ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗಾಚಾರ್ಯ ಬಿಕೆಎಸ್ ಅಯ್ಯಂಗಾರ್ ಇನ್ನಿಲ್ಲ

Last Updated 20 ಆಗಸ್ಟ್ 2014, 9:31 IST
ಅಕ್ಷರ ಗಾತ್ರ

ಪುಣೆ (ಪಿಟಿಐ): ವಿಶ್ವ ವಿಖ್ಯಾತ ಯೋಗ ಗುರು ಹಾಗೂ ಅಯ್ಯಂಗಾರ್ ಯೋಗ ಶಾಲೆಯ ಸಂಸ್ಥಾಪಕ ಬಿ ಕೆ ಎಸ್ ಅಯ್ಯಂಗಾರ್ ಅವರು ಅಸ್ವಾಸ್ಥ್ಯದ ಪರಿಣಾಮವಾಗಿ ಬುಧವಾರ ನಸುಕಿನ ವೇಳೆಯಲ್ಲಿ ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು.

ಕೆಲ ಸಮಯದಿಂದ ಅಸ್ವಸ್ಥರಾಗಿದ್ದ ಅಯ್ಯಂಗಾರ್ ಅವರನ್ನು ವಾರದ ಹಿಂದೆ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಹಿಂದೆ ದೇಹಸ್ಥಿತಿ ವಿಷಮಿಸಿದ ಪರಿಣಾಮವಾಗಿ ಅವರನ್ನು ಡಯಾಲಿಸಿಸ್ ಗೆ ಒಳಪಡಿಸಲಾಗಿತ್ತು. ಬುಧವಾರ ನಸುಕಿನ 3.15ರ ವೇಳೆಗೆ ಅವರು ಕೊನೆಯುಸಿರು ಎಳೆದರು.

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದ ಅಯ್ಯಂಗಾರ್ ಅವರು ಒಬ್ಬ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ತೀವ್ರ ಉಸಿರಾಟದ ತೊಂದರೆ ಕಾರಣ ಆಗಸ್ಟ್ 12ರಂದು ಅಯ್ಯಂಗಾರ್ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅವರಿಗೆ ಚಿಕಿತ್ಸೆ ನೀಡಿದ್ದ ಡಾ. ದೀಪಾಲಿ ಮಾಂಡೆ ಪಿಟಿಐಗೆ ತಿಳಿಸಿದರು.

'ಮೂರು ವಾರಗಳಷ್ಟು ಕಾಲ ಮನೆಯಲ್ಲಿ ಅಸ್ವಸ್ಥರಾಗಿದ್ದರೂ ಆಸ್ಪತ್ರೆಗೆ ದಾಖಲಾಗಲು ಅವರಿಗೆ ಮನಸ್ಸಿರಲಿಲ್ಲ. ಉಸಿರಾಟದ ಸಮಸ್ಯೆಯ ಜೊತೆಗೆ  ಮೂತ್ರಪಿಂಡ ವಿಫಲಗೊಂಡ ಕಾರಣ ಅವರನ್ನು ಡಯಾಲಿಸಿಸ್ ಗೆ ಒಳಪಡಿಸಬೇಕಾಯಿತು ಎಂದು ದೀಪಾಲಿ ನುಡಿದರು.

ವಿಶ್ವದ ಅತ್ಯಂತ ಹಿರಿಯ ಯೋಗ ಗುರುಗಳಲ್ಲಿ ಒಬ್ಬರೆಂಬುದಾಗಿ ಪರಿಗಣಿತರಾಗಿದ್ದ ಅಯ್ಯಂಗಾರ್ ಅವರು, ಯೋಗಾಭ್ಯಾಸ ಮತ್ತು ಯೋಗ ಸಿದ್ಧಾಂತಕ್ಕೆ ಸಂಬಂಧಿಸಿದಂತೆ 'ಲೈಟ್ ಆನ್ ಯೋಗ', 'ಲೈಟ್ ಆನ್ ಪ್ರಾಣಾಯಾಮ' ಮತ್ತು 'ಲೈಟ್ ಆನ್ ಯೋಗ ಸೂತ್ರಾಸ್ ಆಫ್ ಪತಂಜಲಿ' ಗ್ರಂಥಗಳನ್ನು ರಚಿಸಿದ್ದಾರೆ.

ಪ್ರಧಾನಿ ಶೋಕ: ಯೋಗ ಗುರು ಅಯ್ಯಂಗಾರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಶೋಕ ವ್ಯಕ್ತ ಪಡಿಸಿದ್ದಾರೆ. 'ಯೋಗಾಚಾರ್ಯ ಬಿ ಕೆ ಎಸ್ ಅಯ್ಯಂಗಾರ್ ಅವರ ನಿಧನದ ವಾರ್ತೆಯಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ವಿಶ್ವದಾದ್ಯಂತ ಇರುವ ಅವರ ಅನುಯಾಯಿಗಳಿಗೆ ನಾನು ಸಂತಾಪ ಸಲ್ಲಿಸುತ್ತಿದ್ದೇನೆ' ಎಂದು ಮೋದಿ ಟ್ವಿಟ್ಟರ್ ನಲ್ಲಿ 'ಟ್ವೀಟ್' ಮಾಡಿದ್ದಾರೆ.

'ಬಿ ಕೆ ಎಸ್ ಅಯ್ಯಂಗಾರ್ ಅವರನ್ನು ಅತ್ಯುತ್ತಮ ಗುರುವಾಗಿ, ವಿದ್ವಾಂಸರಾಗಿ, ಬಲಿಷ್ಠ ವ್ಯಕ್ತಿತ್ವವಾಗಿ ತಲೆಮಾರುಗಳು ನೆನಪಿನಲ್ಲಿ ಇಟ್ಟುಕೊಳ್ಳುತ್ತವೆ. ವಿಶ್ವದಾದ್ಯಂತ ಹಲವಾರು ಮಂದಿಯ ಬದುಕಿನಲ್ಲಿ ಅವರು ಯೋಗವನ್ನು ಹಾಸುಹೊಕ್ಕಾಗಿಸಿದ್ದಾರೆ' ಎಂದು ಪ್ರಧಾನಿ ಹೇಳಿದ್ದಾರೆ.

ಖ್ಯಾತ ಯೋಗ ಪಟುವಾಗಿ ಅಯ್ಯಂಗಾರ್ ಅವರು ಪ್ರಾಚೀನ 'ಪತಂಜಲಿ ಸೂತ್ರ'ವನ್ನು ಜನಪ್ರಿಯಗೊಳಿಸಿದ್ದಾರೆ. 60ಕ್ಕೂ ಹೆಚ್ಚು ಪೌರಾತ್ಯ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಂಚರಿಸಿ ಯೋಗಾಭ್ಯಾಸವನ್ನು ಹರಡಿದ್ದಾರೆ.

ತಮ್ಮ ಅಂತ್ಯದವರೆಗೂ ಸಕ್ರಿಯರಾಗಿದ್ದ ಯೋಗಾಚಾರ್ಯ ಅಯ್ಯಂಗಾರ್ ಅವರು ಯೋಗಸಂಸ್ಥೆಯ ಮೂಲಕ ರಾಷ್ಟ್ರದಲ್ಲಿ ಮತ್ತು ವಿದೇಶಗಳಲ್ಲಿ ಅಪಾರ ಸಂಖ್ಯೆಯ ಅನುಯಾಯಿಗಳನ್ನು ಗಳಿಸಿದ್ದಾರೆ. 'ಆಧುನಿಕ ಋಷಿ' ಎಂದೇ ಗುರುತಿಸಿಕೊಂಡಿದ್ದ ಅವರು ವಿಶ್ವದಾದ್ಯಂತ ತಮ್ಮ ಸಂಸ್ಥೆಯ 100ಕ್ಕೂ ಹೆಚ್ಚು ಶಾಖೆಗಳನ್ನು ತೆರೆದಿದ್ದರು.

ಕರ್ನಾಟಕದ ಬೆಳ್ಳೂರಿನಲ್ಲಿ 1918ರಲ್ಲಿ ಜನಿಸಿದ ಅಯ್ಯಂಗಾರ್ 1937ರಲ್ಲಿ ಮಹಾರಾಷ್ಟ್ರದ ಪುಣೆಗೆ ಬಂದರು. ತಮ್ಮ ಯೋಗ ಜ್ಞಾನವನ್ನು ಹರಡಿದ ಬಳಿಕ 1975ರಲ್ಲಿ ತಮ್ಮದೇ ಆದ 'ಯೋಗ ವಿದ್ಯಾ' ಆರಂಭಿಸಿದರು. ಬಳಿಕ ದೇಶ- ವಿದೇಶಗಳಲ್ಲಿ ಇದರ ಶಾಖೆಗಳನ್ನು ತೆರೆದರು.

ಅಯ್ಯಂಗಾರ್ ಅವರ  ಬಳಿ ಸಾಮಾನ್ಯರಷ್ಟೇ ಅಷ್ಟೇ ಅಲ್ಲ, ಭಾರಿ ಸಂಖ್ಯೆಯಲ್ಲಿ ಗಣ್ಯರೂ ಯೋಗ ಕಲಿತಿದ್ದಾರೆ. ಖ್ಯಾತ ಸಮಾಜವಾದಿ ಧುರೀಣ ಜಯ ಪ್ರಕಾಶ ನಾರಾಯಣ (ಜೆಪಿ),  ತತ್ವಜ್ಞಾನಿ ಜೆ. ಕೃಷ್ಣಮೂರ್ತಿ, ವಿಶ್ವವಿಖ್ಯಾತ ಪಿಟೀಲುವಾದಕ ಯೆಹೂಡಿ ಮೆನುಹಿನ್ ಅವರ ಯೋಗ ಶಿಷ್ಯರಲ್ಲಿ ಸೇರಿದ್ದಾರೆ.

ಯೋಗ ತಂತ್ರಗಳ ಬಗ್ಗೆ ಅಯ್ಯಂಗಾರ್ ಅವರು 14 ಗ್ರಂಥಗಳನ್ನು ರಚಿಸಿದ್ದು ಅವು 'ಅಯ್ಯಂಗಾರ್ ಯೋಗ' ಎಂಬುದಾಗಿಯೇ ಖ್ಯಾತಿ ಪಡೆದಿವೆ. ಈ ಗ್ರಂಥಗಳು 17ಕ್ಕೂ ಹೆಚ್ಚು ಭಾಷೆಗಳಿಗೆ ತರ್ಜುಮೆಗೊಂಡಿವೆ. ಕಲೆ, ನೃತ್ಯ, ರಂಗಭೂಮಿ, ಕ್ರಿಕೆಟ್ ನಲ್ಲೂ ಅಯ್ಯಂಗಾರ್ ಅವರಿಗೆ ಅಪೂರ್ವ ಆಸಕ್ತಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT