ಗುರುವಾರ , ಆಗಸ್ಟ್ 6, 2020
27 °C
ಸಾಹಿತ್ಯ ಪ್ರಕಾಶನ

ಯುವಮನಸ್ಸುಗಳ ಮುಟ್ಟುವ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯುವಮನಸ್ಸುಗಳ ಮುಟ್ಟುವ ಯತ್ನ

ಸಂತೆಬೆನ್ನೂರಿನ ವಿಶ್ರಾಂತ ಹೈಸ್ಕೂಲ್ ಮೇಷ್ಟ್ರೊಬ್ಬರು ಮೂರು ವರ್ಷದ ಹಿಂದೆ ನಮ್ಮ ಮನೆಯನ್ನು ಹುಡುಕಿಕೊಂಡು ಬಂದಿದ್ದರು. ಪತ್ರಿಕೆಯೊಂದರ ಪುಸ್ತಕ ಪರಿಚಯ ಅಂಕಣದಲ್ಲಿ ಅದೇ ತಾನೆ `ಅಹರ್ನಿಶಿ' ಪ್ರಕಟಿಸಿದ ಕಿ.ರಂ. ನಾಗರಾಜ ಅವರ ಬೇಂದ್ರೆ ಕಾವ್ಯದ ಕುರಿತ ಉಪನ್ಯಾಸಗಳ ಸಂಗ್ರಹ `ಮತ್ತೆ ಮತ್ತೆ ಬೇಂದ್ರೆ' ಕೃತಿಯ ಕುರಿತು ಪ್ರಕಟವಾಗಿದ್ದನ್ನು ಓದಿ ಪುಸ್ತಕ ಕೊಳ್ಳಲು ಬಂದಿದ್ದರು.

ಐದು ಪ್ರತಿಗಳನ್ನು ಕೊಂಡು ಮರಳಿದರು. ಅದೇ ದಿನ ಮಧ್ಯಾಹ್ನ ಮತ್ತೆ ಬಂದರು. ಈ ಬಿರುಬಿಸಿಲಿನಲ್ಲಿ ಈ ವೃದ್ಧರು ಕಾಲೆಳೆದುಕೊಳ್ಳುತ್ತಾ ಮತ್ತೆ ಏಕೆ ಬಂದರು ಅಂತ ಆಲೋಚಿಸುವಷ್ಟರಲ್ಲಿ `ಬೆಳಿಗ್ಗೆ ಪುಸ್ತಕಕ್ಕೆ ಐವತ್ತು ರೂಪಾಯಿ ಅಂತ ತಿಳಿದು ಲೆಕ್ಕ ಹಾಕಿ ಅಷ್ಟೇ ಕೊಟ್ಟೆ. ಮನೆಗೆ ಹೋಗಿ ಪುಸ್ತಕ ಓದಿದೆ ಮತ್ತು ಬೆಲೆ ಎಪ್ಪತ್ತೈದು ರೂಪಾಯಿ ಅಂತಿತ್ತು. ಛೇ ಎಂಥ ಕೆಲಸವಾಯಿತು ಎಂದು ಉಳಿದ ಹಣವನ್ನು ಮರಳಿಸಲು ಬಂದೆ' ಎಂದರು.

`ಬೇಡ ಪರ‌ವಾಗಿಲ್ಲ ಬಿಡಿ, ರಿಯಾಯ್ತಿ ಎಂದು ತಿಳಿಯಿರಿ' ಎಂದರೆ. `ಸಾಹಿತ್ಯದ ಮೇಲಿನ ಪ್ರೀತಿಯಿಂದ ಮಾಡೋ ಕೆಲಸ ತುಂಬಾ ದೊಡ್ಡದು. ಅದನ್ನು ನೀನು ಮಾಡ್ತಾ ಇದೀಯ. ಪುಸ್ತಕ ಓದಿದ ಮೇಲೆ ಇದಕ್ಕೆ ರಿಯಾಯ್ತಿ ಕೇಳೋ ಪ್ರಶ್ನೆಯೇ ಇಲ್ಲ' ಎಂದು ಉಳಿದ ಹಣ ಕೊಟ್ಟು ಹೋದರು. ನನಗೆ ಹಣವಲ್ಲ ಅವರ ಆ ರೀತಿಯ ಮನೋಧರ್ಮ ಇದೆಯಲ್ಲ ಅದು ದಾರಿದೀಪ ಅನ್ನಿಸಿತು.ಪ್ರಸಿದ್ಧ ಲೇಖಕ  ಹೆಮಿಂಗ್ವೆ ಪ್ರಕಾರ `ಒಬ್ಬ ಬರಹಗಾರನಿಗೆ ಪ್ರತಿ ಪುಸ್ತಕವೂ ಹೊಸ ಆರಂಭ'. ಈ ಮಾತು ಪ್ರಕಾಶಕರಿಗೂ ಅನ್ವಯವಾಗಬೇಕು ಎಂಬುದು ನನ್ನ ನಂಬಿಕೆ. ಹಾಗೆ ಅನ್ವಯವಾಗಬೇಕೆಂದರೆ ತಾನು ಪ್ರಕಟಿಸುವ ಪುಸ್ತಕದೊಂದಿಗೆ ಒಂದು ರೀತಿಯ ತಾದ್ಯಾತ್ಮತೆ ಸಾಧ್ಯವಾಗಬೇಕು. ಇಲ್ಲದಿದ್ದರೆ ಆ ಕೃತಿ ಎಷ್ಟು ದೊಡ್ಡ ಲೇಖಕರೇ ಬರೆದಿರಲಿ ಅಥವಾ ಬಹು ದೊಡ್ಡ ಪ್ರಮಾಣದಲ್ಲಿ ಮಾರಾಟವಾಗುತ್ತದೆ ಎಂಬ ಖಾತ್ರಿ ಮತ್ತು ಆಮಿಷ ಇದ್ದರೂ ಅದನ್ನು ಪ್ರಕಟಿಸಲು ಮುಂದಾಗಬಾರದು ಅನ್ನುವುದು ನನ್ನ ಬದ್ಧತೆ.

ಲವಲವಿಕೆಯಿಂದ ಓದಿಸಿಕೊಳ್ಳುವ ಜೊತೆಗೆ ಮನುಷ್ಯನ ಆಳದ ತಲ್ಲಣಕ್ಕೆ ದನಿಯಾಗುವ ಮತ್ತು ವೈಚಾರಿಕವಾಗಿ ಓದುಗರನ್ನು ಬೆಳೆಸುವ ಕೃತಿಗಳನ್ನು ಪ್ರಕಟಿಸುವುದು `ಅಹರ್ನಿಶಿ'ಯ ಆದ್ಯತೆ. ಇವು ನಾವು ಪುಸ್ತಕವನ್ನು  ಪ್ರಕಟಣೆಗೆ ಸ್ವೀಕರಿಸುವಾಗ ಅನುಸರಿಸುವ ಮುಖ್ಯ ಮಾನದಂಡಗಳು.ಬರೀ ಸಾಹಿತ್ಯ ಕೃತಿಗಳನ್ನು ಮಾತ್ರ `ಅಹರ್ನಿಶಿ'ಯಿಂದ ಪ್ರಕಟಿಸಲು ಕಾರಣ ಸಾಹಿತ್ಯದ ವಿದ್ಯಾರ್ಥಿನಿಯಾಗಿದ್ದು, ಸಾಹಿತ್ಯದ ಓದಿನ ಬಗೆಗಿನ ನನ್ನ ಎಲ್ಲೆ ಇಲ್ಲದ ತಹತಹ ಮತ್ತು ಸಾಹಿತ್ಯ ಕೃತಿಗಳನ್ನು ತುಸು ಅಂತರದಲ್ಲಿಟ್ಟು ನೋಡುವಷ್ಟು ಸಾಹಿತ್ಯದ ಓದು ನನಗಿದೆ ಎಂಬ ನಂಬಿಕೆ. ಯಾವುದೇ ಕೃತಿಯ ಮುಖಪುಟ, ಒಳಪುಟ ವಿನ್ಯಾಸದ ಜೊತೆಗೆ ಕೃತಿಯ ಒಳಹೂರಣದ ಬಗ್ಗೆ ಅದು ಪ್ರಕಟಣಾ ಮೇಜಿನ ಮೇಲೆ ಬಂದ ನಂತರವೂ ಕೆಲವೊಂದು ಮಾರ್ಪಾಡು ಮತ್ತು ವಿಸ್ತಾರಕ್ಕೆ ಕೃತಿಯಲ್ಲಿ ಅವಕಾಶವಿರಬೇಕು.

ಆದ್ದರಿಂದಲೇ `ಅಹರ್ನಿಶಿ'ಯ ಪ್ರಕಟಣೆಯ ಕೃತಿಗಳ ಆಯ್ಕೆಯಲ್ಲಿ ಕನ್ನಡದ ಹಲವು ಹಿರಿ ಕಿರಿಯ ಲೇಖಕರ ಬಳಗದ ಸಲಹೆ -ಸೂಚನೆಗಳನ್ನು ಸ್ವೀಕರಿಸಲಾಗುತ್ತದೆ. ಕಡಿದಾಳು ಶಾಮಣ್ಣನವರ 80 ರ ದಶಕವನ್ನು ಕಟ್ಟಿಕೊಡುವ `ಆ ದಶಕ' ಕಿ.ರಂ. ನಾಗರಾಜ ಅವರ ಬೇಂದ್ರೆ ಕುರಿತ ಭಾಷಣಗಳ ಸಂಗ್ರಹ `ಮತ್ತೆ ಮತ್ತೆ ಬೇಂದ್ರೆ', `ಅನಂತಮೂರ್ತಿ ಮಾತುಕಥೆ-ಹತ್ತು ಸಮಸ್ತರ' ಜೊತೆ ಕೃತಿಗಳನ್ನು ಪ್ರಕಟಿಸುವಾಗ ನಟರಾಜ್ ಹುಳಿಯಾರ್, ಓ.ಎಲ್. ನಾಗಭೂಷಣಸ್ವಾಮಿ, ಎಂ.ಎಸ್. ಆಶಾದೇವಿ ಮತ್ತಿತರರು ನನಗಿಂತ ಜಾಸ್ತಿ ಆಸ್ಥೆ ವಹಿಸಿ ಈ ಪುಸ್ತಕಗಳನ್ನು ರೂಪಿಸುವಲ್ಲಿ ನೆರವಿಗೆ ನಿಂತರು.

ಕನ್ನಡದಲ್ಲಿ ಇಂಥದೊಂದು ಪರಂಪರೆಯೇ ಇದೆ ಎಂಬ ಬಗ್ಗೆ ನನಗಂತೂ ಲೇಖಕಿ ಮತ್ತು ಪ್ರಕಾಶಕಿಯಾಗಿ ತುಂಬಾ ಹೆಮ್ಮೆ. ಪ್ರಕಟಣೆಗೆ ತೆಗೆದುಕೊಂಡ ಯಾವುದೇ ಕೃತಿಯನ್ನು ಹಿರಿಯ ಲೇಖಕರಿಂದ ಹಿಡಿದು ಆ ಬಗ್ಗೆ ಆಸಕ್ತಿ ಇರುವ ಯಾವ ಲೇಖಕ-ಓದುಗ ಮಿತ್ರರಿಗೆ ನೀಡಿ ಸಲಹೆ -ಸೂಚನೆ ನೀಡಿರೆಂದು ಕೇಳಿದಾಗಲೆಲ್ಲ ಅವರುಗಳು ಉತ್ಸಾಹದಿಂದ ಸ್ಪಂದಿಸಿದ್ದಾರೆ.

ಇಂಥ ವಾತಾವರಣ ನೋಡಿದರೆ ಕನ್ನಡ ಸಾಹಿತ್ಯದ ಬಗ್ಗೆ, ಪ್ರಕಾಶನದ ಬಗ್ಗೆ ಹೆಮ್ಮೆ ಉಕ್ಕುತ್ತದೆ.ಆದರೆ ಅದೇ ಮಾರಾಟದ ವಿಷಯಕ್ಕೆ ಬಂದರೆ ತುಸು ನಿರಾಶೆಯಿಂದಲೇ ಮಾತನಾಡಬೇಕಾಗುತ್ತದೆ. ಪುಸ್ತಕಗಳಿಂದ ಅತಿ ಹೆಚ್ಚಿನ ಲಾಭ ತೆಗೆಯುವ ಯಾವ ಉದ್ದೇಶ `ಅಹರ್ನಿಶಿ'ಗೆ ಇಲ್ಲದಿದ್ದರೂ ಪುಸ್ತಕಕ್ಕೆ ಹಾಕಿದ ಹಣ ಓದುಗರಿಂದ ವಾಪಸ್ ಬರಲೇ ಬೇಕು ಎನ್ನುವ ಕಡೆ ನಮ್ಮ ದೃಷ್ಟಿಯಿದೆ. ಎರಡು ಪುಸ್ತಕಕ್ಕೆ ಹಾಕಿದ ಹಣ ಮತ್ತೆರಡು ಪುಸ್ತಕಕ್ಕೆ ಹಾಕುವಷ್ಟು ಹಣವನ್ನು ತಂದ ಮೇಲೆಯೇ ಮತ್ತೆ ಪುಸ್ತಕ ಪ್ರಕಟಿಸುವ ಯೋಚನೆ ಮಾಡಲಾಗುತ್ತದೆ. ಆದ್ದರಿಂದ ಪುಸ್ತಕದ ಮಾರ್ಕೆಟಿಂಗ್ ಬಗ್ಗೆ ಗಮನ ನೀಡುತ್ತೇವೆ.

ಆದರೆ ನಮ್ಮ ಪ್ರಕಾಶನ ಸಂಸ್ಥೆ ಶಿವಮೊಗ್ಗೆಯಲ್ಲಿರುವುದರಿಂದ ಫ್ಲಿಪ್‌ಕಾರ್ಟ್ ಆನ್‌ಲೈನ್ ಸೇವೆಗಳನ್ನು ಬಳಸಿಕೊಳ್ಳಲಾಗುತ್ತಿಲ್ಲ. ಆದರೆ, ಹಲವಾರು ಪಟ್ಟಣ ಮತ್ತು ಹಳ್ಳಿಯಲ್ಲಿರುವ ಓದುಗರು ಅಂಚೆಯ ಮೂಲಕವೇ ಪ್ರಕಾಶನದ ಪುಸ್ತಕಗಳನ್ನು ತರಿಸಿಕೊಳ್ಳುತ್ತಾರೆ. ಅಷ್ಟೇ ಬದ್ಧತೆಯಿಂದ ಹಣವನ್ನು ಕಳಿಸುತ್ತಾರೆ. ಹಳ್ಳಿ ಮೂಲೆಯಲ್ಲಿರುವ ರೈತರು, ಮೇಷ್ಟ್ರುಗಳು, ಗ್ರಾಮೀಣ ಅಧಿಕಾರಿಗಳು ಪುಸ್ತಕ ತರಿಸಿಕೊಂಡು ಓದಿ ಪ್ರತಿಕ್ರಿಯಿಸಿದಾಗ ಆಗುವ ಆನಂದ ಅನಿರ್ವಚನೀಯ.ಕಿ.ರಂ. ನಾಗರಾಜ ಅವರು ಹೇಳುತಿದ್ದಂತೆ, `ಸಾಹಿತ್ಯದ ಓದುಗರ ವಲಯ ಮೊದಲಿನಿಂದಲೂ ತುಂಬಾ ಚಿಕ್ಕದೇ'. ಆದರೆ ಆ ಚಿಕ್ಕ ವಲಯಕ್ಕೆ ಕೂಡ ಸಾಹಿತ್ಯ ಕೃತಿಗಳನ್ನು ತಲುಪಿಸಲು ಸರಿಯಾದ ವ್ಯವಸ್ಥೆ ನಮ್ಮಲ್ಲಿಲ್ಲ. ರಾಜಧಾನಿಯನ್ನು ಬಿಟ್ಟು ಕರ್ನಾಟಕದ ಒಂದೈದಾರು, ನಗರಗಳಲ್ಲಿ ಸಾಹಿತ್ಯ ಕೃತಿಗಳು ಲಭ್ಯವಿರುವ ಅಂಗಡಿಗಳಿವೆ. ಅದರಲ್ಲೂ ಹೆಚ್ಚಿನ ಅಂಗಡಿಗಳಲ್ಲಿ ಕವನ ಸಂಕಲನಗಳ ಮಾರಾಟಕ್ಕೆ ಅವಕಾಶವಿಲ್ಲ. ಸಾಹಿತ್ಯ ಕೃತಿಗಳ ಪ್ರಕಟಣೆಗೆ ಬದ್ಧರಾಗಿರುವ, ವರ್ಷಕ್ಕೆ ನಾಲ್ಕೈದು ಪುಸ್ತಕಗಳನ್ನಷ್ಟೇ ಪ್ರಕಟಿಸುವ ನಮ್ಮ ಪುಸ್ತಕ ಕೊಳ್ಳಲು ಗ್ರಂಥಾಲಯ ಇಲಾಖೆ, ಪುಸ್ತಕ ಪ್ರಾಧಿಕಾರ, ಕೆಲವೊಂದು ವಿಶ್ವವಿದ್ಯಾಲಯಗಳು ಟಿನ್ ನಂಬರ್ ಕೇಳುತ್ತಾರೆ.

ಆದ್ದರಿಂದ ಅಲ್ಲಿಂದಲೂ ನಮಗೆ ಹೆಚ್ಚಿನ ಪ್ರೋತ್ಸಾಹವನ್ನು ನಿರೀಕ್ಷಿಸುವಂತಿಲ್ಲ. ಅದರಲ್ಲೂ ಪ್ರಕಟವಾದ ಹತ್ತು ವರ್ಷಗಳ ನಂತರ ಗ್ರಂಥಾಲಯಕ್ಕೆ ಪುಸ್ತಕ ಕೊಂಡುಕೊಳ್ಳಬಹುದೆಂಬ ನಿಯಮವಿದ್ದರೂ ನಾವು ಪ್ರಕಟಿಸಿದ ಎಚ್. ನಾಗವೇಣಿಯವರ `ಗಾಂಧಿ ಬಂದ' ಕಾದಂಬರಿಯನ್ನು ಗ್ರಂಥಾಲಯ ಆಯ್ಕೆ ಸಮಿತಿ ನಾಲ್ಕೈದು ಬಾರಿ ಮರು ಮುದ್ರಣ ಕಂಡ ಕಾದಂಬರಿ ಎಂಬ ಕಾರಣಕ್ಕೆ ನಿರಾಕರಿಸಿತು. ನನ್ನ ಕವಿ ಮನಸ್ಸಿಗೆ ಕಂಡ ತಮಾಷೆಯೋ ವಿಷಾದವೋ ಏನೆಂದರೆ ಹಾಗಾದರೆ ಯಾರೂ ಓದದ ಪುಸ್ತಕವನ್ನು ಗ್ರಂಥಾಲಯದಲ್ಲಿ ಓದುಗರಿಗೆ ಸಿಗುವಂತೆ ಮಾಡಲಾಗುತ್ತದೆಯೇ ಎಂಬುದು.

ಅದೇ  ಕಾದಂಬರಿಯನ್ನು ಪರಿಷ್ಕೃತ ಮುದ್ರಣ ಎಂದರೆ ಗ್ರಂಥಾಲಯಕ್ಕೆ ಕೊಂಡುಕೊಳ್ಳಲಾಗುತ್ತಿತ್ತಂತೆ. ಕಾದಂಬರಿಯನ್ನು ಪರಿಷ್ಕರಿಸುವುದು ಎಂದರೆ ಏನೆಂದು  ಗ್ರಂಥಾಲಯ ಆಯ್ಕೆ ಸಮಿತಿಯನ್ನೇ ಕೇಳಬೇಕು. ಹೀಗೆ ಹಲವು ಸವಾಲುಗಳನ್ನು ಎದುರಿಸುತ್ತಲೇ ಅಹರ್ನಿಶಿಯ ಪುಸ್ತಕ ಪ್ರಕಟಣಾ ಸಾಹಸ ಮುಂದುವರೆದಿದೆ.

ಖ್ಯಾತ ಅಂಕಣಕಾರ ಹರ್ಷ ಮಂದರ್ ಅವರ ಅಂಕಣ ಬರಹಗಳ ಅನುವಾದ ಕೃತಿ ಪ್ರಕಟಣೆಗೆ ಸಿದ್ಧವಾಗುತ್ತಿದ್ದು, ಕನ್ನಡದ ಹೊಸ ತಲೆಮಾರಿನ ಇಪ್ಪತ್ತೈದು ಯುವ ಲೇಖಕರು ತಲಾ ಒಂದೊಂದು ಲೇಖನದ ಅನುವಾದ ಮಾಡಿದ್ದಾರೆ. ಕೊನೆಗೂ ಪುಸ್ತಕವಾಗಲಿ, ಚಿಂತನೆಯಾಗಲೀ ತಲುಪಬೇಕಾಗಿದ್ದು ತಟ್ಟಬೇಕಾದದ್ದು ಯಾರನ್ನು ಎಂಬ ಪ್ರಶ್ನೆ ಬಂದಾಗ ಮೊದಲ ಆದ್ಯತೆ ಯುವಮನಸ್ಸುಗಳಿಗೆ ತಾನೇ. ಆ ನಿಟ್ಟಿನಲ್ಲಿ ಅಹರ್ನಿಶಿಯ ಪ್ರಯತ್ನ ಜಾರಿಯಲ್ಲಿರುತ್ತದೆ.

=ಅಕ್ಷತಾ ಹುಂಚದಕಟ್ಟೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.