ಯುವಕರೇ ದೇಶದ ಭವಿಷ್ಯ

7

ಯುವಕರೇ ದೇಶದ ಭವಿಷ್ಯ

Published:
Updated:

ಕೊಪ್ಪಳ: ಯುವಕರೇ ದೇಶದ ಭವಿಷ್ಯ. ಹೀಗಾಗಿ ಬಹು ಜವಾಬ್ದಾರಿಯಿಂದ ನಡೆದುಕೊಂಡು ಬದುಕು, ಸಮಾಜ ಎರಡನ್ನೂ ಕಟ್ಟಬೇಕು ಎಂದು ನಿವೃತ್ತ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮಲ್ಲಿಕಾರ್ಜುನ ಬಿ.ರಾಂಪೂರೆ ಹೇಳಿದರು.ಹೊಸಪೇಟೆ ಆಕಾಶವಾಣಿ ಕೇಂದ್ರವು `ಆಕಾಶವಾಣಿ ಹಬ್ಬ~ದ ಅಂಗವಾಗಿ ಮಂಗಳವಾರ ಇಲ್ಲಿನ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಯುವ ಸ್ಪಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇಂದು ಎಲ್ಲ ರಂಗದಲ್ಲಿ ತೀವ್ರ ಸ್ಪರ್ಧೆ ಕಾಣಬಹುದು. ಇಂತಹ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಲು ಯುವಕರು ಸಜ್ಜಾಗಬೇಕು. ತಮ್ಮ ಮಕ್ಕಳು ಡಾಕ್ಟರ್, ಎಂಜನಿಯರ್, ಐಎಎಸ್ ಅಧಿಕಾರಿಗಳಾಗಬೇಕು ಎಂದು ಪಾಲಕರು ಬಯಸುತ್ತಾರೆ. ದೇಶ ಸೇವೆಗಾಗಿ ಸೇನಾಧಿಕಾರಿ ಅಥವಾ ಸೈನಿಕರನ್ನಾಗಿ ಮಕ್ಕಳನ್ನು ಕಳುಹಿಸಲು ಮನಸ್ಸು ಮಾಡುತ್ತಿಲ್ಲ ಎಂದು ವಿಷಾದಿಸಿದರು.ಆಕಾಶವಾಣಿ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಆನಂದ ವಿ.ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.

ಪ್ರಚಲಿತ ವಿದ್ಯಮಾನಗಳ ಕುರಿತು ವಿದ್ಯಾರ್ಥಿಗಳಿಗೆ ಇರುವ ಅರಿವು, ಭಾಷಾ ಜ್ಞಾನ, ವಿಷಯಗಳನ್ನು ಪರಿಣಾಮಕಾರಿಯಾಗಿ ಅಲ್ಪ ಸಮಯದಲ್ಲಿಯೇ ಪ್ರಸ್ತುತಪಡಿಸುವ ಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶವೂ ಇದೆ ಎಂದು ಹೇಳಿದರು.ಮೊಬೈಲ್, ಇಂಟರ್‌ನೆಟ್‌ನಂತಹ ಆಧುನಿಕ ಮಾಧ್ಯಮಗಳ ಪೈಪೋಟಿ ಎದುರಿಸಲು ಆಕಾಶವಾಣಿ ಸಹ ಕೆಲವು ಮಾರ್ಪಾಡುಗಳೊಂದಿಗೆ ಸಜ್ಜಾಗಬೇಕು ಎಂದು ಕಾಲೇಜಿನ ಪ್ರಾಚಾರ್ಯ ಎಸ್.ಎಲ್.ಮಾಲಿಪಾಟೀಲ ಹೇಳಿದರು.ಆಕಾಶವಾಣಿಯೇ ನಿಜವಾದ ಅರ್ಥದಲ್ಲಿ ದೇಶದ ಸಾಂಸ್ಕೃತಿಕ ರಾಯಭಾರಿ ಎಂದು ಬಣ್ಣಿಸಿದರು.

ನಂತರ ಶ್ರೀನಿವಾಸ ಗದ್ದಿ `ಭ್ರಷ್ಟಾಚಾರ~ ಎಂಬ ವಿಷಯ ಕುರಿತು (ಗವಿಸಿದ್ಧೇಶ್ವರ ಕಾಲೇಜಿನ ವಿದ್ಯಾರ್ಥಿ), ನೇತ್ರಾ ಸಿ.ವಿ.ಎಸ್- ನಮ್ಮ ನಡುವೆ ಮೊಬೈಲ್ (ದ.ಭಾ.ಹಿಂ.ಪ್ರ.ಸಭಾದ ಕಾನೂನು ಮಹಾವಿದ್ಯಾಲಯ), ಆನಂದ ಗೊಂಡಬಾಳ- ಜಾಹೀರಾತಿನಲ್ಲಿ ಮಹಿಳೆ (ರಾಜೀವ್‌ಗಾಂಧಿ ಶಿಕ್ಷಣ ಮಹಾವಿದ್ಯಾಲಯ), ಯಂಕಣ್ಣ ಎನ್.ಉಪ್ಪಾರ- ಪರಿಸರ ಪ್ರಜ್ಞೆ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು), ಉಮೇಶ ಆರ್.ಲಮಾಣಿ- ಮನಸ್ಸು ಮಾಡಿದರೆ ಏನೆಲ್ಲಾ ಸಾಧಿಸಬಹುದು (ಇಸ್ಸಾರ್ ಎಂಎಸ್‌ಡಬ್ಲ್ಯೂ ಮಹಾವಿದ್ಯಾಲಯ) ಎಂಬ ವಿಷಯ ಕುರಿತು ಮಾತನಾಡಿದರು.ಉಪನ್ಯಾಸಕರಾದ ಎ.ಆರ್.ಲೋಕಾಪುರ, ಡಾ.ಬಸವರಾಜ ಪೂಜಾರ, ಡಾ.ದಯಾನಂದ ಸಾಳುಂಕೆ, ಎಸ್.ಎಂ. ಕಂಬಾಳಿಮಠ, ಮಾರ್ಕಂಡೇಯ, ಆಕಾಶವಾಣಿಯ ಪ್ರಸಾರ ನಿರ್ವಾಹಕ ಮಂಜುನಾಥ ಡೊಳ್ಳಿನ್ ಮತ್ತಿತರರು ಉಪಸ್ಥಿತರಿದ್ದರು. ಬಿ.ಪ್ರಸಾದ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಎಂ.ಎಂ.ಕಂಬಾಳಿಮಠ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry