ಶುಕ್ರವಾರ, ನವೆಂಬರ್ 15, 2019
21 °C

ಯುಪಿಎಯಿಂದ ಸೇಡಿನ ರಾಜಕಾರಣ-ಬಿಜೆಪಿ ಆರೋಪ

Published:
Updated:

ಲಖನೌ (ಪಿಟಿಐ): `ಕೇಂದ್ರದ ಯುಪಿಎ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ~ ಎಂದು ಆರೋಪಿಸಿರುವ ಬಿಜೆಪಿ, ಅದು ಸಿಬಿಐನಂತಹ ತನಿಖಾ ಸಂಸ್ಥೆಗಳನ್ನು ಬಿಜೆಪಿ ಆಡಳಿತವಿರುವ ರಾಜ್ಯಗಳನ್ನು ಗುರಿಯಾಗಿರಿಸಿಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.`ಯುಪಿಎ ಸರ್ಕಾರವು ಬಿಜೆಪಿ ಆಡಳಿತವಿರುವ ರಾಜ್ಯಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿರಿಸಿಕೊಂಡು ಸೇಡಿನ ಮನೋಭಾವ ಪ್ರದರ್ಶಿಸುತ್ತಿದೆ~ ಎಂದು ಬಿಜೆಪಿ ವಕ್ತಾರ ರವಿ ಶಂಕರ್ ಪ್ರಸಾದ್ ಆರೋಪಿಸಿದರು.ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಉದ್ಘಾಟನಾ ಭಾಷಣವನ್ನು ಅವರು ಸುದ್ದಿಗಾರರಿಗೆ ವಿವರಿಸಿದರು.`ಕಾಂಗ್ರೆಸ್ ಆಡಳಿತವಿರದ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳ ಆಡಳಿತ ನಿರ್ವಹಣೆಗೆ ರಾಜ್ಯಪಾಲರುಗಳು ಅಡ್ಡಿಪಡಿಸುತ್ತಿದ್ದಾರೆ. ಬಿಜೆಪಿ ಸರ್ಕಾರಗಳು ಸಿದ್ಧಪಡಿಸುವ ಮಸೂದೆಗಳನ್ನು ರಾಜ್ಯಪಾಲರುಗಳು ಅಂಗೀಕರಿಸುತ್ತಿಲ್ಲ. ಕರ್ನಾಟಕದಲ್ಲಿ ಸರ್ಕಾರ ಎರಡನೇ ಬಾರಿಗೆ ಬಹುಮತ ಸಾಬೀತುಪಡಿಸುವಂತಹ ಸನ್ನಿವೇಶ ಸೃಷ್ಟಿಸಲಾಗಿತ್ತು. ಅಲ್ಲಿ ರಾಜ್ಯಪಾಲ ಭಾರದ್ವಾಜ್ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತರಂತೆ ಕಾರ್ಯನಿರ್ವಹಿಸುತ್ತಿದ್ದಾರೆ~ ಎಂದು ಟೀಕಿಸಿದರು.`ದೇಶದಾದ್ಯಂತ ಸುಮಾರು 2000 ಎನ್‌ಕೌಂಟರ್‌ಗಳು ನಡೆದಿದ್ದರೂ, ಬಿಜೆಪಿ ಆಡಳಿತವಿರುವ ಗುಜರಾತ್‌ನಿಂದ ಮಾತ್ರ 19 ಪ್ರಕರಣಗಳು ವರದಿಯಾಗಿದೆ. ಬಿಜೆಪಿ ಸರ್ಕಾರಗಳನ್ನು ಗುರಿಯಾಗಿರಿಸಿಕೊಂಡು  ಸಿಬಿಐನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸುಪ್ರೀಂಕೋರ್ಟ್ ಆದೇಶವಿದ್ದರೂ ಗುಜರಾತ್, ರಾಜಸ್ಥಾನ ಮತ್ತು ಆಂಧ್ರಪ್ರದೇಶಗಳಲ್ಲಿ ತನಿಖೆಗಳನ್ನು ನಡೆಸುತ್ತಲೇ ಇಲ್ಲ~ ಎಂದು ದೂರಿದರು.`ತನಿಖಾ ಸಂಸ್ಥೆಗಳನ್ನು ಬಿಜೆಪಿ ಸರ್ಕಾರಗಳ ವಿರುದ್ಧ ಬಳಸಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ಕೇಂದ್ರದ ಈ ಕ್ರಮವನ್ನು ಪಕ್ಷ ಬಲವಾಗಿ ಖಂಡಿಸುತ್ತದೆ. ಅದರ ಈ ನೀತಿಗೆ ಹೆದರುವುದಿಲ್ಲ. ಬದಲಾಗಿ ಅದರ ಮುಖವಾಡಗಳನ್ನು ಕಳಚಿಡುವ ಕಾರ್ಯವನ್ನು ಮುಂದುವರಿಸುತ್ತದೆ~ ಎಂದು ಸ್ಪಷ್ಟಪಡಿಸಿದರು.`ಭ್ರಷ್ಟಾಚಾರ ಪ್ರಕರಣಗಳನ್ನು ಸೂಕ್ತ ತನಿಖೆಗೆ ಒಳಪಡಿಸಬೇಕೆಂಬುದನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಪುನರುಚ್ಚರಿಸಿದ್ದಾರೆ. ಈ ಎಲ್ಲಾ ಹಗರಣಗಳ ಬಹು ದೊಡ್ಡ ಹೊಣೆಗಾರಿಕೆಯಿಂದ ಪ್ರಧಾನ ಮಂತ್ರಿ ಜಾರಿಕೊಳ್ಳಲು ಸಾಧ್ಯವಿಲ್ಲ~ ಎಂದು ರವಿಶಂಕರ್ ಹೇಳಿದರು.ಕಾಮನ್‌ವೆಲ್ತ್ ಕ್ರೀಡಾಕೂಟ ಹಗರಣ ಪ್ರಸ್ತಾಪಿಸಿದ ಅವರು, `ದೆಹಲಿಯಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು 25 ಸಾವಿರ ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ 30 ಸಾವಿರ ಕೋಟಿ ವ್ಯಯಿಸಿದ್ದಾರೆ. ಆದರೆ ಅವರ ವಿರುದ್ಧ ಯಾಕೆ ತನಿಖೆ ನಡೆಸುತ್ತಿಲ್ಲ. ಅವರನ್ನು ಯಾರು ರಕ್ಷಿಸುತ್ತಿದ್ದಾರೆ? ಎಂದು ಪ್ರಶ್ನಿಸಿದರು.`ಸುರೇಶ್ ಕಲ್ಮಾಡಿ ಅವರನ್ನು ಕಾಮನ್‌ವೆಲ್ತ್ ಕ್ರೀಡಾಕೂಟ ಸಂಘಟನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸುವುದಕ್ಕೆ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಮತ್ತು ಕಾಂಗ್ರೆಸ್‌ನ ಮುಖಂಡರಾಗಿದ್ದ ಸುನಿಲ್ ದತ್ ಆಕ್ಷೇಪ ವ್ಯಕ್ತಪಡಿಸಿದ್ದರೂ ಅವರನ್ನೇ ಏಕೆ ನೇಮಿಸಲಾಯಿತು~ ಎಂದು ಕೇಳಿದರು. `ಈ ಎಲ್ಲಾ ಹಗರಣಗಳಿಗೂ ಪ್ರಧಾನಿ ಮನಮೋಹನ ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪೂರ್ಣ ಜವಾಬ್ದಾರರಾಗಿದ್ದು,ಇವಕ್ಕೆ ಸೂಕ್ತ ಉತ್ತರ ಬೇಕು~ ಎಂದರು.

ಪ್ರತಿಕ್ರಿಯಿಸಿ (+)