ಯುವ ಕಾಂಗ್ರೆಸ್ ಪ್ರತಿಭಟನೆ

7

ಯುವ ಕಾಂಗ್ರೆಸ್ ಪ್ರತಿಭಟನೆ

Published:
Updated:

ಬೆಂಗಳೂರು: ಮೈಸೂರು ಜಿಲ್ಲಾ ಪಂಚಾಯ್ತಿಯಲ್ಲಿ ಜೆಡಿಎಸ್, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ಖಂಡಿಸಿ ನಗರದ ಆನಂದರಾವ್ ವೃತ್ತದಲ್ಲಿರುವ ಜೆಡಿಎಸ್ ಕಚೇರಿಗೆ ಭಾನುವಾರ ಮುತ್ತಿಗೆ ಹಾಕಲು ಪ್ರಯತ್ನಿಸಿದ ಬೆಂಗಳೂರು ಮಹಾನಗರ ಯುವ ಕಾಂಗ್ರೆಸ್ ಸಮಿತಿಯ 39 ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು.ಮಾಜಿ ಮೇಯರ್ ಎಂ.ರಾಮಚಂದ್ರಪ್ಪ ಹಾಗೂ ಪಾಲಿಕೆ ವಿರೋಧ ಪಕ್ಷದ ನಾಯಕ ಎಂ.ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.‘ರಾಜ್ಯ ರಾಜಕೀಯವನ್ನು ಕಲುಷಿತಗೊಳಿಸಿರುವ ಬಿಜೆಪಿ ಜೊತೆ ಎಚ್.ಡಿ.ಕುಮಾರಸ್ವಾಮಿ ಮೈತ್ರಿ ಮಾಡಿಕೊಂಡಿರುವುದು ಅವರ ಜಾತ್ಯತೀತ ನಿಲುವನ್ನು ಬಹಿರಂಗಪಡಿಸಿದೆ.ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಟೀಕೆ ಮಾಡುವ ನೈತಿಕತೆ ಇಲ್ಲ. ಈ ಬಗ್ಗೆ ಕೂಡಲೇ ಕ್ಷಮೆ ಕೇಳಬೇಕು’ ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.ಪಾಲಿಕೆ ಸದಸ್ಯರಾದ ಗೌರಮ್ಮ ಗೋವಿಂದರಾಜು, ನಟರಾಜ್, ವಾಜೀದ್, ಕೇಶವಮೂರ್ತಿ, ಕೆಪಿಸಿಸಿ ಸದಸ್ಯ ಪ್ರಮೋದ್ ಶಂಕರ್, ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್.ಮನೋಹರ್, ಸದಸ್ಯ ವಿನಯ್ ಕಾರ್ತಿಕ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

‘ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕುಮಾರಸ್ವಾಮಿಯವರೇ ಕಾರಣ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯದ ಸಂಪತ್ತನ್ನು ಲೂಟಿ ಮಾಡಿದವು. ಚುನಾವಣೆ ಸಂದರ್ಭದಲ್ಲಿ ಜಾತ್ಯತೀತ ನಿಲುವು ಪ್ರದರ್ಶಿಸುವ ಜೆಡಿಎಸ್ ಚುನಾವಣೆ ನಂತರ ಬಿಜೆಪಿ ಜೊತೆ ಅಧಿಕಾರಕ್ಕಾಗಿ ಹೊಂದಾಣಿಕೆ ಮಾಡಿಕೊಳ್ಳುವುದು ಪಕ್ಷದ ಅಧಿಕಾರ ದಾಹವನ್ನು ತೋರುತ್ತದೆ’ ಎಂದು ಅವರು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry