`ಯುವ ಶಕ್ತಿ ಕೇಂದ್ರಿತ ಕಾರ್ಯಕ್ರಮ ರೂಪಿಸಿ'

7

`ಯುವ ಶಕ್ತಿ ಕೇಂದ್ರಿತ ಕಾರ್ಯಕ್ರಮ ರೂಪಿಸಿ'

Published:
Updated:

ಕೊಪ್ಪಳ: ಜಿಲ್ಲೆಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ನೆಹರು ಯುವ ಕೇಂದ್ರದ ವತಿಯಿಂದ ಯುವ ಶಕ್ತಿಯನ್ನು ಸತ್ಕಾರ್ಯಗಳಿಗೆ ಪ್ರೇರೇಪಿಸುವಂತಹ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ನೆಹರು ಯುವ ಕೇಂದ್ರದ ಸಲಹಾ ಸಮಿತಿ ಸಭೆಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ಯುವ ಜನೋತ್ಸವ, ಗ್ರಾಮೀಣ ಕ್ರೀಡಾಕೂಟಗಳು, ಯುವ ಜನ ಮೇಳದಂತಹ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇದೇ ರೀತಿ ನೆಹರು ಯುವ ಕೇಂದ್ರದ ವತಿಯಿಂದಲೂ ಯುವಜನ ಶಕ್ತಿ ಕೇಂದ್ರಿತ ಕಾರ್ಯಕ್ರಮಗಳನ್ನು ರೂಪಿಸಬೇಕು. ಇದಕ್ಕಾಗಿ ಈ ವರ್ಷದ ಕ್ರಿಯಾ ಯೋಜನೆಯಲ್ಲಿ ಕಾರ್ಯಕ್ರಮಗಳನ್ನು ಅಳವಡಿಸುವಂತೆ ಸೂಚನೆ ನೀಡಿದರು.ಸೇನೆಯಲ್ಲಿ ಭರ್ತಿಗಾಗಿ ನಡೆಯುವ ರ‌್ಯಾಲಿಯಂತಹ ದೈಹಿಕ ಸಾಮರ್ಥ್ಯ ಆಧಾರಿತ ನೇಮಕಾತಿ ಪರೀಕ್ಷೆಗಳಲ್ಲಿ ಜಿಲ್ಲೆಯ ಅಭ್ಯರ್ಥಿಗಳು ಅರ್ಹತೆ ಗಿಟ್ಟಿಸಲು ವಿಫಲರಾಗುತ್ತಿರುವುದು ಕಂಡು ಬರುತ್ತಿದೆ. ಜಿಲ್ಲೆಯ ಅಭ್ಯರ್ಥಿಗಳಿಗೆ ಗ್ರಾಮೀಣ ಮಟ್ಟದಲ್ಲಿಯೂ ಉತ್ತಮ ದೈಹಿಕ ತರಬೇತಿ ಪಡೆಯಲು ಸಾಧ್ಯವಾಗುವಂತೆ ಮಾಡಲು ನೆಹರು ಯುವ ಕೇಂದ್ರದಿಂದ ಮೊದಲ ಹಂತವಾಗಿ ಜಿಲ್ಲೆಯ 5 ಗ್ರಾಮಗಳನ್ನು ಆಯ್ಕೆ ಮಾಡಬೇಕು. ಅಲ್ಲಿ ದೈಹಿಕ ಸಾಮರ್ಥ್ಯ ವೃದ್ಧಿಸಲು ತರಬೇತಿ ನೀಡುವಂತಹ ಯೋಜನೆ ರೂಪಿಸಬೇಕು, ಅಲ್ಲದೇ, ಜಿಲ್ಲೆಯ 3 ಗ್ರಾಮಗಳಲ್ಲಿ ಬಾಲಕಿಯರಿಗಾಗಿ ಕೊಕ್ಕೊ ಕ್ರೀಡಾಂಗಣ ಅಭಿವೃದ್ಧಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.ಕೇಂದ್ರದ ಕಚೇರಿಯನ್ನು ಈಗಿರುವ ಬಾಡಿಗೆ ಕಟ್ಟಡದಿಂದ ಜಿಲ್ಲಾ ಕ್ರೀಡಾಂಗಣಕ್ಕೆ ಸ್ಥಳಾಂತರಿಸಿ, ಅದೇ ಬಾಡಿಗೆ ಹಣವನ್ನು ಜಿಲ್ಲಾ ಕ್ರೀಡಾಂಗಣ ಸಮಿತಿಗೆ ಪಾವತಿಸಬೇಕು. ಇದರಿಂದ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ಸಂಪನ್ಮೂಲ ಕ್ರೋಢೀಕರಣವಾಗುತ್ತದೆ. ಜಿಲ್ಲಾ ಕ್ರೀಡಾಂಗಣದಲ್ಲಿ ಮಹಿಳಾ ವ್ಯಾಯಾಮ ಶಾಲೆ ಪ್ರಾರಂಭಿಸಬೇಕೆನ್ನುವ ಯೋಜನೆಗೂ ಸಹಕಾರಿಯಾಗಲಿದೆ ಎಂದು ಹೇಳಿದರು.

ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಮಾಲತಿ ಗಾಯಕವಾಡ್ ಮಾತನಾಡಿ, ಕೇಂದ್ರವು ಜಿಲ್ಲೆಯಲ್ಲಿ ಕೈಗೊಂಡಿರುವ ಚಟುವಟಿಕೆ ಕುರಿತು ವಿವರಿಸಿದರು.ಕೇಂದ್ರದ ಸಲಹಾ ಸಮಿತಿ ಸದಸ್ಯರಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹಾದೇವ ಸ್ವಾಮಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿ.ಎನ್.ಘಾಡಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂ ರಾವ್ ಬಿ.ವಿ., ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಚ್.ಎಸ್.ಅಂಗಡಿ, ಸ್ವಯಂ ಸೇವಾ ಸಂಸ್ಥೆ ಪ್ರತಿನಿಧಿಗಳಾದ ಜಿ.ಎಸ್.ಗೋನಾಳ, ರಾಕೇಶ್ ಕಾಂಬ್ಳೇಕರ್ ಸಭೆಯಲ್ಲಿ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry