ಬುಧವಾರ, ಮೇ 25, 2022
23 °C

ಯುಪಿಸಿಎಲ್ ಪಂಪ್‌ಹೌಸ್‌ಗೆ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎರ್ಮಾಳು (ಪಡುಬಿದ್ರಿ): ತೆಂಕ ಎರ್ಮಾಳು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಯುಪಿಸಿಎಲ್ ಕಂಪೆನಿ ನಿರ್ಮಿಸಿದ ಪಂಪ್‌ಹೌಸ್‌ಗೆ ನೋಟಿಸ್ ನೀಡಲು ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ. ತೆಂಕ ಎರ್ಮಾಳು ಗ್ರಾ.ಪಂ. ಕಚೇರಿ ಸಮೀದದಲ್ಲೇ ಇರುವ ಪಂಪ್‌ಹೌಸ್‌ಗೆ ರೈತ ಸಂಘದವರು ಶುಕ್ರವಾರ ಬೀಗ ಹಾಕಿ  ಕಂಪೆನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶನಿವಾರ ತುರ್ತು ಸಭೆ ಕರೆದಿದ್ದರು. ವಿವಾದಾತ್ಮಕ ಪಂಪ್‌ಹೌಸ್ ಅನಧಿಕೃತ ಕಟ್ಟಡವಾಗಿದ್ದು, ಈ ಬಗ್ಗೆ ಕಂಪೆನಿ ವಿರುದ್ಧ ನೋಟಿಸ್ ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು.ನೋಟಿಸ್ ಜಾರಿ ಮಾಡಿದ ಬಳಿಕ ತಹಸೀಲ್ದಾರ್ ನೇತೃತ್ವದಲ್ಲಿ ಸಭೆ ಕರೆಯಲಾಗುವುದು. ಸಭೆಯಲ್ಲಿ ಅನಧಿಕೃತ ಕಟ್ಟಡ ತೆರವುಗೊಳಿಸುವ ಬಗ್ಗೆ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ತೆರೆದ ಪಂಪ್‌ಹೌಸ್: ರೈತ ಸಂಘದವರಿಂದ ಶುಕ್ರವಾರ ಬೀಗ ಹಾಕಲ್ಪಟ್ಟ ಯುಪಿಸಿಎಲ್ ಪಂಪ್‌ಹೌಸ್ ಬೀಗವನ್ನು ಕಂಪೆನಿಯ ಸಿಬ್ಬಂದಿ ತೆಗೆದಿದ್ದಾರೆ. ಪಂಪ್‌ಹೌಸ್‌ನಲ್ಲಿ ಕೆಲಸ ಕಾರ್ಯಗಳು ಆರಂಭಗೊಂಡಿವೆ.ಹೋರಾಟ ಮುಂದುವರಿಕೆ:  ಯುಪಿಸಿಎಲ್ ಕಂಪೆನಿ ವಿರುದ್ಧ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ. ಕಂಪೆನಿ ನಿರ್ಮಿಸಿದ ಎಲ್ಲಾ ಕಟ್ಟಡಗಳು ಅನಧಿಕೃತ. ಜನರನ್ನು ಹಾಗೂ ಗ್ರಾ.ಪಂ.ಕಡೆಗಣಿಸಿ ಅನಧಿಕೃತ ಕಟ್ಟಡಗಳನ್ನು ನಿರ್ಮಿಸಿ ವಿದ್ಯುತ್ ಉತ್ಪಾದನೆ ಆರಂಭಿಸಿದೆ ಎಂದು ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ವಿಜಯ ಹೆಗ್ಡೆ ‘ಪ್ರಜಾವಾಣಿ’ಗೆ ತಿಳಿಸಿದರು.ಎಲ್ಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಯೋಜನಾ ಪ್ರದೇಶದಲ್ಲಿ ನಿರ್ಮಿಸಿದ ಎಲ್ಲಾ ಕಟ್ಟಡಗಳು, ತೆಂಕ ಗ್ರಾ.ಪಂ. ಕಚೇರಿ ವ್ಯಾಪ್ತಿಯಲ್ಲಿರುವ ಪಂಪ್‌ಹೌಸ್ ಹಾಗೂ ಮುದರಂಗಡಿ ಗ್ರಾಪಂ ವ್ಯಾಪ್ತಿಯ ಸಾಂತೂರಿನಲ್ಲಿರುವ ತಳಬೂದಿ ಸಂಗ್ರಹಣಾ ಘಟಕ, ನಂದಿಕೂರಿನಲ್ಲಿರುವ ಕಲ್ಲಿದ್ದಲು ಶೇಖರಿಸಿಡುವ ಕೇಂದ್ರ ಅನಧಿಕೃತ. ಕಾನೂನು ಉಲ್ಲಂಘಿಸಿ ಹಲವು ರೀತಿಯಲ್ಲಿ ಗ್ರಾ.ಪಂ. ಕತ್ತಲಲ್ಲಿಟ್ಟು ಬೆದರಿಸಿ ಕಂಪೆನಿ ಕಾಮಗಾರಿ ತ್ತಿದೆ. ಇಂತಹ ಕಟ್ಟಡಗಳನ್ನು ಪೊಲೀಸ್ ರಕ್ಷಣೆಯೊಂದಿಗೆ ರೈತ ಸಂಘ ತೆರವುಗೊಳಿಸಲಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.