ಯೂರೊ ಕಪ್ ಫುಟ್‌ಬಾಲ್‌: ಸ್ಪೇನ್‌ಗೆ ಐತಿಹಾಸಿಕ ವಿಜಯ

ಬುಧವಾರ, ಜೂಲೈ 24, 2019
27 °C

ಯೂರೊ ಕಪ್ ಫುಟ್‌ಬಾಲ್‌: ಸ್ಪೇನ್‌ಗೆ ಐತಿಹಾಸಿಕ ವಿಜಯ

Published:
Updated:

ಕೀವ್, ಉಕ್ರೇನ್ (ಪಿಟಿಐ, ಐಎಎನ್‌ಎಸ್, ಎಎಫ್‌ಪಿ): ಮೆಚ್ಚುವಂಥ ಆಟ. ನಿರೀಕ್ಷೆಯೇ ಮಾಡದಂಥ ಏಕಪಕ್ಷೀಯ ಫಲಿತಾಂಶ. ಅದೇ ಅಚ್ಚರಿಗೆ ಕಾರಣ. ಆದ್ದರಿಂದಲೇ ಸ್ಪೇನ್ ಮಾಡಿದ ಸಾಧನೆ ಅಸಾಧಾರಣ. ಸತತ ಎರಡನೇ ಬಾರಿ ಅದಕ್ಕೆ ಯೂರೊ ಕಪ್ ಫುಟ್‌ಬಾಲ್ ಚಾಂಪಿಯನ್ ಪಟ್ಟ.52 ವರ್ಷಗಳ ಯೂರೊ ಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್ ಇತಿಹಾಸದಲ್ಲಿ ಇಂಥದೊಂದು ಶ್ರೇಯ ಪಡೆದ ಮೊಟ್ಟ ಮೊದಲ ತಂಡ ಎನಿಸಿಕೊಂಡಿತು ಸ್ಪೇನ್. ಅದಕ್ಕಿಂತ ಮುಖ್ಯವಾಗಿ ಸತತವಾಗಿ ಮೂರು ಮಹತ್ವದ ಫುಟ್‌ಬಾಲ್ ಚಾಂಪಿಯನ್‌ಷಿಪ್‌ಗಳಲ್ಲಿ ಪ್ರಶಸ್ತಿ ಗೆದ್ದ ಹಿರಿಮೆ ಸ್ಪೇನ್ ತಂಡದ್ದಾಯಿತು.

 

2010ರಲ್ಲಿ ವಿಶ್ವಕಪ್ ಗೆದ್ದಿದ್ದ ಈ ತಂಡವು ಅದಕ್ಕೂ ಮುನ್ನ 2008ರಲ್ಲಿ ಯೂರೊ ಕಪ್ ಫೈನಲ್‌ನಲ್ಲಿ 1-0 ಗೋಲ್‌ನಿಂದ ಜರ್ಮನಿಯನ್ನು ಮಣಿಸಿ ಅಗ್ರಪಟ್ಟ ಪಡೆದಿತ್ತು. ಈಗ ಮತ್ತೊಮ್ಮೆ ಅದು ಚಾಂಪಿಯನ್ ಆಗಿದೆ.

ಭಾನುವಾರ ರಾತ್ರಿ ಉಕ್ರೇನ್‌ನ ರಾಜಧಾನಿಯಾದ ಕೀವ್‌ನ ಒಲಿಂಪಿಕ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸ್ಪೇನ್‌ಗೆ 4-0 ಗೋಲುಗಳಿಂದ ಇಟಲಿ ವಿರುದ್ಧ ಅದ್ಭುತ ಗೆಲುವು.
ಫೈನಲ್ ಪಂದ್ಯವೊಂದರಲ್ಲಿ ಎದುರಾಳಿಗೆ ಒಂದು ಗೋಲು ಕೂಡ ಗಳಿಸಲು ಅವಕಾಶ ನೀಡದ ಗಟ್ಟಿ ಕೋಟೆಯಂಥ ಆಟ ಸ್ಪೇನ್ ತಂಡದ್ದು. ದಾಳಿಯಲ್ಲಿಯೂ ಚುರುಕು. ಆದ್ದರಿಂದಲೇ ನಾಲ್ಕು ಗೋಲುಗಳನ್ನು ಗಳಿಸಲು ಸಾಧ್ಯವಾಗಿದ್ದು.ಡೇವಿಡ್ ಸಿಲ್ವಾ, ಜಾರ್ಡಿ ಅಲ್ಬಾ, ಫೆರ್ನಾಂಡೊ ಟೊರೆಸ್ ಹಾಗೂ ಜುವಾನ್ ಮ್ಯಾಟಾ ಚುರುಕಿನ ಆಟವಾಡಿದ್ದು ಸ್ಪೇನ್‌ಗೆ ಗೆಲುವಿನ ಹಾದಿ ಕಷ್ಟದ್ದಾಗಲಿಲ್ಲ. ಇಟಲಿ ತಂಡಕ್ಕೆ ಉತ್ತರಾರ್ಧದಲ್ಲಿ ಕಾಡಿದ ಗಾಯಾಳುಗಳ ಸಮಸ್ಯೆಯೂ ಸ್ಪೇನ್‌ಗೆ ಸ್ವಲ್ಪ ಮಟ್ಟಿಗೆ ಸಹಕಾರಿ ಆಯಿತು. ಆದರೆ ಇಟಲಿ ತಂಡದ ಆಟಗಾರರ ಸಂಖ್ಯೆ ಹತ್ತಕ್ಕೆ ಇಳಿದಿದ್ದೇ ಸ್ಪೇನ್ ವಿಜಯಕ್ಕೆ ಕಾರಣವೆಂದು ಮಾತ್ರ ಒಪ್ಪಲಾಗದು. ಏಕೆಂದರೆ ವಿಜಯಿ ತಂಡದವರು ದೈಹಿಕ ಸಾಮರ್ಥ್ಯವನ್ನು ಕಾಯ್ದುಕೊಂಡು ಪಂದ್ಯದ ಕೊನೆಯವರೆಗೂ ದಿಟ್ಟತನದಿಂದ ಹೋರಾಡಿದರು. ಅದೇ ಎದುರಾಳಿ ಇಟಲಿ ಈ ವಿಭಾಗದಲ್ಲಿ ಎಡವಿತು.ಇಟಲಿ ತಂಡದವರು ಚೆಂಡನ್ನು ಗುರಿಯ ಕಡೆಗೆ ಕಳುಹಿಸುವ ಸಾಹಸ ಮಾಡಿದ ಕ್ಷಣಗಳನ್ನು ಲೆಕ್ಕ ಮಾಡಿದರೆ ಅದು ಎಷ್ಟು ಪರದಾಡಿತೆನ್ನುವುದು ಸ್ಪಷ್ಟವಾಗುತ್ತದೆ. ಮಧ್ಯ ಕ್ಷೇತ್ರದಲ್ಲಿ ಚೆಂಡನ್ನು ಸಮರ್ಥವಾಗಿ ನಿಯಂತ್ರಿಸುವ ಯತ್ನ ಮಾಡಿದ್ದು ಕೂಡ ಕಡಿಮೆ. ಅದಕ್ಕಿಂತ ಮುಖ್ಯವಾಗಿ ಎದುರಾಳಿ ದಾಳಿ ಪಡೆಯನ್ನು ತಡೆಯುವುದಕ್ಕಿಂತ ತಳ್ಳಾಡಿ ಕೆಡವಲು ಹೆಚ್ಚು ಶಕ್ತಿಯನ್ನು ವಿನಿಯೋಗಿಸಿದರು ಇಟಲಿಯವರು.ಗೋಲು ಗಳಿಸಲು ಹನ್ನೊಂದು ಬಾರಿ ಯತ್ನಿಸಿದರೂ ಇಟಲಿ ಸಂಪೂರ್ಣ ವಿಫಲ. ನಾಲ್ಕು ಬಾರಿ ಚೆಂಡನ್ನು ಗುರಿಯ ಕಡೆಗೆ ಕಳುಹಿಸಿದರೂ ಅದು ಗೋಲು ಪೆಟ್ಟಿಗೆ ಒಳಗೆ ಸೇರಲಿಲ್ಲ. ಮೂರು ಬಾರಿ ಗೋಲು ಗಳಿಸಲು ನಡೆಸಿದ ಪ್ರಯತ್ನವೂ `ಆಫ್‌ಸೈಡ್~ ಆಯಿತು. ಆದರೆ ಸ್ಪೇನ್ ಮಾಡಿದ ಹದಿನಾಲ್ಕು ಯತ್ನಗಳಲ್ಲಿ ನಾಲ್ಕರಲ್ಲಿ ಯಶಸ್ವಿ. ಅದಕ್ಕೆ ಕಾರಣ ಗುರಿಯ ಹತ್ತಿರದಲ್ಲಿ ಚೆಂಡು ಸಾಗಿದಾಗ ಈ ತಂಡದವರು ತೋರಿದ ಹೊಂದಾಣಿಕೆ. ಆ ರೀತಿಯ ಶಿಸ್ತು ಇಟಲಿ ತಂಡದವರಲ್ಲಿ ಕಾಣಿಸಲಿಲ್ಲ.ಸ್ಪೇನ್ 14ನೇ ನಿಮಿಷದಲ್ಲಿ ಆರ್ಭಟ ಆರಂಭಿಸಿತು. ಮ್ಯಾಂಚೆಸ್ಟರ್ ಸಿಟಿಯ ಡೇವಿಡ್ ಸಿಲ್ವಾ ತೋರಿದ ತಂತ್ರಗಾರಿಕೆ ಆಕರ್ಷಕ. ಸೆಸ್ಕಾ ಫ್ಯಾಬ್ರಿಗಾಸ್ ಅವರು `ಕ್ರಾಸ್~ ನೀಡಿದ ಕ್ಷಣದಲ್ಲಿ ಸಿಲ್ವಾ ಚುರುಕಾಗಿ ಪ್ರತಿಕ್ರಿಯಿಸಿ ಚೆಂಡನ್ನು ಹೆಡ್ ಮಾಡಿದರು. ಅದೇ ಈ ಪಂದ್ಯದ ಉತ್ತಮ ಗೋಲು.41ನೇ ನಿಮಿಷದಲ್ಲಿ ಸ್ಪೇನ್ ಗೋಲು ಅಂತರವನ್ನು ಇನ್ನಷ್ಟು ಹೆಚ್ಚಿಸಿಕೊಂಡಿತು. ಅದಕ್ಕೆ ಜಾರ್ಡಿ ಅಲ್ಬಾ. ಎಡದಿಂದ ನುಗ್ಗಿಬಂದ ಅವರು ಕ್ಸಾವಿಗೆ ಚೆಂಡನ್ನು ಪಾಸ್ ನೀಡಿ-ಮತ್ತೆ ತಮ್ಮ ನಿಯಂತ್ರಣಕ್ಕೆ ಪಡೆಯುತ್ತ ಮುಂದೆ ಸಾಗಿದರು. ಅದು ಪ್ರಯೋಜನವೂ ಆಯಿತು. ಅವರನ್ನು ಅಡ್ಡಗಟ್ಟಲು ಇಟಲಿಯ ಮೂವರು ರಕ್ಷಣಾ ಆಟಗಾರರು ಮಾಡಿದ ಸಾಹಸವೆಲ್ಲ ವ್ಯರ್ಥ. ಅಲ್ಬಾ ನಿಖರವಾಗಿ ಚೆಂಡನ್ನು ಗುರಿಯತ್ತ ಒದ್ದರು. ಆಗ ಎದುರಾಳಿ ಗೋಲಿ ಜಿಯಾನ್ಲುಗಿ ಬಫೂನ್ ನಿಸ್ಸಹಾಯಕರಾಗಿ ನಿಂತರು.ವಿರಾಮದ ಹೊತ್ತಿಗಾಗಲೇ ಸ್ಪೇನ್ 2-0ಯಿಂದ ಮುನ್ನಡೆ ಸಾಧಿಸಿ ವಿಶ್ವಾಸದಿಂದ ಬೀಗಿತ್ತು. ಅದೇ ಉತ್ಸಾಹದಿಂದ ಉತ್ತರಾರ್ಧದಲ್ಲಿಯೂ ದಾಳಿಗೆ ಒತ್ತು ನೀಡಿ ಹೋರಾಟ ಮುಂದುವರಿಸಿತು. ಅದರಿಂದಾಗಿ ಗೆಲುವಿನ ಸಿಹಿ ಇನ್ನಷ್ಟು ಹೆಚ್ಚಿತು. ವಿರಾಮದ ನಂತರ ಮತ್ತೆ ಎರಡು ಗೋಲುಗಳು ಬಂದವು.ಫೆರ್ನಾಂಡೊ ಟೊರೆಸ್ 84ನೇ ನಿಮಿಷದಲ್ಲಿ ಕ್ಸಾವಿ ನೀಡಿದ ಬೆಂಬಲದೊಂದಿಗೆ ಗೋಲು ಗಳಿಸಿದರು. ಗೋಲು ಪೆಟ್ಟಿಗೆಯ ಎಡಗಡೆಯ ಮೂಲೆಯಲ್ಲಿ ನುಗ್ಗಿತು ಚೆಂಡು. ಆಗ ಗೋಲ್ ಕೀಪರ್ ಜಿಯಾನ್ಲುಗಿ ಚೆಂಡನ್ನು ತಡೆಯುವ ಸ್ಥಿತಿಯಲ್ಲಿ ಇರಲಿಲ್ಲ. ನಾಲ್ಕು ನಿಮಿಷಗಳ ಅಂತರದಲ್ಲಿ ಸ್ಪೇನ್ ಖಾತೆಗೆ ಮತ್ತೊಂದು ಗೋಲ್. ಅದು ಜುವಾನ್ ಮ್ಯಾಟಾ ಶ್ರಮದ ಫಲ.ಸ್ಪೇನ್‌ನ ಗೆರಾರ್ಡ್ ಪಿಕ್ಯೂ ಹಾಗೂ ಇಟಲಿಯ ಆ್ಯಂಡ್ರೆ ಬಾರ್ಜಾಗ್ಲಿ ಅವರು ಈ ಪಂದ್ಯದಲ್ಲಿ ಅಪಾಯಕಾರಿ ಆಟಕ್ಕಾಗಿ ರೆಫರಿಯಿಂದ ಎಚ್ಚರಿಕೆ ಪಡೆದರು.* ಸ್ಪೇನ್‌ನ ಸಾರ್ವಕಾಲಿಕ ಶ್ರೇಷ್ಠ ತಂಡ ಇದಾಗಿದೆ  -ವಿಸೆಂಟ್ ಡೆಲ್ ಬಾಸ್ವಿಕ್ (ಸ್ಪೇನ್ ತಂಡದ ಕೋಚ್)* ಕನಸು ಕೊನೆಗೊಂಡಿದೆ, ಶ್ರೇಷ್ಠ ತಂಡವೊಂದು ವಿಜಯ ಸಾಧಿಸಿದೆ  -ಇಟಲಿ ಮಾಧ್ಯಮಗಳು* ಇದು ನಾನು ಆಡಿದ ಮೊದಲ ಫೈನಲ್. ಅದರಲ್ಲಿಯೇ ಇತಿಹಾಸ ನಿರ್ಮಾಣವಾಯಿತು  -ಜಾರ್ಡಿ ಅಲ್ಬಾ (ಸ್ಪೇನ್ ಆಟಗಾರ)* ಇಟಲಿಯವರು ಸಹೃದಯರು. ಒಳ್ಳೆಯ ತಂಡವೊಂದನ್ನು (ಸ್ಪೇನ್) ಅಭಿನಂದಿಸುತ್ತೇವೆ   -ಜಿಯಾನ್ಲುಗಿ ಬಫೂನ್ (ಇಟಲಿ ತಂಡದ ಗೋಲ್ ಕೀಪರ್)* ಇದೊಂದು ರೋಮಾಂಚಕ ಕ್ಷಣ. ಇಷ್ಟು ದೊಡ್ಡ ಅಂತರದಿಂದ ಗೆಲ್ಲುತ್ತೇವೆಂದು ನಿರೀಕ್ಷಿಸಿರಲಿಲ್ಲ. ನನ್ನ ಕೆಲಸ ಸುಲಭವಾಗಿತ್ತು!  -ಐಕರ್ ಕಾಸಿಲ್ಲಾಸ್ (ಸ್ಪೇನ್ ಗೋಲ್ ಕೀಪರ್)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry