ಯೋಗ್ಯರಿಗೆ ಅವಕಾಶ ಸಿಗಲಿ

7

ಯೋಗ್ಯರಿಗೆ ಅವಕಾಶ ಸಿಗಲಿ

Published:
Updated:

ಶಿಕಾರಿಪುರ: ಗಾಂಧೀಜಿ ಅವರ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜಕ್ಕಾಗಿ ಬದುಕುವುದನ್ನು ಕಲಿಯಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.ಪಟ್ಟಣದ ಕುಮದ್ವತಿ ವಸತಿಯುತ ಕೇಂದ್ರೀಯ ಶಾಲೆಯಲ್ಲಿ ಮಂಗಳವಾರ ನಡೆದ 143ನೇ ಗಾಂಧಿ ಜಯಂತಿ ಹಾಗೂ 108ನೇ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಗಾಂಧೀಜಿ ತಂದು ಕೊಟ್ಟ ಸ್ವಾತಂತ್ರ್ಯವನ್ನು ಉಪಯೋಗಿಸಿಕೊಂಡು ದೇಶವನ್ನು ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋಗಲು ಪ್ರಾಮಾಣಿಕ ಕೈಗಳ ಅವಶ್ಯಕತೆ ಇದೆ. ದೇಶದಲ್ಲಿ ಯೋಗ್ಯರಿಗೆ ಹಾಗೂ ಪ್ರಮಾಣಿಕರಿಗೆ ಅವಕಾಶಗಳು ಸಿಗಬೇಕು ಎಂದು ಹೇಳಿದರು.ಸಮಾಜಕ್ಕಾಗಿ ಬದುಕುವ ಗುಣವನ್ನು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು. ರಾಜಕಾರಣದಲ್ಲಿ ಪ್ರತಿಕ್ಷಣ ಜಾತಿ ವಿಷಬೀಜ ಬಿತ್ತಿ ದೇಶ ಹಾಗೂ ರಾಜ್ಯದ ಅಭಿವೃದ್ಧಿಯನ್ನು ಹಾಳು ಮಾಡುವವರ ಸಂಖ್ಯೆ ಇಂದು ಹೆಚ್ಚಾಗಿದೆ ಎಂದರು.ವಸತಿ ಸಚಿವ ವಿ. ಸೋಮಣ್ಣ ಮಾತನಾಡಿ, ಗಾಂಧೀಜಿ ಅವರ ವಿಚಾರಧಾರೆಗಳನ್ನು ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸುವ ಪ್ರಯತ್ನ ಆಗಬೇಕು. ಗಾಂಧೀಜಿ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ರಾಜ್ಯದ ದೀನದಲಿತರಿಗೆ ಅನುಕೂಲವಾಗುವ ಹಲವು ಅಭಿವೃದ್ಧಿಪರ ಯೋಜನೆಗಳನ್ನು ನೀಡಿದ್ದಾರೆ ಎಂದರು.ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ, `ಕಾಡಾ~ ಅಧ್ಯಕ್ಷ ಕೆ. ಶೇಖರಪ್ಪ, ವಿಧಾನ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ,  ರಾಜ್ಯ ಕೈಗಾರಿಕಾ ಅಭಿವೃದ್ಧಿ ಮಹಾಮಂಡಳಿ ಉಪಾಧ್ಯಕ್ಷ ಚೂಡಾನಾಯ್ಕ, ಕುವೆಂಪು ವಿಶ್ವವಿದ್ಯಾಲಯ ಸ್ನಾತಕೋತ್ತರ ಶಿಕ್ಷಣ ವಿಭಾಗ ಮುಖ್ಯಸ್ಥ ಡಾ.ಎಸ್.ಎಸ್. ಪಾಟೀಲ್, ಸಂಸ್ಥೆ ನಿರ್ದೇಶಕರಾದ ತೇಜಸ್ವೀನಿ ರಾಘವೇಂದ್ರ, ಶಿವಕುಮಾರ್, ಆಡಳಿತಾಧಿಕಾರಿ ಕೆ.ಆರ್. ದಯಾನಂದ್ ಉಪಸ್ಥಿತರಿದ್ದರು.ತತ್ವ- ಸಿದ್ಧಾಂತ ಅಗತ್ಯ

ಸೊರಬ: ಮಹಾತ್ಮ ಗಾಂಧೀಜಿ ಅವರ ತತ್ವ, ಸಿದ್ಧಾಂತ ಹಾಗೂ ಆದರ್ಶ ಪಾಲನೆಯ ಹಾದಿಯಲ್ಲಿ ಕಾಂಗ್ರೆಸ್ ಇಂದಿಗೂ ದೇಶದಲ್ಲಿ ಆಡಳಿತ ನಡೆಸುತ್ತಿದ್ದು, ಜನಪರ ಯೋಜನೆಗಳನ್ನು ನೀಡುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ನುಡಿದರು. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಗಾಂಧೀಜಿ ಅವರು ದೂರದೃಷ್ಟಿಯನ್ನು ಹೊಂದಿ ಅಹಿಂಸೆಯ ಮಾರ್ಗವನ್ನು ಹಿಡಿದು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾತ್ಮರು.  ಯಾವುದೇ, ವ್ಯಕ್ತಿಯ ಮನಸ್ಸು ಮತ್ತು ಹೃದಯಕ್ಕೆ ನೋವಾಗದಂತೆ ನಡೆದುಕೊಳ್ಳುವುದೇ ನಿಜವಾದ ಅಹಿಂಸಾ ಮಾರ್ಗವಾಗಿದೆ. ವ್ಯಾವಹಾರಿಕ ಮತ್ತು ರಾಜಕೀಯ ದೃಷ್ಟಿಯಿಂದ ಹಬ್ಬಗಳ ಆಚರಣೆ ಸಲ್ಲದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ವ್ಯಾಪಾರವನ್ನೇ ಬದುಕನ್ನಾಗಿ ತಿಳಿದುಕೊಂಡವರು ಸಮಾಜ ಸೇವೆ ಮಾಡಲು ಸಾಧ್ಯವಿಲ್ಲ ಎಂದರು. ಸಾರ್ವಜನಿಕರ ಹಣ ದೇವರ ಹುಂಡಿಯಲ್ಲಿದ್ದ ಹಣವಿದ್ದಂತೆ. ಹಣಲೂಟಿ ಮಾಡುವ ರಾಜಕಾರಣಿಗಳಿಗೆ ಎಂದಿಗೂ ಉಳಿಗಾಲವಿಲ್ಲ. ತಪ್ಪು ಮಾಡುವುದು ಸುಲಭ, ಜೀವನದಲ್ಲಿ ತಪ್ಪು ತಿದ್ದಿಕೊಂಡು ನಡೆಯುವುದೇ ನಿಜವಾದ ಜೀವನ. ರಾಜಕೀಯ ಭಾಷಣದಿಂದ ಸಮಾಜದ ಪರಿವರ್ತನೆ ಸಾಧ್ಯವಿಲ್ಲ ಎಂದರು.ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಪಾತ್ರ ಶೂನ್ಯ. ಗಾಂಧೀಜಿ ಕುಟುಂಬದ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ಬಲಿದಾನವಾಗಿದ್ದು, ಇಂತಹ ನಾಯಕರುಗಳ ತ್ಯಾಗ, ಬಲಿದಾನದ ತತ್ವ-ಸಿದ್ಧಾಂತಗಳು ಇಂದಿನ ಜನಾಂಗಕ್ಕೆ ಅತೀ ಅವಶ್ಯಕವಾಗಿವೆ. ಇವೆಲ್ಲವನ್ನು ಮೈಗೂಡಿಸಿಕೊಂಡಿರುವ ಕಾಂಗ್ರೆಸ್ ಉಳಿಸಿ-ಬೆಳೆಸುವಲ್ಲಿ ಯುವಕರು ಸನ್ನದ್ಧರಾಗಬೇಕು ಎಂದರು.`ಕಾಂಗ್ರೆಸ್‌ಗೆ ಬನ್ನಿ ಬದಲಾವಣೆ ತನ್ನಿ~ ಎಂಬ ಕಾಂಗ್ರೆಸ್ ಕಾರ್ಯಕ್ರಮದ ಅಂಗವಾಗಿ ವಿವಿಧ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.ಕೆ. ಮಂಜುನಾಥ, ಮಲ್ಲಿಕಾರ್ಜುನ ಗುತ್ತೇರ್, ಟಿ.ಆರ್. ಸುರೇಶ್, ಬಂದಗಿ ಬಸವರಾಜ್, ಎಂ.ಡಿ. ಉಮೇಶ, ಕೆ. ಅಜ್ಜಪ್ಪ, ಮಧುಕೇಶ್ವರ, ಸೋಮಶೇಖರ ತಾಳಗುಪ್ಪ, ನಿಟ್ಟಕ್ಕಿ ಜೀವಣ್ಣ, ಯೂಸೂಫ್ ಸಾಬ್, ಕೆ.ಜಿ. ಲೋಲಾಕ್ಷಮ್ಮ, ಲಲಿತಮ್ಮ ಇದ್ದರು.ಗಾಂಧಿ ಜಯಂತಿ

ಹೊಳೆಹೊನ್ನೂರು: ವಿದೇಶಿಯರ ದಾಸ್ಯದಿಂದ ದೇಶಿಯ ಜನರ ಬದುಕನ್ನ ಮುಕ್ತಗೊಳಿಸಿ ಸ್ವತಂತ್ರದ ಬದುಕಿಗೆ ದಾರಿ ದೀಪವಾದ ಕಾರಣಕ್ಕಾಗಿ ಗಾಂಧಿ ಭಾರತ ದೇಶದ ರಾಷ್ಟ್ರಪಿತರಾದರು ಎಂದು ನಂಜುಂಡೇಶ್ವರ ಪ್ರೌಢಶಾಲಾ ಮುಖ್ಯಶಿಕ್ಷಕ ಆರ್. ಶಿವಲಿಂಗಪ್ಪ ತಿಳಿಸಿದರು.ನಾಗತಿಬೆಳಗಲು ಗ್ರಾಮದ  ನಂಜುಂಡೇಶ್ವರ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶಿಕ್ಷಕ ಮಂಜಪ್ಪಾಚಾರಿ ಮಾತನಾಡಿದರು. ಅಂಬುಜಾ, ಮಮತಾ ಸಂಗಡಿಗರು ಪ್ರಾರ್ಥಿಸಿದರು. ಎಸ್. ಕುಮಾರ್ ಸ್ವಾಗತಿಸಿದರು. ಎಚ್.ಆರ್. ಸುರೇಶ್ ವಂದಿಸಿದರು. ಸತ್ಯನಾರಾಣ್ ನಿರೂಪಿಸಿದರು.ಹಣ್ಣು-ಹಂಪಲು ವಿತರಣೆ

ಹೊಸನಗರ: ಗಾಂಧಿ ಜಯಂತಿ ಅಂಗವಾಗಿ ಬಿಎಸ್‌ಆರ್ ಪಕ್ಷದ ಕಾರ್ಯಕರ್ತರು ಸಾರ್ವಜನಿಕ ಆಸ್ಪತ್ರೆಯ ಹೊರ-ಒಳ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಣೆ ಹಾಗೂ `ಪ್ಲಾಸ್ಟಿಕ್ ಹೆಕ್ಕಿ~ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ಆಸ್ಪತ್ರೆಯಲ್ಲಿ ಹಾಲು- ಹಣ್ಣು-ಬ್ರೆಡ್ ವಿತರಿಸಿದ ನಂತರ ಶಾಲೆ, ಆಸ್ಪತ್ರೆ ಆವರಣ, ನಗರದ ಪ್ರಮುಖ ಬೀದಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕುವುದು. ಮನೆ, ಅಂಗಡಿ, ಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವಂತೆ ಮನ ಒಲಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ನೂತನವಾಗಿ ಅಸ್ತತ್ವಕ್ಕೆ ಬಂದ ಬಿಎಸ್‌ಆರ್ ಪಕ್ಷದ ಕಾರ್ಯಕರ್ತರಾದ ಆಟೋ ವಸಂತ್, ಆಟೋ ಕುಮಾರ್, ನಿಂಗಮೂರ್ತಿ, ಅನ್ವರ್ ಬಾಷಾ, ಬುಲೆಟ್ ಗುರುರಾಜ್ ಭಾಗವಹಿಸಿದ್ದರು.ಗಾಂಧಿ ವಿಚಾರಧಾರೆ ಅನುಕರಣೀಯ

ತೀರ್ಥಹಳ್ಳಿ: ಜಗತ್ತಿನ ಬಿಕ್ಕಟ್ಟುಗಳ ಪರಿಹಾರಕ್ಕೆ ಇಂದು ಗಾಂಧೀಜಿ ವಿಚಾರಧಾರೆಗಳು ಹೆಚ್ಚು ಪ್ರಸ್ತುತ. ಎಲ್ಲಾ ಕಾಲಕ್ಕೂ ಗಾಂಧೀಜಿ ಅನುಸರಿಸಿದ ಮಾರ್ಗ ಅನುಕರಣೀಯ ಆಗಿದೆ ಎಂದು ಶಾಸಕ ಕಿಮ್ಮನೆ ರತ್ನಾಕರ್ ಅಭಿಪ್ರಾಯಪಟ್ಟರು.ಮಂಗಳವಾರ ಪಟ್ಟಣದ ಗಾಂಧಿಚೌಕದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಜನ್ಮ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.ಕವಲೇದುರ್ಗ ಭುವನಗಿರಿ ಮಹಾಸಂಸ್ಥಾನದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ  ಮಾತಿನಾಡಿದರು.

ತಹಶೀಲ್ದಾರ್ ಗಣೇಶಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ಟಿ.ಎಲ್. ಸುಂದರೇಶ್, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮೀವೆಂಕಟಪ್ಪ, ಉಪಾಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ ಉಪಸ್ಥಿತರಿದ್ದರು.ಆಡಿನಸರ ಸತೀಶ್‌ಕುಮಾರ್ ಸ್ವಾಗತಿಸಿದರು. ಧನಂಜಯ ವಂದಿಸಿದರು. ರಾಮಣ್ಣ ಕಾರ್ಯಕ್ರಮ ನಿರೂಪಿಸಿದರು.ಕಾಂಗ್ರೆಸ್ ಕಚೇರಿಯಲ್ಲಿ ಗಾಂಧೀಜಯಂತಿ: ಕಾಂಗ್ರೆಸ್ ಕಚೇರಿಯಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಶಾಸಕ ಕಿಮ್ಮನೆ ರತ್ನಾಕರ್ ಅವರು ದೀಪ ಬೆಳಗುವ ಮೂಲಕ ಗಾಂಧಿ ಜನ್ಮ ದಿನ ಆಚರಿಸಲಾಯಿತು. ಜಫರುಲ್ಲಾ ಕಾರ್ಯಕ್ರಮ ನಿರೂಪಿಸಿದರು.ದೇಶಭಕ್ತಿ ಮಾದರಿ

ಕಾರ್ಗಲ್: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಲ್ಲಿ ಹುದುಗಿಕೊಂಡಿದ್ದ ಅಪಾರ ಪ್ರಮಾಣದ ದೇಶಭಕ್ತಿ ಮತ್ತು ಸರಳ ಜೀವನ ಇಂದಿನ ಯುವಕರಿಗೆ ಮಾದರಿಯಾಗಿದೆ ಎಂದು ಶರಾವತಿ ಕಣಿವೆಯ ರಾಷ್ಟ್ರೀಯ ಸಂಪತ್ತುಗಳ ರಕ್ಷಣೆಗೆ ನಿಯುಕ್ತಿಯಾಗಿರುವ ಡಿಎಆರ್ ಘಟಕದ ಉಸ್ತುವಾರಿ ಅಧಿಕಾರಿ ಜಿ. ತಿಪ್ಪೇಸ್ವಾಮಿ ತಿಳಿಸಿದರು.ಇಲ್ಲಿನ ರಶಿಯನ್ ಕಾಲೊನಿಯಲ್ಲಿ ನೂತನವಾಗಿ ಆರಂಭವಾಗಿರುವ ಡಿಎಆರ್ ಶಾಖಾ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿಯ 143ನೇ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.ಪೊಲೀಸ್ ಸಿಬ್ಬಂದಿ ಪ್ರೀತಂ ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಮನ ಅರ್ಪಿಸಿದರು. ಪ್ರಶಾಂತ್ ವಂದಿಸಿದರು. ಸಮುದಾಯಕ್ಕೆ ಅವಶ್ಯ

ಭದ್ರಾವತಿ: ಸತ್ಯ, ಅಹಿಂಸೆ, ಪ್ರೀತಿ... ಮೂಲಕ ಎಲ್ಲವನ್ನು ಸಾಧಿಸಬಹುದು ಎಂದು ಸಾರುವ ಮಹಾತ್ಮ ಗಾಂಧಿ ಅವರ ಆದರ್ಶ ಸೂತ್ರಗಳು ಇಂದಿನ ಯುವ ಸಮೂಹಕ್ಕೆ ಅವಶ್ಯವಾಗಿ ಬೇಕಿದೆ ಎಂದು ಶೀಘ್ರ ವಿಲೇವಾರಿ ನ್ಯಾಯಾಲಯ ನ್ಯಾಯಾಧೀಶರಾದ ಆರ್.ಕೆ. ತಾಳಿಕೋಟೆ ಹೇಳಿದರು. ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನ್ಯಾಯಾಧೀಶರಾದ ಮಹಮದ್ ಮುಜೀರುಲ್ಲಾ, ಗಿರೀಶ್ ಕೆ. ಭಟ್, ವಕೀಲರಾದ ಎಸ್.ವಿ. ಶಿವಶಂಕರ್, ಎಚ್. ವಿನಾಯಕ, ಸೈಯದ್‌ನಿಯಾಜ್, ನಿಜಾಮುದ್ದೀನ್, ನ್ಯಾಯಾಲಯ ಸಿಬ್ಬಂದಿ ಪರಮೇಶ್ ಮಾತನಾಡಿದರು.ವೇದಿಕೆಯಲ್ಲಿ ನ್ಯಾಯಾಧೀಶರಾದ ಎಂ. ಸಾಂಬ್ರಾಣಿ, ಜಿ. ಮಧುಸೂದನ್, ಕೆ.ಎಂ. ಪುಟ್ಟಸ್ವಾಮಿ, ಹಿರಿಯ ವಕೀಲರಾದ ಮಂಗೋಟೆ ಮುರಿಗೆಪ್ಪ ಉಪಸ್ಥಿತರಿದ್ದರು. ಲೋಕೆಶ್ವರಪ್ಪ ಸ್ವಾಗತಿಸಿ, ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry