ಯುವ ಸಂಸತ್: ಸಿಎಂ ಕಾಲೆಳೆದ ವಿರೋಧ ಪಕ್ಷದವರು..

7

ಯುವ ಸಂಸತ್: ಸಿಎಂ ಕಾಲೆಳೆದ ವಿರೋಧ ಪಕ್ಷದವರು..

Published:
Updated:

ಕೊಪ್ಪಳ: ‘ಕಾಂಗ್ರೆಸ್‌ನೊಳಗೆ ಕಾಣದಂತೆ ಜನತಾ ಪರಿವಾರ ದವರನ್ನಿಟ್ಟು, ತಮ್ಮ ಆಪ್ತರಿಗೆ ಆಯಕಟ್ಟಿನ ಜಾಗಕೊಟ್ಟು ‘ಅಮ್ಮ’ನ ಅಂಕಿತವ ಪಡೆದು. ನಿಮ್ಮ ಸರ್ಕಾರ ರಚನೆ ವೈಖರಿಗೆ ಬೆರಗಾದೆ ಸಿದ್ದರಾಮಣ್ಣ...’

ಹೀಗೆಂದು ‘ವಿರೋಧ ಪಕ್ಷದ ಸದಸ್ಯ’ರು ಮುಖ್ಯಮಂತ್ರಿ ‘ಸಿದ್ದರಾಮಯ್ಯ’ ಅವರನ್ನು ಕಾಲೆಳೆದರು.ಕೂಡಲೇ ಕೋಪಗೊಂಡು ಮೇಲೆದ್ದು ಶಾಲು ಕೊಡವಿದ ‘ಸಿದ್ದರಾಮಯ್ಯ’, ‘ರೀ ಸದಸ್ಯರೇ ಹೀಗೆಲ್ಲಾ ಹೇಳಿ ನಮ್ಮ ಪಕ್ಷದೊಳಗೆ ಒಡಕುಂಟು ಮಾಡಬೇಡಿ. ನಾವೆಲ್ಲಾ ಒಂದೇ ಮನೆಯ ಸದಸ್ಯರಂತೆ ಇದ್ದೇವೆ. ನಮ್ಮೊಳಗೆ ಕಿತ್ತಾಟ ತರುವ ಪ್ರಯತ್ನ ಬೇಡ’ ಎಂದು ತಿರುಗೇಟು ನೀಡಿದರು. –ಈ ಪ್ರಸಂಗ ನಡೆದದ್ದು ಜಿಲ್ಲಾ ಪಂಚಾಯಿತಿ ಸಭಾಂಗಣ ದಲ್ಲಿ ಮಂಗಳವಾರ ನಡೆದ ಯುವ ಸಂಸತ್‌ ಸ್ಪರ್ಧೆಯಲ್ಲಿ. ವರ್ತಟ್ನಾಳ್‌ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಚರ್ಚೆಯ ವರಸೆ ಇದು.ಮರದೊಳಗೆ ಮಂದಾಗ್ನಿಯನ್ನಿಟ್ಟೆ, ಹಾಲೊಳಗೆ ಕಾಣದಂತೆ ತುಪ್ಪವನಿಟ್ಟೆ, ದೇಹದೊಳಗೆ ಆತ್ಮವನು ಕಾಣದಂತಿಟ್ಟೆ... ರಾಮನಾಥಾ ಎಂಬ ವಚನವೊಂದನ್ನು ತಿರುಚಿ ಸಿಎಂ ಕಾಲೆಳೆದ ಬಗೆಗೆ ಸಭೆ ಮೆಚ್ಚುಗೆ ಸೂಚಿಸಿತು.

ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಮತ್ತು ಅದಕ್ಕೆ ಕೈಗೊಂಡ ಕ್ರಮಗಳ ಬಗ್ಗೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಕೊರತೆ ಬಗ್ಗೆ ವಿರೋಧ ಪಕ್ಷದವರಿಂದ ಪುಂಖಾನುಪುಂಖವಾಗಿ ಪ್ರಶ್ನೆಕೇಳಿಬಂದವು.ಅದಕ್ಕೆ ಈಗಾಗಲೇ ಲಿಖಿತ ಉತ್ತರ ನೀಡಿದ್ದೇವೆ ಎಂದು ಪಕ್ಕಾ ವೃತ್ತಿಪರ ರಾಜಕಾರಣಿಗಳಂತೆ ವಿದ್ಯಾರ್ಥಿ ರಾಜಕಾರಣಿಗಳು ಪ್ರತಿಕ್ರಿಯಿಸಿದರು. ಕೊನೆಗೆ ಅರಣ್ಯ ಇಲಾಖೆಯಿಂದ ಮಾನವ–ಪ್ರಾಣಿ ಸಂಘರ್ಷ ತಡೆಗೆ ಕೈಗೊಂಡ ಕ್ರಮಗಳ ಬಗ್ಗೆ ಸದಸ್ಯರು ಪ್ರಶ್ನಿಸಿದಾಗ ಅರಣ್ಯ ಇಲಾಖೆ ‘ಸಚಿವ’ರು ಒಂದಿಷ್ಟು ಅಂಕಿ– ಅಂಶ ಕೊಟ್ಟು ಕೈತೊಳೆದುಕೊಳ್ಳಲು ಯತ್ನಿಸಿದರು. ಈ ಸಂದರ್ಭ ಮಾನವ –ಪ್ರಾಣಿ ಸಂಘರ್ಷ ನಿಜಕ್ಕೂ ಸದಸ್ಯರೊಳಗೆ ‘ಸಂಘರ್ಷ’ಕ್ಕೆ ಕಾರಣವಾಯಿತು.ಕಾಡು ಪ್ರಾಣಿ ದಾಳಿಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಹಾಗೂ ಮೃತಪಟ್ಟವರ ಕುಟುಂಬದವರಿಗೆ ರೂ 300 ಕೋಟಿ ಪರಿಹಾರ ನೀಡುವುದಾಗಿ ಘೋಷಿಸಿದ್ದೀರಿ. ಆದರೆ, ಇಲ್ಲಿ ಲಭ್ಯವಾಗಿರುವುದು ಬರೀ ಏಳು ಕೋಟಿ ರೂಪಾಯಿ. ಈ ದ್ವಂದ್ವ ನಿಲುವು ಏಕೆ ಎಂದು ವಿರೋಧ ಪಕ್ಷದವರು ಸಚಿವರನ್ನು ತರಾಟೆಗೆ ತೆಗೆದುಕೊಂಡರು. ಕೊನೆಗೂ ‘ಸಚಿವ’ರು, ಮುಖ್ಯಮಂತ್ರಿ ಸಮಜಾಯಿಷಿ ನೀಡುವುದರಲ್ಲಿ ಸುಸ್ತಾದರು.ಉದ್ಘಾಟನಾ ಸಮಾರಂಭದ ಬಳಿಕ ಯಲಬುರ್ಗಾ ತಾಲ್ಲೂಕು ಮಂಗಳೂರು ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಕಾರ್ಯಕ್ರಮದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿಪರೀತ ಶುಲ್ಕ ವಸೂಲಿಗೆ ಕಡಿವಾಣ ಹಾಕುವ ಬಗ್ಗೆ ಚರ್ಚೆ ನಡೆಯಿತು.

ಅಲೆಮಾರಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕ್ರಮ ಈ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಸಮಾಜ ಕಲ್ಯಾಣ ಸಚಿವರು ವಿದ್ಯಾಸಿರಿ ಯೋಜನೆ, ಹಾಸ್ಟೆಲ್‌ಗಳ ಅಕ್ರಮ ನಿವಾಸಿಗಳ ತೆರವಿಗೆ ಕ್ರಮ ಕೈಗೊಂಡ ಬಗ್ಗೆ ವಿವರಣೆ ನೀಡಿದರು.ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಶ್ರೀಗಂಧದ ಮರ ಕಳವಾಗಿರುವ ಬಗ್ಗೆ ಚರ್ಚೆ ನಡೆಯಿತು.ಸದನ ಆರಂಭಕ್ಕೂ ಮುನ್ನ ಇತ್ತೀಚೆಗೆ ನಿಧನರಾದ ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ, ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸ ಲಾಯಿತು.ಸದನದ ಕಲಾಪಗಳ ವಿವಿಧ ಹಂತಗಳನ್ನು ನಿರೂಪಿಸುವಲ್ಲಿ ವಿದ್ಯಾರ್ಥಿಗಳ ಪ್ರಯತ್ನ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry