ಮಂಗಳವಾರ, ನವೆಂಬರ್ 12, 2019
28 °C

ಯೋಗೇಶ್ವರ್‌ಗೆ ಆಘಾತ ತಂದ ಕಾಂಗ್ರೆಸ್ ನಡೆ

Published:
Updated:
ಯೋಗೇಶ್ವರ್‌ಗೆ ಆಘಾತ ತಂದ ಕಾಂಗ್ರೆಸ್ ನಡೆ

ರಾಮನಗರ: ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವವನ್ನೂ ತೆಗೆದುಕೊಳ್ಳದೆ `ನಾನೇ ಕಾಂಗ್ರೆಸ್ ಅಭ್ಯರ್ಥಿ' ಎಂದು ಚನ್ನಪಟ್ಟಣ ಕ್ಷೇತ್ರದಲ್ಲೆಲ್ಲ ಸುತ್ತಾಡಿ ಪ್ರಚಾರ ಕಾರ್ಯ ಕೈಗೊಂಡಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ `ಹೈಕಮಾಂಡ್' ಟಿಕೆಟ್ ನೀಡದಿರುವುದು ತೀವ್ರ ಆಘಾತ, ಮುಜುಗರ ಉಂಟಾಗುವಂತೆ ಮಾಡಿದೆ.`ಆಪರೇಷನ್ ಕಮಲ'ಕ್ಕೆ ಒಳಗಾದವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಕಾಂಗ್ರೆಸ್ ಹಲವು ಬಾರಿ ಹೇಳಿದ್ದರೂ, ಯೋಗೇಶ್ವರ್, ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಅತಿಯಾದ ಆತ್ಮವಿಶ್ವಾಸ ಹೊಂದಿದ್ದರು.ಕ್ಷೇತ್ರದಿಂದ ನಾಲ್ಕು ಬಾರಿ (1999, 2004, 2008, 2010) ಶಾಸಕರಾಗಿ ಆಯ್ಕೆಯಾಗಿ, ಒಮ್ಮೆ ಸಚಿವರಾಗಿದ್ದ ಅವರು ಕಾಂಗ್ರೆಸ್ ಟಿಕೆಟ್ ದೊರೆಯದಿದ್ದರಿಂದ ನಿರಾಸೆಗೆ ಒಳಗಾಗ್ದ್ದಿದರೂ, ಕೈಚೆಲ್ಲಿ ಕುಳಿತಿಲ್ಲ.ಅಂತಿಮ ಕಸರತ್ತು: `ಕಾಂಗ್ರೆಸ್ ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಏನಂತೆ. ಇನ್ನೂ `ಬಿ ಫಾರಂ' ವಿತರಣೆ ಆಗಿಲ್ಲ. ಈಗಲೂ ಕಾಲ ಮಿಂಚಿಲ್ಲ. ಅಂತಿಮ ಕಸರತ್ತು ನಡೆಸುತ್ತೇನೆ. ಹೈಕಮಾಂಡ್‌ನ ಮನವೊಲಿಸುವ ಯತ್ನಗಳು ಸಾಗಿದ್ದು ಬಿ ಫಾರಂ ದೊರೆಯಬಹುದು' ಎಂದು ಯೋಗೇಶ್ವರ್ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಈಗಾಗಲೇ ಕಾಂಗ್ರೆಸ್, ಚನ್ನಪಟ್ಟಣದಲ್ಲಿ ತನ್ನ ಅಭ್ಯರ್ಥಿಯನ್ನಾಗಿ ಮಾಜಿ ಶಾಸಕ ಸಾದತ್ ಅಲಿಖಾನ್ ಅವರ ಹೆಸರು ಪ್ರಕಟಿಸಿದೆ. ಆದರೆ ಯೋಗೇಶ್ವರ್ ಬೆಂಬಲಿಗರು ಸಾದತ್ ಅಲಿಖಾನ್ ಅವರ ಮನವೊಲಿಸುವ ಪ್ರಯತ್ನ ಕೈಗೊಂಡಿದ್ದಾರೆ. ಅವರೇ ಸ್ವಯಂ ಪ್ರೇರಣೆಯಿಂದ ಕಣದಿಂದ ಹಿಂದೆ ಸರಿಯುವಂತೆ ಮಾಡಿ, ಯೋಗೇಶ್ವರ್ ಅವರಿಗೆ ಟಿಕೆಟ್ ದೊರಕಿಸುವಂತೆ ಮಾಡುವ ನಿಟ್ಟಿನಲ್ಲಿ ಯತ್ನಗಳು ಸಾಗಿವೆ ಎಂದು ಯೋಗೇಶ್ವರ್ ಆಪ್ತರೊಬ್ಬರು ತಿಳಿಸಿದ್ದಾರೆ.ಈ ಕುರಿತು `ಪ್ರಜಾವಾಣಿ' ಜತೆ ಮಾತನಾಡಿದ ಸಾದತ್ ಅಲಿಖಾನ್ ಅವರು, `ನನ್ನ ಪಕ್ಷ ನಿಷ್ಠೆ ಮತ್ತು ಪ್ರಾಮಾಣಿಕತೆ ನೋಡಿ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿದೆ. ಮೇಡಂ ನಂಬಿಕೆ ಇಟ್ಟು ನನಗೆ ಟಿಕೆಟ್ ನೀಡಿರುವಾಗ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಸಿದ್ಧ ಇರುವುದಾಗಿ' ಪ್ರತಿಕ್ರಿಯಿಸಿದರು.ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ: ತಮ್ಮೆಲ್ಲ  ಪ್ರಯತ್ನಗಳು ಯಶಸ್ವಿಯಾಗದಿದ್ದರೆ ಅಂತಿಮವಾಗಿ ಬಂಡಾಯ ಕಾಂಗ್ರೆಸ್ ಅಥವಾ ಪಕ್ಷೇತರರಾಗಿ ಸ್ಪರ್ಧಿಸಲೂ ಯೋಗೇಶ್ವರ್ ಸಿದ್ಧರಾಗಿದ್ದಾರೆ ಎಂದು ಗೊತ್ತಾಗಿದೆ.`ಯೋಗೇಶ್ವರ್ ಅವರು ಕಾಂಗ್ರೆಸ್‌ನಿಂದಲೇ ರಾಜಕಾರಣ ಆರಂಭ ಮಾಡಿದರು. ಆದರೆ ಮೊದಲ ಬಾರಿಗೆ ಶಾಸಕರಾಗಿದ್ದು, ಪಕ್ಷೇತರರಾಗಿ. ಹೀಗಾಗಿ ಈ ಬಾರಿಯೂ ಪಕ್ಷೇತರರಾಗಿ ನಿಂತು ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಒರೆಗೆ ಹಚ್ಚಲು ಸಿದ್ಧವಾಗಿದ್ದಾರೆ. 1999ರಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೇ ರೀತಿ ಟಿಕೆಟ್ ನೀಡದೆ ಸಾದತ್ ಅಲಿಖಾನ್ ಅವರನ್ನೇ ಅಭ್ಯರ್ಥಿಯನ್ನಾಗಿಸಿತ್ತು. ಆಗ ಜೆಡಿಎಸ್‌ನಿಂದ ವರದೇಗೌಡ  ಕಣದಲ್ಲಿದ್ದರು. ಅಂಥ ಸಂದರ್ಭದಲ್ಲಿಯೇ ಯೋಗೇಶ್ವರ್ ಪಕ್ಷೇತರರಾಗಿ ನಿಂತು ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಆಯ್ಕೆಯಾದರು. ಇದೀಗ ಅಂತಹದೇ ಪರಿಸ್ಥಿತಿ ಇದ್ದ ಅದನ್ನು ಸಮರ್ಥವಾಗಿ ಎದುರಿಸುತ್ತಾರೆ' ಎನ್ನುತ್ತಾರೆ ಬೆಂಬಲಿಗರು.`ಮೋಸದಾಟ'ದ ಆರೋಪ: ಈ ನಡುವೆ ಕ್ಷೇತ್ರದಲ್ಲಿ ಮೋಸದ ಆಟ (ಮ್ಯಾಚ್ ಫಿಕ್ಸಿಂಗ್) ಅರೋಪ ಕೇಳಿ ಬಂದಿದೆ. `2008ರ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸಿದ್ದ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ದುರ್ಬಲ ಅಭ್ಯರ್ಥಿ ಮಮತಾ ನಿಚ್ಛಾನಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಆ ಚುನಾವಣೆಯಲ್ಲಿ `ಮ್ಯಾಚ್ ಫಿಕ್ಸಿಂಗ್' ಆಗಿತ್ತು. ಆದ್ದರಿಂದ ಕುಮಾರಸ್ವಾಮಿಗೆ ಸುಲಭ ಗೆಲುವು ದೊರೆಯಿತು' ಎಂದು ಕಾಂಗ್ರೆಸ್‌ನ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಅವರು ಶುಕ್ರವಾರ ತಾನೇ ಆರೋಪ ಪುನರುಚ್ಚರಿಸಿದ್ದರು.ಇದೇ ರೀತಿಯಲ್ಲಿ ಈ ಬಾರಿ ಚನ್ನಪಟ್ಟಣ ಕ್ಷೇತ್ರದಲ್ಲಿ `ಮ್ಯಾಚ್ ಫಿಕ್ಸಿಂಗ್' ಆಗಿದೆ.  ಅನಿತಾ ಕುಮಾರಸ್ವಾಮಿ ಅವರಿಗೆ ಪ್ರಬಲ ಪೈಪೋಟಿ ನೀಡುವ ಯೋಗೇಶ್ವರ್ ಅವರಿಗೆ ಟಿಕೆಟ್ ನೀಡದೆ, ದುರ್ಬಲರಾಗಿರುವ ಸಾದತ್ ಅಲಿ ಖಾನ್ ಅವರಿಗೆ ನೀಡಿದೆ ಎಂಬ ಆರೋಪಗಳು ಕ್ಷೇತ್ರದ ಜನರಲ್ಲಿ ಕೇಳಿ ಬರುತ್ತಿವೆ.ಪಕ್ಷಾಂತರಿಗೆ ತಕ್ಕ ಪಾಠ: 2008ರಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಅವರು  ವರ್ಷದಲ್ಲಿಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ತದ ನಂತರ ಬಿಜೆಪಿಯಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಕುಮಾರಸ್ವಾಮಿ ಎದುರು ಸೋತರು. 2009ರಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಜೆಡಿಎಸ್‌ನ ಎಂ.ಸಿ.ಅಶ್ವತ್ಥ್ ಎದುರು ಸೋಲು ಅನುಭವಿಸಿದರು.ಅಶ್ವತ್ಥ್ ಅವರೂ `ಆಪರೇಷನ್ ಕಮಲ'ಕ್ಕೆ ತುತ್ತಾಗಿ ಬಿಜೆಪಿ ಸೇರಿದ್ದರಿಂದ 2010ರಲ್ಲಿ ಎದುರಾದ  ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದರು. ಬಿಜೆಪಿ ಸರ್ಕಾರದಲ್ಲಿ ಕೆಎಸ್‌ಐಸಿ ಅಧ್ಯಕ್ಷರಾಗಿ, ಶಾಸಕರಾಗಿ, ಅರಣ್ಯ ಸಚಿವರಾಗಿ, ರಾಮನಗರ ಮತ್ತು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಯೋಗೇಶ್ವರ್ ಕಾರ್ಯನಿರ್ವಹಿಸಿದ್ದರು.

ಪ್ರತಿಕ್ರಿಯಿಸಿ (+)