ಮಂಗಳವಾರ, ಮೇ 11, 2021
27 °C

ಯುವಶಕ್ತಿ ಸದೃಢಗೊಳ್ಳಬೇಕು: ಭಾರದ್ವಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:`ಯುವಜನತೆಯ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗುತ್ತಿಲ್ಲ. ದೇಶದ ಭದ್ರ ಬುನಾದಿಯಾಗಿರುವ ಯುವ ಶಕ್ತಿಯನ್ನು ನಿರಂತರವಾಗಿ ಸದೃಢಗೊಳಿಸುವ ಕೆಲಸ ಆಗಬೇಕು~ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಕಿವಿಮಾತು ಹೇಳಿದರು.ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆಶ್ರಯದಲ್ಲಿ ರಾಜಭವನದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.`ವಿದ್ಯಾರ್ಥಿ ಜೀವನದಲ್ಲಿ ಸ್ಕೌಟ್ಸ್ ಸದಸ್ಯರಾಗುವುದು ಅಮೂಲ್ಯ ವಿಚಾರ. ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸ್ಕೌಟ್ಸ್, ಗೈಡ್ಸ್ ಸದಸ್ಯರಾಗುವಂತೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿ. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ, ವೈದ್ಯಕೀಯ ಸೌಲಭ್ಯ ಒದಗಿಸಲು ಹೆಚ್ಚಿನ ಒತ್ತು ನೀಡಬೇಕು~ ಎಂದು ಅವರು ಸಲಹೆ ನೀಡಿದರು.ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಕಾರ್ಯದರ್ಶಿ ಜಿ. ಕುಮಾರ್ ನಾಯಕ್ ಮಾತನಾಡಿ, `ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಬೇಕು ಹಾಗೂ ಬಿಕ್ಕಟ್ಟು ಪರಿಸ್ಥಿತಿ ಎದುರಿಸುವ ಬಗ್ಗೆ ಕೌಶಲ ಮೂಡಿಸಬೇಕು. ಸ್ಕೌಟ್ಸ್, ಗೈಡ್ಸ್ ಚಟುವಟಿಕೆ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ~ ಎಂದರು. ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಆರ್. ಪೆರುಮಾಳ್, `ಇತ್ತೀಚಿನ ದಿನಗಳಲ್ಲಿ ಯುವಜನತೆ ಸಮಾಜವಿರೋಧಿ, ಅಪರಾಧ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ಭಾಗಿಯಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ~ ಎಂದರು.ಈ ಸಂದರ್ಭ ಕಬ್ಸ್,  ಬುಲ್‌ಬುಲ್ಸ್, ಸ್ಕೌಟ್ಸ್, ಗೈಡ್‌ಗಳಿಗೆ ಚತುರ್ಥ ಚರಣ್, ಹೀರಕ್ ಪಂಖ್ ರಾಜ್ಯ ಪುರಸ್ಕಾರ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.  ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ, ಭಾರತ್ ಸ್ಕೌಟ್ಸ್, ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಕೊಂಡಜ್ಜಿ ಬಿ.ಷಣ್ಮುಖಪ್ಪ, ಯುವಜನ ಸೇವಾ ಇಲಾಖೆಯ ನಿರ್ದೇಶಕ ಎನ್.ಕೆ. ಬಲದೇವಕೃಷ್ಣ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷಭಾರತಿ ಚಂದ್ರಶೇಖರ್, ಸರೋಜಾ ನಾಯ್ಡು, ಟಿ. ಪ್ರಭಾಕರ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.