ಭಾನುವಾರ, ಏಪ್ರಿಲ್ 11, 2021
25 °C

ಯುನೆಸ್ಕೊ: ವಿಶ್ವ ಪರಂಪರೆ ಪಟ್ಟಿಗೆ ಪಶ್ಚಿಮ ಘಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಭಾರತದ ಪಶ್ಚಿಮ ಘಟ್ಟಗಳು ಸೇರಿದಂತೆ ಒಟ್ಟು ಎಂಟು ತಾಣಗಳನ್ನು ಯುನೆಸ್ಕೊ ವಿಶ್ವ ಪರಂಪರೆ ಸಮಿತಿ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಿದೆ.ಭಾನುವಾರ ರಷ್ಯದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು ಬ್ರೆಜಿಲ್, ಸ್ವೀಡನ್, ಟರ್ಕಿ, ಛಾಡ್, ರಿಯೋ ಡಿ ಜನೈರೋದ ಕ್ಯಾರಿಯೋಕಾ ನೈಸರ್ಗಿಕ ತಾಣಗಳು ಸೇರಿದಂತೆ ಒಟ್ಟು ಎಂಟು ತಾಣಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.ಸೋಮವಾರವೂ ವಿಶ್ವ ಪರಂಪರೆ ಸಮಿತಿಯ ಸಭೆ ನಡೆಯಲಿದ್ದು ಇನ್ನಷ್ಟು ತಾಣಗಳನ್ನು ಸೇರಿಸುವ ಸಾಧ್ಯತೆಗಳಿವೆ.ಪಶ್ಚಿಮ ಘಟ್ಟಗಳು ಹಿಮಾಲಯ ಪರ್ವತಗಳಿಗಿಂತ ಹಳೆಯದು ಎಂದು ಸಮಿತಿ ಹೇಳಿದ್ದು, ಇಲ್ಲಿರುವ ಪರ್ವತಗಳು ಮತ್ತು ಅರಣ್ಯ ಭಾರತದ ಮುಂಗಾರು ಹವಾಮಾನ ಪದ್ಧತಿಯ ಮೇಲೆ ಪ್ರಭಾವ ಬೀರುತ್ತದೆ ಎಂದು ತಿಳಿಸಲಾಗಿದೆ.ಈ ಭಾಗದ ಹವಾಗುಣವನ್ನು ನಿಯಂತ್ರಿಸುವ ಪಶ್ಚಿಮ ಘಟ್ಟಗಳು ಭೂಮಿಯ ಮೇಲೆಯೇ ಉತ್ತಮ ಮುಂಗಾರು ಪದ್ಧತಿಯನ್ನು ಪ್ರಸ್ತುತಪಡಿಸುತ್ತದೆ ಎಂದು ಸಮಿತಿ ತಿಳಿಸಿದೆ.ಪಶ್ಚಿಮ ಘಟ್ಟಗಳಲ್ಲಿ ಅತ್ಯುಚ್ಚ ಜೀವವೈವಿಧ್ಯ ಇದ್ದು, ಜೀವ ವೈವಿಧ್ಯಕ್ಕೆ ಸಂಬಂಧಿಸಿದಂತೆ ವಿಶ್ವದ ಎಂಟು ಉತ್ತಮ ಜೀವವೈವಿಧ್ಯ ತಾಣಗಳ ಪೈಕಿ ಇದೂ ಒಂದು ಸಮಿತಿ ವರ್ಣಿಸಿದೆ. ಈ ತಾಣವು ವಿಶ್ವದಲ್ಲಿ ಅಪಾಯದ ಅಂಚಿನಲ್ಲಿರುವ 325ಕ್ಕೂ ಹೆಚ್ಚು ಸಸ್ಯ ಪ್ರಭೇದಗಳು, ಪ್ರಾಣಿ ವೈವಿಧ್ಯಗಳು, ಪಕ್ಷಿ ಸಂಕುಲಗಳು, ಉಭಯವಾಸಿಗಳು, ಸರೀಸೃಪಗಳು ಮತ್ತು ವಿವಿಧ ಜಾತಿಯ ಮೀನುಗಳ ಆಶ್ರಯ ಸ್ಥಾನವಾಗಿದೆ ಎಂದು ವಿಶ್ವ ಪರಂಪರೆ ಸಮಿತಿ ಅಭಿಪ್ರಾಯ ಪಟ್ಟಿದೆ.ಪಶ್ಚಿಮ ಘಟ್ಟಗಳನ್ನು ವಿಶ್ವ ಪರಂಪರೆ ತಾಣಗಳ ಪಟ್ಟಿಯಲ್ಲಿ ಸೇರಿಸಲು ಭಾರತ ಸರ್ಕಾರವು ಯುನೆಸ್ಕೊದ ವಿಶ್ವ ಪರಂಪರೆ ಸಮಿತಿಗೆ ಕೋರಿದ್ದು ಕರ್ನಾಟಕ ಸರ್ಕಾರವು ರಾಜ್ಯದಲ್ಲಿನ ಕೆಲ ಭಾಗಗಳನ್ನು ಇದರ ವ್ಯಾಪ್ತಿಗೆ ಸೇರಿಸದಂತೆ ಮತ್ತು ಇವುಗಳನ್ನು ವಿಶ್ವ ಪರಂಪರೆ ತಾಣದ ವ್ಯಾಪ್ತಿಯಿಂದ ಕೈ ಬಿಡುವಂತೆ ಕೋರಿತ್ತು. ಈ ಹಿನ್ನೆಲೆಯಲ್ಲಿ ವಿವಾದ ಉಂಟಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.