ಯುವತಿ ಮಾರಾಟ ಜಾಲ ಪತ್ತೆ ಮೂವರು ಆರೋಪಿಗಳ ಬಂಧನ

7

ಯುವತಿ ಮಾರಾಟ ಜಾಲ ಪತ್ತೆ ಮೂವರು ಆರೋಪಿಗಳ ಬಂಧನ

Published:
Updated:

ಕಲಘಟಗಿ (ಧಾರವಾಡ ಜಿಲ್ಲೆ):  ಮಹಿಳೆಯರ ಮಾರಾಟದ ಜಾಲ ಪತ್ತೆ ಹಚ್ಚಿರುವ ಕಲಘಟಗಿ ಪೊಲೀಸರು ತಾಲ್ಲೂಕಿನ ಕಾಮಧೇನು ಗ್ರಾಮದ 19 ವರ್ಷದ ಯುವತಿಯನ್ನು ರಾಜಸ್ತಾನದಿಂದ ರಕ್ಷಿಸಿ ಕರೆತಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಬಸಪ್ಪ ಬೂದಣ್ಣವರ, ಮಿಶ್ರಿಕೋಟಿಯ ಶರೀಫ್‌ಸಾಬ್ ಹಾಗೂ ರಜಿಯಾ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.ಪ್ರಕರಣದ ವಿವರ: ಕಾಮಧೇನು ಗ್ರಾಮದ ಕಮಲವ್ವ ರುದ್ರಪ್ಪ ಮರಿಯಪ್ಪಗೌಡ್ರ ಎಂಬುವವರು ತಮ್ಮ ಮಗಳಿಗೆ ಮದುವೆ ಮಾಡಲು ವರನ ಹುಡುಕಾಟದಲ್ಲಿ ತೊಡಗಿದ್ದರು. ಉತ್ತಮ ಸಂಬಂಧದೊಂದಿಗೆ ಮದುವೆ ಕುದುರಿಸುವುದಾಗಿ ಹೇಳಿ ಕಳೆದ ಅಕ್ಟೋಬರ್‌ನಲ್ಲಿ ಅದೇ ಗ್ರಾಮದ ಬಸಪ್ಪ ಬೂದಣ್ಣವರ, ಯುವತಿಯನ್ನು ರಾಜಸ್ತಾನದ ಜೋಧಪುರ ಸಮೀಪದ ಪಲೋದಾ ಗ್ರಾಮಕ್ಕೆ ಕರೆದೊಯ್ದು ಅಲ್ಲಿ ಅಶೋಕ್ ಕುಮಾರ್ ಜೈನ್ ಎಂಬುವವರಿಗೆ ಎರಡು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು. ಅಶೋಕ್ ಕುಮಾರ್‌ನೊಂದಿಗೆ ಸಂಪರ್ಕ ಬೆಳೆಸಲು ಶರೀಫ್ ಸಾಬ್ ಹಾಗೂ ರಜಿಯಾ ದಂಪತಿ ನೆರವಾಗಿದ್ದರು. ಯುವತಿ ಮಾರಾಟ ಮಾಡಿ ಬಂದ ಹಣವನ್ನು ಮೂವರೂ ಹಂಚಿಕೊಂಡಿದ್ದರು. ಊರಿಗೆ ಮರಳಿದ್ದ ಬಸಪ್ಪನು ಯುವತಿಯ ತಾಯಿಯ ಬಳಿ `ನಿಮ್ಮ ಮಗಳಿಗೆ ರಾಜಸ್ತಾನದಲ್ಲಿ ಉತ್ತಮ ಕೆಲಸ ದೊರೆತಿದೆ. ಅಲ್ಲಿಯೇ ಶ್ರೀಮಂತ ಯುವಕನೊಂದಿಗೆ ಮದುವೆ ಮಾಡಿಸಿದ್ದೇನೆ' ಎಂದು ಹೇಳಿದ್ದಾನೆ.ಎರಡು ತಿಂಗಳು ಕಳೆದರೂ ಮಗಳ ವಿಳಾಸ ದೊರೆತಿಲ್ಲ. ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಬಸಪ್ಪನನ್ನು ಕೇಳಿದರೆ ಸರಿಯಾದ ಮಾಹಿತಿ ನೀಡಿಲ್ಲ. ಇದರಿಂದ ಅನುಮಾನಗೊಂಡ ಕಮಲವ್ವ ತನ್ನ ಸಹೋದರ ಪರಮೇಶ್ವರಪ್ಪ ಕಟ್ಟಿ ಎಂಬುವವರೊಂದಿಗೆ ಸೇರಿ ಇದೇ 20ರಂದು ಕಲಘಟಗಿ ಪೊಲೀಸರಿಗೆ ದೂರು ನೀಡಿದ್ದಾರೆ.ಕಲಘಟಗಿ ಸಬ್‌ಇನ್‌ಸ್ಪೆಕ್ಟರ್ ಶಿವಾನಂದ ಗಾಣಿಗೇರ ನೇತೃತ್ವದಲ್ಲಿ ಪೊಲೀಸರು ಬಸಪ್ಪ ಬೂದಣ್ಣನವರನನ್ನು ಕರೆತಂದು ವಿಚಾರಣೆ ನಡೆಸಿದ್ದಾರೆ. ಆಗ ಮಿಶ್ರಿಕೋಟಿ ದಂಪತಿಯ ಸಹಾಯದಿಂದ ಯುವತಿಯನ್ನು ರಾಜಸ್ತಾನದ ವ್ಯಕ್ತಿಗೆ ಮಾರಾಟ ಮಾಡಿರುವುದಾಗಿ ಬಾಯಿಬಿಟ್ಟಿದ್ದಾನೆ. ಕೊನೆಗೆ ಮೂವರನ್ನೂ ಬಂಧಿಸಿದ ಪೊಲೀಸರು ಪಲೋದಾ ಗ್ರಾಮಕ್ಕೆ ತೆರಳಿ ಯುವತಿಯನ್ನು ರಕ್ಷಿಸಿ ಕರೆತಂದಿದ್ದಾರೆ.  ಯುವತಿಯ ತಾಯಿ ಕಮಲವ್ವನನ್ನು ಕುಂದಗೋಳ ತಾಲ್ಲೂಕು ಗುಮ್ಮಗೋಳದ ರುದ್ರಪ್ಪ ಎಂಬುವವರಿಗೆ ಮದುವೆ ಮಾಡಿಕೊಡಲಾಗಿದ್ದು, ದಂಪತಿಯ ನಡುವೆ ವಿರಸ ಬಂದು ಕಮಲವ್ವ ತನ್ನ ತವರು ಕಾಮಧೇನು ಗ್ರಾಮದಲ್ಲಿಯೇ ವಾಸವಿದ್ದರು ಎನ್ನಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ತಾನದ ಸುನೀತಾ, ಅಶೋಕ್ ಕುಮಾರ್ ಹಾಗೂ ಹೇಮಂತ ಕುಮಾರ್  ಎಂಬುವವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ಡಾ.ವೈ.ಎಸ್.ರವಿಕುಮಾರ್ `ಪ್ರಜಾವಾಣಿ'ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry