ಯೆಮನ್‌ನಲ್ಲಿ ಚಳವಳಿ ಮುಂದುವರಿಕೆ: ಇಬ್ಬರು ವಿದ್ಯಾರ್ಥಿಗಳ ಹತ್ಯೆ

7

ಯೆಮನ್‌ನಲ್ಲಿ ಚಳವಳಿ ಮುಂದುವರಿಕೆ: ಇಬ್ಬರು ವಿದ್ಯಾರ್ಥಿಗಳ ಹತ್ಯೆ

Published:
Updated:

ಸನಾ (ಐಎಎನ್‌ಎಸ್): ಯೆಮನ್ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೆ ವಿರುದ್ಧ ದಂಗೆ ಎದ್ದಿರುವ ಅಲ್ಲಿನ ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದ ವೇಳೆಯಲ್ಲಿ ಸರ್ಕಾರದ ಬೆಂಬಲಿಗರು ಇಬ್ಬರು ವಿದ್ಯಾರ್ಥಿಗಳನ್ನು  ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ.ಯೆಮನ್‌ನ ವೈದ್ಯಕೀಯ ಸೇವಾಕರ್ತರ ಹೇಳಿಕೆಯನ್ನು ಉದಾಹರಿಸಿ ವರದಿ ಮಾಡಿರುವ ಪತ್ರಿಕೆಯು, ರಾಜಧಾನಿ ಸನಾದಲ್ಲಿನ ವಿಶ್ವವಿದ್ಯಾಲಯದ ಕಚೇರಿ ಮುಂದೆ ಕಳೆದ ಭಾನವಾರದಿಂದ ಧರಣಿ ನಡೆಸುತ್ತಿದ್ದವರ ಮೇಲೆ ಸರ್ಕಾರದ ಬೆಂಬಲಿಗರು ಮಂಗಳವಾರ ರಾತ್ರಿ ಗುಂಡು ಹಾರಿಸಿದರು. ಆಗ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದೆ.ಗುಂಡು ಹಾರಿಸಿದ್ದರಿಂದ ವಿಚಲಿತರಾಗದ ಚಳವಳಿಗಾರರು, 2000ಕ್ಕೂ ಹೆಚ್ಚು ಮಂದಿಯನ್ನು ಒಗ್ಗೂಡಿಸಿ ವಿ.ವಿ ಆವರಣದಲ್ಲಿ ಧರಣಿಯನ್ನು ಮುಂದುವರಿಸಿದ್ದಾರೆ. ಯೆಮನ್ ಅಧ್ಯಕ್ಷರ ವಿರುದ್ಧ  ಕಳೆದ ಎರಡು ವಾರಗಳಿಂದ ನಡೆಯುತ್ತಿರುವ ಹೋರಾಟದಲ್ಲಿ ಈವರೆಗೆ 14 ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಭ್ರಷ್ಟಾಚಾರ, ನಿರುದ್ಯೋಗ ಸಮಸ್ಯೆಯಿಂದ ಹತಾಶರಾಗಿದ್ದ ಯೆಮನ್ ನಾಗರಿಕರು ಈಜಿಪ್ಟ್‌ನಲ್ಲಿ ನಡೆದ ಜನಾಂದೋಲನದಿಂದ ಸ್ಫೂರ್ತಿಗೊಂಡು ತಮ್ಮದೇಶದ ಅಧ್ಯಕ್ಷರ ವಿರುದ್ಧ ದಂಗೆ ಎದ್ದಿದ್ದಾರೆ.

ಸರ್ಕಾರದ ಪರ ಮತ್ತು ವಿರೋಧಿಗಳ ಗುಂಪಿನವರು ಭದ್ರತಾ ಪಡೆಯವರನ್ನು ಗುರಿಯಾಗಿಟ್ಟಿಕೊಂಡು ಕಲ್ಲು ತೂರಾಟ ನಡೆಸಿದಾಗ ಈ ಎರಡೂ ಗುಂಪುಗಳ ನಡುವೆ ಘರ್ಷಣೆ ಉಂಟಾಯಿತು. ಆಗ ಭದ್ರತಾ ಪಡೆಯವರು ಗಲಭೆಯನ್ನು ನಿಯಂತ್ರಿಸಲು ಗಾಳಿಯಲ್ಲಿ ಗುಂಡು ಹಾರಿಸಿದರು. ಇದ್ದರಿಂದ ಪ್ರಚೋದಿತಗೊಂಡ ಸರ್ಕಾರದ ಪರವಾಗಿದ್ದ ಗುಂಪಿನವರು ಸ್ವಯಂ ಚಾಲಿತ ಗನ್‌ಗಳಿಂದ ವಿರೋಧಿ ಗುಂಪಿನ ಮೇಲೆ ಗುಂಡು ಹಾರಿಸತೊಡಗಿದರು. ಇದನ್ನು ಕಂಡ ಪೊಲೀಸರು ಸ್ಥಳದಿಂದ ಓಡಿ ಹೋದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ಆದರೆ ಸರ್ಕಾರಿ ಮೂಲಗಳು ಅಧ್ಯಕ್ಷರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರು ಸಹ ಗುಂಡು ಹಾರಿಸಿದ್ದಾರೆ. ಇದರಿಂದ ಸರ್ಕಾರದ ಪರ ಗುಂಪಿನಲ್ಲಿ ಒಬ್ಬ ಸತ್ತಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದೆ.ಈ ಮಧ್ಯೆ ಯೆಮನ್‌ನ ದಕ್ಷಿಣ ಭಾಗದಲ್ಲಿರುವ ಅಡೇನ್ ಪಟ್ಟಣದಲ್ಲಿ ಚಳವಳಿ ನಡೆಸುತ್ತಿದ್ದ ಪ್ರಜಾಪ್ರಭುತ್ವದ ಪರ ಹೋರಟಗಾರರ ಮೇಲೆ  ಪೊಲೀಸರು ಸೋಮವಾರ ನಡೆಸಿದ ದಾಳಿಯಲ್ಲಿ ಒಬ್ಬ ಯುವಕ ಸತ್ತಿದ್ದು, ನಾಲ್ವರು ಗಾಯಗೊಂಡಿದ್ದಾರೆ.ಯೆಮನ್‌ನಲ್ಲಿ 1978ರಿಂದ ಅಧಿಕಾರದಲ್ಲಿರುವ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೆ, ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಚುನಾವಣೆಯಿಂದ ಮಾತ್ರ ಸಾಧ್ಯ ಎಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಆದರೆ ಈ ಮೊದಲು ಅವರು 2013ರಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಉಮೇದುವಾರಿಕೆ ಮಾಡುವುದಿಲ್ಲ ಎಂದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry