ಯೂನಿಸ್, ಮಿಸ್ಬಾ ಪಾತ್ರ ಹಿರಿದು

7

ಯೂನಿಸ್, ಮಿಸ್ಬಾ ಪಾತ್ರ ಹಿರಿದು

Published:
Updated:

ನವದೆಹಲಿ (ಪಿಟಿಐ): ಹಿರಿಯ ಆಟಗಾರರಾದ ಯೂನಿಸ್ ಖಾನ್ ಮತ್ತು ಮಿಸ್ಬಾ ಉಲ್ ಹಕ್ ಅವರಿಗೆ ಪಾಕಿಸ್ತಾನ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಲಿಕ್ಕಿದೆ ಎಂದು ಮಾಜಿ ಆಟಗಾರ ವಾಸೀಮ್ ಅಕ್ರಮ್ ಹೇಳಿದ್ದಾರೆ. ಶ್ರೀಲಂಕಾ ವಿರುದ್ಧದ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಇವರಿಬ್ಬರು ತಮ್ಮ ಜಬಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿರುವುದು ಸಂತಸದ ವಿಚಾರ ಎಂದು ಮಾಜಿ ಬೌಲರ್ ನುಡಿದರು.‘ಹಿರಿಯ ಆಟಗಾರರು ತಮ್ಮ ಕರ್ತವ್ಯವನ್ನು ಚೆನ್ನಾಗಿ ನಿರ್ವಹಿಸಿರುವುದು ನನಗೆ ಖುಷಿ ತಂದಿತ್ತಿದೆ. ಯೂನಿಸ್ ಒಬ್ಬ ಬುದ್ಧಿವಂತ ಅಟಗಾರ. ಮಿಸ್ಬಾ ಕೂಡಾ ಅದೇ ಗುಣ ಹೊಂದಿದ್ದಾರೆ. ಇಬ್ಬರೂ ಈಗಾಗಲೇ ಹಲವು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಪಾಕಿಸ್ತಾನ ಪ್ರಸಕ್ತ ಟೂರ್ನಿಯಲ್ಲಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಬೇಕಾದರೆ ಇವರಿಬ್ಬರು ಮಿಂಚುವುದು ಅಗತ್ಯ’ ಎಂದು ಸೋಮವಾರ ತಿಳಿಸಿದರು.ಶನಿವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ 11 ರನ್‌ಗಳಿಂದ ಲಂಕಾ ವಿರುದ್ಧ ಗೆಲುವು ಪಡೆದಿತ್ತು. ಈ ಪಂದ್ಯದಲ್ಲಿ ಮಿಸ್ಬಾ ಅಜೇಯ 83 ರನ್ ಗಳಿಸಿದ್ದರೆ, ಯೂನಿಸ್ 72 ರನ್ ಕಲೆಹಾಕಿದ್ದರು. ಇವರಿಬ್ಬರ ಉತ್ತಮ ಆಟದಿಂದ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ 277 ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು. ‘ಹಿರಿಯ ಆಟಗಾರರ ಪಾತ್ರ ಏನು ಎಂಬುದನ್ನು ಲಂಕಾ ವಿರುದ್ಧದ ಪಂದ್ಯದಲ್ಲಿ ಇಬ್ಬರೂ ತೋರಿಸಿಕೊಟ್ಟರು. ಇವರಿಬ್ಬರು ಕ್ರೀಸ್‌ನಲ್ಲಿದ್ದಾಗ ತಂಡದ ಸ್ಕೋರ್ ಮೇಲೇರುತ್ತಲೇ ಇತ್ತು. ಇಡೀ ತಂಡ ಇವರನ್ನು ಅವಲಂಬಿಸಿದೆ. ಆದ್ದರಿಂದ ನಾಯಕ ಶಾಹಿದ್ ಆಫ್ರಿದಿ ಇಬ್ಬರಿಗೂ ಗೌರವ ನೀಡಬೇಕು’ ಎಂದು ಅಕ್ರಮ್ ನುಡಿದರು.ಅಫ್ರಿದಿ ಅವರ ನಾಯಕತ್ವವನ್ನೂ ಅಕ್ರಮ್ ಕೊಂಡಾಡಿದ್ದಾರೆ. ‘ಅಫ್ರಿದಿ ಈಗ ಸಾಕಷ್ಟು ಪ್ರಬುದ್ಧರಾಗಿದ್ದಾರೆ. ಮಾಹೇಲ ಜಯವರ್ಧನೆ ಕ್ರೀಸ್‌ನಲ್ಲಿದ್ದಾಗ ಶೋಯಬ್ ಅಖ್ತರ್‌ಗೆ ಬೌಲಿಂಗ್ ನೀಡಿದ್ದು ಅವರು ಕೈಗೊಂಡ ಒಳ್ಳೆಯ ನಿರ್ಧಾರ. ಅಖ್ತರ್ ಅವರು ಮಾಹೇಲ ವಿಕೆಟ್ ಪಡೆಯಲು ಯಶಸ್ವಿಯಾದದ್ದು ಪಂದ್ಯದ ಟರ್ನಿಂಗ್ ಪಾಯಿಂಟ್. ಜಯವರ್ಧನೆ ಎಲ್ಲಾದರೂ ಕ್ರೀಸ್ ಬಳಿ ನೆಲೆನಿಂತಿದ್ದರೆ ಲಂಕಾ ತಂಡಕ್ಕೆ ಗೆಲುವು ಪಡೆಯುವ ಉತ್ತಮ ಅವಕಾಶವಿತ್ತು’ ಎಂದು ಅಕ್ರಮ್ ಅಭಿಪ್ರಾಯಪಟ್ಟರು. ಆದರೆ ವಿಕೆಟ್ ಕೀಪರ್ ಕಮ್ರನ್ ಅಕ್ಮಲ್ ಮತ್ತು ವೇಗಿ ಉಮರ್ ಗುಲ್ ಪ್ರದರ್ಶನ ತೃಪ್ತಿ ನೀಡಿಲ್ಲ ಎಂದರು ಅಕ್ರಮ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry