ಬುಧವಾರ, ಮಾರ್ಚ್ 3, 2021
23 °C

ಯುವಮನದ ಸರಳ ತಲ್ಲಣಗಳು

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ಯುವಮನದ ಸರಳ ತಲ್ಲಣಗಳು

ಜಿಮ್‌ನಲ್ಲಿ ಬನಿಯನ್ ನೆಂದು ತೊಪ್ಪೆಯಾಗುವಷ್ಟು ಬೆವರಿಳಿಸಿದ್ದ ಇಪ್ಪತ್ತೆರಡರ ಹುಡುಗ ಬರೋಬ್ಬರಿ ನೂರು ಕೆ.ಜಿ. ಭಾರವನ್ನು ಸಲಾಕೆಯೊಂದಕ್ಕೆ ಸಿಕ್ಕಿಸಿಕೊಂಡು ಭುಜಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದ್ದ. ದೇಹದ ಬಹುಪಾಲು ಸ್ನಾಯುಗಳು ಹುರಿಗೊಂಡು, ಅವನು ವ್ಯಾಯಾಮದ ಲಹರಿಯಲ್ಲಿದ್ದಾಗ ಅವನತ್ತಲೇ ಬಹುತೇಕರು ಕಣ್ಣು ನೆಟ್ಟರು. ಹೆಚ್ಚೇನೂ ವ್ಯಾಯಾಮ ಮಾಡದ ಬಡಪಾಯಿ ಒಬ್ಬ, ‘ಏನು ದೇಹ ಮಾಡಿದರೇನು ಬಂತು. ಕನ್ನಡಿಯಲ್ಲಿ ನಿನ್ನ ಮುಖ ನೋಡಿಕೊಂಡಿದ್ದೀಯಾ?’ ಎಂದುಬಿಟ್ಟ.ಆ ಭಾರವನ್ನು ತಕ್ಷಣ ಕೆಳಗಿಳಿಸಿದ ಪೈಲ್ವಾನ, ಜಿಮ್‌ನಲ್ಲಿ ಗೋಡೆಗಳಿಗಿಂತ ಹೆಚ್ಚೇ ಇದ್ದ ನಿಲುವುಗನ್ನಡಿಗಳ ಮುಂದೆ ನಿಂತ. ಭಿನ್ನ ಕೋನಗಳಲ್ಲಿ ತನ್ನನ್ನು ತಾನು ನೋಡಿಕೊಂಡ. ಮೊದಲಿಗೆ ದೇಹದ ಸ್ನಾಯುಗಳನ್ನು ನೋಡಿ ಹೆಮ್ಮೆಪಟ್ಟುಕೊಂಡ ಅವನು ಆಮೇಲೆ ಸಹಪಾಠಿ ಚುಡಾಯಿಸಿದ್ದನ್ನೇ ಗಂಭೀರವಾಗಿ ಸ್ವೀಕರಿಸಿ, ತನ್ನ ಮುಖವನ್ನೇ ಕನ್ನಡಿಯಲ್ಲಿ ದಿಟ್ಟಿಸಿದ. ಅಲ್ಲಿದ್ದ ಕೆಲವು ಆಪ್ತರಲ್ಲಿ, ‘ನನ್ನ ಮುಖ ಚೆನ್ನಾಗಿಲ್ಲವೇ?’ ಎಂದು ಆಕಾಶವೇ ಕಳಚಿ ಬಿದ್ದಂತಾಗಿದೆ ಎನ್ನುವ ಧಾಟಿಯಲ್ಲಿ ಕೇಳಿದ. ವ್ಯಕ್ತವಾದದ್ದು ಮಿಶ್ರ ಪ್ರತಿಕ್ರಿಯೆ. ‘ಮೂಗು ಸರಿ ಇಲ್ಲ ಕಣೋ’ ಎನ್ನುವುದು ಒಬ್ಬನ ಕಮೆಂಟು. ‘ಹೇಗಾದರೂ ಮಾಡಿ ಕೆನ್ನೆಗಳು ತುಂಬಿಕೊಳ್ಳುವಂತೆ ಮಾಡಿಕೋ... ಆಗ ಸರಿಹೋಗುತ್ತೆ’ ಎಂದು ಇನ್ನೊಬ್ಬ ಪುಕ್ಕಟೆ ಸಲಹೆ ಕೊಟ್ಟ. ಅಷ್ಟಕ್ಕೇ ಸುಮ್ಮನಾಗದೆ ಆ ಪೈಲ್ವಾನ ಒಂದು ಸಮೀಕ್ಷೆಗೆ ಒಳಪಡಲು ನಿರ್ಧರಿಸಿದ.ಎಲ್ಲರೂ ಮೂರು ದಿನ ಪ್ರವಾಸ ಹೊರಟರು. ಅವರು ಸುತ್ತುವ ಸ್ಥಳಗಳಲ್ಲಿ ಜನರು ಯಾರನ್ನು ಹೆಚ್ಚು ನೋಡುತ್ತಾರೆ ಎಂದು ನಿಗಾ ವಹಿಸುವಂತೆ ಒಬ್ಬನನ್ನು ಅವನು ಕೇಳಿಕೊಂಡ. ಹುಡುಗರಿಗೆ ಅದು ಸಹಜವಾದ ಕೆಲಸವೇ ಅಲ್ಲವೇ? ಅವನು ಅಹುದೆನ್ನುವಂತೆ ತಲೆಯಾಡಿಸಿದ. ಪ್ರವಾಸ ಮುಗಿಸಿ ಬಂದಮೇಲೆ ಪೈಲ್ವಾನ ಮತ್ತಷ್ಟು ಗೊಂದಲಕ್ಕೆ ಈಡಾಗಿದ್ದ. ಜನ ತನ್ನನ್ನು ನೋಡುತ್ತಿರುವುದೇನೋ ಸರಿ. ಆದರೆ ಮುಖ ನೋಡಿ ಮೆಚ್ಚಿಕೊಂಡರೋ, ಹುರಿಗಟ್ಟಿದ ಸ್ನಾಯುಗಳನ್ನು ಬೆರಗಿನಿಂದ ಕಂಡರೋ ಎಂಬ ಗೊಂದಲ ಆವರಿಸಿಕೊಂಡಿತ್ತು.ಕೊನೆಗೆ ಅವನು ಡಯಟೀಷಿಯನ್ ಬಳಿಗೆ ಧಾವಿಸಿದ. ಕೆನ್ನೆಗಳನ್ನು ಗುಂಡಗೆ ಮಾಡಿಕೊಳ್ಳುವುದು ಹೇಗೆ ಎಂಬ ಅವನ ಪ್ರಶ್ನೆ ಕೇಳಿ ಅವರು ಕೂಡ ನಕ್ಕುಬಿಟ್ಟರು. ಪೈಲ್ವಾನನ ಆಹಾರ ಕ್ರಮ ಚೆನ್ನಾಗಿಯೇ ಇತ್ತು. ಆಮೇಲೆ ಅವನೊಂದು ಧ್ಯಾನದ ಕ್ಲಾಸಿಗೆ ಸೇರಿದ. ಬೆಳಿಗ್ಗೆ ಧ್ಯಾನ, ಸಂಜೆ ಜಿಮ್ ಎಂದು ಸಂಕಲ್ಪ ಮಾಡಿದ. ‘ಧ್ಯಾನ ಮಾಡಿದ ಮೇಲೆ ಮನಸ್ಸು ತಿಳಿಯಾಗಿರುತ್ತದೆ. ಆಗ ನೀವು ಹೆಚ್ಚು ಸುಂದರವಾಗಿಯೂ ಆರೋಗ್ಯಕರವಾಗಿಯೂ ಕಾಣುವಿರಿ’ ಎಂದು ಧ್ಯಾನಗುರು ಹೇಳಿದ್ದು ಕಿವಿತುಂಬಿತು.ಧ್ಯಾನ ಮುಗಿದದ್ದೇ ಕನ್ನಡಿ ಮುಂದೆ ನಿಂತ. ತಾನು ಸುಂದರವಾಗಿಯೇ ಇದ್ದೀನಲ್ಲ ಎನ್ನಿಸಿತು. ಬೆಳಿಗ್ಗೆ ಸುಂದರವಾಗಿ ಕಾಣುತ್ತಿದ್ದ ಅವನು ಸಂಜೆ ಜಿಮ್‌ನ ನಿಲುವುಗನ್ನಡಿ ಎದುರು ಮಾತ್ರ ಅದೇ ಹಳೆಯ ಗೊಂದಲಕ್ಕೆ ಈಡಾಗುತ್ತಿದ್ದ. ಒಂದು ಉಪಾಯ ಮಾಡಿ, ಸಂಜೆ ವ್ಯಾಯಾಮ ಮಾಡಿದ ಮೇಲೂ ಸುಮ್ಮನೆ ಧ್ಯಾನಕ್ಕೆ ಕುಳಿತ. ಧ್ಯಾನಗುರುವಿನ ಮಾತು ನೆನಪಾಗಿ ತಾನು ಸುಂದರವಾಗಿ ಕಾಣುತ್ತಿರುವೆ ಎನ್ನಿಸಿತು. ಅದನ್ನು ಸಮರ್ಥಿಸಲು ಮಾತ್ರ ಅಲ್ಲಿ ಯಾರೊಬ್ಬರೂ ಇರಲಿಲ್ಲ.ಸುಂದರನಾಗುವುದು ಹೇಗೆ ಎಂಬ ಪ್ರಶ್ನೆಯ ಹುಳವನ್ನು ತಲೆಯಲ್ಲಿ ಬಿಟ್ಟುಕೊಂಡ ಆ ಪೈಲ್ವಾನ ದೇವರ ಕಾಣಲು ಪರಿತಪಿಸುವ ಭಕ್ತನಂತೆ ಆಗಿಬಿಟ್ಟ. ಗಾಯತ್ರಿ ಮಂತ್ರ ಹೇಳಿಕೊಳ್ಳುವಂತೆ ಒಬ್ಬರು ಸೂಚಿಸಿದ್ದೇ ಬಿಡುವು ಸಿಕ್ಕಾಗಲೆಲ್ಲಾ ಆ ಮಂತ್ರ ಪಠಿಸತೊಡಗಿದ. ಕೊನೆಗೆ ವ್ಯಾಯಾಮ ಮಾಡುವಾಗಲೂ ಗಾಯತ್ರಿ ಮಂತ್ರೋಚ್ಚಾರ ಅವನ ಬಾಯಲ್ಲಿ ಕುಣಿಯತೊಡಗಿತು.ಮನಸ್ಸಿನ ಗೊಂದಲದ ನಡುವೆ ಅವನ ದೇಹ ಹುರಿಗಟ್ಟಿಸುವ ಹಳೆಯ ಸಂಕಲ್ಪ ಕೊಂಚ ಸಡಿಲಗೊಂಡಿತು. ಒಂದು ವಾರ ಆರೋಗ್ಯ ಕೈಕೊಟ್ಟಿದ್ದೇ ಧ್ಯಾನ, ಜಿಮ್ ಸ್ಥಗಿತಗೊಂಡಿತು. ಅವನು ಹಾಸಿಗೆ ಮೇಲೆ ಮಲಗಿದ್ದಾಗ ಬಂದ ಅತ್ತೆ ಮಗಳು ಹಣೆ ಮೇಲೆ ಕೈಯಾಡಿಸುತ್ತಾ, ‘ಹೇಗಿದ್ದೆ, ಹೇಗಾದೆಯೋ... ನನ್ನ ಸುಂದರ’ ಎಂದಾಗ ಅವನಿಗೆ ಜೀವ ಬಂದಹಾಗಾಯಿತು. ಮುಂದೆ ಅವನು ತನ್ನನ್ನು ತಾನು ಸುಂದರ ಎಂದು ನಂಬಿಕೊಂಡೇ ಬದುಕುತ್ತಿರುವುದರಿಂದ ಗೊಂದಲಗಳಿಲ್ಲ. ಧ್ಯಾನ ಬದುಕಿಗೆ ಹೊಸ ಆಯಾಮ ಕೊಟ್ಟಿದ್ದರಿಂದ ಅದನ್ನೂ ಅವನು ಬಿಟ್ಟಿಲ್ಲ.ಹಲ್ಲು ನಕ್ಕಾಗ...

ಸಣ್ಣ ವಿಷಯಗಳನ್ನೇ ದೊಡ್ಡದು ಮಾಡುವ ಹದಿನೆಂಟರಿಂದ ಇಪ್ಪತ್ತೈದು ಇಪ್ಪತ್ತಾರು ವಯಸ್ಸಿನವರ ಇಂಥ ಕಥಾನಕಗಳು ಆಸಕ್ತಿಕರ. ಬರಹಗಳಲ್ಲೂ ಯುವಜನತೆ ಇಂಥವನ್ನೇ ಓದಲು ಇಷ್ಟಪಡುತ್ತಾರೆ ಎನ್ನಲು ಕೂಡ ಕೆಲವು ಪುರಾವೆಗಳು ಸಿಗುತ್ತಿವೆ. ತಮ್ಮ ಸೌಂದರ್ಯಪ್ರಜ್ಞೆಯ ತಾಕಲಾಟಗಳ ಕುರಿತು ಬರೆಯುವಂತೆ ವಿವಿಧ ಕ್ಷೇತ್ರಗಳ ಇಪ್ಪತ್ತು ಲಲನೆಯರನ್ನು ಕೇಳಿಕೊಂಡ ವೆಬ್‌ಸೈಟ್ ಒಂದು ಅವನ್ನೆಲ್ಲಾ ಪ್ರಕಟಿಸಿತ್ತು. ಆಮೇಲೆ ಅದು ಪುಸ್ತಕ ರೂಪದಲ್ಲಿಯೂ ಪ್ರಕಟವಾಯಿತಂತೆ. ನೈಜೀರಿಯಾದ ಫ್ರೀಲಾನ್ಸರ್, ಇಪ್ಪತ್ತಮೂರರ ಹರೆಯದ ಡಾಯಿನ್ ಒಯೆನಿಯಿ ತನ್ನ ಹಲ್ಲು ಹಾಗೂ ನಗುವಿನ ಕುರಿತು ಸೊಗಸಾಗಿ ಬರೆದುಕೊಂಡಿದ್ದಾರೆ. ಅದರ ಸಾರಾಂಶ ಹೀಗಿದೆ...‘ಹತ್ತನೇ ಇಯತ್ತೆಯಲ್ಲಿ ಇದ್ದಾಗ ಹುಡುಗನೊಬ್ಬ ನನ್ನನ್ನು ಮೆಚ್ಚಿಕೊಂಡ. ಹಲ್ಲುಗಳು ಸ್ವಲ್ಪ ನೇರವಾಗಿದ್ದಿದ್ದರೆ ನಾನು ಪರಮ ಸುಂದರಿಯಂತೆ ಕಾಣುತ್ತಿದ್ದೆನಂತೆ. ಅದನ್ನೂ ಅವನು ತಕ್ಷಣ ಹೇಳಿಬಿಟ್ಟ. ಅವನ ಆ ಸಲಹೆ ಬಂದಾಕ್ಷಣ ನಾನು ಬಾಯಿಮುಚ್ಚಿಕೊಂಡೆ. ಅವನನ್ನು ಸುಮ್ಮನಿರುವಂತೆ ಹೇಳಲಿಲ್ಲ. ಆ ಕ್ಷಣ ಅವನನ್ನು ನಂಬಿದೆ. ನನ್ನ ಹಲ್ಲುಗಳ ಬಗ್ಗೆ ಬೇರೆ ಯಾರಾದರೂ ಟೀಕೆ ಮಾಡಿಯಾರು ಎಂದು ಬಾಯಿಮುಚ್ಚಿಯೇ ನಗುತ್ತಿದ್ದೆ. ನಿಯತಕಾಲಿಕೆಗಳ ಫೋಟೊಗಳಲ್ಲಿ ಸುಂದರಿಯರ ಹಲ್ಲುಗಳನ್ನು ಕೂಲಂಕಷವಾಗಿ ನೋಡುತ್ತಿದ್ದೆ. ಟೀವಿ ಷೋಗಳಲ್ಲಿ ಎಲ್ಲರೂ ಬಟ್ಟೆ ಚೆನ್ನಾಗಿದೆ ಎನ್ನುವಾಗ ನಾನು ಹಲ್ಲು ಚೆನ್ನಾಗಿದೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದೂ ಉಂಟು.ದಂತವೈದ್ಯರ ಬಳಿಗೆ ಕರೆದುಕೊಂಡು ಹೋಗುವಂತೆ ಅಪ್ಪ-ಅಮ್ಮನಿಗೆ ದುಂಬಾಲುಬಿದ್ದೆ. ಒಂದಲ್ಲ ಎರಡಲ್ಲ, ಐವರು ದಂತವೈದ್ಯರನ್ನು ಭೇಟಿಯಾದೆ. ನನಗೆ ಕ್ಲಿಪ್ ಹಾಕಿ ಸರಿಪಡಿಸುವಷ್ಟು ಕೆಟ್ಟ ಹಲ್ಲುಗಳೇನೂ ಇಲ್ಲ ಎಂದು ಅವರೆಲ್ಲ ಹೇಳಿದರು. ಹಲ್ಲುಗಳ ನಡುವೆ ಇದ್ದ ಸಂದುಗಳು ಅದೃಷ್ಟದ ಸಂಕೇತ ಎಂದೇ ನೈಜೀರಿಯಾದಲ್ಲಿ ಬಹುಜನರು ನಂಬಿದ್ದರು. ಆದ್ದರಿಂದ ಕ್ಲಿಪ್ ಹಾಕಿಸಬೇಕೆಂಬ ನನ್ನ ಹಲವು ಯತ್ನಗಳು ವಿಫಲವಾದವು.ಕೊನೆಗೆ ಗ್ರೂಪ್ ಫೋಟೊ ತೆಗೆಸಿಕೊಳ್ಳಬೇಕಾದ ದಿನ ಬಂತು. ಎಲ್ಲರೂ ತಂತಮ್ಮ ಕ್ಯಾಮೆರಾಗಳಲ್ಲಿ ಫೋಟೊಗಳನ್ನು ತೆಗೆದರು. ಗೆಳತಿಯೊಬ್ಬಳು ಪ್ರತ್ಯೇಕವಾಗಿ ನನ್ನ ಫೋಟೊ ತೆಗೆಯಲು ಮುಂದಾದಳು. ‘ಸ್ಮೈಲ್’ ಎಂದು ಅವಳು ಕೇಳಿದಾಗಲೆಲ್ಲಾ ನಾನು ಬಾಯಿಮುಚ್ಚಿಯೇ ನಗುತ್ತಿದ್ದೆ. ಅವಳು ಹಲ್ಲು ಬಿಟ್ಟು ನಗದೇ ಇದ್ದರೆ ಫೋಟೊ ತೆಗೆಯುವುದೇ ಇಲ್ಲ ಎಂದು ಕಡ್ಡಿ ತುಂಡುಮಾಡಿದಂತೆ ಹೇಳಿಬಿಟ್ಟಳು. ನನಗೋ ಧರ್ಮಸಂಕಟ. ಅವಳ ಹಟಕ್ಕೆ ಮಣಿದು, ಗಟ್ಟಿ ಮನಸ್ಸು ಮಾಡಿ ಹಲ್ಲುಕಿರಿದು ನಕ್ಕಿಯೇ ಬಿಟ್ಟೆ. ಆಮೇಲೆ ಆ ಫೋಟೊ ನೋಡಿದೆ. ನಿಜಕ್ಕೂ ನಾನು, ನನ್ನ ನಗು ಸುಂದರ ಎನ್ನಿಸಿದ್ದೇ ಆಗ. ಅಲ್ಲಿಂದಾಚೆಗೆ ನಾನು ಹಲ್ಲುಮುಚ್ಚಿ ನಗುವುದನ್ನು ಬಿಟ್ಟೆ. ಆ ಹುಡುಗ ಅದೆಷ್ಟು ಕಾಲ ನನ್ನ ಬಾಯಿಮುಚ್ಚಿಸಿಬಿಟ್ಟಿದ್ದ’.ಸ್ಮಾಲ್ ಈಸ್ ಬ್ಯೂಟಿಫುಲ್

ಅಮೆರಿಕದ ಒಬ್ಬ ತರುಣ ಜಪಾನ್‌ನಲ್ಲಿ ಅಲ್ಪಾವಧಿ ಪ್ರವಾಸ ಮಾಡಿದ. ಅಲ್ಲಿನ ಜನರನ್ನು ನೋಡಿದ ಅವನು ಅವಾಕ್ಕಾದ. ಬಹುತೇಕರು ತೆಳ್ಳಗಿದ್ದಾರೆ. ಅನಾರೋಗ್ಯದ ಸಮಸ್ಯೆಯೂ ಅಲ್ಲಿ ಅಷ್ಟಕ್ಕಷ್ಟೆ. ಹುಡುಗಿಯರ ಮೇಲೆ ಕಣ್ಣುನೆಟ್ಟರೆ ತೆಗೆಯುವುದೇ ಕಷ್ಟ... ಇವೆಲ್ಲಾ ಅವನನ್ನು ಕಾಡಿದವು. ಏಷ್ಯಾದ ಜನ ಆರೋಗ್ಯವಂತರು, ಅವರ ಆಯುಸ್ಸೂ ಜಾಸ್ತಿ ಎಂದು ಯಾರೋ ಹೇಳಿದ್ದನ್ನು ನೆನಪಿಸಿಕೊಂಡ ಅವನಿಗೆ ತಾನೂ ಅವರಂತೆ ಆದರೆಷ್ಟು ಚೆನ್ನ ಎನ್ನಿಸಿತು. ಹಾಗೆ ಅಂದುಕೊಂಡು ಅವನು ಸುಮ್ಮನಾಗಲಿಲ್ಲ. ಮತ್ತೆ ಜಪಾನ್‌ಗೆ ಹೋದ.ಅವರ ಜೀವನಕ್ರಮದ ಕುರಿತು ಅಧ್ಯಯನ ಮಾಡಿದ. ‘ಜಪಾನ್ ಡಯಟ್’ ಎಂಬ ಒಂದು ಪ್ರಬಂಧವನ್ನೇ ಬರೆದಿಟ್ಟ. ಸ್ಮಾಲ್ ಈಸ್ ಬ್ಯೂಟಿಫುಲ್ ಎಂಬ ಮಂತ್ರ ಪಠಿಸುವ ತರುಣ-ತರುಣಿಯರಲ್ಲಿ ಅನೇಕರು ಆ ಡಯಟ್ ಅನುಸರಿಸಿದಾದರೂ ಜಪಾನೀಯರಂತೆ ತೆಳುವಾಗಲಿಲ್ಲ. ಅದು ಅನುವಂಶೀಯ ಗುಣ ಎಂದುಕೊಂಡು ಅನೇಕರು ಸುಮ್ಮನಾದರು. ಒಬ್ಬಳು ಮಾತ್ರ ಅದನ್ನು ಬರೆದ ತರುಣನನ್ನು ಭೇಟಿ ಮಾಡಿದಳು. ಅವನಿಗೂ ಅಷ್ಟು ಹೊತ್ತಿಗೆ ಸತ್ಯದ ಸಾಕ್ಷಾತ್ಕಾರವಾಗಿತ್ತು. ಎಲ್ಲರ ವಿಷಯದಲ್ಲೂ ‘ಸ್ಮಾಲ್ ಈಸ್ ಬ್ಯೂಟಿಫುಲ್’ ಎನ್ನುವುದು ಸುಳ್ಳು ಎಂಬ ಮಾತನ್ನು ಅವನು ಹೇಳಿದ. ಜಪಾನೀಯರ ಕುರಿತು ಅನೇಕ ಸಂಗತಿಗಳನ್ನು ತಿಳಿದುಕೊಂಡ ಸಾರ್ಥಕ್ಯ ಅವರಿಬ್ಬರದ್ದೂ ಆಗಿತ್ತು.ಬ್ಲಾಗ್ ಬರಹಗಳಿಂದ, ಪುಸ್ತಕಗಳ ಜನಪ್ರಿಯತೆಯಿಂದ ಹೆಸರಾದ ಭಾರತದ ಲೇಖಕಿ ಪ್ರೀತಿ ಶೆಣೈ. ಅವರು ಬರೆದಿರುವ ಕೃತಿಗಳ ಶೀರ್ಷಿಕೆಗಳನ್ನು ನೋಡಿ- ‘ವೈ ವಿ ಲವ್ ದ ವೇ ವಿ ಡು’, ‘ಲೈಫ್ ಈಸ್ ವಾಟ್ ಯೂ ಮೇಕ್ ಇಟ್’, ‘ದಿ ಸೀಕ್ರೆಟ್ ವಿಷ್‌ಲಿಸ್ಟ್’, ‘ದಿ ಒನ್ ಯು ಕಾಂಟ್ ಹ್ಯಾವ್’, ‘ಇಟ್ ಹ್ಯಾಪೆನ್ಸ್ ಫಾರ್ ಎ ರೀಸನ್’. ಇವೆಲ್ಲವುಗಳ ವಸ್ತುಗಳು ತರುಣ-ತರುಣಿಯರಲ್ಲಿ ಸ್ಫೂರ್ತಿ ತುಂಬುವಂತಿವೆ. ಮುಂಬೈ, ಪಾಂಡಿಚೆರಿ, ಕೇರಳ, ಚೆನ್ನೈ, ಬೆಂಗಳೂರು ಹಾಗೂ ಪುಣೆಯಲ್ಲಿ ಇರುವ ಜನರನ್ನೇ ಅದರಲ್ಲೂ ಹೆಚ್ಚಾಗಿ ತರುಣಿಯರನ್ನೇ ಮುಖ್ಯ ಪಾತ್ರಗಳಾಗಿಸಿ ಪ್ರೀತಿ ಪುಸ್ತಕಗಳನ್ನು ಬರೆದಿರುವುದು. ಅವುಗಳ ಶೀರ್ಷಿಕೆಗಳೇ ಜಾಯಮಾನವನ್ನು ವಿವರಿಸಬಲ್ಲವು.ಯುವಮನದ ಸಣ್ಣ ಸಣ್ಣ ತವಕ ತಲ್ಲಣಗಳೇ ಮುಖ್ಯವಾಗುತ್ತಿರುವ ಈ ದಿನಮಾನದಲ್ಲಿ ಅವುಗಳಿಂದ ಹೊರಬರುವ ದಾರಿಗಳ ಬೋಧನೆಗೂ ಮಾರುಕಟ್ಟೆ ಇದೆ ಎಂದಾಯಿತು. ಹೊಸ ಕಾಲದ ದೇಶ ವಿದೇಶಗಳ ಹುಡುಗಿಯರ ಮನದಾಳ ನನಗೆ ತಿಳಿದಿದೆ ಎಂಬ ಪ್ರೀತಿ ಶೆಣೈ ಮಾತು ಇದನ್ನು ಪುಷ್ಟೀಕರಿಸುತ್ತದೆ. ಸುಂದರ ಆದ ಪೈಲ್ವಾನ, ಹಲ್ಲುಕಿರಿದ ಹುಡುಗಿ, ಜಪಾನೀಯರ ಹಿಂದೆ ಬಿದ್ದ ತರುಣ ಹಾಗೂ ಕೃತಿಕಾರಳಾದ ಪ್ರೀತಿ ಶೆಣೈ ಈ ಎಲ್ಲರನ್ನೂ ಒಂದು ಸೂತ್ರದಲ್ಲಿ ಕಟ್ಟಿಹಾಕಬಹುದು ಅಲ್ಲವೇ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.