ಸೋಮವಾರ, ಮೇ 17, 2021
22 °C

ಯೂರಿಯಾ ಸಮಸ್ಯೆ: ಸಿಗದ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಪರಿಸ್ಥಿತಿ ಈಗಿನಂತೆಯೇ ಮುಂದು ವರೆದರೆ ಜಿಲ್ಲೆಯಲ್ಲಿ ಕಾಣಿಸಿರುವ ಯೂರಿಯಾ ಸಮಸ್ಯೆಗೆ ಪರಿಹಾರ ಸಿಗುವುದು ಕಷ್ಟ ಎಂದು ಹೇಳಲಾಗುತ್ತಿದೆ.ಈಗಾಗಲೇ ಯೂರಿಯಾ ಗೊಬ್ಬರಕ್ಕಾಗಿ ಚಿಕ್ಕನಾಯಕನಹಳ್ಳಿ, ಗುಬ್ಬಿ, ಕುಣಿಗಲ್, ತಿಪಟೂರು ತಾಲ್ಲೂಕಿನಲ್ಲಿ ರೈತರು ವ್ಯವಸಾಯ ಸೇವಾ ಸಹಕಾರ ಸಂಘ (ಸೊಸೈಟಿ), ಖಾಸಗಿ ಗೊಬ್ಬರ ಮಾರಾಟಗಾರರ ಅಂಗಡಿ ಮಳಿಗೆಗಳಿಗೆ ಅಲೆದಾಟ ನಡೆಸತೊಡಗಿದ್ದಾರೆ. ಯೂರಿಯಾ ಸಿಗದೆ ಹತಾಶರಾಗಿ ಪ್ರತಿಭಟನೆಗೂ ಇಳಿದಿದ್ದಾರೆ.ರಾಗಿ, ಭತ್ತ, ತೊಗರಿ, ಅವರೆ ಸೇರಿದಂತೆ ತೋಟಗಾರಿಕಾ ಬೆಳೆ ಹೊರತುಪಡಿಸಿ ಎಲ್ಲ ಬೆಳೆಗಳಿಗೆ ಯೂರಿಯಾ ಅಗತ್ಯ. ಪರ್ಯಾಯ ರಾಸಾಯನಿಕ ಗೊಬ್ಬರ ಇಲ್ಲದೆ ಎಷ್ಟಾದರೂ ಹಣ ತೆತ್ತು ಯೂರಿಯಾ ಹಾಕಬೇಕಾದ ಸ್ಥಿತಿ ರೈತರದು.

ಆರಂಭದಲ್ಲಿ ಮಳೆ ಕೈಕೊಟ್ಟರೂ ಕಳೆದ ಕೆಲವು ದಿನಗಳಿಂದ ತಿಪಟೂರು, ಗುಬ್ಬಿ, ಚಿಕ್ಕನಾಯಕನಹಳ್ಳಿ, ಕುಣಿಗಲ್ ಮುಂತಾದ ಕಡೆಗಳಲ್ಲಿ ಮಳೆಯಾಗುತ್ತಿದ್ದು, ರಾಗಿ ಬೆಳೆ ಹುಲುಸಾಗಿ ಬರತೊಡಗಿದೆ. ಈಗ ರಾಗಿ ಹೊಲಗಳಿಗೆ ಯೂರಿಯಾ ಹಾಕಲೇಬೇಕು. ಆದರೆ ಮಾರುಕಟ್ಟೆಯಲ್ಲಿ ಸಿಗದೆ ರೈತರು ಕಂಗಾಲಾಗಿದ್ದಾರೆ.ಒಮ್ಮೆಗೆ ರೈತರು ಯೂರಿಯಾ ಕೊಳ್ಳಲು ಮುಗಿಬಿದುದ್ದರಿಂದ ಗೊಬ್ಬರದ ಕೊರತೆ ಕಾಣಿಸಿಕೊಂಡಿಲ್ಲ. ಸರ್ಕಾರದಿಂದ ಜಿಲ್ಲೆಗೆ ಗೊಬ್ಬರ ಪೂರೈಕೆಯೇ ಕಡಿಮೆಯಾಗಿದೆ. ಸದ್ಯ, ಜಿಲ್ಲೆಗೆ 10 ಸಾವಿರ ಮೆಟ್ರಿಕ್ ಟನ್ ಯೂರಿಯಾ ಬೇಡಿಕೆ ಇದ್ದರೆ, ಪೂರೈಕೆ ಆಗಿರುವುದು ಕೇವಲ 1800 ಮೆಟ್ರಿಕ್ ಟನ್! ಬೇಡಿಕೆ ಮತ್ತು ಪೂರೈಕೆ ನಡುವೆ ಅಗಾಧ ವ್ಯತ್ಯಾಸವಿದ್ದು ಸರಿದೂಗಿಸುವುದು ಕಷ್ಟವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.`ತುರ್ತಾಗಿ 5 ಸಾವಿರ ಮೆಟ್ರಿಕ್ ಟನ್ ಯೂರಿಯಾ ಬೇಕಾಗಿದೆ. ಆದರೆ 1800 ಮೆಟ್ರಿಕ್ ಟನ್ ಬಂದಿದ್ದು, ಜಿಲ್ಲೆಯ ಪ್ರತಿ ವ್ಯವಸಾಯ ಸೇವಾ ಸಹಕಾರ ಸಂಘಕ್ಕೂ ತಲಾ 10 ಟನ್ ಯೂರಿಯಾ ಹಂಚಿಕೆ ಮಾಡಲಾಗುವುದು~ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀರಾಮರೆಡ್ಡಿ ಹೇಳಿದರು.`1800 ಮೆಟ್ರಿಕ್ ಟನ್ ಯೂರಿಯಾ ಜಿಲ್ಲೆಗೆ ಬಂದಿದ್ದು, ಕೂಡಲೇ ಸೊಸೈಟಿಗಳಿಗೆ ವಿತರಿಸಲಾಗುವುದು. ಸೊಸೈಟಿಗಳ ಮುಂದೆ ನಿಂತು ರೈತರಿಗೆ ಗೊಬ್ಬರದ ಹಂಚಿಕೆಯ ಮೇಲೆ ಕಣ್ಗಾವಲು ಇಡುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಖಾಸಗಿ ಗೊಬ್ಬರ ಮಾರಾಟದಾರರಿಗೆ ಹಂಚಿಕೆಯಾಗಿರುವ ಗೊಬ್ಬರದ ಮಾಹಿತಿಯನ್ನು ಪಡೆದುಕೊಳ್ಳಲಾಗಿದ್ದು, ಆಯಾಯ ಗ್ರಾಮ ಲೆಕ್ಕಿಗರು ಮುಂದೆ ನಿಂತು ಪರಿಶೀಲನೆ ನಡೆಸಿ ರೈತರಿಗೆ ಗೊಬ್ಬರ ವಿತರಣೆ ಆಗುವಂತೆ ನೋಡಿಕೊಳ್ಳುವಂತೆ ಆದೇಶಿಸಲಾಗಿದೆ.ಇಫ್ಕೋ, ಕ್ರಿಫ್ಕೊ, ಎಂಸಿಎಫ್ ಕಂಪೆನಿಗಳ ಮಾರಾಟ ಪ್ರತಿನಿಧಿಗಳ ಜೊತೆಯೂ ಸಭೆ ನಡೆಸಲಾಗಿದೆ. ಮುಂದಿನ ವಾರದಲ್ಲಿ ಇನ್ನೂ 2 ಸಾವಿರ ಮೆಟ್ರಿಕ್ ಟನ್ ಯೂರಿಯಾ ಬರಲಿದೆ~ ಎಂದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಹೇಳಿದರು.`ಯೂರಿಯಾ ಅಭಾವ ಕಾಳಸಂತೆ ಕೋರರಿಗೆ ವರವಾಗಿ ಪರಿಣಮಿಸಿದೆ. ಸೊಸೈಟಿಗಳಲ್ಲಿ ರೈತರಿಗೆ ಬೇಕಾದ ರಾಸಾಯನಿಕ ಗೊಬ್ಬರವನ್ನು ತರಿಸುತ್ತಿಲ್ಲ. ಖಾಸಗಿ ಮಾರಾಟದಾರರು ಪ್ರತಿ ಚೀಲಕ್ಕೆ ರೂ. 100ರಿಂದ ರೂ. 200ರ ವರೆಗೂ ಹೆಚ್ಚು ಹಣ ಪಡೆದು ಮಾರಾಟ ಮಾಡುತ್ತಿದ್ದಾರೆ. ಸರ್ಕಾರ ಸೊಸೈಟಿಗಳಿಗೆ ಗೊಬ್ಬರ ಕೊಡದೆ ಖಾಸಗಿ ಮಾರಾಟಗಾರರಿಗೆ ಯಾಕೆ ಕೊಡಬೇಕು~ ಎಂದು ಸಿ.ಎಸ್.ಪುರದ ರೈತ ಸಿ.ದಯಾನಂದ್ ಆಕ್ರೋಶ ವ್ಯಕ್ತಪಡಿಸಿದರು.`ಹೊಲ ಬಿತ್ತನೆಯಾದ ಬಳಿಕ 20:20 (ಆನೆ ಮಾರ್ಕ್) ಗೊಬ್ಬರ ತರಿಸಲಾಗಿದೆ. ಇಷ್ಟು ದಿನ ಈ ಗೊಬ್ಬರ ಏಕೆ ಇರಲಿಲ್ಲ. ಈಗ ಯೂರಿಯಾ ಇಲ್ಲ. ಆದರೆ ಖಾಸಗಿ ಮಳಿಗೆದಾರರ ಬಳಿ ಹೆಚ್ಚಿನ ಹಣ ತೆತ್ತು ಖರೀದಿ ಮಾಡಬೇಕಾಗಿದೆ~ ಎಂದು ದೂರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.