ಶನಿವಾರ, ನವೆಂಬರ್ 23, 2019
17 °C

ಯುಪಿಎ ಸರ್ಕಾರಕ್ಕೆ ಇಕ್ಕಟ್ಟು?

Published:
Updated:

ನವದೆಹಲಿ (ಐಎಎನ್‌ಎಸ್): ಸಂಸತ್ತಿನ ಬಜೆಟ್ ಅಧಿವೇಶನದ ಮುಂದುವರಿದ ಭಾಗ ಸೋಮವಾರದಿಂದ ಆರಂಭವಾಗಲಿದೆ. ಧನ ವಿನಿಯೋಗ ಮಸೂದೆ ಸೇರಿದಂತೆ ಇನ್ನೂ ಕೆಲ ಪ್ರಮುಖ ಮಸೂದೆಗಳಿಗೆ ಸಮಾಜವಾದಿ ಪಕ್ಷ (ಎಸ್‌ಪಿ) ಹಾಗೂ ಬಹುಜನ ಸಮಾಜವಾದಿ ಪಕ್ಷಗಳ (ಬಿಎಸ್‌ಪಿ) ಬೆಂಬಲ ಸಿಗುವ ಖಾತರಿ ಇಲ್ಲ. ಹೀಗಾಗಿ ಯುಪಿಎ ಸರ್ಕಾರ ಸಂಕಷ್ಟಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆಗಳಿವೆ.ಈ ಎರಡೂ ಪಕ್ಷಗಳು ನೀಡುತ್ತಿರುವ ಬಾಹ್ಯ ಬೆಂಬಲದಿಂದ ಸರ್ಕಾರ ಉಳಿದುಕೊಂಡಿದೆ. ಆದರೆ ಪರಸ್ಪರ ಎದುರಾಳಿಗಳಾಗಿರುವ ಇವು ಸಮಯ ಸಿಕ್ಕಾಗಲೆಲ್ಲ ಯುಪಿಎಯನ್ನು ಬೆದರಿಸುತ್ತಲೇ ಇವೆ. ಇವುಗಳ ಈ ನಡೆಯಿಂದಾಗಿ ಸರ್ಕಾರಕ್ಕೆ ಬಹುಮತ ನಷ್ಟವುಂಟಾಗಿ ಅವಧಿಪೂರ್ವ ಚುನಾವಣೆಗೆ ದಾರಿಮಾಡಿಕೊಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರ.ಮಿತ್ರಪಕ್ಷಗಳಿಂದಲೇ ಎದುರಾಗಬಹುದಾದ ಸಂಭವನೀಯ ಸಂಕಷ್ಟದಿಂದ ಪಾರಾಗಲು ಪಿಂಚಣಿ ಹಾಗೂ ವಿಮಾ ರಂಗದ ಸುಧಾರಣೆಯ ಮಸೂದೆಗಳು ಸೇರಿದಂತೆ ಹಣವಿನಿಯೋಗ, ಆಹಾರ ಭದ್ರತೆ, ಭೂಸ್ವಾಧೀನ, ಲೋಕಪಾಲದಂತಹ ಪ್ರಮುಖ ಮಸೂದೆಗಳಿಗೆ ಆದಷ್ಟು ಬೇಗ ಅಂಗೀಕಾರ ಪಡೆಯಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.ಲೋಕಸಭೆಗೆ ಅವಧಿಪೂರ್ವ ಚುನಾವಣೆ ಬಹುತೇಕ ರಾಜಕೀಯ ಪಕ್ಷಗಳಿಗೆ ಬೇಕಿಲ್ಲವಾದರೂ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಮಾತ್ರ ಯುಪಿಎಗೆ ಬೆಂಬಲ ಹಿಂಪಡೆದು ಸರ್ಕಾರ ಬೀಳಿಸುವ ಬೆದರಿಕೆಯನ್ನು ಹಲವು ತಿಂಗಳಿನಿಂದ ಹಾಕುತ್ತಲೇ ಬರುತ್ತಿದ್ದಾರೆ.ಸಂಸತ್ತಿನಲ್ಲಿ 18 ಸದಸ್ಯ ಬಲದ ಡಿಎಂಕೆ ಹಾಗೂ 19 ಸದಸ್ಯರ ತೃಣಮೂಲ ಕಾಂಗ್ರೆಸ್ ಕಳೆದ ಆರುತಿಂಗಳ ಅವಧಿಯಲ್ಲಿ ಯುಪಿಎ ಮಿತ್ರಕೂಟದಿಂದ ಹೊರಕ್ಕೆ ಹೋಗಿದ್ದು, ಇದೀಗ ಎಸ್‌ಪಿ ಹಾಗೂ ಬಿಎಸ್‌ಪಿಗಳು ಇದೇ ದಾರಿಯತ್ತ ನಡೆಯುತ್ತಿರುವುದರಿಂದ ಕಳವಳಗೊಂಡಂತೆ ಕಂಡುಬಂದಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶುಕ್ರವಾರ ಹಿರಿಯ ಸಚಿವರ ಜತೆಗೂಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

ಪ್ರತಿಕ್ರಿಯಿಸಿ (+)