ಯೋಗ್ಯರಷ್ಟೇ ಕಸಾಪ ಪ್ರಶಸ್ತಿಗೆ ಆಯ್ಕೆ

ಬುಧವಾರ, ಜೂಲೈ 17, 2019
27 °C

ಯೋಗ್ಯರಷ್ಟೇ ಕಸಾಪ ಪ್ರಶಸ್ತಿಗೆ ಆಯ್ಕೆ

Published:
Updated:

ಬೆಂಗಳೂರು: `ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಪ್ರಶಸ್ತಿಗಳಿಗೆ ಯೋಗ್ಯರು ಮಾತ್ರ ಆಯ್ಕೆಯಾಗುತ್ತಾರೆ. ಇಲ್ಲಿ ಯಾವುದೇ ಲಾಬಿಗಳು ನಡೆಯುವುದಿಲ್ಲ~ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಕೆ.ಆರ್.ನಲ್ಲೂರು ಪ್ರಸಾದ್ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಬುಧವಾರ ನಡೆದ `ವಸುದೇವ ಭೂಪಾಳಂ ಹಾಗೂ ವಿವಿಧ ದತ್ತಿ ಪ್ರಶಸ್ತಿ ಪ್ರದಾನ~ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಕನ್ನಡ ಸಾಹಿತ್ಯ ಪರಿಷತ್ ನೀಡುವ ಪ್ರಶಸ್ತಿಗಳು ಎಂದಿಗೂ ಬೆಲೆ ಬಾಳುವಂತಹವು.ಈಗ ಸಾಹಿತ್ಯ ಪರಿಷತ್ತಿನಲ್ಲಿ 1400 ಕ್ಕೂ ಹೆಚ್ಚು ದತ್ತಿ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ಹತ್ತಾರು ದಶಕಗಳ ಹಿಂದೆ ನೀಡಿದ್ದ 200 ರೂಪಾಯಿಯಿಂದ ಹಿಡಿದು ಈಗ ಕೆಎಸ್‌ಆರ್‌ಟಿಸಿ ನೀಡಿರುವ 1.5 ಕೋಟಿ ರೂಪಾಯಿ ಹಣವು ದತ್ತಿ ಪ್ರಶಸ್ತಿಗಾಗಿ ಮೀಸಲಾಗಿದೆ. ಈಗ ಒಟ್ಟು 4.5 ಕೋಟಿ ಹಣವನ್ನು ದತ್ತಿ ಪ್ರಶಸ್ತಿಗಾಗಿ ಮೀಸಲಿಡಲಾಗಿದೆ~ ಎಂದರು.ಸಾಹಿತಿ ಜಿ.ಎಸ್.ಸಿದ್ದಲಿಂಗಯ್ಯ ಮಾತನಾಡಿ, `ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ತಮಿಳಿನಲ್ಲಿ ಬರೆಯಲು ಅವಕಾಶ ಕಲ್ಪಿಸುವಂತೆ ತಮಿಳುನಾಡು ಒತ್ತಾಯಿಸುತ್ತಿದೆ. ಆದರೆ, ನಮ್ಮ ಕರ್ನಾಟಕ ಸರ್ಕಾರವು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸಲು ನಿಂತಿದೆ. ಕನ್ನಡವೇ ಸರಿಯಾಗಿ ಬಾರದಿರುವವರಿಗೆ ಇಂಗ್ಲಿಷ್‌ಅನ್ನು ಬೋಧಿಸಿದರೆ ಏನು ಪ್ರಯೋಜನ~ ಎಂದು ಹೇಳಿದರು.`ನಾವು ಇಂಗ್ಲಿಷ್ ಭಾಷೆಯ ವಿರೋಧಿಗಳು ಅಲ್ಲ. ಆದರೆ, ಎಲ್ಲರಿಗೂ ಅವರವರದೇ ಆದ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಒದಗಿಸಬೇಕು. ಯಾವುದೇ ಶಿಕ್ಷಣವನ್ನಾಗಲಿ ಸರಿಯಾದ ರೀತಿಯಲ್ಲಿ ಕಲಿಸಿ~ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಮಾತನಾಡಿ, `ಪ್ರಶಸ್ತಿಯಲ್ಲಿ ನೀಡುವ ಹಣ ಮುಖ್ಯವಲ್ಲ, ಯಾವ ಮೌಲ್ಯಯುತ ಸಂಸ್ಥೆ ನೀಡುತ್ತಿದೆ ಎಂಬುದು ಮುಖ್ಯವಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ನೀಡಲಾಗುತ್ತಿರುವ ದತ್ತಿ ಪ್ರಶಸ್ತಿಗಳು ಯಾವುದೇ ವಸೂಲಿ ಬಾಜಿಗಳಿಲ್ಲದೆ, ಮುಕ್ತವಾಗಿ ಆಯ್ಕೆ ಮಾಡಲಾಗಿದೆ~ ಎಂದರು.ಈ ಸಂದರ್ಭದಲ್ಲಿ 31 ಜನರಿಗೆ ದತ್ತಿ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು.

ಕಸಾಪ ಖಂಡನೆ

ನಮ್ಮ ಅಖಂಡ ಕರ್ನಾಟಕವನ್ನು ಪ್ರಾದೇಶಿಕವಾಗಿ ಉತ್ತರ ಮತ್ತು ದಕ್ಷಿಣ ಕರ್ನಾಟಕ ಎಂದು ಮತ್ತು ಜಾತಿ ಆಧಾರದ ಮೇಲೆ ವಿಭಜನೆ ಮಾಡಿ ರಾಜಕೀಯ ಚದುರಂಗದಾಟವನ್ನು ಆಡಲಾಗುತ್ತಿದೆ. ಬರ ಪರಿಸ್ಥಿತಿಯ ಸಂಕಷ್ಟದಲ್ಲಿರುವಾಗ ಅವರಿಗೆ ಸ್ಪಂದಿಸದೆ,  ರಾಜಕೀಯ ಲಾಭಕ್ಕಾಗಿ ರಾಜಕಾರಣಿಗಳು ಹೊಡೆದಾಡುತ್ತಿದ್ದಾರೆ ಇದನ್ನು ಪ್ರಜ್ಞಾವಂತರು ಖಂಡಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತು ಕೂಡು ಇದನ್ನು ಖಂಡಿಸುತ್ತದೆ~ ಎಂದು ಪುಂಡಲೀಕ ಹಾಲಂಬಿ ಹೇಳಿದರು. `ರಾಜ್ಯಕ್ಕೆ ವೈಜ್ಞಾನಿಕ ಶಿಕ್ಷಣ ನೀತಿಬೇಕು, ಏಕರೂಪ ಮತ್ತು ಸಮಾನ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ ಜುಲೈ 21 ರಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಗುವುದು~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry