ಯುವ ಕಾಂಗ್ರೆಸ್‌ನಿಂದ ಹೆಸ್ಕಾಂ ಕಚೇರಿಗೆ ಬೀಗ

7

ಯುವ ಕಾಂಗ್ರೆಸ್‌ನಿಂದ ಹೆಸ್ಕಾಂ ಕಚೇರಿಗೆ ಬೀಗ

Published:
Updated:

ಬಾಗಲಕೋಟೆ: ರಾಜ್ಯ ಸರ್ಕಾರದ ವಿದ್ಯುತ್ ಪೂರೈಕೆಯಲ್ಲಿನ ವೈಫಲ್ಯ ಖಂಡಿಸಿ ಯುವ ಕಾಂಗ್ರೆಸ್ ಬಾಗಲಕೋಟೆ ಜಿಲ್ಲಾ ಘಟಕದ ಕಾರ್ಯಕರ್ತರು ಸೋಮವಾರ ನಗರದ ಹೆಸ್ಕಾಂ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದರು.ರಾಜ್ಯದಲ್ಲಿ ವಿದ್ಯುತ್ ಕೊರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಸಮಸ್ಯೆ ಬಗೆಹರಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು, ವ್ಯಾಪಾರಸ್ಥರು, ಗೃಹಿಣಿಯರು, ವಿದ್ಯಾರ್ಥಿಗಳು ವಿದ್ಯುತ್ ಕೊರತೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.ರೈತರಿಗೆ ಉಚಿತ ವಿದ್ಯುತ್ ಕೊಡುವುದಾಗಿ ಘೋಷಿಸಿದ ಸರ್ಕಾರ ಬರಗಾಲದ ಸಂದರ್ಭದಲ್ಲೂ ವಾರಗಟ್ಟಲೇ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡುವ ಮೂಲಕ ರೈತರ ಕೃಷಿ ಕಾರ್ಯಕ್ಕೆ ಅಡಚಣೆ ಮಾಡಿದೆ, ರೈತರ ಪಂಪ್‌ಸೆಟ್‌ಗೆ ಮೀಟರ್ ಹಾಕಿಕೊಳ್ಳಬೇಕು, ಹಳೆಯ ಬಾಕಿಯನ್ನು ಕಟ್ಟಲೇ ಬೇಕು ಎಂಬ ನಿಬಂಧನೆಗಳನ್ನು ಹಾಕಿ ರೈತರಿಂದ ರೂ.2007ಕೋಟಿ ಬಾಕಿ ವಸೂಲಿಗೆ ಮುಂದಾಗಿದೆ ಎಂದು ಆರೋಪಿಸಿದರು.ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಒಂದೇ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಿಲ್ಲ, ಗ್ರಾಮೀಣ ಭಾಗದಲ್ಲಿ ನಾಲ್ಕು ಗಂಟೆಗಳ ಕಾಲ ತ್ರೀಪೇಸ್ ವಿದ್ಯುತ್ ಒದಗಿಸದೇ, ಪಟ್ಟಣದಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಸದೇ ಇಡೀ ರಾಜ್ಯವನ್ನು ಕತ್ತಲಲ್ಲಿ ಇಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಮರ್ಪಕ ವಿದ್ಯುತ್ ಪೂರೈಕೆಗೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ವಾಸನದ, ಪ್ರವೀಣ ಮಣ್ಣೂರ, ಅಜೀಜ್ ಇದ್ದಲಗಿ, ನೂರ್ ಅಹಮ್ಮದ್ ಪಟ್ಟೇವಾಲ, ಮಹೇಶ ಜಾಲವಾದಿ, ವೀರಣ್ಣ ತಿಮ್ಮಾಪುರ, ಹನುಮಂತ ಪಲ್ಲೇದ, ರಾಜು ಮನ್ನಿಕೇರಿ, ಅಶೋಕ ಗೌಡರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry