ಯೋಗೇಶ್ವರ್ ರಾಜೀನಾಮೆಗೆ ಆಗ್ರಹ

7

ಯೋಗೇಶ್ವರ್ ರಾಜೀನಾಮೆಗೆ ಆಗ್ರಹ

Published:
Updated:

ಚನ್ನಪಟ್ಟಣ: ಮೆಗಾಸಿಟಿ ವಂಚನೆ ಪ್ರಕರಣದಲ್ಲಿ ಸಿಲುಕಿರುವ ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ರಾಜೀನಾಮೆಗೆ ಒತ್ತಾಯಿಸಿ ತಾಲ್ಲೂಕು ಕಾಂಗ್ರೆಸ್ ಘಟಕವು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಯೋಗೇಶ್ವರ್ ಅವರ ಪ್ರತಿಕೃತಿ ದಹನ ಮಾಡಿತು.ಪಟ್ಟಣದ ಕುವೆಂಪು ನಗರದ ಐದನೇ ಅಡ್ಡರಸ್ತೆಯಲ್ಲಿರುವ ಪಕ್ಷದ ಕಚೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸ್ವಲ್ಪಹೊತ್ತು ರಸ್ತೆತಡೆ ನಡೆಸಿ ನಂತರ ಬಸ್ ನಿಲ್ದಾಣದ ಬಳಿ ಯೋಗೇಶ್ವರ್ ಅವರ ಪ್ರತಿಕೃತಿ ದಹಿಸಿ ಪ್ರತಿಭಟನಾ ಸಭೆ ನಡೆಸಿದರು.ಮೆರವಣಿಗೆ ವೇಳೆ ಸಚಿವ ಯೋಗೇಶ್ವರ್ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಮೆಗಾಸಿಟಿ ವಂಚನೆ ಮಾಡಿರುವ ಯೋಗೇಶ್ವರ್ ತಮ್ಮ ಸಚಿವ ಹಾಗೂ ಶಾಸಕ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಯೋಗೇಶ್ವರ್ ವಿರುದ್ಧ ಕೇಂದ್ರ ಕಂಪೆನಿ ವ್ಯವಹಾರಗಳ ಸಚಿವಾಲಯ 14 ಪ್ರಕರಣಗಳನ್ನು ದಾಖಲಿಸಿದೆ. ಆದ್ದರಿಂದ ಯೋಗೇಶ್ವರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದು ಸೂಕ್ತ ಎಂದರು.ಪಕ್ಷದ ತಾಲ್ಲೂಕು ಮುಖಂಡ ರಘುನಂದನ್‌ರಾಮಣ್ಣ ಮಾತನಾಡಿ, ಯೋಗೇಶ್ವರ್ ಮೆಗಾಸಿಟಿ ಹೆಸರಿನಲ್ಲಿ ಸಾರ್ವಜನಿಕರಿಗೆ ಕೋಟ್ಯಾಂತರ ರೂ. ಮೋಸ ಮಾಡಿರುವುದು ಈಗ ಬಯಲಾಗಿದ್ದು, ಕೂಡಲೇ ಇವರನ್ನು ಸಚಿವ ಸಂಪುಟದಿಂದ ವಜಾ ಮಾಡಿ ಬಂಧಿಸಬೇಕು ಎಂದು ಆಗ್ರಹಿಸಿದರು.ಅಂತಿಮವಾಗಿ ಪ್ರತಿಭಟನಾಕಾರರು ತಾಲ್ಲೂಕು ಕಚೇರಿಗೆ ತೆರಳಿ ತಹಸೀಲ್ದಾರ್‌ಗೆ ಮನವಿ ಪತ್ರ ಅರ್ಪಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆಂಪರಾಜು, ಜಿ.ಪಂ. ಮಾಜಿ ಸದಸ್ಯರಾದ ಪದ್ಮಕೃಷ್ಣಯ್ಯ, ಸ್ವಾಮಿ, ರಮೇಶ್, ತಾ.ಪಂ. ಮಾಜಿ ಸದಸ್ಯರಾದ ಶಿವಮಾದು, ಎ.ಸಿ.ವೀರೇಗೌಡ,  ನಾರಾಯಣಸ್ವಾಮಿ, ಕಾವೇರಮ್ಮ, ನಗರ ಬ್ಲಾಕ್ ಕಾಂಗೈ ಅಧ್ಯಕ್ಷ ಮಲವೇಗೌಡ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಕೋಕಿಲಾ ರಾಣಿ, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಸತೀಶ್, ಕಾರ್ಯದರ್ಶಿ ಬಸವರಾಜು, ಮುಖಂಡರಾದ ರಂಗಸ್ವಾಮಿ, ಬಸವರಾಜು, ರಾಜಣ್ಣ, ಚೇತನ್‌ಗೌಡ, ಪಿ.ಡಿ.ರಾಜು, ನಾಗೇಂದ್ರ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಪ್ರತಿಭಟನೆ ವೇಳೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry