ಯುವ ಪ್ರತಿಭೆಗಳ ಬೆಳಕು

7

ಯುವ ಪ್ರತಿಭೆಗಳ ಬೆಳಕು

Published:
Updated:
ಯುವ ಪ್ರತಿಭೆಗಳ ಬೆಳಕು

ಕಳೆದ ಶುಕ್ರವಾರ, ಶನಿವಾರ ಮತ್ತು ಭಾನುವಾರ ಗುರು ಕೆ.ಪಿ.ಕಿಟ್ಟಪ್ಪ ಪಿಳ್ಳೈ ಸ್ಮಾರಕ ಯುವ ನೃತ್ಯೋತ್ಸವ ನಡೆಯಿತು.ಈ ನೃತ್ಯೋತ್ಸವ ಕೀರ್ತಿಶೇಷ ಗುರು ಪದ್ಮಿನಿ ರಾವ್ ಅವರ ಕನಸಿನ ಕೂಸು. ಭರತನಾಟ್ಯ ಪ್ರದರ್ಶನ ಕಛೇರಿಗೆ ನಿರ್ದಿಷ್ಟವಾದ ರೂಪುರೇಷೆಗಳನ್ನು ನಿರ್ಮಿಸಿದ್ದು `ಮಾರ್ಗಂ~. ಆದರೆ ಈಗ  ತಂಜಾವೂರು ಸೋದರರ ಪದವರ್ಣಗಳು ಸೇರಿದಂತೆ ಕೆಲವೇ ರಚನೆಗಳು ಪ್ರಚಲನೆಯಲ್ಲಿವೆ.

 

ಅವುಗಳನ್ನು ಜನಪ್ರಿಯಗೊಳಿಸಬೇಕು ಎಂಬುದು ಪದ್ಮಿನಿ ರಾವ್ ಉದ್ದೇಶ. ಹಾಗಾಗಿ ಈ ನೃತ್ಯೋತ್ಸವದಲ್ಲಿ ತಂಜಾವೂರು ಸೋದರರ ಕೃತಿಗಳಲ್ಲಿ ಒಂದನ್ನಾದರೂ ಪ್ರದರ್ಶಿಸಬೇಕು ಎಂದು ಕಡ್ಡಾಯಗೊಳಿಸಲಾಗಿತ್ತು.ಅವರ ಆಸೆಯಂತೆ ಅವರದ್ದೇ ಕಲ್ಪನೆಯ ಸಭಾಂಗಣದಲ್ಲಿ ವಾರ್ಷಿಕ ನೃತ್ಯೋತ್ಸವವು ನಡೆಯತೊಡಗಿತು. ಅವರ ಅಕಾಲಿಕ ಹಾಗೂ ಆಕಸ್ಮಿಕ ಮರಣದಿಂದಾಗಿ ಈ ಪರಂಪರೆ ನಿಲ್ಲುವುದೇ ಎಂಬ ಆತಂಕ ನೃತ್ಯಪಟುಗಳಲ್ಲಿ ಇತ್ತು. ಆದರೆ ಅವರ ಪುತ್ರ ಶ್ರೇಯಸ್, ಪತಿ ಶ್ರಿಧರ್, ಅವರ ಹಿರಿಯ ಶಿಷ್ಯೆ ಶ್ವೇತಾ ಲಕ್ಷ್ಮಣ್ ಮತ್ತು ಇತರೆ ಕ್ರಿಯಾಶೀಲ ವಿದ್ಯಾರ್ಥಿನಿಯರಿಂದಾಗಿ ಈ ಉತ್ಸವ ಮುಂದುವರಿಯುತ್ತಿದೆ. ಈ ಪ್ರಯತ್ನ ಅಭಿನಂದನಾರ್ಹ. ಇದು ಹನ್ನೊಂದನೆಯ ನೃತ್ಯೋತ್ಸವ.ಪ್ರಾಮಾಣಿಕ ಪ್ರದರ್ಶನ

ಚೆನ್ನಮ್ಮನಕೆರೆ ಅಚ್ಚುಕಟ್ಟಿನಲ್ಲಿರುವ ಗುರು ಪದ್ಮಿನಿ ರಾವ್ ಪರಂಪರಾ ಆರ್ಟ್ ಅಂಡ್ ಕಲ್ಚರ್ ರಿಸರ್ಚ್ ಡೆವಲಪ್‌ಮೆಂಟ್ ಕೇಂದ್ರದಲ್ಲಿ ಯುವ ಕಲಾವಿದರು ಮತ್ತು ರಸಿಕರನ್ನು ಹೆಚ್ಚು ಸಂಖ್ಯೆಯಲ್ಲಿ ಆಕರ್ಷಿಸಿತು.ಕಾವ್ಯ ಷಣ್ಮುಗಂ ಕಾರ್ಯಕ್ರಮದೊಂದಿಗೆ ಉತ್ಸವ ಆರಂಭವಾಯಿತು. ಗುರು ಗೀತಾಲಕ್ಷ್ಮಿ ಗೋವಿಂದರಾಜನ್‌ಅವರ ಮಾರ್ಗದರ್ಶನದಲ್ಲಿ ತಯಾರಾಗಿರುವ ಕಾವ್ಯ ವೇದಿಕೆಯನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡರು. ಚಲನವಿನ್ಯಾಸ ಏಕೋಪ್ರವಾಹದ್ದಾಗಿತ್ತು. ಸೋಮಣ್ಣ (ಪಿಟೀಲು), ವೇಣುಗೋಪಾಲ್ (ಕೊಳಲು) ಮತ್ತು ಪುರುಷೋತ್ತಮ್ (ಮೃದಂಗ) ಅವರ ಸಹಕಾರದೊಂದಿಗೆ  ತಂಜಾವೂರು ಶಿವಾನಂದ ಪಿಳ್ಳೈ ಅವರ ಆನಂದಭೈರವಿ ವರ್ಣ (ಸಖಿಯೇ ಇಂದ ವೇಳೆ ಜಾಲಂ)ವನ್ನು ವಿಶದಪಡಿಸಿದರು.ವಿರಹೋತ್ಕಂಠಿತ ನಾಯಕಿಯು ಸಖಿಯೊಡನೆ ತನ್ನ ಭಾವನೆ  ಹಂಚಿಕೊಳ್ಳುವ ಸನ್ನಿವೇಶವನ್ನು ಸುಂದರವಾಗಿ ಪ್ರಸ್ತುತ ಪಡಿಸಿದರು. ಕನಕದಾಸರ  `ಬಾಗಿಲನು ತೆರೆದು~  ಭಕ್ತಿಯ ಪರಾಕಾಷ್ಠೆಯನ್ನು ನವಿರಾಗಿ ಬೆಳಗಿಸಿತು. ಬೃಂದಾವನಿ ತಿಲ್ಲಾನದಲ್ಲಿ ಗಟ್ಟಿಯಾದ ಲಯ ತುಂಬಿತ್ತು. ಕಲಾಬದ್ಧತೆ

ನಂತರ ಗುರು ಅಶೋಕ್‌ಕುಮಾರ್ ಅವರ ಶಿಷ್ಯೆ ಭಾರ್ಗವಿ ಪಾರ್ಸಮ್‌ಅವರ ಭರತನಾಟ್ಯದಲ್ಲಿ ಅವರ ಕಠಿಣ ಸಾಧನೆ ಮತ್ತು ಕಲಾಬದ್ಧತೆಯನ್ನು ಪ್ರದರ್ಶಿಸಿದರು.

ಪುಷ್ಪಾಂಜಲಿಯನ್ನು ಅನುಸರಿಸಿ ಗಣೇಶನ ಕುರಿತಾದ  ವರವಲ್ಲಭ (ಹಂಸಧ್ವನಿ) ರಚನೆಯು ಅವರ ನೃತ್ತ ಮತ್ತು ಅಭಿನಯಗಳ ಬಗೆಗೆ ಸದಭಿಪ್ರಾಯವನ್ನು ತೆರೆದಿಟ್ಟಿತು.

ಗುರು ಅಶೋಕ್ ಕುಮಾರ್ (ನಟುವಾಂಗ), ಭಾರತೀ ವೇಣುಗೋಪಾಲ್ (ಗಾಯನ), ವೇಣುಗೋಪಾಲ್ (ಕೊಳಲು) ಮತ್ತು ಎಸ್.ವಿ. ಬಾಲಕೃಷ್ಣ (ಮೃದಂಗ) ಅವರ ಸಹಕಾರದೊಂದಿಗೆ ಭಾರ್ಗವಿ ಅವರು ತಂಜಾವೂರು ಸೋದರರ ಶಂಕರಾಭರಣ ವರ್ಣವನ್ನು ವಿಸ್ತಾರವಾಗಿ ಸಾದರಪಡಿಸಿದರು. ನಾಯಕಿಯು  ಸಂಗಾತಿಯ ಬಳಿ ಪ್ರೀತಿ ನಿವೇದಿಸುವ ವಿಷಯವಸ್ತುವನ್ನು ಆತ್ಮೀಯವಾಗಿ ಭಾರ್ಗವಿ ನಿರೂಪಿಸಿದರು. ಅವರ ನೃತ್ತ, ನೃತ್ಯ ಮತ್ತು ಅಭಿನಯ ಅದಕ್ಕೆ ಪೂರಕವಾಗಿಯೂ ರೂಪುಗೊಂಡಿತ್ತು.ಲೀಲಾಜಾಲ ನಿರೂಪಣೆ

ನೃತ್ಯೋತ್ಸವದ ಎರಡನೆಯ ದಿನ ಹಿರಿಯ ಗುರು ಪದ್ಮಿನಿ ರಾಮಚಂದ್ರನ್ ಅವರ ಪ್ರತಿಭಾನ್ವಿತ ಶಿಷ್ಯೆ ಮಿನು ಮಿಥುನ್ ಶಾಂ ಅವರು ಖಮಾಚ್ ವರ್ಣ ( ಸ್ವಾಮಿನಿ ರಮ್ಮನವೇ) ವನ್ನು ಪ್ರಬುದ್ಧವಾಗಿ ಮಂಡಿಸಿದರು. ಪದ್ಮಿನಿ ಅವರ ಪ್ರೇರಕ ನಟುವಾಂಗದ ಬೆಂಬಲದೊಂದಿಗೆ ಅವರು ಅಡುವು, ಜತಿಗಳು ಮತ್ತು ಸ್ವರ ವೈವಿಧ್ಯಗಳಿಂದ ಪೋಣಿಸಲಾಗಿದ್ದ ನೃತ್ತವನ್ನು ಲೀಲಾಜಾಲವಾಗಿ ನಿರ್ವಹಿಸಿದರು.

 

ಕ್ಲಿಷ್ಟ ಜತಿಗಳು, ಕರಣಗಳು ಮತ್ತು ಭಂಗಿಗಳು ಅವರ ಸಾಧನೆಗೆ ಕನ್ನಡಿ ಹಿಡಿದವು.

ಕೃಷ್ಣ ಮತ್ತು ಯಶೋದೆಯರನ್ನು ಒಳಗೊಂಡ ವಾತ್ಸಲ್ಯ ಭಾವ ಮತ್ತು ರಸೋತ್ತೇಜಕ ಪ್ರಸಂಗವನ್ನು ತಮಿಳು ಪದ (ಎನ್ನ ತವಂ ಸೈದನೆ, ಕಾಪಿ ರಾಗ) ಪಠ್ಯಕ್ಕನುಗುಣವಾಗಿ ಅಭಿನಯಿಸಿದರು. ಬಾಲಕೃಷ್ಣನ ಚೇಷ್ಟೆಗಳು, ಸಹನಶೀಲ ತಾಯಿಯ ವಾತ್ಸಲ್ಯ ತೋರುವಲ್ಲಿ ಮಿನು ಅವರು ಅಪಾರ ಯಶಗಂಡರು.ಗುರು ಪದ್ಮಿನಿ ರಾಮಚಂದ್ರ (ನಟುವಾಂಗ), ರಮೇಶಚಡಗ (ಗಾಯನ), ನರಸಿಂಹಮೂರ್ತಿ (ಕೊಳಲು) ಮತ್ತು ಜನಾರ್ದನ ರಾವ್ (ಮೃದಂಗ) ಅವರ ಸಫಲ ಸಹಕಾರದೊಂದಿಗೆ ಸುಪರಿಚಿತ ಶೃಂಗಪುರಾಧೀಶ್ವರೀ ಶಾರದೆಯ (ಕಲ್ಯಾಣಿ) ಬೆಡಗು, ಲಾವಣ್ಯ ಮತ್ತು ಹಿರಿಮೆಗಳನ್ನು ತಮ್ಮ ಅಭಿನಯದಲ್ಲಿ ಅವರು ಸೆರೆಹಿಡಿದರು.ವಿಂಧ್ಯಾ ಶರತ್ ಅವರು ಗುರು ರೇವತೀ ನರಸಿಂಹನ್ (ನಟುವಾಂಗ), ಭಾರತೀ ವೇಣುಗೋಪಾಲ್ (ಗಾಯನ), ಕಾರ್ತಿಕ್ (ಕೊಳಲು) ಮತ್ತು ಜನಾರ್ದನ್ ರಾವ್ (ಮೃದಂಗ) ಅವರ ಪಕ್ಕವಾದ್ಯಗಳೊಂದಿಗೆ ಭೈರವಿ ವರ್ಣ (ಮೋಹಮಾಯ)ವನ್ನು ಸುಲಲಿತವಾಗಿ ಅನಾವರಣಗೊಳಿಸಿದರು.ಮಿಂಚಿದ ಭರತನಾಟ್ಯ

ಚಿರಪರಿಚಿತ ನಟ, ಬೋಧಕ, ಸಂಯೋಜಕ ಹಾಗೂ ನುರಿತ ಭರತನಾಟ್ಯ ಪ್ರತಿಪಾದಕ ಶಿವಪ್ರಿಯ ನಾಟ್ಯ ಸಂಸ್ಥೆಯ ಗುರು ಡಾ. ಸಂಜಯ್ ಶಾಂತಾರಾಂ ಅವರು ಮಲ್ಲೇಶ್ವರದ ಸೇವಾಸದನದಲ್ಲಿ ಮಂಗಳವಾರ ನಡೆದ ತಮ್ಮ ಭರತನಾಟ್ಯ ಪ್ರದರ್ಶನದಲ್ಲಿ ಮಿಂಚಿದರು. ಅವರ ಭಾವ, ರಾಗ ಮತ್ತು ತಾಳಗಳು ನಿಷ್ಕಳಂಕವಾಗಿದ್ದವು.ಉತ್ತಮ ಅಂಗಶುದ್ಧಿ, ಸಾರ್ಥಕ ಅಭಿನಯ ಕೌಶಲ್ಯ ಮತ್ತು ನಿರಾಯಾಸ ಚಲನವಲನಗಳು ರಂಜಿಸಿದವು. ವೇದಿಕೆಯನ್ನು ಸಂಪೂರ್ಣವಾಗಿ ಬಳಸಿಕೊಂಡು ಕಣ್ತುಂಬಿದ ಮತ್ತು ಕಣ್ಸೆಳೆದ ಅನೇಕ ಭಂಗಿಗಳು ಮತ್ತು ಮಾದರಿಗಳನ್ನು ಅವರು ಕಡೆದರು. ಸ್ವಂತರಚನೆ `ಗಜವದನ ಸರಸೀರುಹಂ~ (ಸರಸ್ವತಿ) ಮೂಲಕ ಗಣೇಶನನ್ನು ಸ್ತುತಿಸಿ ಪಾಪನಾಶಂ ಶಿವನ್ ಅವರ ನಾಟ್ಟಿಕುರಂಜಿ ವರ್ಣ (ಸ್ವಾಮಿ ನಾನ್ ಉಂದನ್)ದಲ್ಲಿ ಭಕ್ತಿಭಾವವನ್ನು ರಸಮಯವಾಗಿ ತೋರಿದರು.

 

45 ನಿಮಿಷಗಳ ಅವರ ಮಂಡನೆಯಲ್ಲಿ ತಾಂಡವ ಪ್ರಧಾನ ಚಲನೆಗಳು, ನೃತ್ತ, ನೃತ್ಯ ಮತ್ತು ಅಭಿನಯ ರಸಿಕರನ್ನು ಮೆಚ್ಚಿಸಿತು. ಬಾಗಿಲನು ತೆರೆದು (ಮಿಶ್ರ ಹಿಂದೋಳ) ಮತ್ತೊಮ್ಮೆ ಭಕ್ತಿಭಾವದ ಗರಿಮೆಯನ್ನು ಗಟ್ಟಿಗೊಳಿಸಿ ಗಜೇಂದ್ರಮೋಕ್ಷ, ದ್ರೌಪದಿ ಮಾನಸಂರಕ್ಷಣೆ ಮುಂತಾದ ಪ್ರಸಂಗಗಳು ಸಾರ್ಥಕ ಸಂಚಾರಿಗಳಾಗಿ ಪ್ರಭಾವ ಬೀರಿದವು. ಜಯದೇವನ ಅಷ್ಟಪದಿಯಲ್ಲಿ ಅವರ ಅಭಿನಯ ಭಾವಪೂರ್ಣವಾಗಿತ್ತು.ಪ್ರಶಂಸಾರ್ಹ ಪ್ರದರ್ಶನ

ಗುರು-ಶಿಷ್ಯ ಪರಂಪರೆಯಂತೆ ತಾಯಿ-ಮಗಳ ಸಂಯೋಗವೂ ಕಲಾ ಪ್ರಪಂಚದಲ್ಲಿ ಗಮನಾರ್ಹವಾದುದು. ನೃತ್ಯ ಕ್ಷೇತ್ರದಲ್ಲಿ ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಇಂತಹ ಸುಯೋಗವನ್ನು ಅಂದರೆ ತಾಯಿಯೇ ಗುರುವಾಗಿ ಮಗಳು ಅವರ ನೃತ್ಯ ಮಾಧ್ಯಮವನ್ನು ತನ್ನದಾಗಿಸಿಕೊಂಡು ಪ್ರಶಂಸಾರ್ಹ ಪ್ರದರ್ಶನಗಳನ್ನು ನೀಡುವಂತಹ ಸನ್ನಿವೇಶಗಳನ್ನು ಬೆಳಕಿಗೆ ತರುವಂತಹ ಅಭಿನಂದನೀಯ ಮಾಸಿಕ ಕಾರ್ಯಕ್ರಮ ಸರಣಿಯೊಂದು ಶೇಷಾದ್ರಿಪುರದ ಲಿಂಕ್‌ರಸ್ತೆಯಲ್ಲಿರುವ ಕೇಶವ ಕಲ್ಪದಲ್ಲಿ ಫೆ.19ರಂದು ಆರಂಭಗೊಂಡಿತು.ಸಾಧನ ಸಂಗಮದ ಗುರುಜ್ಯೋತಿ ಪಟ್ಟಾಭಿ ಅವರ ಮಗಳು- ಶಿಷ್ಯೆ ಸಾಧನಾ ಅವರ ಭರತನಾಟ್ಯವು ಸರಳ, ವಿಶದ ಮತ್ತು ರಮ್ಯವಾಗಿತ್ತು. ಅವರು ನಿರೂಪಿಸಿದ ಪುಷ್ಪಾಂಜಲಿ, ದೇವೀಸ್ತುತಿ (ನವಶಕ್ತಿಗಳ ಚಿತ್ರಣ), ದ್ರೌಪದಿಗೆ ಉದಾತ್ತ ಅಣ್ಣನಾಗಿ ವರ್ತಿಸಿ ಆಕೆಯನ್ನು ಸಂರಕ್ಷಿಸಿದ ಶ್ರಿಕೃಷ್ಣನ ಗುಣಗಾನದ ಅಪರೂಪದ ಪದವರ್ಣ (ದೇವದತ್ತ ಸಹೋದರ, ರಾಗಮಾಲಿಕೆ, ಡಾ.ಗಣೇಶ್)ದ ಮಂಡನೆಯಲ್ಲಿ ಸಾಧನಾ ಅವರ ನೃತ್ತ, ನೃತ್ಯ ಮತ್ತು ಅಭಿನಯಗಳು ಸೊಗಸೆನಿಸಿದವು. ಅಂತೆಯೇ ದಾಸರ `ತಾಳೋ ತಾಳೆಲೊ~ ಪದಾಭಿನಯದಲ್ಲಿ ಬಾಲಕೃಷ್ಣನ ಲೀಲೆಗಳು ಆತ್ಮೀಯವಾಗಿದ್ದವು.

ತಂಬೂರಿ ಮೀಟಿದವನ ಭಾಗ್ಯದ ವರ್ಣನೆಯೊಂದಿಗೆ ಅವರ ಕಾರ್ಯಕ್ರಮ ಸಮಾಪ್ತವಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry