ಭಾನುವಾರ, ಜೂನ್ 20, 2021
23 °C

ಯುವ ವಕೀಲರಿಗೆ ಶಿಕ್ಷಣ: ರಾಜ್ಯಪಾಲರ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ‘ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ ನಾನು ಸಾಕಷ್ಟು ವಿಚಾರ ಕಲಿತಿದ್ದೇನೆ. ರಾಜ್ಯಪಾಲ ಗಾದಿಯ ಅವಧಿ ಮುಗಿದ ಬಳಿಕ ನಾನು ಯುವ ವಕೀಲರಿಗೆ ಶಿಕ್ಷಣ ಕೊಡಬೇಕೆಂಬ ತೀರ್ಮಾನ ಮಾಡಿದ್ದು, ಅದಕ್ಕಾಗಿ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ತೆರೆದಿದ್ದೇನೆ’ ಎಂದು ರಾಜ್ಯಪಾಲ ಹಂಸರಾಜ ಭಾರದ್ವಾಜ್‌ ತಿಳಿಸಿದರು.ಮಂಗಳವಾರ ಹಾಸನಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿದರು.‘ನಾನು ಯಾವತ್ತೂ ಚುನಾವಣಾ ರಾಜಕೀಯಕ್ಕೆ ಬಂದವನಲ್ಲ. ಮೂರು– ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಒಂದೂ ಚುನಾವಣೆ ಎದುರಿಸಿಲ್ಲ. ರಾಜ್ಯಸಭೆ ಮೂಲಕವೇ ಪ್ರವೇಶ ಪಡೆದು ಕೇಂದ್ರದ ಸಚಿವನೂ ಆಗಿದ್ದೆ. ಮುಂದೆಯೂ ಚುನಾವಣಾ ರಾಜಕೀಯಕ್ಕೆ ಇಳಿಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.ಕರ್ನಾಟಕದಲ್ಲಿನ ಐದು ವರ್ಷಗಳ ಅನುಭವ ಹೇಗಿತ್ತು ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕರ್ನಾಟಕದ ಕಲೆ, ಸಂಸ್ಕೃತಿ ಶ್ರೀಮಂತವಾದುದು. ಪಕ್ಕದ ಕೇರಳ, ತಮಿಳುನಾಡಿನಲ್ಲೂ ನಾನು ಪ್ರವಾಸ ಮಾಡಿದ್ದೇನೆ. ಈ ಎಲ್ಲ ರಾಜ್ಯಗಳೂ ಒಂದೊಂದು ರೀತಿಯಲ್ಲಿ ವಿಶಿಷ್ಟವಾದವುಗಳು. ಜನರೂ ಅಷ್ಟೇ ಬುದ್ಧಿವಂತರು. ದೇಶದ ಅಭಿವೃದ್ಧಿಗೆ ಕರ್ನಾಟಕದ ಹಿರಿಯರು ನೀಡಿರುವ ಕಾಣಿಕೆ ಮರೆಯಲು ಸಾಧ್ಯವಿಲ್ಲ. ಯುವಜನರು ಈ ವಿಚಾರ ಮನನ ಮಾಡಿಕೊಂಡು ರಾಜ್ಯ ಮತ್ತು ದೇಶವನ್ನು ಇನ್ನಷ್ಟು ಶ್ರೀಮಂತಗೊಳಿಸುವ ಕೆಲಸ ಮಾಡಬೇಕು’ ಎಂದರು.‘ಕುವೆಂಪು ನನಗೆ ಪ್ರಿಯವಾದ ಲೇಖಕ. ಅವರು ಹುಟ್ಟಿದ ಊರು, ಇದ್ದ ಮನೆ ಕವಿಶೈಲ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಲು ಹೊರಟಿದ್ದೇನೆ. ಎಲ್ಲವನ್ನೂ ನೋಡಿಕೊಂಡು ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದೇನೆ. ಇದು ನನಗೆ ಅತಿ ಪ್ರಿಯವಾದ ಪ್ರವಾಸ’ ಎಂದು ತಿಳಿಸಿದರು.ರಾಜಕೀಯದ ಬಗ್ಗೆ ಮಾತನಾಡಲು ನಿರಾಕರಿಸಿದ ಅವರು, ‘ಚುನಾವಣೆ ಸಮಯವಾಗಿರುವುದರಿಂದ ಯಾವುದೇ ರಾಜಕೀಯ ಪಕ್ಷ ಅಥವಾ ಮುಖಂಡರ ಬಗ್ಗೆ ಹೇಳಿಕೆ ನೀಡಲು ಇಚ್ಛಿಸುವುದಿಲ್ಲ. ಚುನಾವಣೆ ಶಾಂತಿಯುತವಾಗಿ ನಡೆಯುವುದು ಮುಖ್ಯ. ಇದರಲ್ಲೇ ಪ್ರಜಾಪ್ರಭುತ್ವದ ಯಶಸ್ಸು ಅಡಗಿದೆ’ ಎಂದು ಹೇಳಿದರು.ರಾಜ್ಯಪಾಲರಾಗಿದ್ದ ಅವಧಿಯಲ್ಲಿ ತಮ್ಮ ಬಗ್ಗೆ ಬಂದಿರುವ ಟೀಕೆಗಳ ಬಗ್ಗೆ ಉಲ್ಲೇಖಿಸಿದ ಅವರು, ‘ರಾಜಕೀಯದಲ್ಲಿ ಟೀಕೆ– ಟಿಪ್ಪಣಿ ಸಾಮಾನ್ಯ. ಆ ಬಗ್ಗೆ ಯಾವತ್ತೂ ತಲೆಕೆಡಿಸಿಕೊಂಡಿಲ್ಲ.ನಾನೂ ಕೇಂದ್ರದಲ್ಲಿ ಸಚಿವನಾಗಿದ್ದವನು. ಇಂಥ ಅನೇಕ ಟೀಕೆಗಳನ್ನು ಎದುರಿಸಿದ್ದೇನೆ. ಬಂಗಾರಪ್ಪ, ರಾಮಕೃಷ್ಣ ಹೆಗಡೆ, ಜೆ.ಎಚ್‌. ಪಟೇಲ್‌ ಮುಂತಾದವರು ಮುಖ್ಯಮಂತ್ರಿಗಳಾಗಿದ್ದಾಗ ನಾನು ಕೇಂದ್ರದಲ್ಲಿ ಸಚಿವನಾಗಿದ್ದೆ. ರಾಜ್ಯದ ಜತೆಗೆ ಅಂದಿನಿಂದಲೇ ನನಗೆ ಸಂಪರ್ಕ ಇತ್ತು’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.