ಬುಧವಾರ, ಅಕ್ಟೋಬರ್ 16, 2019
26 °C

ಯುವತಿ ಶಂಕಾಸ್ಪದ ಸಾವು, ಪೋಷಕರ ವಿರುದ್ಧ ದೂರು

Published:
Updated:

ಮಂಡ್ಯ: ಮನೆಯ ಮಗಳು ಕೆಳ ವರ್ಗದ ಜಾತಿಗೆ ಸೇರಿದ ಹುಡುಗನನ್ನು ಮದುವೆಯಾದರೆ ಕುಟುಂಬದ ಗೌರವಕ್ಕೆ ಧಕ್ಕೆಯಾಗಲಿದೆ ಎಂಬ ಭೀತಿಯೇ ಯುವತಿಯೊರ್ವಳ ಸಾವಿಗೆ ಕಾರಣವಾಗಿದೆಯೇ?ಇಂಥದೊಂದು ಶಂಕೆಯನ್ನು ಮೂಡಿಸುವ ಘಟನೆ ಮದ್ದೂರು ತಾಲ್ಲೂಕು ಕೊಪ್ಪ ಹೋಬಳಿಯ ಆಬಲವಾಡಿಯಲ್ಲಿ ನಡೆದಿದೆ. ಯುವತಿಯೊಬ್ಬಳು ದಲಿತ ಜನಾಂಗದ ಹುಡುಗನನ್ನು ಪ್ರೀತಿಸಿದ ಕಾರಣಕ್ಕಾಗಿ ಪೋಷಕರೇ ಆಕೆಯನ್ನು ಹೊಡೆದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಪೋಷಕರ ವಿರುದ್ಧ ಗುರುವಾರ ಕೊಪ್ಪ ಠಾಣೆಯಲ್ಲಿ ದೂರು ನೀಡಲಾಗಿದೆ. ಈ ದೂರಿನ ಆಧಾರದಲ್ಲಿ ಪೋಷಕರ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಯುವತಿ ಸತ್ತು ಎರಡು ತಿಂಗಳಾಗಿದೆ. ಆಬಲವಾಡಿ ಗ್ರಾಮದ ಸುವರ್ಣ ಅದೇ ಗ್ರಾಮದ ದಲಿತ ಜನಾಂಗದ ಗೋವಿಂದರಾಜು ಪರಸ್ಪರ ಪ್ರೀತಿಸುತ್ತಿದ್ದರು. ಇದನ್ನು ಸಹಿಸದ ಯುವತಿಯ ಪೋಷಕರು ಈಕೆಯನ್ನು ನೇಣು ಹಾಕಿ ಕೊಲೆ ಮಾಡಿದ್ದಾರೆ. ಗೋವಿಂದರಾಜು ಮೇಲೆ ಕೂಡ ಹಲ್ಲೆ ನಡೆಸಿದ್ದು ಆತ ಪ್ರಾಣಭೀತಿಯಿಂದ ತಲೆಮರೆಸಿಕೊಂಡಿದ್ದಾರೆ ಎಂದು ಗೋವಿಂದರಾಜು ಸಹೋದರ ತಿಮ್ಮಪ್ಪ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ಕಳೆದ ನವೆಂಬರ್ 6ರಂದು ಸುವರ್ಣ ಮತ್ತು ಗೋವಿಂದರಾಜು ಅರಸಿನಕೆರೆ ಗೇಟ್ ಬಳಿ ನಿಂತಿದ್ದನ್ನು ಕಂಡ ಸವರ್ಣೀಯರು ಈ ಇಬ್ಬರನ್ನು ಅಬಲವಾಡಿಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದರು. ಗೋವಿಂದರಾಜು ತಪ್ಪಿಸಿಕೊಂಡು ಪರಾರಿಯಾದ. ಸುವರ್ಣಳನ್ನು ನಮ್ಮ ಮನೆಗೇ ಕರೆತಂದು ಅಲ್ಲಿಯೇ ನೇಣು ಹಾಕಿ ಕೊಲೆ ಮಾಡಲಾಗಿದೆ. ಅಲ್ಲದೆ ಜಾತಿ ನಿಂದನೆ ಮಾಡಲಾಗಿದೆ. ಭೀತಿಯಿಂದ ನಮ್ಮ ಕುಟುಂಬದ ಎಲ್ಲರೂ ಊರು ಬಿಟ್ಟಿದ್ದಾರೆ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿದ ಕೊಪ್ಪ ಠಾಣೆ ಸಬ್ ಇನ್ಸ್‌ಪೆಕ್ಟರ್ ಮುನಿಯಪ್ಪ ಅವರು, ತಿಮ್ಮಪ್ಪ ಅವರು ನೀಡಿರುವ ದೂರಿನಂತೆ ಯುವತಿಯ ತಂದೆ ದವಲನ ರಾಮಕೃಷ್ಣ ಎಂಬವರ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ. ಯುವತಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತಪಟ್ಟಿರುವುದು ನಿಜ. ಅದಕ್ಕೆ ಪೋಷಕರೇ ಕಾರಣರಾ ಎಂಬುದು ತನಿಖೆಯಿಂದ ತಿಳಿಯಬೇಕಿದೆ ಎಂದರು.ಠಾಣೆಯ ಅಧಿಕಾರಿಗಳ ಪ್ರಕಾರ, ಎರಡು ತಿಂಗಳ ಹಿಂದೆ ಯುವತಿ ನೇಣು ಬಿಗಿದುಕೊಂಡು ಮೃತಪಟ್ಟ ಘಟನೆ ಬಳಿಕವು ಪೋಷಕರು ಈ ಬಗೆಗೆ ಮಾಹಿತಿ ನೀಡಿರಲಿಲ್ಲ. ಈಗ ಶವಸಂಸ್ಕಾರ ಆಗಿಹೋಗಿದೆ. ದೂರಿನ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ ಎಂದು ಹೇಳಿದರು.ಈಗ ಪ್ರಕರಣ ಕೊಪ್ಪ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ತನಿಖೆಯ ಹಂತದಲ್ಲಿದೆ. ದವಲನ ರಾಮಕೃಷ್ಣ, ತಿಮ್ಮೇಶ, ಮಲ್ಲೇಶ, ಮುರುಗೇಶ್ ಸೇರಿದಂತೆ ಒಟ್ಟು 10 ಜನರನ್ನು ಆರೋಪಿಗಳಾಗಿ ಹೆಸರಿಸಲಾಗಿದೆ.

Post Comments (+)