ಯುವತಿಯರ ನಾಪತ್ತೆಗೆ `ಪ್ರೀತಿ, ದೌರ್ಜನ್ಯ' ಕಾರಣ

7

ಯುವತಿಯರ ನಾಪತ್ತೆಗೆ `ಪ್ರೀತಿ, ದೌರ್ಜನ್ಯ' ಕಾರಣ

Published:
Updated:

ಬೆಂಗಳೂರು: `ಪ್ರೀತಿ- ಪ್ರೇಮದ ಕಾರಣಕ್ಕಾಗಿ ಶೇ 36ರಷ್ಟು ಯುವತಿಯರು ಹಾಗೂ ಕೌಟುಂಬಿಕ ದೌರ್ಜನ್ಯದ ಕಾರಣಕ್ಕಾಗಿ ಶೇ 38ರಷ್ಟು ಯುವತಿಯರು ಮನೆ ಬಿಟ್ಟು ಹೋಗಿದ್ದಾರೆ...!'

ರಾಜ್ಯದಲ್ಲಿ ಹದಿಹರೆಯದ ಯುವತಿಯರ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಕಾರಣ ಹುಡುಕಲು ರಾಜ್ಯ ಮಹಿಳಾ ಆಯೋಗ ನಡೆಸಿದ ಅಧ್ಯಯನದಿಂದ ಈ ಅಂಶಗಳು ಬೆಳಕಿಗೆ ಬಂದಿವೆ.

ಗೃಹ ಸಚಿವರೂ ಆದ ಉಪ ಮುಖ್ಯಮಂತ್ರಿ ಆರ್. ಅಶೋಕ್ ಅವರಿಗೆ 110 ಪುಟಗಳ ಅಧ್ಯಯನ ವರದಿಯನ್ನು ಆಯೋಗದ ಅಧ್ಯಕ್ಷೆ ಸಿ.ಮಂಜುಳಾ ಅವರು ಸೋಮವಾರ ಸಲ್ಲಿಸಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ಮಂಜುಳಾ, `2009ರಿಂದ 2011ರ ಸೆಪ್ಟೆಂಬರ್‌ವರೆಗೆ ರಾಜ್ಯದಲ್ಲಿ 14,989 ಯುವತಿಯರು ನಾಪತ್ತೆಯಾಗಿದ್ದಾರೆ. ಈ ಕುರಿತು ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಂದ ಮಾಹಿತಿ ಸಂಗ್ರಹಿಸಿದ ಬಳಿಕ, ಮೈಸೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಧ್ಯಯನ ನಡೆಸಲಾಯಿತು' ಎಂದರು.

ಹಲವು ಪ್ರಕರಣಗಳನ್ನು ಪರಿಶೀಲಿಸಲು ಖುದ್ದು ಮುಂಬೈಗೆ ಹೋಗಬೇಕಾಯಿತು. ಆ ಸಂದರ್ಭದಲ್ಲಿ ಅಲ್ಲಿನ ಹಲವು ವೇಶ್ಯಾವಾಟಿಕೆ ಕೇಂದ್ರಗಳಿಗೂ ಭೇಟಿ ನೀಡಲಾಯಿತು. ಅನೇಕ ಮಂದಿ ಕನ್ನಡಿಗ ಯುವತಿಯರು ಪತ್ತೆಯಾದರು. ಈ ಪ್ರಮಾಣ ಜಾಸ್ತಿ ಆಗುತ್ತಿರುವುದು ಕಳವಳಕಾರಿ ವಿದ್ಯಮಾನ ಎಂದು ಅವರು ವಿವರಿಸಿದರು.

ವರದಿಯಲ್ಲಿ ಏನಿದೆ?: ನಾಪತ್ತೆಯಾಗಿದ್ದವರಲ್ಲಿ 6,950 ಯುವತಿಯರು ಪತ್ತೆಯಾಗಿದ್ದಾರೆ.ಉಳಿದ 8,039 ಯುವತಿಯರ ಬಗ್ಗೆ ಇದುವರೆಗೂ ಮಾಹಿತಿ ಸಿಕ್ಕಿಲ್ಲ. 12ರಿಂದ 30 ವರ್ಷದೊಳಗಿನ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ನಾಪತ್ತೆಯಾಗಿದ್ದಾರೆ ಎಂಬುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.ಕುಟುಂಬದವರ ನಿರ್ಲಕ್ಷ್ಯದಿಂದ ಶೇ 4ರಷ್ಟು, ಮಾಧ್ಯಮಗಳ ಪ್ರಭಾವದಿಂದ ಶೇ 5ರಷ್ಟು, ಶೈಕ್ಷಣಿಕ ಒತ್ತಡ ಕಾರಣಕ್ಕಾಗಿ ಶೇ 5ರಷ್ಟು, ಆನಾರೋಗ್ಯ ಕಾರಣಕ್ಕೆ ಶೇ 2ರಷ್ಟು ಯುವತಿಯರು ನಾಪತ್ತೆಯಾಗಿದ್ದಾರೆ.

ಉಳಿದ ಶೇ 10ರಷ್ಟು ಯುವತಿಯರು ಇತರ ಕಾರಣಗಳಿಗಾಗಿ ಮನೆ ಬಿಟ್ಟು ಹೋಗಿದ್ದಾರೆ ಎಂದು ವರದಿ ಹೇಳಿದೆ.

ನಾಪತ್ತೆಯಾಗಿರುವ ಬಹುಪಾಲು ಯುವತಿಯರು ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ತರಗತಿಯವರು. ಮನೆ ಬಿಟ್ಟು ಹೋಗಲು ಅನಕ್ಷರತೆ ಕಾರಣವಲ್ಲ. ಬದಲಿಗೆ, ಮನೆ ಬಿಟ್ಟು ಹೋದ ನಂತರದ ಪರಿಣಾಮಗಳ ಬಗ್ಗೆ ಅರಿವು ಇಲ್ಲದವರೇ ಹೆಚ್ಚು ಆ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದೂ ವರದಿಯಲ್ಲಿ ವಿವರಿಸಲಾಗಿದೆ.

ಬಡತನ ಕಾರಣಕ್ಕಾಗಿಯೇ ಕಾರ್ಮಿಕರು, ವ್ಯಾಪಾರಿಗಳು ಮತ್ತು ಸರ್ಕಾರಿ ನೌಕರರ ಮಕ್ಕಳು ನಾಪತ್ತೆಯಾಗಿದ್ದಾರೆ. ಶೈಕ್ಷಣಿಕವಾಗಿ ಹೆಚ್ಚು ಅಂಕ ಪಡೆಯಬೇಕು ಎನ್ನುವ ಒತ್ತಡ ಪೋಷಕರಿಂದ ಹೆಚ್ಚಾದ ಸಂದರ್ಭದಲ್ಲೂ ಯುವತಿಯರು ಮನೆ ಬಿಟ್ಟು ಹೋಗಿದ್ದಾರೆ.

ಮದುವೆಯಾದ ಯುವತಿಯರು ಕೂಡ ಗಂಡನ ಕಿರುಕುಳ ತಾಳದೆ ಮನೆ ಬಿಟ್ಟು ಹೋಗಿದ್ದಾರೆ. ಬೇರೆ ಜಾತಿಯ ಯುವಕರನ್ನು ಪ್ರೀತಿಸಿದ ಅನೇಕ ಯುವತಿಯರು ಪೋಷಕರಿಗೆ ಹೆದರಿ ಮನೆ ತೊರೆದಿರುವ ಅಂಶಗಳೂ ಅಧ್ಯಯನದಿಂದ ಗೊತ್ತಾಗಿವೆ.

ಸರ್ಕಾರಕ್ಕೆ ಆಯೋಗದ 25 ಸಲಹೆ

ನಾಪತ್ತೆಗೆ ಕಾರಣಗಳನ್ನು ಹುಡುಕಿರುವ ಆಯೋಗ, ಅವುಗಳನ್ನು ಹೋಗಲಾಡಿಸುವುದಕ್ಕೆ ಬೇಕಾದ 25 ಸಲಹೆಗಳನ್ನು ಸರ್ಕಾರಕ್ಕೆ ನೀಡಿದೆ. ಅವುಗಳಲ್ಲಿ ಪ್ರಮುಖವಾಗಿ, ನೈತಿಕ ಶಿಕ್ಷಣವನ್ನು ಕಡ್ಡಾಯ ಮಾಡುವುದು ಸೇರಿದೆ.

ಶಾಲಾ ಕಾಲೇಜುಗಳಲ್ಲಿ ಯುವಕ- ಯುವತಿಯರಿಗೆ ಲೈಂಗಿಕ ಶಿಕ್ಷಣ ನೀಡಬೇಕು, ಕೌನ್ಸೆಲಿಂಗ್ ಘಟಕ ಆರಂಭಿಸಬೇಕು, ಮಕ್ಕಳು ನಾಪತ್ತೆಯಾದ ತಕ್ಷಣ ಪೋಷಕರು ದೂರು ದಾಖಲಿಸಬೇಕು, ಬಸ್ ಮತ್ತು ರೈಲ್ವೆ ನಿಲ್ದಾಣದಲ್ಲಿ ಪೊಲೀಸರ ಗಸ್ತು ಹೆಚ್ಚಿಸಬೇಕು, ನಾಪತ್ತೆ ಪ್ರಕರಣಗಳ ಪತ್ತೆಗೆ  ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ವಿಭಾಗ ತೆರೆಯಬೇಕು ಎಂದು ಆಯೋಗ ಶಿಫಾರಸ್ಸು ಮಾಡಿದೆ.

ಆಯೋಗದ ವರದಿಯನ್ನು ಅಧ್ಯಯನ ಮಾಡಿ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವರದಿ ಸ್ವೀಕರಿಸಿದ ಅಶೋಕ್ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry