶ ಭಟ್ ಕಟ್ಟಿಕೊಟ್ಟರು. `ಈ ರೀತಿಯಲ್ಲಿ ಪಶ್ಚಿಮ ಘಟ್ಟವನ್ನು ಛಿದ್ರ ಮಾಡಿದ್ದೇವೆ. ನದಿಮೂಲಗಳು ಒಂದು ಬಾರಿ ನಾಶವಾದರೆ ಮತ್ತೆ ಸೃಷ್ಟಿಸಲು ಸಾಧ್ಯವಿಲ್ಲ. ನಮಗೆ ಈಗ ಶುದ್ಧ ನೀರು ಹಾಗೂ ಗಾಳಿ ಸಿಗುತ್ತಿರುವುದು ಪಶ್ಚಿಮ ಘಟ್ಟದಿಂದ ಮಾತ್ರ. ಅದು ನಮ್ಮ ಮಟ್ಟಿಗೆ ರಿಸರ್ವ್ ಬ್ಯಾಂಕಿನ ಖಜಾನೆ ಇದ್ದ ಹಾಗೆ~ ಎಂದು ಅವರು ಅಭಿಪ್ರಾಯಪಟ್ಟರು.`ನಮ್ಮಲ್ಲಿ ಒಟ್ಟು 5,000 ಪ್ರಭೇದದ ಸಸ್ಯಗಳಿವೆ. ಪಶ್ಚಿಮಘಟ್ಟದಲ್ಲಿ 700 ಔಷಧೀಯ ಸೇರಿದಂತೆ 1,500 ಸಸ್ಯ ಪ್ರಭೇದಗಳು ಇವೆ. ಔಷಧೀಯ ಸಸ್ಯಗಳು ಪಶ್ಚಿಮಘಟ್ಟದಲ್ಲಿ ಬಿಟ್ಟು ಬೇರೆಲ್ಲೂ ಬದುಕುವುದಿಲ್ಲ. ಇಲ್ಲಿ 508 ಪ್ರಭೇದದ ಪಕ್ಷಿಗಳಿದ್ದು, ಇದರಲ್ಲಿ 19 ಪ್ರಭೇದಗಳು ಮತ್ತೆಲ್ಲೂ ಕಂಡುಬರುವುದಿಲ್ಲ. 320 ಪ್ರಭೇದದ ಚಿಟ್ಟೆಗಳು ಇವೆ. ನಮ್ಮ ಶೇ 70 ಆಹಾರ ಪದಾರ್ಥಗಳ ಸೃಷ್ಟಿಗೆ ಪರಾಗಸ್ಪರ್ಶ ಮಾಡುವುದು ದುಂಬಿಗಳು ಹಾಗೂ ಚಿಟ್ಟೆಗಳು~ ಎಂದು ಅವರು ಮಾಹಿತಿ ನೀಡಿದರು.`ಪಶ್ಚಿಮ ಘಟ್ಟದ ಜನರನ್ನು ಒಕ್ಕಲೆಬ್ಬಿಸುವುದಿಲ್ಲ. ಸಣ್ಣಪುಟ್ಟ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಲು ಅಡ್ಡಿಪಡಿಸುವುದಿಲ್ಲ ಎಂದು ಯುನೆಸ್ಕೊ ಸ್ಪಷ್ಟವಾಗಿ ತಿಳಿಸಿದೆ. ಅಲ್ಲಿನ ಸ್ಥಿತಿಯ ಬಗ್ಗೆ ಪ್ರತಿವರ್ಷ ವರದಿ ಕೊಡಬೇಕು ಎಂದೂ  ತಿಳಿಸಿದೆ. ಆದರೆ, ಯಾವತ್ತೂ ಪಶ್ಚಿಮಘಟ್ಟದ ವಿಚಾರದಲ್ಲಿ ಯುನೆಸ್ಕೊ ಹಸ್ತಕ್ಷೇಪ ಮಾಡುವುದಿಲ್ಲ~ ಎಂದು ಅವರು ಸ್ಪಷ್ಟಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.