ಯುವಪ್ರತಿಭೆಗೆ : `ಕ್ಯೂಕಿ' ಕೊಕ್ಕೆ!

7

ಯುವಪ್ರತಿಭೆಗೆ : `ಕ್ಯೂಕಿ' ಕೊಕ್ಕೆ!

Published:
Updated:

ಸಾಮಾಜಿಕ ಜಾಲತಾಣಗಳು ವ್ಯಕ್ತಿಯ ಅಸ್ತಿತ್ವ, ವ್ಯಕ್ತಿತ್ವ ಪ್ರದರ್ಶನಕ್ಕೆ ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗ, ಕಲೆ, ಸಂಸ್ಕೃತಿ, ಪ್ರತಿಭೆ ಇತ್ಯಾದಿಗಳನ್ನು ಜಾಗತಿಕ ಮಟ್ಟದಲ್ಲಿ ಅನಾವರಣಗೊಳಿಸಲು ಸಾಮಾಜಿಕ ಜಾಲತಾಣಗಳು ಕಟ್ಟಿಕೊಟ್ಟ ವೇದಿಕೆ ಗಮನಾರ್ಹ. ಇಂಥ ಸಾಮಾಜಿಕ ತಾಣಗಳ ಯುಗದಲ್ಲಿ ಕೇವಲ ವ್ಯಕ್ತಿಯಾಗಿ ಮಾತ್ರವಲ್ಲ, ಆಂತರ್ಯದಲ್ಲಿ ಹುದುಗಿರುವ ಪ್ರತಿಭೆಗೂ ಸೂಕ್ತ ವೇದಿಕೆ ಹಾಕಿಕೊಡುವ ನಿಟ್ಟಿನಲ್ಲಿ `ಕ್ಯೂಕಿ' (ಡಿಡಿಡಿ.ಟಿಢ್ಠಜಿ.್ಚಟಞ) ಎಂಬ ಹೊಸ ಬಗೆಯ ತಾಣವೊಂದು ಬುಧವಾರದಿಂದ ಕಾರ್ಯಾರಂಭ ಮಾಡಿದೆ.ಕ್ಯೂಕಿ ಡಿಜಿಟಲ್ ಮೀಡಿಯಾ ಕಂಪೆನಿಯನ್ನು ಹುಟ್ಟುಹಾಕಿದವರು ಸೃಜನಶೀಲ ಚಲನಚಿತ್ರಗಳ ತಯಾರಿಯಲ್ಲಿ ಅಂತರರಾಷ್ಟ್ರೀಯ ಮನ್ನಣೆ ಪಡೆದ ನಿರ್ದೇಶಕ ಶೇಖರ್ ಕಪೂರ್ ಹಾಗೂ ಆಸ್ಕರ್ ಹಾಗೂ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್. ಲಾಸ್ ಏಂಜಲೀಸ್‌ನಲ್ಲಿದ್ದ ರೆಹಮಾನ್, ಸಿಂಗಾಪೂರದಲ್ಲಿದ್ದ ಶೇಖರ್ ಕಪೂರ್ ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳ ಸುದ್ದಿಮಿತ್ರರ ಜೊತೆ ಮಾತನಾಡಿಸಲು ಅವಕಾಶ ಕಲ್ಪಿಸಲಾಯಿತು. ಮುಂಬೈನಲ್ಲಿ ಕುಳಿತಿದ್ದ ಕಾರ್ಯಕ್ರಮದ ನಿರೂಪಕ ಸಿದ್ಧಾರ್ಥ್ ಬಸು ಸಂವಾದದ ರೂವಾರಿಯಾದರು. ಇವರಿಗೆ ನೆರವಾಗಿದ್ದು ಸಿಸ್ಕೊದ ವಿಡಿಯೋ ಸಂವಾದ ಅಂತರಜಾಲ ಸೇವೆ.ಜಗತ್ತಿನಲ್ಲಿರುವ 202 ಕೋಟಿ ಅಂತರಜಾಲ ಬಳಕೆದಾರರಲ್ಲಿ ಭಾರತದ ಪಾಲು ಆರು ಕೋಟಿಯಷ್ಟು. ಇವರಲ್ಲಿ ಯುವಜನರೇ ಹೆಚ್ಚು. ಭಾರತೀಯ ಯುವಜನತೆಯನ್ನೇ ಗುರಿಯಾಗಿಟ್ಟುಕೊಂಡು ಕ್ಯೂಕಿ ಎಂಬ ನೂತನ ಸಾಮಾಜಿಕ ತಾಣವನ್ನು ಹುಟ್ಟುಹಾಕಿದ್ದಾರೆ. ನೂತನ ಪ್ರಯತ್ನಕ್ಕೆ ಜತೆಯಾದವರು ಪೂಣಚ ಮಾಚಯ್ಯ. ಇವರು ಕಂಪೆನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರುವಲ್ಲಿ ನೆರವಾದರೆ, ಸಿಸ್ಕೊ ಕಂಪೆನಿ ಪ್ರಾಯೋಜಕತ್ವದ ಹೊಣೆ ಹೊತ್ತಿದೆ.`ಕ್ಯೂಕಿ ಇತರ ತಾಣಗಳಿಗಿಂತ ಭಿನ್ನವಾಗಿದೆ. ಜಗತ್ತಿನ ಯಾವ ಮೂಲೆಯಲ್ಲಿರುವ ಯಾರು ಬೇಕಾದರೂ ಇದರ ಸದಸ್ಯರಾಗಬಹುದು. ಆ ಮೂಲಕ ನಮ್ಮಳಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಇದು ಉತ್ತೇಜಿಸಲಿದೆ. ಪ್ರತಿಯೊಬ್ಬರ ಕಲೆಗೆ ಅಂತರರಾಷ್ಟ್ರೀಯ ಮನ್ನಣೆ ಗಳಿಸಲು ಕ್ಯೂಕಿ ನೆರವಾಗಲಿದೆ' ಎನ್ನುವುದು ತಂಡದ ವಿಶ್ವಾಸ.ಇತರ ಸಾಮಾಜಿಕ ತಾಣಗಳಂತೆ ತಾವು ತೆಗೆದ ಚಿತ್ರ ಅಥವಾ ದೃಶ್ಯಗಳನ್ನು ಹಾಕಿ ಸುಮ್ಮನಿರಲು ಕ್ಯೂಕಿಯಲ್ಲಿ ಸಾಧ್ಯವಿಲ್ಲ. ನಮ್ಮ ಸೃಜನಶೀಲ ಸಾಮರ್ಥ್ಯ ಪ್ರದರ್ಶನಕ್ಕೆ ನಮ್ಮಂತೆಯೇ ಸದಸ್ಯರಾಗಿರುವ ಇತರರು ಅವರ ವಿವೇಚನೆಗೆ ತಕ್ಕಂತೆ ಮತ ಚಲಾಯಿಸಲಿದ್ದಾರೆ. ಅತಿ ಹೆಚ್ಚು ಮನ್ನಣೆ ಗಳಿಸಿದವುಗಳನ್ನು ಚೇತನ್ ಭಗತ್, ಇಮ್ತಿಯಾಜ್ ಅಲಿ, ರಂಜಿತ್ ಬರೋಟ್ ಹಾಗೂ ಸುರೇಶ್ ನಟರಾಜನ್ ಎಂಬ ನಾಲ್ಕು ಪ್ರತಿಭಾವಂತ ತೀರ್ಪುಗಾರರ ತಂಡ ವೀಕ್ಷಿಸಿ `ಕ್ಯೂಕಿ' ಮಾನ್ಯತೆ ನೀಡಲಿದ್ದಾರೆ. ಮೂರು ಹಂತಗಳಲ್ಲಿ ಗುಣಮಟ್ಟ ಪರೀಕ್ಷೆ ನಡೆಯಲಿದೆ. ನಿತ್ಯ ಕಾಣುವ ಯಾವುದೇ ವಸ್ತುವನ್ನು ಚಿತ್ರೀಕರಿಸಿ ಅಥವಾ ಸಂಗೀತದ ತುಣುಕನ್ನು ಕ್ಯೂಕಿಗೆ ಕಳುಹಿಸಬಹುದು. ಕವನ, ಚಿತ್ರಕಥೆ, ಕಥೆ, ಕಲಾಕೃತಿ ಇತ್ಯಾದಿಯನ್ನು ಕ್ಯೂಕಿಗೆ ಕಳುಹಿಸಿ ತಮ್ಮ ಪಾಂಡಿತ್ಯವನ್ನು ಒರೆಗೆ ಹಚ್ಚಬಹುದು. ಜತೆಗೆ ತಮ್ಮ ತಮ್ಮ ಪ್ರತಿಭೆಯ ಹಕ್ಕುಸ್ವಾಮ್ಯತೆಗೂ ಕ್ಯೂಕಿ ಬದ್ಧವಾಗಿದೆ.`ಸುಮಾರು ಮೂವತ್ತು ವರ್ಷಗಳ ಹಿಂದೆ ವೀಡಿಯೊ ಕೇಂದ್ರವನ್ನು ತೆರೆಯಬೇಕೆಂದಿದ್ದೆ. ಆಗ ಮಂದಿ ನಕ್ಕಿದ್ದರು. ಸಿನಿಮಾ ಮುಂದೆ ಈ ಕೇಂದ್ರ ಏನು ಮಾಡಲಾದೀತು ಎಂದವರೇ ಹೆಚ್ಚು. ಆದರೆ ನಂತರ ಬಂದ ದೂರದರ್ಶನ ಅದಕ್ಕೆ ಉತ್ತರವಾಗಿತ್ತು. ಅದು ಕೂಡ ಏಕತಾನತೆಯನ್ನು ಸೃಷ್ಟಿಸಿತ್ತು. ಆದರೆ ನಂತರ ಹುಟ್ಟಿಕೊಂಡ ವಿವಿಧ ಚಾನೆಲ್‌ಗಳು ವಿವಿಧ ಮಾದರಿಯ ಅನ್ವೇಷಣೆಗಳನ್ನು ಮಾಡಿದವು. ಈಗಲೂ ಅಷ್ಟೇ. ಅಂತರಜಾಲದಲ್ಲಿ ಹೊಸತನ್ನು ಹುಟ್ಟುಹಾಕುವ ಪ್ರಯತ್ನ ಇದಾಗಿದೆ. ಮುಂದಿನ ದಿನಗಳಲ್ಲಿ ಇದು ಸಾಕಷ್ಟು ಪ್ರಸಿದ್ಧಿ ಪಡೆಯಲಿದೆ ಎಂಬ ವಿಶ್ವಾಸ ನನ್ನದು' ಎಂದು ಹಿರಿಯ ನಿರ್ದೇಶಕ ಶೇಖರ್ ಕಪೂರ್ ತಿಳಿಸಿದರು.`ಮಣಿರತ್ನಂ ಅವರೊಂದಿಗೆ ಕೆಲಸ ಮಾಡುತ್ತಿದ್ದ ನಾನು ಒಂದೇ ಬಗೆಯ ದೃಷ್ಟಿಕೋನದಿಂದ ಚಿಂತಿಸುತ್ತಿದ್ದೆ. ಆದರೆ ಶೇಖರ್ ನನ್ನ ಮನಸ್ಸನ್ನು ಹೊರ ಜಗತ್ತಿಗೆ ತೆರೆದವರು. ಅವರನ್ನು ನನ್ನ ಕಣ್ಣು ತೆರೆಸಿದ ಗುರುವೆಂದೇ ನಂಬಿದ್ದೇನೆ. ಶೇಖರ್ ಏನು ಮಾಡಿದರೂ ಒಂದೆರೆಡು ಹೆಜ್ಜೆ ಮುಂದಿಟ್ಟೇ ಮಾಡುತ್ತಾರೆ ಎಂಬ ನಂಬಿಕೆಯ ಆಧಾರದ ಮೇಲೆ ಈ ಯೋಜನೆಯಲ್ಲಿ ನಾನು ಅವರ ಜತೆಗೂಡಿದ್ದೇನೆ.ಜತೆಗೆ ನನ್ನದೇ ಆದ ಮೆಲಾಂಜ್ ಹಾಗೂ ಕೆಎಂ ಮ್ಯೂಸಿಕ್ ಕನ್ಸರ್‌ವೇಟರಿ ಮೂಲಕ ಯುವ ಸಂಗೀತಗಾರರು ಸೃಷ್ಟಿಸಿದ ಕೆಲವು ಹಿಂದಿ ಹಾಗೂ ತಮಿಳು ಗೀತೆಗಳನ್ನು ತಾಣಗಳಲ್ಲಿ ಪ್ರಸಾರ ಮಾಡಿದ್ದೇವೆ. ಇದೇ ರೀತಿಯ ಪ್ರಯತ್ನವನ್ನು ಬೇರೆಯವರೂ ಮಾಡಬಹುದು. ಅವರೆಲ್ಲರಿಗೂ ಕ್ಯೂಕಿ ಪ್ರೋತ್ಸಾಹ ನೀಡಲಿದೆ' ಎಂಬುದು ಎ.ಆರ್. ರೆಹಮಾನ್ ವಿಶ್ವಾಸ.ಕೇವಲ ಜಾಲತಾಣಗಳಲ್ಲಿ ಮಾತ್ರವಲ್ಲದೆ ಆಂಡ್ರಾಯ್ಡ ಆಪರೇಟಿಂಗ್ ಸಿಸ್ಟಂಗಳಿರುವ ಮೊಬೈಲ್‌ಗಳಲ್ಲೂ ಕ್ಯೂಕಿ ಲಭ್ಯ. ಮುಂದಿನ ಎರಡು ವರ್ಷಗಳಲ್ಲಿ ಭಾರತದ ಬಹುಭಾಗಗಳಲ್ಲಿ ಅಂತರಜಾಲ ಸೇವೆ ಲಭ್ಯವಾಗುವ ಸಾಧ್ಯತೆಯನ್ನೇ ಆಧಾರವಾಗಿಟ್ಟುಕೊಂಡು ದೇಶದ ಕೊನೆಯ ಹಳ್ಳಿಯನ್ನೂ ತಲುಪುವ ಸಾಹಸವನ್ನು ಕ್ಯೂಕಿ ಮಾಡಿದೆ. ಜತೆಗೆ ಮುಂದಿನ ಎರಡು ತಿಂಗಳಲ್ಲಿ ಭಾರತದ ಬಹು ಭಾಷೆಗಳಲ್ಲಿ ಕ್ಯೂಕಿ ತಾಣ ಲಭ್ಯವಾಗುವ ವಿಶ್ವಾಸವನ್ನೂ ತಂಡ ವ್ಯಕ್ತಪಡಿಸಿದೆ.

ತತ್ವಾಧಾರಿತ ಪ್ರಕ್ರಿಯೆ: ಪೂಣಚ`ಕ್ಯೂಕಿ ಒಟ್ಟು ನಾಲ್ಕು ತತ್ವಗಳಲ್ಲಿ ನಂಬಿಕೆ ಇಟ್ಟಿದೆ. ಕ್ರಿಯಾತ್ಮಕ ಸಮುದಾಯವನ್ನು ಕಟ್ಟುವುದು, ಪರಿಣತರು ಹಾಗೂ ನಿಪುಣರನ್ನು ಒಟ್ಟಾಗಿ ಸೇರಿಸುವುದು, ವಿಭಿನ್ನ ಪ್ರಕಾರ ಹಾಗೂ ಸಮುದಾಯಗಳ ನಡುವಿನ ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸುವುದು ಹಾಗೂ ಪ್ರತಿಯೊಂದನ್ನೂ ಸಂಭ್ರಮಿಸುವುದು' ಎಂಬುದು ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪೂಣಚ ಮಾಚಯ್ಯ ಅವರ ವಿವರಣೆ.ಆಯಾ ಕ್ಷೇತ್ರದ ನಿಪುಣರು, ಪರಿಣತರು ಸೃಷ್ಟಿಸಿದ ವಸ್ತುಗಳ ಭಂಡಾರವನ್ನು ಹುಟ್ಟುಹಾಕುವುದು ಕಾರ್ಯಕ್ರಮದ ಮುಖ್ಯ ಉದ್ದೇಶ. ಇದಕ್ಕೆ ಸಿಸ್ಕೊದ ಮಾಹಿತಿ ಕೇಂದ್ರ (ಡಾಟಾಸೆಂಟರ್) ತಂತ್ರಜ್ಞಾನದ ಆಧಾರದಲ್ಲಿ ರಚಿಸಲಾಗಿದೆ ಎನ್ನುತ್ತಾರೆ ಅವರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry