ಯುಪಿಎ ಜನವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

7

ಯುಪಿಎ ಜನವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

Published:
Updated:
ಯುಪಿಎ ಜನವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ಬಾಗಲಕೋಟೆ: ಬೆಲೆ ಏರಿಕೆ,  ಕಾರ್ಮಿಕ ಕಾನೂನು ಉಲ್ಲಂಘನೆ, ಸರ್ಕಾರಿ ಕಂಪೆನಿಗಳ ಖಾಸಗೀಕರಣ ಸೇರಿದಂತೆ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರೋಧಿಸಿ ಜಿಲ್ಲಾ ಕಾರ್ಮಿಕ ಸಂಘಗಳ ಜಂಟಿ ಸಮಿತಿಯಿಂದ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ನಡೆದ ಪ್ರತಿಭಟನೆಯಲ್ಲಿ ಬಿಎಂಎಸ್, ಐಎನ್‌ಟಿಯುಸಿ, ಎಐಟಿಯುಸಿ, ಸಿಐಟಿಯು, ಎಚ್‌ಎಂಎಸ್, ಎಐಟಿಯುಸಿ, ಟಿಯುಸಿಸಿ, ಅಂಗನವಾಡಿ, ಬ್ಯಾಂಕ್, ಎಲ್‌ಐಸಿ, ಕೆಎಸ್‌ಆರ್‌ಟಿಸಿ, ಬಾಗಲಕೋಟೆ ಸಿಮೆಂಟ್ ಕಂಪೆನಿ ಕೆಲಸಗಾರರ ಸಂಘ, ಜಿಲ್ಲಾ ಹಾಲು ಒಕ್ಕೂಟ, ಜಿಲ್ಲಾ ಔಷಧಿ  ಮಾರಾಟ ಪ್ರತಿನಿಧಿಗಳ ಸಂಘ, ಗ್ರಾ.ಪಂ. ನೌಕರರ ಸಂಘದ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.ನಗರದ ಪ್ರಮುಖ ಮಾರ್ಗದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಳಿಕ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಘೋಷಣೆ ಕೂಗಿದರು.ಬೆಲೆ ಏರಿಕೆ ನಿಯಂತ್ರಣಕ್ಕೆ ತಕ್ಷಣ ಕ್ರಮಕೈಗೊಳ್ಳಬೇಕು, ಉದ್ಯೋಗ ಸೃಷ್ಠಿಸಲು ಮತ್ತು ರಕ್ಷಿಸಲು ಪ್ಯಾಕೇಜ್ ರೂಪಿಸಬೇಕು,  ಕಾರ್ಮಿಕ ಕಾನೂನುಗಳನ್ನು ಕಠಿಣವಾಗಿ ಅನುಷ್ಠಾನ ಮಾಡಬೇಕು, ಸಾರ್ವತ್ರಿಕವಾಗಿ ಎಲ್ಲ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಒದಗಿಸಲು ಹಣಕಾಸು ಸಂಪನ್ಮೂಲ ಒದಗಿಸಲು ಕ್ರಮಕೈಗೊಳ್ಳಬೇಕು ಮತ್ತು ಲಾಭದಾಯಕ ಸಾರ್ವಜನಿಕ ಕ್ಷೇತ್ರದ ಕೈಗಾರಿಕೆಗಳ ಷೇರು ಮಾರಾಟ ಮಾಡಬಾರದು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.ಕಾಯಂ ಸ್ವರೂಪದ ಕೆಲಸಗಳನು ಗುತ್ತಿಗೆ ಪದ್ಧತಿಯಲ್ಲಿ ನಿರ್ವಹಿಸುತ್ತಿರುವುದನ್ನು ರದ್ದುಪಡಿಸಬೇಕು, ಶಾಸನ ಬದ್ಧ ಕನಿಷ್ಠ ವೇತನ ನೀಡಬೇಕು, ಬೋನಸ್, ಭವಿಷ್ಯನಿಧಿ ಪಾವತಿಗೆ ಇರುವ ಎಲ್ಲ ಮಿತಿ ಮತ್ತು ಅರ್ಹತೆಗಳನ್ನು ತೆಗೆದುಹಾಕಿ ಗ್ರಾಚ್ಯುಟಿ ಮೊತ್ತವನ್ನು ಏರಿಸಬೇಕು, ಎಲ್ಲ ಕಾರ್ಮಿಕರಿಗೆ ನಿವೃತ್ತಿವೇತನ ನೀಡಬೇಕು ಎಂದು ಆಗ್ರಹಿಸಿದರು.ಬೆಲೆ ಏರಿಕೆ  ನಿಯಂತ್ರಿಸಲು ಕೇಂದ್ರ ಸರ್ಕಾರ ಯಾವುದೇ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಲು ಕಾಳಜಿ ವಹಿಸುತ್ತಿಲ್ಲ, ಈ ನಡುವೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತಷ್ಟು ತೀವ್ರಗೊಳ್ಳುವಂತೆ ಪೆಟ್ರೋಲಿಂ ಉತ್ಪನ್ನಗಳ ಬೆಲೆಗಳ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಲಾಭದಾಯಕವಾಗಿರುವ ಕೇಂದ್ರ ಸಾರ್ವಜನಿಕ ಕ್ಷೇತ್ರದ ಕೈಗಾರಿಕೆಗಳ ಷೇರು ಬಂಡವಾಳವನ್ನು ಮಾರಾಟ ಮಾಡುವ ಮೂಲಕ ವರ್ಷವೊಂದರಲ್ಲೇ ರೂ.40 ಸಾವಿರ ಕೋಟಿ ಸಂಗ್ರಹಿಸುವ ಗುರಿ ಹೊಂದಿರುವುದು ಕಾರ್ಮಿಕರ ಹಾಗೂ ದೇಶದ ಹಿತಕ್ಕೆ ಮಾರಕವಾದ ಕ್ರಮವಾಗಿದೆ, ಕಾರ್ಮಿಕ ಕಾನೂನುಗಳನ್ನು ಜಾರಿಗೊಳಿಸದೇ ಸಾಮಾಜಿಕ ಭದ್ರತೆಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ದೂರಿದರು.

 

ವರ್ಷವಡೀ ನಿರಂತರವಾಗಿ ಮಾಡಬೇಕಾದ ಕಾಯಂ ಕೆಲಸಗಳನ್ನು ಗುತ್ತಿಗೆ ಪದ್ಧತಿಯಲ್ಲಿ ದುಡಿಯುವ ಕಾರ್ಮಿಕರಿಗೂ ಒಳಗೊಂಡು ಸಾರ್ವಜನಿಕ ಕ್ಷೇತ್ರದ ಹಾಗೂ ಖಾಸಗಿ ರಂಗದ ಕೈಗಾರಿಕೆಗಳಲ್ಲಿಯೂ ಕನಿಷ್ಠ ವೇತನ, ಭವಿಷ್ಯ ನಿಧಿ, ಇಎಸ್‌ಐ, ಬೋನಸ್ ಮತ್ತು ಗ್ರಾಚ್ಯುಟಿ ಸೌಲಭ್ಯಗಳನ್ನು ಜಾರಿಗೊಳಿಸದೇ ನಿರಾಕರಿಸಲಾಗುತ್ತಿರುವುದಕ್ಕೆ ಪ್ರತಿಭಟನಾಕಾರರು ತೀವ್ರ ವಿರೋಧ ವ್ಯಕ್ತಪಡಿಸಿದರು.ಎಐಟಿಯುಸಿಯ ಬಿ.ವಿ. ಕುಲಕರ್ಣಿ, ಬ್ಯಾಂಕ್ ನೌಕರರ ಸಂಘದ ಕಾರ್ಯದರ್ಶಿ ಉಮಾರಾಮ್ ಜೀರೆ, ಗ್ರಾ.ಪಂ. ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎನ್.ಕುಂಬಾರ, ಎಲ್‌ಐಸಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಪ್ಪ, ಬಿಎಂಎಸ್‌ನ ಶ್ರೀಕಾಂತ್, ಬಾಗಲಕೋಟೆ ಸಿಮೆಂಟ್ ಕಂಪೆನಿಯ ವಿಠಲ ಮೆಟಗಾರ, ಎಸ್. ಆರ್.ಗೌಡರ, ದೇಶಪಾಂಡೆ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಅಕ್ಕಮಹಾದೇವಿ ಗೌಡರ, ಉಪಾಧ್ಯಕ್ಷೆ ಎಚ್.ಕೆ.ದಾಸರ, ಗುರುಲಿಂಗಪ್ಪ ಹೊಸಕೋಟಿ, ಚಂದ್ರಕಲಾ ಕಟ್ಟಿಮನಿ, ಶಿವಲಿಂಗಪ್ಪ ಕೆರೂರ ಮತ್ತಿತರರು ಪಾಲ್ಗೊಂಡಿದ್ದರು.

ಮುಷ್ಕರದ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಬಂದ್ ಆಗಿದ್ದ ಕಾರಣ ಸಾರ್ವಜನಿಕರಿಗೆ ಅಡಚಣೆಯಾಯಿತು.ಅಕ್ಷರ ದಾಸೋಹ ನೌಕರರ ರ‌್ಯಾಲಿ

ಹುನಗುಂದ: ತಾಲ್ಲೂಕು ಅಕ್ಷರ ದಾಸೋಹ ನೌಕರರ ಸಂಘ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮಂಗಳವಾರ ಪ್ರತಿಭಟನಾ ರ‌್ಯಾಲಿ ನಡೆಸಿದರು.ನಗರದ ಪ್ರಮುಖ ಬೀದಿಗಳಲ್ಲಿ ರ‌್ಯಾಲಿ ನಡೆಸಿದ ಪ್ರತಿಭಟನಾಕಾರರು ಸೇವೆ ಕಾಯಂ ಮತ್ತು ಇತರ ಬೇಡಿಕೆಗಳಿಗಾಗಿ ಘೋಷಣೆಗಳನ್ನು ಕೂಗಿದರು.  ನಂತರ ತಹಶೀಲ್ದಾರ ಅಪರ್ಣಾ ಪಾವಟೆಯ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಸೇವಾ ಸೌಲಭ್ಯ, ಭವಿಷ್ಯನಿಧಿ, ಇ.ಎಸ್.ಐ. ಗುಂಪು ವಿಮೆ, ಭದ್ರತೆ, ನಿವೃತ್ತಿ ವೇತನ, ಶಾಲಾ ನೌಕರರಂತೆ ನೇಮಕ, ಮರಣೋತ್ತರವಾಗಿ ಅವರ ಮನೆಯಲ್ಲಿ ಅನುಕಂಪದ ನೌಕರಿ, ಸರ್ಕಾರದ ಬಿ.ಪಿ.ಎಲ್. ವಿವಿಧ ಸೌಲಭ್ಯ, ಸಕಾಲಕ್ಕೆ ಸಂಭಾವನೆ, ರಾಜಕೀಯ ಕಾರಣಕ್ಕೆ ಸಿಬ್ಬಂದಿ ವಜಾಗೊಳಿಸುವ ಕ್ರಮ ತಡೆ, ಖಾಸಗೀಕರಣ ವಿರೋಧ ಮುಂತಾದ ಬೇಡಿಕೆಗಳನ್ನು ಇಟ್ಟಿದ್ದಾರೆ. ಅಧ್ಯಕ್ಷೆ ಸಿದ್ದಮ್ಮ ಕಲ್ಗುಡಿ ಮತ್ತು ಕಾರ್ಯದರ್ಶಿ ಶಾಂತಾಬಾಯಿ ಝಳಕಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry