ಮಂಗಳವಾರ, ನವೆಂಬರ್ 19, 2019
23 °C

ಯೂಕಿ, ಸೋಮದೇವ್ ಗೆಲುವಿನ ಕೇಕೆ

Published:
Updated:

ಬೆಂಗಳೂರು: ಕೆಚ್ಚೆದೆಯ ಪ್ರದರ್ಶನ ನೀಡಿದ ಸೋಮದೇವ್ ದೇವವರ್ಮನ್ ಮತ್ತು ಯೂಕಿ ಭಾಂಬ್ರಿ ಇಂಡೊನೇಷ್ಯಾ ವಿರುದ್ಧದ ಡೇವಿಸ್ ಕಪ್ ಟೆನಿಸ್ ಟೂರ್ನಿಯ ಏಷ್ಯಾ ಓಸೀನಿಯಾ `ಗುಂಪು-1'ರ ಪಂದ್ಯದಲ್ಲಿ ಭಾರತಕ್ಕೆ 2-0 ಅಂತರದ ಭರ್ಜರಿ ಮುನ್ನಡೆ ತಂದಿತ್ತರು.ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ಶುಕ್ರವಾರ ನಡೆದ ಎರಡೂ ಸಿಂಗಲ್ಸ್ ಪಂದ್ಯಗಳಲ್ಲಿ ಭಾರತದ ಆಟಗಾರರು ನೇರ ಸೆಟ್‌ಗಳ ಗೆಲುವು ಪಡೆದರು. ಮೊದಲ ಪಂದ್ಯದಲ್ಲಿ ಸೋಮದೇವ್ 6-1, 6-2, 6-2 ರಲ್ಲಿ ವಿಸ್ನು ಆದಿ ನುಗ್ರೊಹೊ ಅವರನ್ನು ಮಣಿಸಿದರೆ, ಯೂಕಿ 6-3, 6-2, 6-2 ರಲ್ಲಿ ಇಂಡೊನೇಷ್ಯಾದ ಅಗ್ರ ರ‌್ಯಾಂಕ್‌ನ ಆಟಗಾರ ಕ್ರಿಸ್ಟೋಫರ್ ರುಂಗ್‌ಕತ್ ವಿರುದ್ಧ ಜಯ ಸಾಧಿಸಿದರು.ಶನಿವಾರ ನಡೆಯುವ ಡಬಲ್ಸ್‌ನಲ್ಲಿ ಯಶಸ್ಸು ಪಡೆದರೆ ಭಾರತ 3-0 ರಲ್ಲಿ ಗೆಲುವಿನ ಮುನ್ನಡೆ ತನ್ನದಾಗಿಸಿಕೊಳ್ಳಲಿದೆ. ಹಾಗಾದಲ್ಲಿ ಭಾನುವಾರ ನಡೆಯುವ ರಿವರ್ಸ್ ಸಿಂಗಲ್ಸ್ ಪಂದ್ಯಗಳಿಗೆ ಯಾವುದೇ ಮಹತ್ವವಿರುವುದಿಲ್ಲ.ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಹೆಚ್ಚಿನ ಅನುಭವ ಹೊಂದಿರದ ಇಂಡೊನೇಷ್ಯಾದ ಎದುರಾಳಿಗಳ ವಿರುದ್ಧ ಯೂಕಿ ಮತ್ತು ಸೋಮ್ ಪೂರ್ಣ ಪ್ರಭುತ್ವ ಮೆರೆದರು. ಸೋಮದೇವ್‌ಗೆ ಗೆಲುವು ಸುಲಭವಾಗಿ ಲಭಿಸಿದರೆ, ಯೂಕಿ ಪ್ರತಿಯೊಂದು ಪಾಯಿಂಟ್ ಗಿಟ್ಟಿಸಲು ಸಾಕಷ್ಟು ಪರಿಶ್ರಮ ಪಡಬೇಕಾಯಿತು.ವಿಶ್ವ ರ‍್ಯಾಂಕಿಂಗ್‌ನಲ್ಲಿ 279ನೇ ಸ್ಥಾನದಲ್ಲಿರುವ ಯೂಕಿ ತನಗಿಂತ ಮೇಲಿನ ರ‌್ಯಾಂಕ್ ಹೊಂದಿರುವ ರುಂಗ್‌ಕತ್‌ಗೆ (251) ಆಘಾತ ನೀಡಿ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ನೆರೆದ ಪ್ರೇಕ್ಷಕರ ಮನಗೆದ್ದರು. ಎರಡು ಗಂಟೆಗಳ ಕಾಲ ನಡೆದ ಹೋರಾಟದ ಕೊನೆಯಲ್ಲಿ ಯೂಕಿ ಗೆಲುವಿನ ನಗು ಬೀರಿದರು.ಆಕ್ರಮಣಕಾರಿ ಮೂಡ್‌ನಲ್ಲಿದ್ದ ಯೂಕಿ ಮೊದಲ ಸೆಟ್‌ನ ಆರನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್ ಮುರಿದು ನಿರ್ಣಾಯಕ ಮುನ್ನಡೆ ಪಡೆದರು. ಒಂಬತ್ತನೇ ಗೇಮ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ಕೊನೆಗೂ ಬಿರುಸಿನ ಸರ್ವ್ ಮೂಲಕ ಗೇಮ್ ಹಾಗೂ ಸೆಟ್ (6-3) ಗೆದ್ದುಕೊಂಡರು.ಎರಡನೇ ಸೆಟ್‌ನಲ್ಲಿ ಭಾರತದ ಯುವ ಆಟಗಾರ 4-1 ಮುನ್ನಡೆ ಸಾಧಿಸಿದರು. ಆರನೇ ಗೇಮ್‌ನಲ್ಲಿ ರುಂಗ್‌ಕತ್ ಎದುರಾಳಿಯ ಸರ್ವ್ ಮುರಿದು ಮರುಹೋರಾಟದ ಸೂಚನೆ ನೀಡಿದರು. ಆದರೆ ಬೇಗನೇ ಎಚ್ಚೆತ್ತುಕೊಂಡ ಯೂಕಿ ಮುಂದಿನ ಗೇಮ್‌ನಲ್ಲಿ ಎದುರಾಳಿಯ ಸರ್ವ್ ಮುರಿದರಲ್ಲದೆ, ಎಂಟನೇ ಗೇಮ್‌ನಲ್ಲಿ ಪಾಯಿಂಟ್ ಗಿಟ್ಟಿಸಿ ಸೆಟ್ ಗೆದ್ದರು.ಮೂರನೇ ಸೆಟ್‌ನ ಆರಂಭದಲ್ಲಿ 2-2 ಸಮಬಲ ಕಂಡುಬಂತು. ಆ ಬಳಿಕ ತಮ್ಮ ಸರ್ವ್ ಕಾಪಾಡಿಕೊಂಡ ಯೂಕಿ ಐದು ಹಾಗೂ ಏಳನೇ ಗೇಮ್‌ಗಳಲ್ಲಿ ರುಂಗ್‌ಕತ್ ಸರ್ವ್ ಮುರಿದು ಸ್ಮರಣೀಯ ಗೆಲುವು ತಮ್ಮದಾಗಿಸಿಕೊಂಡರು.ಮುನ್ನಡೆ ತಂದಿತ್ತ ಸೋಮ್: ಭಾರತದ ಅಗ್ರ ರ‍್ಯಾಂಕ್‌ನ ಆಟಗಾರ ಸೋಮದೇವ್ ಮೊದಲ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಸುಲಭ ಗೆಲುವು ಪಡೆದು 1-0 ರಲ್ಲಿ ಮುನ್ನಡೆ ತಂದಿತ್ತಿದ್ದರು. ವಿಶ್ವ ರ‌್ಯಾಂಕಿಂಗ್‌ನಲ್ಲಿ 1778ನೇ ರ‌್ಯಾಂಕ್ ಹೊಂದಿರುವ ರುಂಗ್‌ಕತ್ ಭಾರತದ ಆಟಗಾರನಿಗೆ ಸರಿಸಾಟಿಯಾಗಿ ನಿಲ್ಲುವಲ್ಲಿ ವಿಫಲರಾದರು.ಸುಮಾರು ಒಂದೂವರೆ ಗಂಟೆಯ ಕಾಲ ನಡೆದ ಹೋರಾಟದಲ್ಲಿ ಸೋಮದೇವ್ ಕೇವಲ ಐದು ಗೇಮ್‌ಗಳನ್ನು ಮಾತ್ರ ಎದುರಾಳಿಗೆ ಬಿಟ್ಟುಕೊಟ್ಟರು. ಭರ್ಜರಿ ಏಸ್ ಮೂಲಕ ಪಂದ್ಯಕ್ಕೆ ಚಾಲನೆ ನೀಡಿದ ಸೋಮ್ ಆರಂಭದಲ್ಲೇ ಎದುರಾಳಿಗೆ ಅಪಾಯದ ಸೂಚನೆ ನೀಡಿದ್ದರು.ಅವರು ಎದುರಾಳಿಯನ್ನು ಅಂಗಳದ ಮೂಲೆ ಮೂಲೆಗೂ ಓಡುವಂತೆ ಮಾಡಿದರು. ಮೂರನೇ ಸೆಟ್‌ನ ಎರಡನೇ ಗೇಮ್‌ನಲ್ಲಿ ಸರ್ವ್ ಕಾಪಾಡಿಕೊಳ್ಳಲು ಸೋಮ್ ಅಲ್ಪ ಕಷ್ಟಪಟ್ಟರು. ಅದನ್ನು ಬಿಟ್ಟರೆ, ಅವರಿಗೆ ಯಾವುದೇ ಸಂದರ್ಭದಲ್ಲೂ ನಿಜವಾದ ಒತ್ತಡ ಎದುರಾಗಲಿಲ್ಲ.ಸೋಮ್ ಅವರ ರ‍್ಯಾೆಕೆಟ್‌ನಿಂದ ಸಿಡಿಯುತ್ತಿದ್ದ ಏಸ್ ಹಾಗೂ ವೇಗದ ಸರ್ವ್‌ಗಳಿಗೆ ತಕ್ಕ ಪ್ರತ್ಯುತ್ತರ ನೀಡುವಲ್ಲಿ ರುಂಗ್‌ಕತ್ ವಿಫಲರಾದರು. ಆಕರ್ಷಕ ಕ್ರಾಸ್ ಕೋರ್ಟ್ ಹೊಡೆತಗಳ ಮೂಲಕ ಅವರು ಎದುರಾಳಿಯನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡರು.ಅನಗತ್ಯ ತಪ್ಪುಗಳನ್ನೆಸಗಿದ ರುಂಗ್‌ತಕ್ ಎದುರಾಳಿಯ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಒತ್ತಡದಲ್ಲೇ ಆಡಿದ ಅವರು ನಾಲ್ಕು ಡಬಲ್‌ಫಾಲ್ಟ್‌ಗಳನ್ನೂ ಎಸಗಿದರು. ಇಂಡೊನೇಷ್ಯಾದ ಆಟಗಾರ ಕೆಲವೊಮ್ಮೆ ನೆಟ್ ಬಳಿ ಬಂದು ಎದುರಾಳಿಯ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದರು. ಆದರೆ ಸೋಮ್ ಅನುಭವದ ಮುಂದೆ ಅವರ ಈ ಯೋಜನೆ ತಲೆಕೆಳಗಾಯಿತು.

ಪ್ರತಿಕ್ರಿಯಿಸಿ (+)