ಶುಕ್ರವಾರ, ನವೆಂಬರ್ 22, 2019
20 °C

ಯುವಜನರ ಮಿತಿಮೀರಿದ ಉತ್ಸಾಹ

Published:
Updated:

ಗುಲ್ಬರ್ಗ: ಈ ಬಾರಿಯ ಚುನಾವಣೆ  ಯುವ ಹಾಗೂ ಹೊಸ ಮತದಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಈ ಕಾರಣದಿಂದಾಗಿಯೇ ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ನಗರದ ನೋಂದಣಿ ಕೇಂದ್ರಗಳಲ್ಲಿ ಸರದಿ ಸಾಲು ನಿಂತವರಲ್ಲಿ ಆಕಾಂಕ್ಷೆ ಹೊತ್ತ ಯುವಮುಖಗಳೇ ಹೆಚ್ಚು  ಕಾಣಿಸಿದವು. ಕೊನೆ ಕ್ಷಣದ ತಳಮಳ, ಅವಕಾಶ ವಂಚಿತರಾಗುತ್ತೇವೋ ಎಂಬ ಆತಂಕ ಅವರ ಮಾತುಗಳಲ್ಲಿ ಕೇಳಿಬಂತು.ಮತದಾರ ಪಟ್ಟಿಗೆ ಹೆಸರು ಸೇರಿಸಲು ಭಾನುವಾರ ಕಡೆಯ ದಿನವಾದ್ದರಿಂದ ಗುಲ್ಬರ್ಗ ನಗರಪಾಲಿಕೆ, ತಾಲ್ಲೂಕು ಕಚೇರಿ ಮುಂತಾದ  ನೋಂದಣಿ ಕೇಂದ್ರಗಳಲ್ಲಿ ಜನ ಒಂದೇ ದಿನ ಹೆಚ್ಚಿನ ಸಂಖ್ಯೆಯಲ್ಲಿ ಮುಗಿಬಿದ್ದಿದರು.ಅಧಿಕಾರಿಗಳ ಬೆಂಬಲ: ರಜಾ ದಿನವಾಗಿದ್ದರೂ, ಮತದಾರರ ಅರ್ಜಿ ಸ್ವೀಕರಿಸುವ ಎಲ್ಲ ಕಚೇರಿಗಳು ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಕಾರ್ಯನಿರ್ವಹಿಸಿದವು. ಗುಲ್ಬರ್ಗ ಸೇರಿದಂತೆ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಬೇಸಗೆಯ ಕಾರಣ ಸರ್ಕಾರಿ ಕಚೇರಿಗಳು ಸಮಯ ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ಗಂಟೆವರೆಗೆ ಎಂಬ ಆದೇಶವಿದ್ದರೂ ಭಾನುವಾರ ಸರ್ಕಾರಿ ನೌಕರರು ಮತದಾರರ ಹೆಸರು ನೋಂದಣಿ ಉತ್ಸಾಹಕ್ಕೆ ಬೆಂಬಲ ನೀಡಿ ಸಂಜೆವರೆಗೂ ಕರ್ತವ್ಯ ನಿರ್ವಹಿಸಿದರು.ಕೊನೆ ಕ್ಷಣದ ಒತ್ತಡ: ಮತದಾರಪಟ್ಟಿಯಲ್ಲಿ ಹೆಸರು ನೋಂದಾಯಿಸುವಂತೆ ಚುನಾವಣಾಧಿಕಾರಿಗಳು ಅನೇಕ ಬಾರಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದರೂ ಇದುವರೆಗೂ ತಲೆಕೆಡಿಸಿಕೊಳ್ಳದ ಜನ, ಕೊನೆಯ ದಿನಾಂಕದಂದು ನೋಂದಣಿ ಕಚೇರಿಗೆ ಅರ್ಜಿಗಳನ್ನು ಹಿಡಿದು ಧಾವಿಸಿದ್ದರು. ಇದರಿಂದ ಸಹಜವಾಗಿಯೇ ಜನದಟ್ಟಣೆ ಕಂಡುಬಂದಿತ್ತು.ಮತದಾರ ನೋಂದಣಿ ಮಾಡಿಸಲು ಯುವಕರು, ವಯಸ್ಕರು ಉತ್ಸಾಹದಿಂದ ಭಾಗವಹಿಸಿದ್ದರು. ಗ್ರಾಮೀಣ ವಿಭಾಗದವರು ಗುಲ್ಬರ್ಗ ತಹಸೀಲ್ ಕಚೇರಿಯಲ್ಲಿ, ನಗರದ ವಿಭಾಗದವರು ಮಹಾನಗರ ಪಾಲಿಕೆಯಲ್ಲಿ ತಮ್ಮ ಹೆಸರುಗಳ್ನು ನೋಂದಾಯಿಸಲು ಅರ್ಜಿ ಸಲ್ಲಿಸಿದರು.ಆನ್‌ಲೈನ್ ಆಸಕ್ತಿ:

ನಗರಪಾಲಿಕೆ ಹಾಗೂ ತಾಲ್ಲೂಕು ಕಚೇರಿಯ ಕೇಂದ್ರಗಳಲ್ಲಿ ಬಿಸಿಲಲ್ಲಿ ನಿಂತು ಹೆಸರು ನೋಂದಾಯಿಸುವ ಬದಲು ಅನೇಕರು ಖಾಸಗಿ ಕಂಪ್ಯೂಟರ್ ಕೇಂದ್ರ (ಸೈಬರ್ ಸೆಂಟರ್)ಗಳಲ್ಲಿಯೂ  ಹೆಸರು ನೋಂದಾಯಿಸುವವರ ಸಂಖ್ಯೆ ಹೇಚ್ಚಾಗಿ ಕಂಡುಬಂತು.`ಆನ್‌ಲೈನ್‌ನಲ್ಲಿ ನೋಂದಣಿ ಮಾಡಿ, ಬಳಿಕ ಅದರ ಪ್ರತಿ ತೆಗೆದುಕೊಂಡು ಸರ್ಕಾರಿ ನೋಂದಣಿ ಕಚೇರಿಗೆ ಹೋದರೆ ಕೆಲಸ ಬೇಗ ಆಗುತ್ತದೆ. ಸರದಿಯಲ್ಲಿ ಕಾದು ನಿಲ್ಲುವ ತೊಂದರೆಯೂ ಇಲ್ಲ. ಹಾಗಾಗಿ ಇಂಟರ್‌ನೆಟ್ ಮೂಲಕ ನೋಂದಣಿ ಮಾಡುತ್ತಿದ್ದೇನೆ' ಎಂದು ಬಿದ್ದಾಪುರ ಕಾಲೊನಿಯ ಶಿವಾನಂದ ಎಸ್. ಅಭಿಪ್ರಾಯ ವ್ಯಕ್ತಪಡಿಸಿದರು. ಆನ್‌ಲೈನ್ ಮೂಲಕ ಹೆಸರು ಸೇರಿಸುವ ದೋಷ ನಿವಾರಿಸುವ, ಮತಗಟ್ಟೆ- ವಿಳಾಸ  ಬದಲಾಯಿಸುವ ಅರ್ಜಿ ದಾಖಲಿಸುವರ ಸಂಖ್ಯೆಯೂ ಈ ಬಾರಿ ಹೆಚ್ಚಾಗಿತ್ತು. ಖಾಸಗಿ ಇಂಟರ್‌ನೆಟ್ ಕೇಂದ್ರಗಳಲ್ಲಿ ದುಡ್ಡುಕೊಟ್ಟು ಅರ್ಜಿ ಸಲ್ಲಿಸಬೇಕಿದ್ದರೂ ಜನರು ಇದರತ್ತ ಆಕರ್ಷಿತರಾಗಿದ್ದರು.ಆನ್‌ಲೈನ್‌ನಲ್ಲಿ ಮೂಡಿದ ಗೊಂದಲ

ಚುನಾವಣಾ ಆಯೋಗ ಮತದಾರ ಪಟ್ಟಿಯಲ್ಲಿ ಹೆಸರು ನೋಂದಾವಣೆಗೆ ಈ ಬಾರಿ ಪ್ರಕ್ರಿಯೆ  ಸರಳಗೊಳಿಸಿದ್ದರೂ  ಆನ್‌ಲೈನ್‌ಮೂಲಕ ಅರ್ಜಿ ಸಲ್ಲಿಸಿದವರು ಅತಂತ್ರ ಸ್ಥಿತಿಯಲ್ಲೇ ಉಳಿಯುವಂತಾಗಿದೆ. ಮೂರು ನಾಲ್ಕುದಿನಗಳ ಹಿಂದೆ ಆನ್‌ಲೈನ್ ಮೂಲಕ ನೋಂದಾಯಿಸಿ, ಅರ್ಜಿ ಪ್ರತಿ- ದಾಖಲೆ ಪತ್ರಗಳ ಸಹಿತ ಮತದಾರರ ನೋಂದಣಿ ಕೇಂದ್ರದಲ್ಲಿ ಸಲ್ಲಿಸಿದ್ದರೂ ಇಂಥ ಅನೇಕರಿಗೆ `ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ' ಎಂಬ ಉತ್ತರ ಆನ್‌ಲೈನ್‌ನಲ್ಲಿ ಲಭಿಸುತ್ತಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಂಖ್ಯೆ ಲಭಿಸಿದರೂ ಕೊನೆ ದಿನದ ವರೆಗೂ `ಅಂಗೀಕರಿಸಲಾಗಿದೆ' (ಅಪ್ರೂವ್ಡ್),  ಮತದಾರರ ಸಂಖ್ಯೆ , ಕೇಂದ್ರ ಇತ್ಯಾದಿ  ದಾಖಲಾಗಿಲ್ಲ.

 ಡಾಟಾ ಎಂಟ್ರಿ ವಿಭಾಗದಿಂದಾಗಿ ವಿಳಂಬವಾಗುತ್ತಿದೆ ಎಂಬ ಹೇಳಿಕೆಗಳು ಅರ್ಜಿದಾರರಲ್ಲಿ ಗೊಂದಲ ಸೃಷ್ಟಿಸಿವೆಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು (ಸ್ಟೇಟಸ್) ತಿಳಿಯಲು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಮಾಹಿತಿ ಹುಡಕಿದರೂ `ದಾಖಲಾತಿ ಇಲ್ಲ' (ರೆಕಾರ್ಡ್ ನಾಟ್ ಫೌಂಡ್) ಎಂಬ ಸಿದ್ಧ ಉತ್ತರವೇ ನಾಲ್ಕೈದು ದಿನಗಳಿಂದ ಲಭಿಸುತ್ತದೆ ಎಂಬ ದೂರುಗಳಿವೆ.

ಗ್ರಾಮೀಣ ಭಾಗದಲ್ಲಿ ಮತದಾರ ಪಟ್ಟಿಗೆ ಹೆಸರು ನೋಂದಾಯಿಸಲು ನೇಮಕ ಮಾಡಿದ ಸಿಬ್ಬಂದಿ ಸರಿಯಾಗಿ ಮಾರ್ಗದರ್ಶನ ಮಾಡಿಲ್ಲ ಎಂಬ ಮಾತುಗಳು ಅಲ್ಲಲ್ಲಿ ಕೇಳಿಬಂದಿವೆ.ಕಾರ್ಡ್ ಮನೆಗೆ ಸಿಗುತ್ತಾ!

ಹೊಸದಾಗಿ ಅರ್ಜಿ ಸಲ್ಲಿಸಿದ ಜನರಿಗೆ  ಗುರುತಿನ ಚೀಟಿ ಯಾವಾಗ ಸಿಗುತ್ತದೆ, ಮನೆಗೆ ಕಳುಹಿಸುತ್ತಾರಾ? ಎಂಬಿತ್ಯಾದಿ ಪ್ರಶ್ನೆಗಳು  ಮತದಾರರ ಸಾಲಿನಿಂದ ಕೇಳಿಬಂತು.  ಮತದಾನಕ್ಕೆ ಇನ್ನು ಒಂದು ತಿಂಗಳ ಅವಧಿಯಷ್ಟೇ ಬಾಕಿ ಉಳಿದಿದ್ದು, ಜಿಲ್ಲಾ ಚುನಾವಣಾ ಅಧಿಕಾರಿಗಳು (ಜಿಲ್ಲಾಧಿಕಾರಿ) ಉತ್ತರಿಸಬೇಕಿದೆ.`ಕೆಲವೊಂದು ತಪ್ಪುಗಳಿದ್ದ ಅರ್ಜಿಗಳನ್ನು ತಡೆಹಿಡಿಯಲಾಗಿದ್ದು ಅವುಗಳನ್ನು ಪರಿಶೀಲಿಸಿ ಉಳಿದ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಲಾಗುವುದು. ಏ. 15ರಂದು ಮತದಾರ ಪಟ್ಟಿಯ ಕರಡು ಪ್ರತಿ ಪ್ರಕಟಿಸಲಾಗುವುದು. ಮತದಾರರ ಗುರುತಿನ ಚೀಟಿಗಳನ್ನು ಆಯಾ ಮತಗಟ್ಟೆ ವ್ಯಾಪ್ತಿಯ ಅಧಿಕಾರಿಗಳ ಮೂಲಕ ಮತದಾರರ ಕೈಸೇರಲಿವೆ' ಎಂದು ಚುನಾವಣಾ ವಿಭಾಗದ ಅಧಿಕಾರಿಗಳು ತಿಳಿಸಿದರು.

ಪ್ರತಿಕ್ರಿಯಿಸಿ (+)