ಯೋಗದಲ್ಲಿ ಒಂದು ಭ್ರಷ್ಟ ಅಧ್ಯಾಯ

ಬುಧವಾರ, ಜೂಲೈ 17, 2019
29 °C

ಯೋಗದಲ್ಲಿ ಒಂದು ಭ್ರಷ್ಟ ಅಧ್ಯಾಯ

Published:
Updated:

`ಯೋಗದಲ್ಲಿ ಒಂದು ಅಧ್ಯಾಯ~ ಎಂಬ ರಾಮಮನೋಹರ ಲೋಹಿಯಾ ಅವರ ಪ್ರಖ್ಯಾತ ಲೇಖನವೊಂದಿದೆ. ಲೋಹಿಯಾ ಅವರು ಬ್ರಿಟಿಷ್ ಸರ್ಕಾರದ ಬಂಧಿಯಾಗಿ ಲಾಹೋರ್ ಜೈಲಿನಲ್ಲಿ ಅಸಾಧ್ಯ ಹಿಂಸೆ ಅನುಭವಿಸುತ್ತಿದ್ದಾಗ  ಯೋಗದ ಆಶ್ರಯ ಪಡೆಯಲು ಯತ್ನಿಸುತ್ತಾರೆ.

 

ಪತಂಜಲಿಯ ಯೋಗಸೂತ್ರದ ಆರಂಭದಲ್ಲಿರುವ ಎರಡನೆಯ ಸೂತ್ರದ `ಚಿತ್ತ ವೃತ್ತಿಯ ನಿರೋಧ~ದ ಕಲ್ಪನೆಯ ಮೂಲಕ ಲೋಹಿಯಾ ಆ ಜೈಲಿನ ಹಿಂಸೆಯನ್ನು ಮೀರಲೆತ್ನಿಸುತ್ತಾರೆ.

 

ಪತಂಜಲಿಯ ಯೋಗಸೂತ್ರವನ್ನು ಲಾಭದ ಸಾಧನವಾಗಿ ಬಳಸಿರುವ ರಾಮ್‌ದೇವ್ ಅವರು ಲೋಹಿಯಾರನ್ನಿರಲಿ, ಪತಂಜಲಿಯನ್ನು ಕೂಡ ಆಳವಾಗಿ ಓದಿರಲಾರರು. ಆದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಒಂದು ಮಟ್ಟದ ಪ್ರಭಾವವನ್ನಾದರೂ ಬೀರಬಹುದಾದ ಯೋಗದ ಕಲ್ಪನೆಯನ್ನು ಮಾತ್ರ ಅವರು ಅಪಾಯಕಾರಿಯಾಗಿ ದಾರಿ ತಪ್ಪಿಸಿದ್ದಾರೆ.ದೇಹ ಹಾಗೂ ಮನಸ್ಸಿನ ಬಗ್ಗೆ ಈಚಿನ ವರ್ಷಗಳಲ್ಲಿ ಭಾರತದ ಮಧ್ಯಮ ವರ್ಗದಲ್ಲಿ ಹಬ್ಬಿರುವ ಹೊಸ  ಹಾಗೂ ಹುಸಿ ಆತಂಕವನ್ನು  ದುರ್ಬಳಕೆ ಮಾಡಿಕೊಂಡು ರಾಮ್‌ದೇವ್ ಮತ್ತು ಅವರ ಅನುಯಾಯಿಗಳು ಸಾವಿರಾರು ಕೋಟಿ ರೂಪಾಯಿ ಗಳಿಸುವ ಯೋಗ ಪಡೆದಿದ್ದಾರೆ!ಯೋಗದ ನೆಪದಲ್ಲಿ ಈ ಬಾಬಾ ಮತ್ತು ಅವರ ಸಹಯೋಗಿಗಳು ಈ ಶಿಬಿರಗಳ ಮೂಲಕ ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಭಾರತದ  ಮಧ್ಯಮ ವರ್ಗ ಹಾಗೂ ಕಾರ್ಪೊರೇಟ್ ವರ್ಗ, ಹಾಗೂ ಈ ಶಿಬಿರಗಳಲ್ಲಿ ಬಾಬಾ ಮತ್ತು ಅವರ ಮ್ಯಾನೇಜರುಗಳು ಅತ್ಯಂತ ನಾಜೂಕಾಗಿ ಬಳಸುತ್ತಿರುವ ಕಂದಾಚಾರಿ ಭಾಷೆ-ಇವೆಲ್ಲ ಯಾವ ಶಕ್ತಿಗಳಿಗೆ ಹಾಗೂ ಯಾವ ಪಕ್ಷಕ್ಕೆ ಸಹಾಯ ಮಾಡುತ್ತಿವೆ ಎಂಬುದು ಕೂಡ ಈಗ ಗುಟ್ಟೇನೂ ಅಲ್ಲ.ಅಣ್ಣಾ ಹಜಾರೆಯವರಿಗೆ ಕೊಟ್ಟ ಬೆಂಬಲಕ್ಕಿಂತ ಹೆಚ್ಚಿನ ಬೆಂಬಲವನ್ನು ಬಿಜೆಪಿ ರಾಮ್‌ದೇವ್‌ಗೆ ಯಾಕೆ ಕೊಡುತ್ತಿದೆ ಎಂಬುದಕ್ಕೆ ಕೂಡ ಕಾರಣ ಸ್ಪಷ್ಟವಾಗಿದೆ. ಗಾಂಧೀವಾದಿ ಹಜಾರೆಯವರ ಒಂದೇ ದಿಕ್ಕಿನ ಹೋರಾಟವನ್ನು ಸುಲಭವಾಗಿ ನಿಯಂತ್ರಿಸುವುದು ಬಿಜೆಪಿಗೆ ಕೊಂಚ ಕಷ್ಟ.ಆದರೆ, ರಾಮ್‌ದೇವ್ ಬಿಜೆಪಿಯ `ಬಳಸು ಮತ್ತು ಬಿಸಾಡು~ ತತ್ವಕ್ಕೆ ಹೊಂದುವ  ಸಂತ ಮುಖವಾಡದ ನಾಯಕ ಮಾದರಿಗೆ ತಕ್ಕಂತಿದ್ದಾರೆ. ಆರ್ಥಿಕ ಭ್ರಷ್ಟಾಚಾರದ ವಿರುದ್ಧ ಇಷ್ಟೊಂದು ಮಾತಾಡುವ ರಾಮ್‌ದೇವ್, ಮನಸ್ಸಿನ ನಿಯಂತ್ರಣದ ಮೂಲಕ ವೈಯಕ್ತಿಕ ನೆಲೆಯಲ್ಲಾದರೂ ಭ್ರಷ್ಟಾಚಾರವನ್ನು ನಿಯಂತ್ರಿಸಿಕೊಳ್ಳುವ  ಮಾರ್ಗವನ್ನೇನೂ ಈ ದುಬಾರಿ ಶುಲ್ಕಗಳ ಶಿಬಿರಗಳಲ್ಲಿ ಹೇಳಿ ಕೊಡುತ್ತಿಲ್ಲ.ಅಸಲಿ ವ್ಯಕ್ತಿಗತ ಶುದ್ಧಿ ಹಾಗೂ ನಿಜವಾದ ಆತ್ಮ ಪರೀಕ್ಷೆಯ ಭಾಷೆಯನ್ನು ಬಳಸಲಾರಂಭಿಸಿದ ತಕ್ಷಣ ಶಿಬಿರಾರ್ಥಿಗಳು ಜಾಗ ಖಾಲಿ ಮಾಡುತ್ತಾರೆ ಎಂಬ ಸರಳ ಸತ್ಯ ಬಾಬಾಗೂ ಅವರ ಧನದಾಹಿ ಮ್ಯಾನೇಜರುಗಳಿಗೂ ಚೆನ್ನಾಗಿ ಗೊತ್ತಿದೆ.ಆದ್ದರಿಂದಲೇ `ಆರ್ಟ್ ಆಫ್ ಲಿವಿಂಗ್~ನ ರವಿಶಂಕರರೂ ಸೇರಿದಂತೆ ಈ ಬಗೆಯ ಶಿಬಿರಗಳಲ್ಲಿ ವ್ಯಕ್ತಿಗತ ಶುದ್ಧಿಯ ಬಗ್ಗೆ ಹಾಗೂ ತನ್ನನ್ನು  ತಾನು ಪ್ರಶ್ನಿಸಿ ತಿದ್ದಿಕೊಳ್ಳುವ ಬಗ್ಗೆ ಯಾವುದೇ ಮೂಲಭೂತ ಪ್ರಶ್ನೆಗಳನ್ನು ಎತ್ತುವುದೇ ಇಲ್ಲ.ಅಲ್ಲಿ ಭಾಗಿಯಾಗುವ, ವಿವಿಧ ಸಾರ್ವಜನಿಕ ವಲಯಗಳಲ್ಲಿ ಕೆಲಸ ಮಾಡುವ ಶಿಬಿರಾರ್ಥಿಗಳಿಗೆ  `ಸಾರ್ವಜನಿಕ ಹಣದ ಬಗ್ಗೆ ಕಾಳಜಿ ಹಾಗೂ ಎಚ್ಚರವಿರಲಿ~ ಎಂದಾಗಲೀ, `ಲಂಚ ಹೊಡೆಯಬೇಡಿ~ ಎಂದಾಗಲೀ ಬುದ್ಧಿವಾದ ಹೇಳುವುದೂ ಇಲ್ಲ.ಈ ಶಿಬಿರಗಳಲ್ಲಿ ಸಾಮಾನ್ಯವಾಗಿ ಭಾರತದ ವೈದಿಕ ವರ್ಗ ಬಳಸುತ್ತಿರುವ ಅಮೂರ್ತ ಆತ್ಮಶುದ್ಧಿಯ ಭಾಷೆಯನ್ನೇನೋ ಬಳಸುತ್ತಿರುತ್ತಾರೆ.

 

ಆದರೆ, ತಾವು ಸದಾ ಹೇಳುವ ಶಾಸ್ತ್ರಗಳ ಆಧಾರ ಬಳಸಿ ಈ ಶಿಬಿರಾರ್ಥಿಗಳಲ್ಲಿ ಇರಬಹುದಾದ ಲಂಚಕೋರ ಬುದ್ಧಿಯನ್ನು, ಜನವಿರೋಧಿ ಧೋರಣೆಗಳನ್ನು ತಿದ್ದಿದ ಉದಾಹರಣೆಗಳು ಮಾತ್ರ ಇಲ್ಲ.ಯಾಕೆಂದರೆ, ಈ ಪ್ರಶ್ನೆಗಳು ಅಂತಿಮವಾಗಿ ತಮ್ಮ ಕಾಲಬುಡಕ್ಕೇ ಬರುತ್ತವೆ  ಎಂಬ ಸತ್ಯ ಈ ಬಗೆಯ ಮ್ಯಾನೇಜೀರಿಯಲ್ ಆಧ್ಯಾತ್ಮಿಕ ಗುರುಗಳಿಗೂ, ಅವನ್ನು ನಡೆಸುವವರಿಗೂ ಚೆನ್ನಾಗಿ ಗೊತ್ತಿರುತ್ತದೆ.ಇವತ್ತು ಆರೆಸ್ಸೆಸ್ ಭ್ರಷ್ಟಾಚಾರದ ವಿರುದ್ಧ ನೇರವಾದ ಹೋರಾಟಕ್ಕೆ ಇಳಿದರೆ ಅದು ಯಡಿಯೂರಪ್ಪ ಹಾಗೂ ಮೋದಿ ಸರ್ಕಾರದ ವಿರುದ್ಧವೇ ಹೋರಾಡಬೇಕಾಗುತ್ತದೆ ಎಂಬುದೂ ಅದರ ಮುಖಂಡರಿಗೆ ಗೊತ್ತಿದೆ.ಆ ಕಾರಣಕ್ಕೇ ಅದು ತನ್ನ ಬಗೆಬಗೆಯ ಕಾರ‌್ಯನೀತಿಗಳಿಗೆ ಬಗೆಬಗೆಯ ಸಂಸ್ಥೆಗಳನ್ನು ಬಳಸಿಕೊಳ್ಳುವ ರೀತಿಯಲ್ಲಿಯೇ ರಾಮ್‌ದೇವ್ ಅವರನ್ನು ಬೆಂಬಲಿಸಲು  ಕೂಡ ತನ್ನ ಅಂಗ ಸಂಸ್ಥೆಗಳನ್ನು ಬಳಸಿಕೊಂಡಿದೆ.ಜೊತೆಗೆ, ಕರ್ನಾಟಕದಲ್ಲಿ ನಾವೇ ನೋಡಿದಂತೆ ಒಂದುಕಾಲಕ್ಕೆ ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿಗಳಂಥ ಸಂಘಟನೆಗಳು ವ್ಯವಸ್ಥೆಯ ದಿನದಿನದ ಭ್ರಷ್ಟಾಚಾರದ ವಿರುದ್ಧ ಹೋರಾಡಿವೆಯೇ ಹೊರತು, ಆರೆಸ್ಸೆಸ್ ಇಂಥ ಹೋರಾಟವನ್ನು ಎಂದೂ ಕೈಗೆತ್ತಿಕೊಂಡಿಲ್ಲ. ಭ್ರಷ್ಟಾಚಾರದ ವಿರುದ್ಧ ದಿನದಿನದ ಪ್ರಶ್ನೆಗಳನ್ನು ಎತ್ತದೆ, ಅದರ ವಿರುದ್ಧ ಹೋರಾಟ ಮಾಡದೆ, ಭ್ರಷ್ಟಾಚಾರ ಕುರಿತ ವಿಶಾಲ ಪ್ರಶ್ನೆಗಳನ್ನು ಯಾರು ಬೇಕಾದರೂ ಆರಾಮವಾಗಿ ಎತ್ತಬಹುದು.ಆದರೆ ರಾಮ್‌ದೇವ್ ಅವರ ಮೇಲಿನ ಹಲ್ಲೆಯನ್ನು ಬೆಂಬಲಿಸಿ  ಧರಣಿ ಕೂತವರು ಈ ಥರದ ಸಂಸ್ಥೆಗಳಲ್ಲಿ ತಮ್ಮ ಕಣ್ಣೆದುರಿಗೇ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಸಾಂಕೇತಿಕ ಪ್ರತಿಭಟನೆಯನ್ನು ಕೂಡ ತೋರುವುದಿಲ್ಲ.ಇಂಥವರಿಗೆ ವಿದೇಶದಲ್ಲಿರುವ ಕಪ್ಪುಹಣದ ಬಗ್ಗೆ ಚೀರುವುದು ಸುಲಭ. ಆದರೆ ತಂತಮ್ಮ ಟ್ರಸ್ಟುಗಳು ಹಾಗೂ ಕಂಪೆನಿಗಳಿಗೆ ಹರಿದು ಬರುವ ಕಪ್ಪು ಹಣದ ಬಗ್ಗೆ ವಿವರಣೆ ಕೊಡುವುದು ಕಷ್ಟ!ಆದ್ದರಿಂದಲೇ ಯಾವ ಪ್ರಾಚೀನ ವಿದ್ಯೆಯನ್ನಾದರೂ ಬಳಸಿಕೊಂಡು ಭ್ರಷ್ಟಾಚಾರಕ್ಕೆ ಇಳಿಯುವವರು ತಮ್ಮ ಭ್ರಷ್ಟಾಚಾರಿ ಸಂಸ್ಥೆಗಳನ್ನು ರಕ್ಷಿಸಲು ಮಾಡುತ್ತಿರುವ ಈ ಬಗೆಯ ಕಪಟ ಆಂದೋಲನಗಳನ್ನು ವಿರೋಧಿಸುವುದರ ಜೊತೆಗೆ ಯೋಗದ ಮೂಲಕ ಕಂದಾಚಾರಿ ಮನಸ್ಸುಗಳನ್ನು ಸೃಷ್ಟಿಸುವ ಯೋಜಿತ ಯೋಗಿಕ ಭ್ರಷ್ಟಾಚಾರದ ಗುಪ್ತ ಹಾಗೂ ವ್ಯಾಪಕ ಸಂಚನ್ನೂ ವಿರೋಧಿಸಬೇಕು.`ಶಸ್ತ್ರ ಹಾಗೂ ಶಾಸ್ತ್ರಗಳೆರಡನ್ನೂ ಬಳಸಿ ಹೋರಾಡುತ್ತೇನೆ~ ಎನ್ನುತ್ತಿರುವ ಬಾಬಾ ರಾಮ್‌ದೇವ್ ಮತ್ತವರ ಸಹಯೋಗಿಗಳು ಬಳಸುತ್ತಿರುವ ಕಂದಾಚಾರಿ ಶಾಸ್ತ್ರಗಳು ಭಾರತಕ್ಕೆ ಯಾವುದೇ ಶಸ್ತ್ರಗಳಿಗಿಂತ  ಹೆಚ್ಚು ಅಪಾಯಕಾರಿಯಾಗಿವೆ ಎಂಬುದನ್ನು ಮೊದಲು ಅರಿಯಬೇಕು.

-

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry