ಮಂಗಳವಾರ, ಜುಲೈ 14, 2020
25 °C

ಯುವಿ ಈಗ ಬದಲಾಗಿದ್ದಾರೆ!

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಯುವಿ ಈಗ ಬದಲಾಗಿದ್ದಾರೆ!

ಪಂಜಾಬಿ ಪುತ್ಥರ್’ ಯುವರಾಜ್ ಸಿಂಗ್ ಬದಲಾಗಿದ್ದಾರೆ. ಕ್ರಿಕೆಟ್ ಅನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಕಳೆದ ವಾರ ಎರಡು ಪಂದ್ಯಗಳಲ್ಲಿ ಅವರ ‘ಮ್ಯಾಚ್ ವಿನ್ನಿಂಗ್’ ಪ್ರದರ್ಶನ ಈ ಮಾತಿಗೆ ಸಾಕ್ಷಿ.’ಹೊಡಿ ಬಡಿ’ ಆಟವನ್ನೇ ರಕ್ತಗತ ಮಾಡಿಕೊಂಡಿರುವ ಅಜಾನುಬಾಹು ಮುಂಗೋಪಿ ಈಗ ಶಾಂತವಾಗಿದ್ದಾರೆ. ಡ್ರೆಸ್ಸಿಂಗ್ ರೂಮಿನಲ್ಲಿಯೂ ಸದಾ ಲವಲವಿಕೆಯಿಂದ ಇರುವುದರ ಜೊತೆಗೆ ಪಂದ್ಯದಲ್ಲಿ ಪರಿಸ್ಥಿತಿಯನ್ನು ಅರಿತು ಆಡುವ ಗುಣ ಬೆಳೆಸಿಕೊಂಡಿದ್ದಾರೆ.ಭಾರತದ ಮಾಜಿ ಟೆಸ್ಟ್ ಆಟಗಾರ ಯೋಗರಾಜ್ ಸಿಂಗ್‌ರ ಮಗ ಯುವಿ ಅಪ್ಪನಂತೆಯೇ ಕೊಂಚ ಉಡಾಳನೇ ಆಗಿದ್ದ. ತಂಡಕ್ಕೆ ಸೇರಿದ ಅರಂಭದ ದಿನಗಳಲ್ಲಿ ಅವರ ಬಗ್ಗೆ ಇದ್ದ ಭಿನ್ನಾಭಿಪ್ರಾಯಗಳು ಈಗ ಮಾಯವಾಗಿವೆ. ಏಕದಿನ ಮತ್ತು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಒತ್ತಿದ್ದಾರೆ.ವಿಶ್ವಕಪ್ ಟೂರ್ನಿಯ ಐರ್ಯೆಂಡ್ ಮತ್ತು ಹಾಲೆಂಡ್ ವಿರುದ್ಧದ ಪಂದ್ಯಗಳಲ್ಲಿ ’ಕಷ್ಟಪಟ್ಟು’ ಗೆದ್ದ ಭಾರತಕ್ಕೆ ಆಸರೆಯಾಗಿ ನಿಂತಿದ್ದು ಈ ಆಲ್‌ರೌಂಡ್ ಆಟಗಾರ. ಚೆಂಡು ಇರುವುದೇ ಚಚ್ಚಲು ಎನ್ನುವಂತೆ ಆಡುತ್ತಿದ್ದ ಯುವಿ ಈಗ ಉತ್ತಮ ಎಸೆತಗಳಿಗೆ ಗೌರವ ಕೊಟ್ಟು, ಕೆಟ್ಟ ಎಸೆತಗಳಿಗೆ ಬೌಂಡರಿ ದಾರಿ ತೋರಿಸುತ್ತಿದ್ದಾರೆ.ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಜವಾಬ್ದಾರಿಯನ್ನು ಅರಿತಿರುವ ಯುವಿ, ಸಾಂದರ್ಭಿಕ ಬೌಲಿಂಗ್‌ನಿಂದಲೇ ಪಂದ್ಯ ಗೆದ್ದುಕೊಡುವಷ್ಟು ಸಾಮರ್ಥ್ಯ ಬೆಳೆಸಿಕೊಂಡಿದ್ದಾರೆ.ಬೆಂಗಳೂರಿನಲ್ಲಿ ಐರ್ಯೆಂಡ್  ವಿರುದ್ಧ ಐದು ವಿಕೆಟ್ ಕಬಳಿಸಿ, ಅರ್ಧಶತಕ ಗಳಿಸಿ ತಂಡಕ್ಕೆ ಸೋಲಿನ ದವಡೆಯಿಂದ ಉಳಿಸಿದ್ದರು. ಇದಕ್ಕೂ ಮುನ್ನ ಇಂಗ್ಲೆಂಡ್‌ಗೆ ಚಳ್ಳೆಹಣ್ಣು ತಿನ್ನಿಸಿದ್ದ ಐರಿಷ್ ಪಡೆಯಿಂದ ಅವಮಾನವಾಗುವ ಎಲ್ಲ ಸಾಧ್ಯತೆಗಳೂ ಈ ಪಂದ್ಯದಲ್ಲಿತ್ತು.ನಂತರ ದೆಹಲಿಯ ಕೋಟ್ಲಾ ಮೈದಾನದಲ್ಲಿಯೂ ಹಾಲೆಂಡ್ ನೀಡಿದ ಅಲ್ಪ ಮೊತ್ತ ಬೆನ್ನತ್ತಿದ್ದ ಭಾರತಕ್ಕೆ ಜಯ ಸುಲಭವಾಗಲಿಲ್ಲ. ಆದರೆ ಮತ್ತೆ ಆಸರೆಯಾಗಿದ್ದು ‘ಯುವಿ’. ಅವರಿಗೆ ಸಾಥ್ ನೀಡಿದ್ದು ನಾಯಕ ಮಹೇಂದ್ರಸಿಂಗ್ ದೋನಿ. ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡನೇ ಅರ್ಧಶತಕ ಗಳಿಸಿದ ಶ್ರೇಯವೂ ಯುವಿ ಪಾಲಿಗೆ ದಕ್ಕಿತು.

‘ನನಗೆ ಆಡುವುದಷ್ಟೇ ಗೊತ್ತು. ಎದುರಾಳಿ ಬೌಲರ್‌ಗಳ ಒಳ್ಳೆಯ ಎಸೆತಗಳಿಗೆ ದೊಡ್ಡ ಹೊಡೆತ ಬಿದ್ದರೆ ಅವರ ಮೇಲೆ ಮಾನಸಿಕ ಒತ್ತಡ ಅಪಾರ. ಇದರಿಂದ ಮುಂದಿನ ಆಟ ಸುಲಭವಾಗುತ್ತದೆ’ ಎಂದು ಮೂರು ವರ್ಷದ ಹಿಂದೆ ಯುವಿ ಇಂದೋರಿನಲ್ಲಿ ಹೇಳಿದ ಮಾತು ಇನ್ನೂ ನೆನಪಿದೆ.2008ರಲ್ಲಿ ರಾಜಕೋಟ್ ಮತ್ತು ಇಂದೋರಿನಲ್ಲಿ ಇಂಗ್ಲೆಂಡ್ ವಿರುದ್ಧ ಸತತ ಎರಡು ಶತಕ ಬಾರಿಸಿದ್ದ ಅವರ ಆಟ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಉಳುಕಿದ್ದ ಸೊಂಟದ ನೋವಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಆಡಿದ್ದ ಯುವಿ, ನಾಯಕ ದೋನಿಯ ಫೆವರಿಟ್ ಬಾಯ್ ಆಗಿದ್ದರು. ಆದರೆ ಈಗಿನ ಆವರ ಆಟಕ್ಕೂ ಅಂದು ಅವರು ಆಡಿದ ಮಾತುಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ತಾಳ್ಮೆಯಿಂದ ಆಡಿ ಇನಿಂಗ್ಸ್ ಕಟ್ಟುವ ಕಲೆಯನ್ನು ಕಲಿಯುತ್ತಿದ್ದಾರೆ.2000ನೇ ಇಸ್ವಿಯಲ್ಲಿ ನೈರೋಬಿಯಲ್ಲಿ ಕಿನ್ಯಾ ವಿರುದ್ಧ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ ಯುವಿ, ಟೆಸ್ಟ್‌ನಲ್ಲಿ ಆಡುವ ಅವಕಾಶ ಪಡೆದದ್ದು 2003ರಲ್ಲಿ. ತವರು ನೆಲ ಮೊಹಾಲಿಯ ಮೈದಾನದಲ್ಲಿಯೇ ಈ ಅವಕಾಶ ಸಿಕ್ಕಿತ್ತು. ಆದರೆ ತಂಡದಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯುವಿ ಸಫಲರಾಗಿರಲಿಲ್ಲ. ಚಂಚಲ ಮನಸ್ಸಿನ ಆಟದಿಂದಾಗಿ ವಿಕೆಟ್ ಚೆಲ್ಲುವ ಗುಣ ಅವರನ್ನು ಹಲವು ಟೂರ್ನಿಗಳಿಂದ ಹೊರಗುಳಿಯುವಂತೆ ಮಾಡಿತು. ಆದರೆ ಈ ಎಲ್ಲ ಏರಿಳಿತಗಳಿಗೆ ಪೂರ್ಣವಿರಾಮ ನೀಡುವ ಮೂಡಿನಲ್ಲಿ 29ರ ಹರೆಯದ ಯುವಿ ಇದ್ದಾರೆ.‘ಯುವಿ ಈಗ ಮೊದಲಿನಂತೆ ಇಲ್ಲ. ಪರಿಸ್ಥಿತಿಯ ಒತ್ತಡ ಅರಿತು ಆಡುತ್ತಿದ್ದಾರೆ. ಹಿರಿಯ ಸ್ಪಿನ್ನರ್ ಬಿಷನ್‌ಸಿಂಗ್ ಬೇಡಿ ಕೊಟ್ಟ ಸಲಹೆಗಳನ್ನು ರೂಢಿಸಿಕೊಂಡು ಬೌಲಿಂಗ್‌ನಲ್ಲಿಯೂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವನಿಗೆ ಒಳ್ಳೆಯ ಭವಿಷ್ಯವಿದೆ. ಅಗತ್ಯ ಬಿದ್ದರೆ ಹೊಡಿಬಡಿ ಆಟವಾಡುವ ತಾಕತ್ತೂ ಅವನಿಗೆ ಇದೆ’ ಎಂದು ಯುವಿಯ ಅಪ್ಪ ಯೋಗರಾಜ್‌ಸಿಂಗ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.ವಿಶ್ವಕಪ್‌ನ ಕ್ವಾರ್ಟರ್‌ಫೈನಲ್‌ಗೆ ಭಾರತ ಕಾಲಿಟ್ಟಿದೆ. ಆದರೆ ಲೀಗ್ ಹಂತದಲ್ಲಿ ಇನ್ನೂ ಘಟಾನುಘಟಿ ತಂಡಗಳನ್ನು ಎದುರಿಸುವುದೂ ಬಾಕಿಯಿದೆ. ಅದರ ನಂತರ ನಾಕೌಟ್ ಹಂತದಲ್ಲಿ ಮಧ್ಯಮ ಕ್ರಮಾಂಕದ ಜವಾಬ್ದಾರಿ ಹೆಚ್ಚುವುದಂತೂ ಖಂಡಿತ. ಅಲ್ಲದೇ ಬೌಲಿಂಗ್ ಮತ್ತು ಫೀಲ್ಡಿಂಗ್ ದೌರ್ಬಲ್ಯ ಎದುರಿಸುತ್ತಿರುವ ಭಾರತಕ್ಕೆ ಆಸರೆಯಾಗುವ ಭರವಸೆಯನ್ನು ಯುವಿ ಮೂಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.