ಬುಧವಾರ, ಮೇ 25, 2022
23 °C

ಯುಪಿಸಿಎಲ್ ಸಮಸ್ಯೆ: ತಳಬೂದಿ ಘಟಕ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಂದಿಕೂರು (ಪಡುಬಿದ್ರಿ): ಯುಪಿಸಿಎಲ್‌ನಿಂದ ಸಮಸ್ಯೆಗೊಳಗಾದ ಎಲ್ಲೂರು, ಮುದರಂಗಡಿ ಗ್ರಾ.ಪಂ. ವ್ಯಾಪ್ತಿ ಗ್ರಾಮಗಳಿಗೆ ಗುರುವಾರ ಉಡುಪಿ ತಹಶೀಲ್ದಾರ್ ಅಭಿಜಿನ್ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.ಎಲ್ಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಯುಪಿಸಿಎಲ್‌ಗೆ ಭೇಟಿ ನೀಡಿದ ತಹಶೀಲ್ದಾರ್, ಕಂಪೆನಿಯ ಕೂಲಿಂಗ್ ಟವರ್, ಕಲ್ಲಿದ್ದಲು ಶೇಖರಣಾ ಘಟಕದ ಕಾರ್ಯಾಚರಣೆ ವೀಕ್ಷಿಸಿದರು. ಕಂಪೆನಿಯ ತಳಬೂದಿ ಸಂಗ್ರಹಣಾ ಘಟಕ ಹಾಗೂ ಕಂಪೆನಿ ಬಿಡುವ ನೀರಿನಿಂದ ಕಲುಷಿತಗೊಂಡಿರುವ ಪ್ರದೇಶಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್, ಯೋಜನೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಅವರ ಆದೇಶದಂತೆ ಯೋಜನಾ ಪ್ರದೇಶದ ಪರಿಶೀಲನೆ ನಡೆಸಲಾಗುತ್ತಿದೆ.ಇಲ್ಲಿನ ಸಮಸ್ಯೆಗಳು ಹಾಗೂ ಕಂಪೆನಿಯಿಂದ ಜನರಿಗೆ ಆಗಬೇಕಾದ ಮೂಲಸೌಕರ್ಯಗಳ ಬಗ್ಗೆಯೂ ದೂರುಗಳನ್ನು ಪಡದಿದ್ದು, ಈ ಬಗ್ಗೆ ಟಾಸ್ಕ್‌ಫೋರ್ಸ್ ಸಭೆಯಲ್ಲಿ ವಿವರಿಸಲಾಗುವುದು. ಕುಡಿಯುವ ನೀರು ಕುಡಿಯಲು ಕಲುಷಿತಗೊಂಡಿರುವ ದೂರಿನ ಬಗ್ಗೆ ತಜ್ಞರ ವರದಿ ತರಿಸಿಕೊಳ್ಳಲಾಗುವುದು.

 

ಈಗಾಗಲೇ ಕಂಪೆನಿ ಹಾರುಬೂದಿಯನ್ನು ಎಸಿಸಿ ಕಂಪೆನಿಗೆ ಕಳುಹಿಸಿಕೊಡಲಾಗುತಿರುವುದಾಗಿ ಹೇಳಿದೆ. ಕಂಪೆನಿ ಕೈಗೆತ್ತಿಕೊಂಡಿರುವ ಕಾಮಗಾರಿಗಳಿಂದ ಸಮಸ್ಯೆಗಳಾದಲ್ಲಿ ಗ್ರಾ.ಪಂ. ಒಪ್ಪಿಗೆ ನೀಡಿದಲ್ಲಿ ಅವರಿಂದ ಕಾಮಗಾರಿ ಮಾಡಿಸಿಕೊಳ್ಳ ಲಾಗುವುದು ಎಂದರು. ಪರಿಸರ ಮಾಲಿನ್ಯ ಘಟಕ: ಈ ಸಂದರ್ಭದಲ್ಲಿ ನಂದಿಕೂರು ಜನಜಾಗೃತಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಂತ್ ಕುಮಾರ್, ಇಲ್ಲಿನ ತಳಬೂದಿ ಸಂಗ್ರಹಣಾ ಘಟಕ ಹಾಗೂ ಯುಪಿಸಿಎಲ್ ಯೋಜನೆಯಿಂದ ನಿತ್ಯ ಸಮಸ್ಯೆಗಳಾಗುತಿದ್ದು, ಇದ ರಿಂದ ನೀರು ಕಲುಷಿತಗೊಂಡಿದೆ. ಕುಡಿಯಲು ನೀರು ಯೋಗ್ಯವಲ್ಲ ಎಂದು ಈಗಾಗಲೇ ತಜ್ಞರು ಹೇಳಿದ್ದಾರೆ. ಅಲ್ಲದೆ ಈ ಘಟಕದಿಂದ ಕೃಷಿ ಚಟುವ ಟಿಕೆಯೂ ಕುಂಠಿತಗೊಂಡಿದೆ. ಜಾನುವಾರುಗಳು ಸಾಯುತ್ತಿದೆ. ಕಲುಷಿತ ನೀರಿನಿಂದ ಅಂತರ್ಜಲಕ್ಕೆ ಸೇರಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತಿದೆ ಎಂದು ವಿವರಿಸಿದರು.ರಸ್ತೆ ನಿರ್ಮಿಸಿ ಕೊಡಿ: ಯುಪಿಸಿಎಲ್ ಘಟಕ ನಿರ್ಮಾಣ ಹಂತದಲ್ಲಿರುವಾಗ ಗ್ರಾಮಸ್ಥರ ಸಂಚಾರಕ್ಕೆ ಇದ್ದ ರಸ್ತೆಯನ್ನು ಕಂಪೆನಿ ಕಬಳಿಸಿದ್ದು, ಇದರಿಂದ ತಜೆ ನಿವಾಸಿಗಳಿಗೆ ರಸ್ತೆ  ಇಲ್ಲದಾಗಿದೆ. ಈ ನಿಟ್ಟಿನಲ್ಲಿ ಕಂಪೆನಿಯ ಆವರಣ ಗೋಡೆ ಸುತ್ತ ರಸ್ತೆ ನಿರ್ಮಿಸಿ ಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳಲು ಕಂಪೆನಿಗೆ ಸೂಚಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.ಮುದರಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ತಳಬೂದಿ ಘಟಕಕ್ಕೆ ನಿತ್ಯ ಬೂದಿ ಟಿಪ್ಪರ್‌ಗಳಲ್ಲಿ ತಂದು ಸುರಿಯಲಾಗುತ್ತಿದೆ. ಇದರಿಂದ ಈ ಪರಿಸರದ ಅಡಕೆ, ತೆಂಗಿನ ಮರಗಳಿಗೆ ಮಾತ್ರವಲ್ಲ ಕುಡಿಯುವ ನೀರು ಕಲುಷಿತಗೊಂಡಿದೆ ಎಂದು ಗ್ರಾ.ಪಂ. ಅಧ್ಯಕ್ಷ ಸುನೀಲ್ ರಾಜ್ ಶೆಟ್ಟಿ ವಿವರಿಸಿದರು.ಬಾವಿಯನ್ನೇ ಮುಚ್ಚಿದರು: ಯುಪಿಸಿಎಲ್ ಕಂಪೆನಿ ಸನಿಹದಲ್ಲೇ ಇರುವ ಕರಿಯ ಶೆಟ್ಟಿ ಎಂಬವರ ಬಾವಿಯ ನೀರು ಕಂಪೆನಿಯಿಂದ ಸಂಪೂರ್ಣ ಕಲುಷಿತಗೊಂಡಿದ್ದು, ಈ ಬಗ್ಗೆ ಪರಿಸರ ಇಲಾಖೆ ಮತ್ತಿತರರು ಕಂಪೆನಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೆ  ನಂತರ ಆ ಬಾವಿಯನ್ನೇ ಮುಚ್ಚಿದರು. ಬಳಿಕ ಕೊಳವೆ ಬಾವಿಯನ್ನು ನಿರ್ಮಿಸಿಕೊಟ್ಟರು ಎಂದು ಕರಿಯಶೆಟ್ಟಿ ತಹಶೀಲ್ದಾರ್ ಬಳಿ ದೂರಿದರು.ಜಿ.ಪಂ. ಸದಸ್ಯ ಅರುಣ್ ಶೆಟ್ಟಿ ಪಾದೂರು, ಯುಪಿಸಿಎಲ್ ಕಂಪೆನಿಯ ಉಪಾಧ್ಯಕ್ಷ ರಾಮಚಂದ್ರ ಭಟ್, ಶ್ರಿನಿವಾಸ ರೆಡ್ಡಿ, ಸುದರ್ಶನ್ ರಾವ್, ಗ್ರಾಮಸ್ಥರಾದ ಜಯಂತ್‌ರಾವ್, ಸಾದುಮನೆ ರಾಘವೇಂದ್ರ ಭಟ್, ಬಾಲಕೃಷ್ಣ ಶೆಟ್ಟಿ ಪಾದೆಬೆಟ್ಟು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.