ಸೋಮವಾರ, ನವೆಂಬರ್ 18, 2019
25 °C

ಯುವಕನಿಗೆ ಕಾವ್ಯವೇ ಕಣ್ಣಾದಾಗ

Published:
Updated:

ಚಿಂತಾಮಣಿ: ಇತ್ತೀಚೆಗೆ ಕಾವ್ಯಾಸಕ್ತರು, ಸಾಹಿತ್ಯಾಭಿಮಾನಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಅಂಧ ಯುವಕ ಕವನವನ್ನು ವಾಚಿಸುವ ಮೂಲಕ ತನ್ನ ಕಾವ್ಯ ಪ್ರೇಮವನ್ನು ಮೆರೆಯುವ ಜೊತೆಗೆ ಕಣ್ಣಿಲ್ಲದ್ದಿರೇನು ಮನಸ್ಸಿದ್ದರೆ ಸಾಕು ಎಂಬುದನ್ನು ತೋರಿಸಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ತಾಲೂಕು ಕನ್ನಡ ಸಾಹಿತ್ಯ ವೇದಿಕೆ, ಚುಟುಕು ಸಾಹಿತ್ಯ ಪರಿಷತ್ತು ಈಚೆಗೆ  ತಾಲ್ಲೂಕಿನ ದೊಡ್ಡಬೊಮ್ಮನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಮನೆಗೊಂದು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅದೇ ಗ್ರಾಮದ ಎನ್.ಮಂಜುನಾಥ ಎಂಬ ಅಂಧ ಯುವಕ ಕಾರ್ಯಕ್ರಮಕ್ಕೆ ಆಗಮಿಸಿ, ತಮ್ಮ್ನ ಗೆಳೆಯ ರಾಜೇಶ ಎಂಬುವರು ರಚಿಸಿದ ಕವನ ವಾಚಿಸುವ ಮೂಲಕ ಎಲ್ಲರ ಮನಸೂರೆಗೊಂಡರು.ಈತನಿಗೆ ಕವನ ವಾಚಿಸಲು ಸಾಥ್ ನೀಡಿದ್ದು  ಬ್ರೈಲ್ ಲಿಪಿ. ಈ ಸಂದರ್ಭದಲ್ಲಿ ಟೈಫಾಯಿಡ್ ಜ್ವರದಿಂದ ಬಳಲುತ್ತಿದ್ದರೂ ತನ್ನ ಗ್ರಾಮದಲ್ಲಿ ನಡೆಯುತ್ತಿರುವ ಕನ್ನಡ ಪರ ಕಾರ್ಯಕ್ರಮದಲ್ಲಿ ಭಾಗವಹಿಸಲೇ ಬೇಕೆಂದು ಬಂದು, ಕೊನೆಯವರೆಗೂ ಇದ್ದು ಕನ್ನಡಾಭಿಮಾನ ಮೆರೆದರು.ಗ್ರಾಮದ ಕೃಷಿಕಾರ್ಮಿಕ ನಾರೆಪ್ಪ ಹಾಗು ನಾರೆಮ್ಮ ದಂಪತಿಗಳ ಹಿರಿಯ ಮಗನಾದ ಮಂಜುನಾಥ ತನ್ನ 12ನೇ ವಯಸ್ಸಿನಲ್ಲಿ ಬೆಂಗಳೂರಿನ ರಮಣ ಮಹರ್ಷಿ ಅಂಧರ ಶಾಲೆಗೆ ಸೇರಿ ಅಲ್ಲಿ ಬ್ರೈಲ್ ಲಿಪಿಯೊಂದಿಗೆ ಸಂಗೀತ, ಕೀ-ಬೋರ್ಡ್ ನುಡಿಸುವುದು ಹಾಗೂ ಇನ್ನಿತರೆ ಚಟುವಟಿಕೆಗಳನ್ನು ಕಲಿತಿದ್ದಾರೆ. ಸದ್ಯಕ್ಕೆ ತಮ್ಮ ಗ್ರಾಮದಲ್ಲೇ ಉಳಿದಿರುವ ಈತ ಗ್ರಾಮಸ್ಥರಿಗೆ ಅಚ್ಚು-ಮೆಚ್ಚು.ಮುಂದಿನ ದಿನಗಳಲ್ಲಿ ಬ್ರೈಲ್ ಲಿಪಿ ಸಹಕಾರದೊಂದಿಗೆ ಕವನ ಹಾಗೂ ಚುಟುಕುಗಳನ್ನು ರಚಿಸುವ ಆಸೆ ಇದೆ ತಿಳಿಸಿದ ಈತ ಇತರರಿಗೆ ಮಾದರಿಯಾಗಿದ್ದಾರೆ.

 

ಪ್ರತಿಕ್ರಿಯಿಸಿ (+)