ಗುರುವಾರ , ಸೆಪ್ಟೆಂಬರ್ 19, 2019
29 °C

ಯುವಮನದ ಬಿಂಬ (ಚಿತ್ರ: ಲೈಫು ಇಷ್ಟೇನೆ)

Published:
Updated:

ನಗರ ನಾಗರಿಕತೆಯ ಯುವಜನತೆಯ ಪ್ರೀತಿ ಕುರಿತ ಈ ಕಾಲಮಾನದ ಧೋರಣೆಯನ್ನು ವಿರಹದ ಮೆರವಣಿಗೆಯ `ಮೂಡ್~ನಲ್ಲೇ ಕಟ್ಟಿಕೊಡುವ ಅಪರೂಪದ ಚಿತ್ರ `ಲೈಫು ಇಷ್ಟೇನೆ~.ಬದುಕು, ಪ್ರೇಮ, ವೃತ್ತಿಯ ಬಗ್ಗೆ ಅನೇಕರಿಗೆ ಇರುವ ದಿವ್ಯವಾದ ಉಡಾಫೆಯನ್ನು ಬಿಂಬಿಸುವಂತಿರುವ ಶೀರ್ಷಿಕೆಯ ಈ ಚಿತ್ರ ಬಾಲಿವುಡ್‌ನ ಇತ್ತೀಚಿನ ಸಿನಿಮಾಗಳ ಜಾಯಮಾನದ್ದು. `ಮನಸಾರೆ~ ಚಿತ್ರಕ್ಕೆ ಕಥಾ ಕಾಣಿಕೆ ಸಲ್ಲಿಸಿದ್ದ ಪವನ್ ಕುಮಾರ್ ನಿರ್ದೇಶಕ ರಾಗಿಯೂ ತಮ್ಮತನದ `ಝಂಡಾ~ ನೆಟ್ಟಿರುವ ಸಿನಿಮಾ ಇದು.ಬಾಲ್ಯ, ಪ್ರೌಢ, ಯೌವನಾವಸ್ಥೆಗಳಲ್ಲಿ ಅಂಕುರಿಸುವ ಆಕರ್ಷಣೆ, ಪ್ರೇಮದ ಬಗೆಗಿನ ಜಿಜ್ಞಾಸೆ, ಹೆಜ್ಜೆಹೆಜ್ಜೆಗೂ ಆಯ್ಕೆಯಲ್ಲಿನ ಗೊಂದಲ, ಭವಿಷ್ಯದ ವಿಷಯದಲ್ಲಿನ ತಾತ್ಸಾರ, ಗುರಿಯನ್ನೇ ಇಟ್ಟುಕೊಳ್ಳದೆ ಅಪರಾತಪರಾ ಬದುಕುವ ಮನಸ್ಥಿತಿ- ಇವೆಲ್ಲವನ್ನೂ ನಿರ್ದೇಶಕ ಪವನ್ ನವಿರಾಗಿ ನಾಯಕನ ಪಾತ್ರಕ್ಕೆ ಜೋಡಿಸಿದ್ದಾರೆ. ಎಲ್ಲಾ ಅನುಕೂಲಗಳು, ಅಪ್ಪ-ಅಮ್ಮನ ಅತಿಯೇ ಎನ್ನಬಹುದಾದ ಸ್ವಾತಂತ್ರ್ಯ ಪಡೆಯುವ ಹುಡುಗನ ಮನೋಲೋಕದ ದರ್ಶನವನ್ನು ಅವರು ಕನ್ನಡ ಚಿತ್ರಲೋಕದ ಮಟ್ಟಿಗೆ ಹೊಸತೆನ್ನುವಂತೆ ಮಾಡಿಸಿದ್ದಾರೆ. ಅವರು ನಾಯಕನ ಪಾತ್ರದ ಮೂಲಕ ಆಡಿಸುವ ಕಚ್ಚಾ ಮಾತುಗಳು ಮಾಧುರ್ಯಮೋಹಿಗಳಿಗೆ ಇರುಸು ಮಾಡುವಷ್ಟು ತೀವ್ರವಾಗಿವೆ.`ದೇವದಾಸ್~ ಚಿತ್ರವನ್ನು ಹೊಸ ಒರೆಗಲ್ಲಿನಿಂದ ನೋಡುವ ಯತ್ನ ಮಾಡಿದ ಹಿಂದಿಯ `ದೇವ್-ಡಿ~ ಚಿತ್ರದ ಜಾಯಮಾನವೂ ಇದೇ ಆಗಿತ್ತು. ಇತ್ತೀಚೆಗೆ ತೆರೆಕಂಡ ಹಿಂದಿಯದ್ದೇ ಆದ `ಡೆಲ್ಲಿ ಬೆಲ್ಲಿ~ ಸಿನಿಮಾದ ಮಾತುಗಳಿಗೂ ಹೀಗೆಯೇ ತಿವಿಯುವ ಧೋರಣೆ ಇತ್ತು.ನಿರೂಪಣೆಯಲ್ಲಿಯೂ ಪವನ್ ಕನ್ನಡದ ಚಿತ್ರದ ಮಟ್ಟಿಗೆ ಹೊಸತೆನ್ನುವ ಕೆಲವು ಅಂಶಗಳನ್ನು ದುಡಿಸಿಕೊಂಡಿದ್ದಾರೆ. ನಾಯಕನ ಅಣಕುಮನಸ್ಸಿನಂತೆ ಕಾಣುವ ನಾಲ್ವರು ಯುವಕರು ಚಿತ್ರದುದ್ದಕ್ಕೂ ಆಗಾಗ ಕಾಣಿಸಿಕೊಳ್ಳುತ್ತಾರೆ, ಹಾಡೊಂದರ ಭಾಗವೂ ಆಗುತ್ತಾರೆ. ಇಂಗ್ಲಿಷ್ ಸಿನಿಮಾದಲ್ಲಿ ಗಂಡು-ಹೆಣ್ಣಿನ ಸರಸ ಸನ್ನಿವೇಶಗಳು ಬಂದಾಗ ಮಗನ ಮುಖದ ಮೇಲೆ ಟವಲ್ ಹಾಕುವ ಅಪ್ಪ ಕೂಡ ಅದೇ ಮಗ ಪದೇಪದೇ ಪ್ರೀತಿಗೆ ಸಿಲುಕುವಾಗ `ಸಾಕ್ಷೀಪ್ರಜ್ಞೆ~ಯಂತೆ ಕಾಣಿಸಿ ಕೊಳ್ಳುತ್ತಾನೆ.ಇಟಲಿಯ `ಸಿನಿಮಾ ಪ್ಯಾರಡೈಸ್~ ಚಿತ್ರದಲ್ಲಿ ಈ ತಂತ್ರವಿದ್ದು, ದೃಶ್ಯವತ್ತಾಗಿ ಅದನ್ನು ಪವನ್ ತಮ್ಮ ಕಸುಬುದಾರಿಕೆ ಕಾಣುವಂತೆ ಮೂಡಿಸಿದ್ದಾರೆ (ಛಾಯಾಗ್ರಹಣ: ಜ್ಞಾನಮೂರ್ತಿ).ಜಾದೂಗಾರನ ಪೆಟ್ಟಿಗೆಯಲ್ಲಿ ಸಿಲುಕಿದಾಗ ನಾಯಕ-ನಾಯಕಿಯ ನಡುವೆ ಪ್ರೇಮಾಂಕುರವಾಗುವ ಸನ್ನಿವೇಶ ಕೂಡ ಮಜಾ ಕೊಡುತ್ತದೆ. ಅಡಿಗಡಿಗೂ ಉಪಕಥಾನಕಗಳನ್ನು ಹೆಣೆಯುತ್ತಾ, ಪ್ರತಿಯೊಂದಕ್ಕೂ ಒಂದು `ಕ್ಲೈಮ್ಯಾಕ್ಸ್~ ಇರಬೇಕು ಎಂಬಂತೆಯೂ ಚಿತ್ರ ಕಥೆಯನ್ನು ಪವನ್ ರೂಪಿಸಿದ್ದಾರೆ. `ತ್ರೀ ಈಡಿಯಟ್ಸ್~ ತರಹದ ಚಿತ್ರದಲ್ಲಿ ಇರುವುದು ಇದೇ ನಿರೂಪಣಾ ವಿಧಾನ.ಮೊದಲರ್ಧ ಲವಲವಿಕೆಯಿಂದ ಸಾಗುವ ಚಿತ್ರ ಎರಡನೇ ಅರ್ಧದಲ್ಲಿ ತುಸು ಹಿನ್ನಡೆ ಅನುಭವಿಸಿದಂತೆ ಕಾಣುತ್ತದೆ. ಅಂತ್ಯ ಸಮೀಪಿಸಿದಾಗಲಂತೂ ನಿರ್ದೇಶಕರ ಯೋಚನೆ ದಿಕ್ಕುತಪ್ಪಿದೆ. ನಾಯಕನ ಗೆಳೆಯನಿಗೆ ಕ್ಯಾನ್ಸರ್ ತರಿಸಿರುವುದು, ನಾಯಕ ಹಾಗೂ ಆ ಗೆಳೆಯನ ನಡುವೆ ನಡೆಯುವ ಮಾತುಕತೆಯನ್ನು `ವೆಬ್ ಕ್ಯಾಮೆರಾ~ ಮೂಲಕ ತೋರಿಸಿರುವುದು ಅವರ ಅನುಕೂಲಸಿಂಧು ಧೋರಣೆಗೆ ಕನ್ನಡಿ ಹಿಡಿಯುತ್ತದೆ. `ಒಳ್ಳೆಯರಿಗಿದು ಕಾಲವಲ್ಲ~ ಎಂಬ ತಪ್ಪು ಸಂದೇಶವನ್ನು ಈ ದೃಶ್ಯ ದಾಟಿಸುವ ಅಪಾಯವೂ ಇದೆ. ಹೃದಯವನ್ನು ಶೌಚಾಲಯಕ್ಕೆ ಹೋಲಿಸಿರುವುದು ಕೂಡ ಕರ್ಕಶವಾಗಿ ಕೇಳುತ್ತದೆ (ಸಂಭಾಷಣೆ ಪವನ್ ಅವರದ್ದೇ).ಆಧುನಿಕತೆಯ ಜಂಜಾಟವನ್ನು ನಾಯಕನಟ ದಿಗಂತ್ ಸೊಗಸಾಗಿ ಪ್ರಕಟಪಡಿಸಿದ್ದಾರೆ. ನಾಯಕಿಯರೂ ತಾಜಾತನದ ಸಂಕೇತಗಳಂತೆ ಕಾಣುತ್ತಾರೆ. ಅಭಿನಯದಲ್ಲಿ ಸಿಂಧು ಲೋಕನಾಥ್ ಹಾಗೂ ಸಂಯುಕ್ತ ಹೊರನಾಡು ಪಳಗಬೇಕಿದೆ. ಪಾತ್ರಗಳ ಮೈಕಟ್ಟಿಗೆ ಅವರನ್ನು ಹೊಂದಿಸಿರುವುದು ನಿರ್ದೇಶಕರ ಇನ್ನೊಂದು ಜಾಣ್ಮೆ. ನಾಯಕನ ಗೆಳೆಯನಾಗಿ ಸತೀಶ್ ಅಭಿನಯವೂ ಹಸನು. ಅಪರೂಪದ ಅಪ್ಪ-ಅಮ್ಮನಾಗಿ ಅಚ್ಯುತ್‌ಕುಮಾರ್ ಹಾಗೂ ವೀಣಾ ಸುಂದರ್ ಗಮನಾರ್ಹ.ಮನೋಮೂರ್ತಿ ಸಂಗೀತ ಅವರದ್ದೇ ಹಳೆಯ ಟ್ಯೂನ್‌ಗಳ ನೆನಪನ್ನು ಮರುಕಳಿಸುವಂತಿವೆ. ಹಾಡುಗಳು ಮೂಡಿರುವ ಪರಿ ಅರ್ಥವತ್ತಾಗಿದೆ.

ಮೊದಲ ನಿರ್ದೇಶನದಲ್ಲೇ ಪವನ್ ಅಪರೂಪದ ಹಾಗೂ `ರಿಸ್ಕ್~ ಎನ್ನಬಹುದಾದ ವಸ್ತುವನ್ನು ತೆಗೆದುಕೊಂಡಿರುವುದು ಮುಂದಿನ ದಿನಗಳಲ್ಲಿ ಅವರ ಕುರಿತು ಕುತೂಹಲವನ್ನು ಮೂಡಿಸಿದೆ. 

Post Comments (+)