ಯೂರಿಯಾಕ್ಕಾಗಿ ರೈತರ ಪರದಾಟ

7

ಯೂರಿಯಾಕ್ಕಾಗಿ ರೈತರ ಪರದಾಟ

Published:
Updated:

ಮಂಡ್ಯ: ಕಳೆದ ಒಂದು ವಾರದಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಬೆಳೆಗಳಿಗೆ ಯೂರಿಯಾ ರಸಗೊಬ್ಬರ ಹಾಕಲು ರೈತರು ಮುಂದಾಗಿದ್ದಾರೆ. ಆದರೆ, ರಸಗೊಬ್ಬರದ ಕೊರತೆಯಿಂದಾಗಿ ರೈತರು ಪರದಾಡುವಂತಾಗಿದೆ. ಕೆಲವೆಡೆ ಗಲಾಟೆಯೂ ಆಗಿದೆ.ಈ ಹಿಂದೆ ಬಿತ್ತನೆ ಮಾಡಿ ನಂತರ ಮಳೆಯಿಲ್ಲದೇ ರೈತರು ಕಂಗಾಲಾಗಿದ್ದರು. ಬಿತ್ತನೆಯೂ ಮುರುಟಿ ಹೋಗುವ ಹಂತದಲ್ಲಿತ್ತು. ಈಗ ಮಳೆಯಾಗಿರುವುದರಿಂದ ಬೆಳೆ ಚೇತರಿಸಿಕೊಂಡಿದೆ. ಯೂರಿಯಾ ಹಾಕಲು ರೈತರು ಮುಂದಾಗಿದ್ದಾರೆ. ಆದರೆ, ರಸಗೊಬ್ಬರ ಮಾತ್ರ ಸಿಗುತ್ತಿಲ್ಲ.ಯೂರಿಯಾ ರಸಗೊಬ್ಬರ ಹೊರತುಪಡಿಸಿ, 2,236 ಮೆಟ್ರಿಕ್ ಟನ್ ಡಿಎಪಿ, 2,153 ಮೆಟ್ರಿಕ್ ಟನ್ ಎಂಒಪಿ, 6,122 ಮೆಟ್ರಿಕ್ ಟನ್ ಎನ್‌ಪಿಕೆ ರಸಗೊಬ್ಬರ ಸಂಗ್ರಹವಿದೆ. ರೈತರು ಮಾತ್ರ ಯೂರಿಯಕ್ಕೆ ಬೇಡಿಕೆ ಸಲ್ಲಿಸುತ್ತಿದ್ದಾರೆ.ಜಿಲ್ಲೆಯಲ್ಲಿ 46 ಸಾವಿರ ಹೆಕ್ಟೇರ್ ಬತ್ತ, 44 ಸಾವಿರ ಕಬ್ಬು ಹಾಗೂ 37 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.  ಸೆಪ್ಟೆಂಬರ್ ಅಂತ್ಯದವರೆಗೆ 52,780 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರದ ಬೇಡಿಕೆ ಇದೆ. ಇಲ್ಲಿಯವರೆಗೆ 47,374 ಮೆಟ್ರಿಕ್ ಟನ್ ಮಾತ್ರ ಪೂರೈಕೆಯಾಗಿದೆ. ಇದರಲ್ಲಿ 8,894 ಮೆಟ್ರಿಕ್ ಟನ್ ಹಳೆಯ ದಾಸ್ತಾನು ಸೇರಿದೆ.ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆಸ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಮೇಲೆ ರೈತರು ಕಲ್ಲು ತೂರಾಟ ನಡೆಸಿದ್ದರೆ, ಬೆಸಗರಹಳ್ಳಿಯ ಸಂಘದೊಳಕ್ಕೆ ನುಗ್ಗಿ ಕುರ್ಚಿ, ಟೇಬಲ್‌ಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು. ರಸ್ತೆ ತಡೆಯನ್ನೂ ಮಾಡಲಾಗಿದೆ.ಶ್ರೀರಂಗಪಟ್ಟಣ, ಮಳವಳ್ಳಿ ಹಾಗೂ ಕೃಷ್ಣರಾಜಪೇಟೆ ತಾಲ್ಲೂಕುಗಳಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ರಸಗೊಬ್ಬರಕ್ಕಾಗಿ ರಸ್ತೆ ತಡೆ ನಡೆಸುತ್ತಿರುವ ಘಟನೆಗಳು ನಡೆಯುತ್ತಲೇ ಇದೆ.ಬೆಳಿಗ್ಗೆ ಆರು ಗಂಟೆಯ ವೇಳೆಗೆ ಹೋಗಿ, ರಸಗೊಬ್ಬರಕ್ಕಾಗಿ ಸಾಲಿನಲ್ಲಿ ನಿಲ್ಲಬೇಕು. ರಸಗೊಬ್ಬರ ಕೊರತೆ ಇರುವುದರಿಂದ ಒಬ್ಬರಿಗೆ ಕೇವಲ ಒಂದು ಮೂಟೆ (50 ಕೆಜಿ) ಮಾತ್ರ ನೀಡಲಾಗುತ್ತಿದೆ. ಅದು, ಯಾವುದಕ್ಕೂ ಸಾಲುವುದಿಲ್ಲ. ಕೆಲವರಿಗೆ ಅಷ್ಟು ಸಿಕ್ಕರೆ, ಇನ್ನೂ ಕೆಲವರಿಗೆ ಸಿಗುವುದೇ ಇಲ್ಲ. ಇನ್ನೆರಡು ದಿನ ಬಿಟ್ಟು ಹಂಚಲಾಗುವುದು ಎಂದು ಹೇಳಿ ಕಳುಹಿಸಲಾಗುತ್ತಿದೆ ಎನ್ನುವುದು ರೈತರ ದೂರು.ಸಹಕಾರ ಸಂಘ: ಜಿಲ್ಲೆಯಲ್ಲಿ 2,27 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿದ್ದು, ಅವುಗಳ ಮೂಲಕ ರಸಗೊಬ್ಬರ ಪೂರೈಸಲಾಗುತ್ತಿದೆ. ರಸಗೊಬ್ಬರ ಜಿಲ್ಲೆಗೆ ಆಗಮಿಸುತ್ತಿದ್ದಂತೆಯೇ ಅದನ್ನು ಸಂಘಗಳಿಗೆ ಪೂರೈಸಿ, ಆ ಮೂಲಕ ರೈತರಿಗೆ ವಿತರಣೆ ಮಾಡಲಾಗುತ್ತಿದೆ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಂಗಯ್ಯ.

ಪ್ರತಿ ಎಕರೆಗೆ 50 ಕೆಜಿ ಯೂರಿಯಾ ರಸಗೊಬ್ಬರವನ್ನು ಎರಡು ಹಂತದಲ್ಲಿ ನೀಡುವಂತೆ ಶಿಫಾರಸು ಮಾಡಲಾಗಿದೆ. ಆದರೆ, ರೈತರು ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ನೀಡುತ್ತಿದ್ದಾರೆ. ಹೀಗಾಗಿ ಬೇಡಿಕೆ ಹೆಚ್ಚಾಗಿದೆ.ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಲಾಗಿದ್ದು, ಇನ್ನಷ್ಟು ಯೂರಿಯ ರಸಗೊಬ್ಬರ ಜಿಲ್ಲೆಗೆ ಬರಲಿದೆ. ರೈತರು ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದಿದ್ದಾರೆ ಅವರು.ಬತ್ತ ಹಾಗೂ ಕಬ್ಬಿನ ಬೆಳೆಗೆ ಯೂರಿಯಾ ಬೇಕಾಗಿದೆ. ಸಾಗಾಣಿಕೆ ತೊಂದರೆಯಿಂದ ಪೂರೈಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆ ಅಧಿಕಾರಿಗಳು. ಕೂಡಲೇ ರಸಗೊಬ್ಬರ ಪೂರೈಕೆಗೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸುತ್ತಾರೆ ರೈತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry