ಯುವಭವನಕ್ಕೆ ರೂ.2 ಕೋಟಿ: ಸಿಎಂ ಪ್ರಕಟ

7

ಯುವಭವನಕ್ಕೆ ರೂ.2 ಕೋಟಿ: ಸಿಎಂ ಪ್ರಕಟ

Published:
Updated:

ಚಿತ್ರದುರ್ಗ: ಮುರುಘಾಮಠದಲ್ಲಿ ನಿರ್ಮಿಸುವ ಯುವಭವನಕ್ಕೆ ಸರ್ಕಾರದಿಂದ ರೂ. 2 ಕೋಟಿ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಪ್ರಕಟಿಸಿದರು.ಇಲ್ಲಿನ ಮುರುಘಾಮಠದ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಶುಕ್ರವಾರ ಮಾನವತಾವಾದಿ ಬಸವೇಶ್ವರರ 100 ಅಡಿ ಎತ್ತರದ ಏಕ ಶಿಲಾಮೂರ್ತಿಯ ಪ್ರತಿಮೆಯ ಪ್ರತಿಷ್ಠಾಪನೆಗೆ ಅಡಿಗಲ್ಲು ಹಾಕಿದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಸವೇಶ್ವರರ ಪ್ರತಿಮೆ ನಿರ್ಮಾಣಕ್ಕೆ ಬಜೆಟ್‌ನಲ್ಲಿ ರೂ. 5 ಕೋಟಿ ಬಿ.ಎಸ್. ಯಡಿಯೂರಪ್ಪ ಅವರು ಘೋಷಿಸಿದ್ದರು. ಈ ವಿಷಯವನ್ನು  ಸಂಪುಟ ಸಭೆಯಲ್ಲಿ ಮುಂದಿಟ್ಟು ಶೀಘ್ರ ಒಪ್ಪಿಗೆ ಪಡೆದು ಹಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.ಮಠದ ಆವರಣದಲ್ಲಿ ಯುವಭವನ ನಿರ್ಮಾಣಕ್ಕೆ ಶರಣರು ಸಹಾಯಧನ ಕೇಳಿದ್ದಾರೆ. ಸರಕಾರ ಮಾಡುವ ಕೆಲಸವನ್ನು ಮಠ ಮಾಡುತ್ತಿದೆ. ಹೀಗಾಗಿ, ಅನುದಾನ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಜತೆಗೆ ಚಿತ್ರದುರ್ಗ ಐತಿಹಾಸಿಕ ಸ್ಥಳವಾಗಿರುವುದರಿಂದ ನಿತ್ಯ ವಿದ್ಯಾರ್ಥಿಗಳು, ನೂರಾರು ಪ್ರವಾಸಿಗರು ಬಂದು ಹೋಗುವುದರಿಂದ ಈ ಭವನ ನಿರ್ಮಾಣ ಸಹಾಯಕವಾಗಲಿದೆ ಎಂದರು.ಹಿಂದಿನ ಸರಕಾರದ ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಕಿಕೊಂಡ ಕೆಲಸ, ಯೋಜನೆಗಳನ್ನು ಯಾವುದೇ ಅಡ್ಡಿ ಆತಂಕಗಳು ಬಂದರೂ ತಪ್ಪದೇ ಜಾರಿಗೆ ತರುತ್ತೇನೆ ಎಂದರು.ಬೆಂಗಳೂರಿನಲ್ಲಿ ಬಸವೇಶ್ವರ ಅಧ್ಯಯನ ಕೇಂದ್ರ ನಿರ್ಮಾಣಕ್ಕೆ ರೂ. 25 ಕೋಟಿ ನೀಡಲು 2011-12ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಇದಕ್ಕೆ ಶೀಘ್ರ ಅನುದಾನ ಬಿಡುಗಡೆ ಮಾಡಲಾಗುವುದು. ಸಮಾಜವಾದಿ ಬಸವಣ್ಣನವರ ಕಾಯಕ ತತ್ವವನ್ನು ಮುರುಘಾ ಶರಣರು ಸಾಕಾರಗೊಳಿಸುತ್ತಿದ್ದಾರೆ. ಹಾಗೆಯೇ ಅವರ ಯೋಜನೆಯ ಬಸವೇಶ್ವರರ ಪ್ರತಿಮೆಗೆ ವಿಶ್ವದ ಅಗ್ರಸ್ಥಾನಮಾನ ದೊರೆಯಲಿದೆ ಎಂದು ಆಶಯ ವ್ಯಕ್ತಪಡಿಸಿದರು.ಬಸವಣ್ಣನವರ ವಿಚಾರಗಳು ಹೆಚ್ಚು ಹೆಚ್ಚು ಪ್ರಸ್ತುತವಾಗುತ್ತಿವೆ. ಇಂದು ಮನುಷ್ಯನ ಸಂಬಂಧಗಳು ಕುಸಿಯುತ್ತಿರುವ ದಿನಗಳಲ್ಲಿ, ಸಂಘರ್ಷಗಳು ಹೆಚ್ಚುತ್ತಿವೆ. ಸಾಮರಸ್ಯದ ಕೊರತೆ ಕಾಣುತ್ತಿದೆ. ಅಸ್ಪೃಶ್ಯತೆ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಬಸವಣ್ಣನವರ ತತ್ವಗಳನ್ನು ಅಕ್ಷರಶಃ ಅಳವಡಿಸಿಕೊಂಡು ಮುರುಘಾಮಠ ಸಾಮಾಜಿಕ ಕ್ರಾಂತಿ ಮಾಡುತ್ತಿದೆ ಎಂದು ಪ್ರತಿಪಾದಿಸಿದರು.ಬಸವಣ್ಣನವರ ವಿಚಾರಗಳನ್ನು ಒಂದಿಷ್ಟು ನಾವು ಜೀವನದಲ್ಲಿ ಅಳವಡಿಸಿಕೊಂಡಿದ್ದರೆ ಈ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ. ದೇಶ ಆತಂಕದ ವಾತಾವರಣದಲ್ಲಿ ಸಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ಸಾಮಾಜಿಕ ಸಾಮರಸ್ಯ ಬೆಳೆಸಬೇಕು. ವಿಶ್ವಾಸದ ಸಮಾಜ ನಿರ್ಮಿಸಬೇಕಿದೆ ಎಂದರು.ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ,  ದುರ್ಜನರ ದುಷ್ಕೃತ್ಯದಿಂದ ಆಗುವ ಹಾನಿಗಿಂತ ಸಜ್ಜನರ ನಿಷ್ಕ್ರಿಯೆಯಿಂದ ಆಗುವ ಹಾನಿಯೇ ಹೆಚ್ಚು. ಮೂರುವರೆ ವರ್ಷ ತಾವು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಲಾಗಿದೆ ಎಂದು ಹೇಳಿದರು.ರಾಜ್ಯದಲ್ಲಿ 30-40 ವರ್ಷಗಳಲ್ಲಿ ನಡೆಯದೆ ಇರುವ ಅಭಿವೃದ್ಧಿಗಳನ್ನು ಮೂರುವರೆ ವರ್ಷದಲ್ಲಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಈ ಅಭಿವೃದ್ಧಿ ಕೆಲಸಗಳನ್ನು ಸಹಿಸದವರು ಟೀಕೆ ಮಾಡುತ್ತಲೇ ಇದ್ದಾರೆ. ಇಂತಹ ಟೀಕೆಗಳು ಅಭಿವೃದ್ಧಿ ಕೆಲಸಕ್ಕೆ ಸಹಾಯಕವಾಗುತ್ತದೆ. ತಾವು ಜಾರಿಗೆ ತಂದ ಭಾಗ್ಯಲಕ್ಷ್ಮೀ ಯೋಜನೆಯನ್ನು 40 ವರ್ಷದ ಹಿಂದೆಯೇ ಜಾರಿಗೆ ತಂದಿದ್ದರೇ ಕೂಲಿ ಮಾಡುವ ಮಹಿಳೆಯರು ವೈದ್ಯರು, ಎಂಜಿನಿಯರ್, ಸರಕಾರಿ ನೌಕರಿಗಳಲ್ಲಿ ಇರುತ್ತಿದ್ದರು ಎಂದರು.ಬಸವಣ್ಣನವರ ಕ್ರಾಂತಿಕಾರಿ ಕೆಲಸಗಳನ್ನು ಮುಂದುವರಿಸಿಕೊಂಡು ಶಿವಮೂರ್ತಿ ಮುರುಘಾ ಶರಣರು ಹೋಗುತ್ತಿದ್ದಾರೆ. ನಿಮ್ಮ ಭಾವನೆಗಳಿಗೆ ಸ್ಪಂದಿಸಲು ಸದಾ ನಾನು ಮತ್ತು ಜನರು ಸಿದ್ಧ. ನಿಮ್ಮ ಒಳ್ಳೆಯ ಸಾಮಾಜಿಕ ಕ್ರಾಂತಿ ಕಾರ್ಯಗಳನ್ನು ಸಹಿಸದವರು ಇದ್ದಾರೆ. ಇದಕ್ಕೆ ನೀವು ಎದೆಗುಂದದೆ ನಿಮ್ಮ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಬೇಕು. ಬಸವಣ್ಣನವರ ಕಾಲದಲ್ಲಿ ಅಭಿವೃದ್ಧಿ ಸಹಿಸದವರು ಟೀಕೆ ಮಾಡುತ್ತಲೇ ಇದ್ದರು. ಹೀಗಾಗಿ ಇಂತಹ ಟೀಕೆ ಟಿಪ್ಪಣೆಗೆ ಹೆದರದೆ ಕ್ರಾಂತಿಯತ್ತ ನಡೆಯಬೇಕು ಎಂದು ತಿಳಿಸಿದರು.ಬಸವೇಶ್ವರ ಪ್ರತಿಮೆ ನಿರ್ಮಾಣಕ್ಕೆ ಬಜೆಟ್‌ನಲ್ಲಿ ರೂ. 5 ಕೋಟಿ ನೀಡಲಾಗಿದೆ. ಈ ವಿಷಯ ಶೀಘ್ರ ಸಂಪುಟ ಎದುರಿಟ್ಟು ಒಪ್ಪಿಗೆ ಪಡೆದು ಹಣ ಬಿಡುಗಡೆ ಮಾಡಬೇಕು ಎಂದು ಸಿಎಂಗೆ ಮನವಿ ಮಾಡಿದರು. ಈ ರಾಜ್ಯದಲ್ಲಿ ದಾನಿಗಳಿಗೆ ಕೊರತೆಯಿಲ್ಲ. ರೂ. 13 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಪ್ರತಿಮೆಗೆ ದಾನಿಗಳು ಸಹಾಯ ಮಾಡಬೇಕು ಎಂದರು.ಶಿವಲಿಂಗಾನಂದ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಆನಂದ ಅಸ್ನೋಟಿಕರ್, ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ, ಸಂಸದರಾದ ಜಿ.ಎಂ. ಸಿದ್ದೇಶ್, ಜನಾರ್ದನಸ್ವಾಮಿ, ಶಾಸಕರಾದ ಎಂ.ಚಂದ್ರಪ್ಪ, ಜಿ.ಎಚ್. ತಿಪ್ಪಾರೆಡ್ಡಿ, ಎಸ್.ವಿ. ರಾಮಚಂದ್ರಪ್ಪ, ವೈ.ಎ. ನಾರಾಯಣಸ್ವಾಮಿ, ನಗರಸಭೆ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್, ವೀರಶೈವ ಸಮಾಜದ ಅಧ್ಯಕ್ಷ ಶಿವಪ್ರಕಾಶ್, ಎಸ್.ಎಚ್. ಪಟೇಲ್ ಇತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry