ಯುವರಾಜ್ `ಸಿಂಗ್' ಪಡೆಗೆ `ಕಿಂಗ್' ಜಯ

7
ಕ್ರಿಕೆಟ್: ರಾಹುಲ್ ಗೆ ಐದು; ರಸೆಲ್‌ಗೆ ನಾಲ್ಕು ವಿಕೆಟ್

ಯುವರಾಜ್ `ಸಿಂಗ್' ಪಡೆಗೆ `ಕಿಂಗ್' ಜಯ

Published:
Updated:

ಬೆಂಗಳೂರು: ನಾಯಕ ಯುವರಾಜ್ ಸಿಂಗ್ ಗಳಿಸಿದ ಅರ್ಧ ಶತಕ (52, 35 ಎ, 4ಬೌ,3ಸಿ) ಹಾಗೂ ರಾಹುಲ್ ಶರ್ಮ (23ಕ್ಕೆ5) ತೋರಿದ ಕರಾರುವಾಕ್ ಬೌಲಿಂಗ್ ನೆರವಿನಿಂದ ಭಾರತ `ಎ' ತಂಡ, ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ವೆಸ್ಟ್ ಇಂಡೀಸ್ `ಎ' ತಂಡ ವಿರುದ್ಧ ನಡೆದ ಏಕೈಕ ಟ್ವೆಂಟಿ-20 ಪಂದ್ಯದಲ್ಲಿ ಅಮೋಘ 98 ರನ್‌ಗಳ ಜಯ ದಾಖಲಿಸಿತು.ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-2ರಲ್ಲಿ ಸೋತಿದ್ದ `ಯುವಿ' ಪಡೆ, ಮುಯ್ಯಿ ತೀರಿಸಿಕೊಂಡಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದಕೊಂಡು ಭಾರತಕ್ಕೆ, ಆರಂಭಿಕ ಆಟಗಾರರಾದ ಕರ್ನಾಟಕದ ರಾಬಿನ್ ಉತ್ತಪ್ಪ ಹಾಗೂ ಉನ್ಮುಕ್ ಚಾಂದ್,  ಮೊದಲ ವಿಕೆಟ್‌ಗೆ 74 ರನ್ ಗಳಿಸಿ ಅಗತ್ಯವಿರುವ ಬುನಾದಿಯನ್ನೇ ಹಾಕಿ ಕೊಟ್ಟರು. ಉತ್ತಪ್ಪ 35 ರನ್ (21ಎ, 1ಬೌ, 3ಸಿ) ಗಳಿಸಿದ್ದಾಗ ಪೆರುಮಲ್ ಎಸೆತದಲ್ಲಿ `ಎಲ್‌ಬಿಡಬ್ಲ್ಯು'ಗೆ ಬಲಿಯಾದರು.

 

ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಭಾರಿ ಕರತಾಡನದ ನಡುವೆ ಮೈದಾನಕ್ಕಿಳಿದ ನಾಯಕ `ಯುವಿ', ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಶರಣಾದರು. ಅರ್ಧ ಶತಕದ ಅಂಚಿನಲ್ಲಿದ್ದಾಗ ಚಾಂದ್ (47, 29ಎ, 4ಬೌ,2 ಸಿ) ನರ್ಸ್ ಎಸೆತದಲ್ಲಿ ಎಡ್ವರ್ಡ್ಸ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

 

  ಈ ವೇಳೆ ಅಂಗಳಕ್ಕಿಳಿದ ಬಾಬಾ ಅಪರಾಜಿತ್ (3ರನ್, 4ಎ) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಗುರುವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಅಪರಾಜಿತ್ 78 ರನ್ ಗಳಿಸಿದ್ದರು.

  ಬಳಿಕ ಬಂದ ಕೇದಾರ್ ಜಾಧವ್, ನಾಯಕ ಯುವರಾಜ್‌ಗೆ ಜೊತೆ ನೀಡಿದರು. ಈ ಜೋಡಿ 38 ಎಸೆತಗಳಲ್ಲಿ 80 ರನ್ ಕಲೆಹಾಕಿ ತಂಡದ ಸವಾಲಿನ ಮೊತ್ತಕ್ಕೆ ಕಾರಣವಾಯಿತು.

ಅಂತಿಮವಾಗಿ ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 214 ರನ್ ಗಳಿಸಿ, ವಿಂಡೀಸ್‌ಗೆ 215 ರನ್ ಗುರಿ ನೀಡಿತು.

ಸವಾಲಿನ ಮೊತ್ತ ಬೆನ್ನತ್ತಿದ ಪ್ರವಾಸಿ ಪೊವೆಲ್ ಬಳಗ, ಭಾರತದ ಬೌಲರ್‌ಗಳ ಕರಾರುವಾಕ್ ದಾಳಿಗೆ ತತ್ತರಿಸಿತು. 16.2 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 121 ರನ್ ಮಾತ್ರ ಗಳಿಸಲು ಸಾಧ್ಯವಾಯಿತು.

ವಿಂಡೀಸ್‌ಗೆ ಮೊದಲ ಆಘಾತ ನೀಡಿದ ರಾಹುಲ್ ಶರ್ಮ, ಒಟ್ಟು ಐದು ವಿಕೆಟ್ ಪಡೆದು ವಿಂಡೀಸ್ ಗೆಲುವಿನ ಕನಸನ್ನು ನುಚ್ಚುನೂರು ಮಾಡಿದರು.

ಕರ್ನಾಟಕದ ವಿನಯ್‌ಕುಮಾರ್, ಯುವರಾಜ್ ತಲಾ ಎರಡು ವಿಕೆಟ್ ಕಬಳಿಸಿದರೆ, ಜಯದೇವ್ ಉನದ್ಕತ್ ಒಂದು ವಿಕೆಟ್ ಕಬಳಿಸಿದರು.

ರಸೆಲ್ ಹ್ಯಾಟ್ರಿಕ್: ಮೊದಲ ಇನಿಂಗ್ಸ್‌ನಲ್ಲಿ ಭಾರತದ ವಿರುದ್ಧ 18 ಓವರ್‌ನಲ್ಲಿ ಬೌಲಿಂಗ್ ನಡೆಸಿದ ರಸೆಲ್ ಸತತ ನಾಲ್ಕು ವಿಕೆಟ್ ಪಡೆದು ಸಂಭ್ರಮಿಸಿದರು.

ಮೊದಲ ಎಸೆತದಲ್ಲಿ ಜಾಧವ್ ವಿಕೆಟ್  ಕಬಳಿಸಿದ ರಸೆಲ್ ನಂತರ ಯುವಿಗೆ ಆಘಾತ ನೀಡಿದರು. ಬಳಿಕದ ಎರಡು ಎಸೆತಗಳಲ್ಲಿ ನವೀನ್ ಓಜಾ ಹಾಗೂ ಯುಸೂಫ್ ಪಠಾಣ್ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry