ಬುಧವಾರ, ಜೂನ್ 23, 2021
24 °C

ಯುವಕನ ಮೇಲೆ ದುಷ್ಕರ್ಮಿಗಳ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದುಷ್ಕರ್ಮಿಗಳ ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ತಿಲಕ್‌ನಗರದ ಈಸ್ಟ್ ಎಂಡ್ ವೃತ್ತದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಕಾರ್ಪೋರೇಷನ್ ಕಾಲೊನಿಯ ಗೌತಮ್ (18) ಗಾಯಗೊಂಡವರು. ರಾತ್ರಿ ಅವರು ಚಹಾ ಅಂಗಡಿ ಬಳಿ ನಿಂತಿದ್ದಾಗ ಬಂದ ದುಷ್ಕರ್ಮಿಗಳ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಚಾಕುವಿನಿಂದ ತೊಡೆಗೆ ಇರಿದು ಪರಾರಿಯಾಗಿದ್ದಾರೆ.ತೀವ್ರವಾಗಿ ಗಾಯಗೊಂಡಿರುವ ಗೌತಮ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆತ್ಮಹತ್ಯೆಪಿಯುಸಿ ವಿದ್ಯಾರ್ಥಿನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜ್ಞಾನಭಾರತಿ ಸಮೀಪದ ಕೆ.ಕೆ. ಲೇಔಟ್‌ನಲ್ಲಿ ಶನಿವಾರ ನಡೆದಿದೆ. ಪ್ರಕಾಶ್ ಎಂಬುವರ ಮಗಳು ರೇವತಿ (17) ಆತ್ಮಹತ್ಯೆ ಮಾಡಿಕೊಂಡವರು. ಅವರು ವಿ.ವಿ.ಪುರ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದರು. ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಅವರು ಮನೆಯ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ತಳ್ಳು ಗಾಡಿಯಲ್ಲಿ ಹೋಟೆಲ್ ನಡೆಸುವ ಪ್ರಕಾಶ್ ಹಾಗು ಅವರ ಪತ್ನಿ ರಾತ್ರಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಜ್ಞಾನಭಾರತಿ ಠಾಣೆ ಪೊಲೀಸರು  ತಿಳಿಸಿದ್ದಾರೆ.ಇನ್ನೊಂದು ಪ್ರಕರಣಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.ಹಲಸೂರು ಸಮೀಪದ ಜೋಗಿಪಾಳ್ಯ ನಿವಾಸಿ ಸಂತೋಷ್(25) ಆತ್ಮಹತ್ಯೆ ಮಾಡಿಕೊಂಡವರು. ಇವರ ತಂದೆ ಮೋಹನ್ ಇತ್ತೀಚೆಗೆ ಸಾವನ್ನಪ್ಪಿದ್ದರು. ತಾಯಿಯೊಂದಿಗೆ ವಾಸಿಸುತ್ತಿದ್ದ ಸಂತೋಷ್ ಕೆಲಸ ಹುಡುಕುತ್ತಿದ್ದರು.

 ಶುಕ್ರವಾರ ರಾತ್ರಿ ತಾಯಿ ಮಲಗಿದ ನಂತರ ಮನೆಯಲ್ಲಿಯೇ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.ಶನಿವಾರ ಬೆಳಿಗ್ಗೆ ತಾಯಿ ಎಚ್ಚರಗೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಖಚಿತ ಕಾರಣ ಗೊತ್ತಾಗಿಲ್ಲ. ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೈದಿ ಮೇಲೆ ಹಲ್ಲೆ

ಕೈದಿ ಮೇಲೆ ಮತ್ತೊಬ್ಬ ಕೈದಿ ಹಲ್ಲೆ ನಡೆಸಿರುವ ಘಟನೆ ಪರಪ್ಪನಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶನಿವಾರ ನಡೆದಿದೆ.ಸೈಯದ್ ಉರುಫ್ ಲಡ್ಡು ಹಲ್ಲೆಗೊಳಗಾದವರು. ಮಧ್ಯಾಹ್ನ ಊಟಕ್ಕೆಂದು ಕೈದಿಗಳು ಸಾಲುಗಟ್ಟಿ ನಿಂತಿದ್ದಾಗ ಇಮ್ರಾನ್ ಮತ್ತು ಸೈಯದ್ ಮಧ್ಯೆ ಜಗಳವಾಗಿದೆ.ಈ ಸಂದರ್ಭದಲ್ಲಿ ಕಬ್ಬಿಣದ ಸಲಾಕೆಯಿಂದ ಇಮ್ರಾನ್, ಸೈಯದ್ ಮೇಲೆ ಹಲ್ಲೆ ನಡೆಸಿದ್ದಾರೆ.  ಸೈಯದ್‌ಗೆ ಕಿವಿ ಕೇಳುವುದಿಲ್ಲ. ಯಾವ ವಿಷಯಕ್ಕೆ ಜಗಳವಾಗಿದೆ ಎಂದು ಗೊತ್ತಾಗಿಲ್ಲ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಜೈಲು ಅಧಿಕಾರಿಗಳು ದೂರು ನೀಡಿದರೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುವುದಾಗಿ ಪರಪ್ಪನಅಗ್ರಹಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.