ಮಂಗಳವಾರ, ಏಪ್ರಿಲ್ 20, 2021
24 °C

ಯುವಜನರಿಂದ ದೇಶದ ವ್ಯವಸ್ಥೆ ಸುಧಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ದೇಶದ ವ್ಯವಸ್ಥೆಯಲ್ಲಿ ಇಂದು ಸ್ವಾರ್ಥ ರಾಜಕಾರಣಿಗಳೇ ಹೆಚ್ಚಾಗಿದ್ದು, 35 ವರ್ಷದೊಳಗಿನ ಯುವ ಸಮುದಾಯದಿಂದ ಮಾತ್ರ ಈ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಎಂ.ಸಿ. ನಾಣಯ್ಯ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್‌ನ ಮೈಸೂರು ಜಿಲ್ಲಾ ಘಟಕದ ಆಶ್ರಯದಲ್ಲಿ ಭಾನುವಾರ ಆಯೋಜಿಸ ಲಾಗಿದ್ದ ಕಾರ್ಯಕ್ರಮದಲ್ಲಿ ಸುಧಾಕರ್ ಹೊಸಳ್ಳಿ ಯವರು ರಚಿಸಿದ `ಭಾರತ ಸರ್ಕಾರ ಮತ್ತು ರಾಜಕೀಯ~ ಕೃತಿ ಬಿಡುಗಡೆ ಮಾಡಿದ ಮಾತನಾಡಿ ದರು. `ಇವತ್ತಿನ ರಾಜ್ಯಾಂಗದಲ್ಲಿ ಶಾಸಕರು ನಿಕೃಷ್ಟರಾಗುತ್ತಿದ್ದು, ಅಪರಾಧ ಪ್ರಕರಣಗಳ ಗಂಭೀರ ಆರೋಪ ಇರುವವರು ಶಾಸಕರು, ಸಂಸದರು ಆಗಿದ್ದಾರೆ. ಈ ರೀತಿ ಆಗುತ್ತದೆ ಎಂದು ತಿಳಿದಿದ್ದರೆ ಅಂದು ನೀತಿ ನಿರೂಪಕರು ಸಂವಿಧಾನ ರಚಿಸುತ್ತಲೇ ಇರಲಿಲ್ಲ. ಯುವಜನಾಂಗವು ಈ ದೇಶವನ್ನು ರಕ್ಷಿಸುವ ಜವಾಬ್ದಾರಿ ಇದೆ~  ಎಂದು ವಿಷಾದ ವ್ಯಕ್ತಪಡಿಸಿದರು.`ಈ ದೇಶದ ಭವಿಷ್ಯವನ್ನು ರೂಪಿಸುವ ರಾಜಕಾರಣಿಗಳ ಭವಿಷ್ಯವು ಅದೃಶ್ಯ ಮತದಾರರ ಕೈಗಳಲ್ಲಿದೆ. ಅನಕ್ಷರಸ್ಥ, ಬಡ ಕುಟುಂಬಗಳ ಮತದಾರರೇ  ಆ ಅದೃಶ್ಯರು. ನಮ್ಮ ಪ್ರಜಾಪ್ರಭು ತ್ವದ ಇತಿಹಾಸವನ್ನು ನೋಡುತ್ತ ಬಂದರೆ ಈ ಅದೃಶ್ಯ ಮತದಾರರೇ ರಾಜಕಾರಣಿಗಳಿಗೆ ಬುದ್ಧಿ ಕಲಿಸಿದ್ದಾರೆ. ಆದರೆ ಅಕ್ಷರಸ್ಥರು, ಬುದ್ಧಿವಂತರು, ಶ್ರೀಮಂತರು ಮಾತ್ರ ಆ ಸಂಘಟಿತ ಶಕ್ತಿಯಾಗಲೇ ಇಲ್ಲ. ತುರ್ತು ಪರಿಸ್ಥಿತಿಯ ನಂತರದ ರಾಜಕೀಯ ಪಲ್ಲಟಕ್ಕೆ ಇಂತಹ ಮತದಾರರೇ ಕಾರಣರಾಗಿದ್ದರು~ ಎಂದು ಹೇಳಿದರು.`1978ರವರೆಗೂ ಭ್ರಷ್ಟಾಚಾರ ಮುಕ್ತ ಸರ್ಕಾರಗಳಿದ್ದವು. ತದನಂತರವೂ ಸಣ್ಣಪುಟ್ಟ ಪ್ರಮಾಣದಲ್ಲಿ ಭ್ರಷ್ಟಾಚಾರ ಇತ್ತು. ಲಂಚ ಪಡೆಯಲು ಹೆದರುತ್ತಿದ್ದರು. ನಮ್ಮ ಸರ್ಕಾರದಲ್ಲಿಯೂ ಕೆಲವರಿದ್ದರು. ಆದರೆ ಇವತ್ತು ಹೆದರಿಕೆ, ಲಜ್ಜೆ ಏನೂ ಇಲ್ಲ. ಜನರ ಮುಂದೆ ಹೋಗಬೇಕು ಎಂಬ ಭಯವೇ ಇಲ್ಲ. ದುಡ್ಡು ಹೊಡೆಯುವುದೇ ದಂಧೆ~ ಎಂದು ಆಕ್ರೋಶ ವ್ಯಕ್ತಪಡಿಸಿದರು.`ನನ್ನನ್ನು ದಯವಿಟ್ಟು ರಾಜಕಾರಣಿ ಎಂದು ಕರೆಯಬೇಡಿ. ರಾಜಕಾರಣಿಗಳ ಮೇಲೆ ನನಗೆ ವಿಶ್ವಾಸವಿಲ್ಲ. ಆದರೆ ಯುವಜನಾಂಗದ ಕೈಯಲ್ಲಿ ದೇಶದ ಭವಿಷ್ಯವಿದೆ. ಸಂವಿಧಾನವನ್ನು ಸರಿಯಾಗಿ ತಿಳಿದುಕೊಂಡು ದೇಶವನ್ನು ಮುನ್ನಡೆಸುವ ಜವಾಬ್ದಾರಿಯಿದೆ. ಇವತ್ತು ಕೃಷಿ ಸಂಸ್ಕೃತಿಯನ್ನು ಸಂಪೂರ್ಣ ನಾಶ ಮಾಡುವ ಕಾರ್ಯ ನಡೆಯು ತ್ತಿದೆ. ಒಂದು ಸಮಯದಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ದರದ ಶೇ 51ರಷ್ಟನ್ನು ಕೃಷಿ ಕ್ಷೇತ್ರ ನೀಡುತ್ತಿತ್ತು. ಆದರೆ ಇವತ್ತು ಅದು ಶೇ. 17ಕ್ಕೆ ಇಳಿದಿದೆ. ಕೃಷಿ ಮತ್ತು ಕೈಗಾರಿಕರಣಗಳ ನಡುವೆ ಸಮತೋಲನ ಕಾಪಾಡಿಕೊಂಡಿಲ್ಲ~ ಎಂದರು.`ದೇಶದಲ್ಲಿ ಕೇರಳ ರಾಜ್ಯವೊಂದೇ ಕೃಷಿ ಭೂಮಿ ನೀತಿಯನ್ನು ಅನುಷ್ಠಾನಗೊಳಿಸಿದೆ. ಬತ್ತ ಬೆಳೆಯುವ ಮತ್ತು  ನೀರಾವರಿ ಜಮೀನುಗಳನ್ನು ಯಾವುದೇ ಕಾರಣಕ್ಕೂ ಪರಿವರ್ತನೆಗೊಳಿಸು ವಂತಿಲ್ಲ. ಅಂತಹ ಒಂದು ನೀತಿಯನ್ನು ನಮ್ಮ ರಾಜ್ಯದಲ್ಲಿ ಜಾರಿಗೊಳಿಸಲು ಕಳೆದ ನಾಲ್ಕು ವರ್ಷಗಳಿಂದ ಒತ್ತಾಯಿಸುತ್ತಲೇ ಇದ್ದರೂ ಸರ್ಕಾರ ಮಾತ್ರ ಸ್ಪಂದಿಸುತ್ತಿಲ್ಲ. ನಾನು ಸಚಿವನಾ ಗಿದ್ದ ಸಂದರ್ಭದಲ್ಲಿ ಪ್ರಯತ್ನಿಸಿದ್ದೆ, ಆದರೆ ಕಾರ ಣಾಂತರಗಳಿಂದ ಅಸಹಾಯಕನಾದೆ~ ಎಂದರು.ಶಬ್ಬೀರ್ ಮಹಮದ್ ಮುಸ್ತಫಾ, ಎನ್.ನಂಜುಂಡಯ್ಯ, ಸ್ವಾಮಿನಾಥನ್, ಪ್ರೊ.ಸಿದ್ದಪ್ಪ ಮತ್ತು ಎಂ.ಶಂಕರ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಕವಯತ್ರಿ ಲತಾರಾಜಶೇಖರ್ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ವಹಿಸಿದ್ದರು. ಮೈಸೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ದೀಪಕ್ ದಿಕ್ಸೂಚಿ ಭಾಷಣ ಮಾಡಿದರು. ಬೆಂಗಳೂರು ವಿವಿ ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎನ್. ಸತೀಶ್ ಗೌಡ, ಶೇರುತಜ್ಞ ಕೆ.ಜಿ. ಕೃಪಾಲ್, ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಿ. ಜಯಪ್ರಕಾಶಗೌಡ, ರೈತ ಮುಖಂಡ ಕೆ.ಎಸ್. ನಂಜುಂಡೆಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಚಂದ್ರಶೇಖರ್,  ಲೇಖಕ ಸುಧಾಕರ ಹೊಸಳ್ಳಿ ಮತ್ತಿತರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.