ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಲೇಖಕರಿಂದ ಪ್ರಶಸ್ತಿ ವಾಪಸ್

ಪ್ರೊ. ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣ ತನಿಖೆ ವಿಳಂಬದ ಆರೋಪ
Last Updated 3 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಆರು ಯುವ ಲೇಖಕರು ತಾವು ಪಡೆದಿದ್ದ 2010ನೇ ಸಾಲಿನ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ‘ಅರಳು ಸಾಹಿತ್ಯ ಪ್ರಶಸ್ತಿ’ಯನ್ನು ಶನಿವಾರ ಹಿಂದಿರುಗಿಸಿದರು.

ಬೆಳಗಾವಿಯ ವೀರಣ್ಣ ಮಡಿವಾಳರ, ಮಂಡ್ಯದ ಟಿ. ಸತೀಶ್ ಜವರೇಗೌಡ, ಧಾರವಾಡದ ಸಂಗಮೇಶ ಮೆಣಸಿನಕಾಯಿ, ಉತ್ತರ ಕನ್ನಡದ ಹನುಮಂತ ಹಾಲಿಗೇರಿ, ರಾಯಚೂರಿನ ಚಿದಾನಂದ ಸಾಲಿ, ಶ್ರೀದೇವಿ ವಿ. ಆಲೂರ ಪ್ರಶಸ್ತಿ ವಾಪಸು ಮಾಡಿದವರು. ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಈ ಪ್ರಶಸ್ತಿಕನ್ನಡ ಸಾಹಿತ್ಯ ಪರಿಷತ್ತು ನೀಡುತ್ತದೆ.
ಐವರು ಲೇಖಕರು ಸಾಹಿತಿ ಚಂದ್ರಶೇಖರ ಪಾಟೀಲ ಅವರೊಂದಿಗೆ ಬೆಳಿಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರನ್ನು ಭೇಟಿ ಮಾಡಿ, ಪ್ರಶಸ್ತಿ ಪತ್ರ, ಫಲಕ ಮತ್ತು ₹ 10 ಸಾವಿರ ನಗದು ಪುರಸ್ಕಾರದ ಚೆಕ್‌ನ್ನು ಹಿಂದಿರುಗಿಸಿದರು.

ಈ ವೇಳೆ ಹಾಲಂಬಿ ಅವರು ಪ್ರಶಸ್ತಿ ಹಿಂತಿರುಗಿಸದಂತೆ ಐದು ಜನರ ಮನವೋಲಿಸಲು ಪ್ರಯತ್ನ ಪಟ್ಟರಾದರೂ, ಅದು ಸಾಧ್ಯವಾಗಲಿಲ್ಲ. ‘ಕಲಬುರ್ಗಿ ಅವರು ನಮ್ಮ ಆರು ಜನರಿಗೂ ತುಂಬಾ ಆಪ್ತವಾಗಿದ್ದವರು. ಈ ಪ್ರಶಸ್ತಿಯನ್ನು ಅವರ ಸಮ್ಮುಖದಲ್ಲಿ ಪಡೆದ ಖುಷಿ,  ಸಾರ್ಥಕತೆ ನಮ್ಮಲ್ಲಿತ್ತು.  ಅವರ ಹತ್ಯೆ ಖಂಡಿಸಿ ಈ ಪ್ರಶಸ್ತಿ ವಾಪಸ್ ನೀಡಿದ್ದೇವೆ’ ಎಂದು  ವೀರಣ್ಣ ಮಡಿವಾಳರ ಹೇಳಿದರು.

ಕಣ್ಣೀರಿಟ್ಟ ಕಲಬುರ್ಗಿ ಪತ್ನಿ
ಧಾರವಾಡ: ‘ಒಂದು ತಿಂಗಳು ಕಳೆದರೂ ಪತಿಯ ಹಂತಕರು ಪತ್ತೆಯಾಗದೇ ಇರುವುದು ತೀವ್ರ ಬೇಸರ ತಂದಿದೆ’ ಎಂದು ಡಾ.ಎಂ.ಎಂ. ಕಲಬುರ್ಗಿ ಅವರ ಪತ್ನಿ ಉಮಾದೇವಿ, ತಮ್ಮನ್ನು ಶನಿವಾರ ಭೇಟಿಯಾದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಅವರ ಎದುರು ಕಣ್ಣೀರಿಟ್ಟರು.

ಇಲ್ಲಿನ ಕಲ್ಯಾಣ ನಗರದಲ್ಲಿರುವ ಡಾ. ಕಲಬುರ್ಗಿ ಅವರ ನಿವಾಸಕ್ಕೆ ಭೇಟಿ, ಕುಟುಂಬದ ಸದಸ್ಯರಿಗೆ  ಸಾಂತ್ವನ ಹೇಳಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹರಿಪ್ರಸಾದ್‌, ‘ಡಾ.ಕಲಬುರ್ಗಿ ಹಂತಕರು ನಾಥೂರಾಮ್‌ ಗೋಡ್ಸೆ ಜಾತಿಗೆ ಸೇರಿದವರು. ಹಿರಿಯ ಚಿಂತಕನನ್ನು ಹತ್ಯೆಗೈದವರು ಯಾವುದೇ ಧರ್ಮ, ಪ್ರಾಂತ್ಯ, ವಿಚಾರಕ್ಕೆ ಸೇರಿದವರಲ್ಲ. ಆದರೆ, ಈಗ ಧರ್ಮದ ಹೆಸರಿನಲ್ಲಿ ಶೋಷಣೆ, ಗಲಭೆ ನಡೆಸುತ್ತಿರುವವರು ತಾಲಿಬಾನಿಗಳು’ ಎಂದು ಜರಿದರು.  ಹಂತಕರ ಪತ್ತೆಗಾಗಿ ತನಿಖೆ ನಡೆಯುತ್ತಿದ್ದು, ಸಿಐಡಿ ಅಧಿಕಾರಿಗಳು ಶೀಘ್ರವೇ ಆರೋಪಿಗಳನ್ನು ಪತ್ತೆ ಹಚ್ಚುವ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT