ಯೋಚನಾ ಲಹರಿ ಬದಲಿಸಿಕೊಳ್ಳಿ

7
ಸ್ವಸ್ಥ ಬದುಕು

ಯೋಚನಾ ಲಹರಿ ಬದಲಿಸಿಕೊಳ್ಳಿ

Published:
Updated:
ಯೋಚನಾ ಲಹರಿ ಬದಲಿಸಿಕೊಳ್ಳಿ

ಸುಂದರವಾದ, ಆರೋಗ್ಯಕರವಾದ ಬದುಕು ನಿಮ್ಮದಾಗಬೇಕು ಅಂದಲ್ಲಿ ನಿಮ್ಮ ಯೋಚನಾ ಲಹರಿಯನ್ನು ಬದಲಿಸಿಕೊಳ್ಳಬೇಕು. ಆಲೋಚನೆಗಳಲ್ಲಿ ಕರುಣೆ ತುಂಬಿಕೊಂಡಿರಬೇಕು.ನಾನು ಶಾಂತಿಯಿಂದ ಇರಬಯಸುತ್ತೇನೆ. ಹಾಗಾಗಿ, ನನ್ನೊಂದಿಗೆ ಶಾಂತಿಯಿಂದ ಇರು ಎಂದು ನಿಮ್ಮ ಆಲೋಚನೆಗಳಿಗೆ ತಿಳಿ ಹೇಳಿ. ಹೌದು, ಬುದ್ಧಿವಂತ ವ್ಯಕ್ತಿ ಯಾವಾಗಲೂ ತನ್ನ ಆಲೋಚನೆಗಳನ್ನು ಸ್ನೇಹಿತನಾಗಿಸಿಕೊಳ್ಳುತ್ತಾನೆ. ಅವುಗಳತ್ತ ಗಮನ ಇಡುತ್ತಾನೆ. ಅವುಗಳಲ್ಲಿ ಪ್ರೀತಿ ತುಂಬುತ್ತಾನೆ. ಅವುಗಳಿಗೆ ಕರುಣೆಯೆಂಬ ಪೌಷ್ಟಿಕಾಂಶ ನೀಡುತ್ತಾನೆ. ಪ್ರಶಾಂತವಾಗಿ ಎಲ್ಲದರೊಂದಿಗೆ ಮಿಳಿತವಾಗುವ ಕಲೆ ಕಲಿಸುತ್ತಾನೆ.4ನಿಮ್ಮ ಯೋಚನೆಗಳಿಗೆ ನಿರ್ದೇಶನ ನೀಡಿದ ನಂತರ ಕಣ್ಣು ಮುಚ್ಚಿಕೊಳ್ಳಿ. ದೈಹಿಕ, ಮಾನಸಿಕ ವಿಶ್ರಾಂತಿ ಪಡೆಯಿರಿ. ಮನಸ್ಸು ವಿಶ್ರಾಂತ ಸ್ಥಿತಿಯಲ್ಲಿದ್ದಾಗ ಅದರ ಪರಿಶುದ್ಧತೆಯ ಅನುಭವ ನಿಮಗಾಗುತ್ತದೆ. ಇಂತಹ ದೈವಿಕ ಸ್ಥಿತಿಯಲ್ಲಿದ್ದಾಗ ಯಾವುದೇ ದೈಹಿಕ ನೋವಿದ್ದರೂ ಅದು ಮಾಯವಾಗುತ್ತದೆ. ನಮ್ಮ ಮನದಲ್ಲಿ ಆಲೋಚನೆಗಳ ದಟ್ಟಣೆ ಇರದಾಗ ವಿಶ್ವಪ್ರಜ್ಞೆ ನಮ್ಮ ಪ್ರಜ್ಞೆಯನ್ನು ತಲುಪುತ್ತದೆ.4ಈಗ ನಿಮ್ಮನ್ನು ಬೃಹತ್ ವಿಶ್ವದ ಭಾಗವಾಗಿ ಕಲ್ಪಿಸಿಕೊಳ್ಳಿ. ನಿಮ್ಮ ಮನಸ್ಸು ಯಾವುದೇ ಗೋಡೆಗಳಿಲ್ಲದ ಅನಂತ ವಿಶ್ವದಲ್ಲಿ ವ್ಯಾಪಿಸುತ್ತಾ ಹೋಗುತ್ತದೆ ಅಂದುಕೊಳ್ಳಿ. `ಸ್ಕ್ವಾಶ್' ಆಟಗಾರನೊಬ್ಬ ಗೋಡೆಗಳಿಗೆ ಚೆಂಡನ್ನು ಬಡಿಯುತ್ತಲೇ ಹೋಗುತ್ತಾನೆ. ಅದು ಪುಟಿದು ವಾಪಸು ಬರುತ್ತದೆ. ಅದೇ ರೀತಿ ನಮ್ಮ ಮನಸ್ಸಿನಲ್ಲಿ ಪೂರ್ವಗ್ರಹ ಹಾಗೂ ನಕಾರಾತ್ಮಕ ಚಿಂತನೆಗಳು ಇದ್ದಾಗ ಅವು `ಸ್ಕ್ವಾಶ್' ಚೆಂಡಿನಂತೆ ವಾಪಸು ನಮಗೆ ಬಡಿಯುತ್ತವೆ. ಆಗ, ನಮಗೆ ಕಿರಿಕಿರಿಯಾಗುತ್ತದೆ. ನಾವು ಅಂದುಕೊಂಡದ್ದು ನಡೆಯದಾದಾಗ ಹತಾಶೆ ಆವರಿಸುತ್ತದೆ. ಆದರೆ, ವಿಶಾಲವಾದ ಮನಸ್ಸು ಹಾಗಲ್ಲ. ಅದು ಎಲ್ಲವನ್ನೂ ಸ್ವೀಕರಿಸುತ್ತದೆ.ವ್ಯಾವಹಾರಿಕ ಮಟ್ಟದಲ್ಲೂ ಅದು ಸುಂದರವಾಗಿ ವರ್ತಿಸುತ್ತದೆ. ನಾನು ಬರೆಯುತ್ತಿರುವಾಗ ಕರೆಗಂಟೆ ಕೇಳುತ್ತದೆ. ಕೊರಿಯರ್ ಸ್ವೀಕರಿಸಿದ ನಂತರ ನಾನು ಮತ್ತೆ ಬರೆಯಲು ಕುಳಿತುಕೊಳ್ಳುತ್ತೇನೆ. ಕೆಲವೇ ಶಬ್ದ ಬರೆದಾದ ನಂತರ ಫೋನ್ ರಿಂಗಣಿಸುತ್ತದೆ. ಕರೆ ಮಾಡಿದವರ ಜತೆ ಮಾತುಕತೆ ನಡೆಸಿದ ನಂತರ ಮತ್ತೆ ನಾನು ಬರೆಯಲು ಆರಂಭಿಸುತ್ತೇನೆ. ಈ ಅಡಚಣೆಗಳೆಲ್ಲ ನನಗೆ ನೆನಪಾಗುವುದೇ ಇಲ್ಲ.ಮೊದಲೆಲ್ಲ ನನಗೆ ಇದರಿಂದ ತುಂಬ ಕಿರಿಕಿರಿಯಾಗುತ್ತಿತ್ತು. ಸಿಟ್ಟು ಆವರಿಸಿ ಬರವಣಿಗೆ ನಿಂತು ಹೋಗುತ್ತಿತ್ತು. ಬರೆಯುವುದು, ದೂರವಾಣಿಗೆ ಉತ್ತರಿಸುವುದು, ಕೊರಿಯರ್ ಸ್ವೀಕರಿಸುವುದು ಇತ್ಯಾದಿಗಳು ಬೇರೇ ಬೇರೆ ಎಂದು ವಿಭಾಗಿಸುವುದನ್ನು ಈಗ ಬಿಟ್ಟುಬಿಟ್ಟಿದ್ದೇನೆ. ಇವೆಲ್ಲ ಒಂದೇ ವಿಶಾಲ ಪ್ರಕ್ರಿಯೆಯ ಭಾಗ ಎಂಬಂತೆ ಸ್ವೀಕರಿಸುತ್ತೇನೆ. ಮನಸ್ಸಿನಲ್ಲಿನ ಗೋಡೆಗಳು ಮುರಿದುಬಿದ್ದಾಗ ಹೊರಗಿನ ಗೋಡೆಗಳು ಮಾಯವಾಗುತ್ತವೆ. ಒಳಗೆ ಶಾಂತಿಯಿದ್ದಾಗ ಹೊರಗೂ ಶಾಂತಿ ಕಾಣುತ್ತದೆ.ಅಂತಹ ಪ್ರಶಾಂತ ಮನಃಸ್ಥಿತಿಯಲ್ಲಿ ಇದ್ದಾಗ ನಿಮ್ಮ ಹಳೆಯ ವರ್ತನೆಯನ್ನೇ ಪ್ರಶ್ನಿಸಲು ಮುಂದಾಗುತ್ತೀರಿ. ಮುಷ್ಟಿ ಬಿಗಿ ಹಿಡಿದು ಸಾಗದೇ ಮುಕ್ತವಾದ, ಸ್ನೇಹಹಸ್ತ ಚಾಚುತ್ತೀರಿ. ನೀವು ಬದುಕನ್ನು ಅರ್ಥ ಮಾಡಿಕೊಂಡಾಗ ಅದು ನಿಮಗೆ ಒಳ್ಳೆಯದನ್ನು ನೀಡುತ್ತದೆ. ನೀವು ಸಂತಸದಿಂದ, ಸಮೃದ್ಧಿಯಿಂದ ಇರಲಿ ಎಂದು ಬದುಕು ಬಯಸುತ್ತದೆ.ನಿಮಗೆ ಯಾವುದಾದರೂ ಸಂಗತಿ ಇಷ್ಟವಾಗದೇ ಹೋದರೇ ಅದನ್ನು ಬದಲಿಸುವ ಸ್ವಾತಂತ್ರ್ಯ ನಿಮಗೇ ಇದ್ದೇ ಇರುತ್ತದೆ. ಬದಲಿಸಲು ಸಾಧ್ಯವಾಗದೇ ಹೋದರೆ ನೀವು ಅದನ್ನು ನೋಡುವ ದೃಷ್ಟಿಕೋನವನ್ನೇ ಬದಲಿಸಿಕೊಳ್ಳಬಹುದು. ನಿಮ್ಮ ಮನೋಭಾವ ಬದಲಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದಾಗ ವೈದ್ಯರನ್ನೋ, ಆಪ್ತ ಸಲಹಾಕಾರರನ್ನೋ ಭೇಟಿಯಾಗಿ. ಇಲ್ಲವೇ ಈ ಎಲ್ಲ ಲೌಕಿಕ ವ್ಯವಹಾರಗಳಿಂದ ದೂರ ಸರಿದು ಅಧ್ಯಾತ್ಮದತ್ತ ಮುಖ ಮಾಡಿ.ದಯವಿಟ್ಟು ಅರ್ಥ ಮಾಡಿಕೊಳ್ಳಿ. ಸಿಟ್ಟು ಮಾಡಿಕೊಳ್ಳುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆ ಸಿಟ್ಟು ನಿಮ್ಮನ್ನೇ ಹಾಳು ಮಾಡುತ್ತದೆ. ನೀವು ಸಿಟ್ಟಾಗಿದ್ದರೂ ಕರೆಗಂಟೆ ಬಾರಿಸುತ್ತದೆ, ದೂರವಾಣಿ ರಿಂಗಣಿಸುತ್ತದೆ.ಬೇರೆಯವರ ಸ್ವಾರ್ಥ, ಸಮಯಸಾಧಕತನ, ದೋಷಗಳತ್ತ ನೀವು ಯೋಚಿಸುತ್ತಿದ್ದಲ್ಲಿ ನೀವು ಸಿಟ್ಟಿನ ಕನ್ನಡಕದಿಂದ ಎಲ್ಲವನ್ನೂ ನೋಡುತ್ತಿದ್ದೀರಿ ಎಂದು ಅರ್ಥ. ಹಾಗೆ ಯೋಚಿಸಿದಂತೆಲ್ಲ ನಿಮ್ಮ ಅಂತಃಚಕ್ಷುಗಳು ಮಸುಕಾಗುತ್ತವೆ. ಸಿಟ್ಟೆಂಬ ಕನ್ನಡಕದ ಬಲ ಹೆಚ್ಚುತ್ತಾ ಹೋಗುತ್ತದೆ.ಸಿಟ್ಟನ್ನು ಕಡಿಮೆಗೊಳಿಸುತ್ತಾ ಹೋಗಿ. ಎಲ್ಲವನ್ನೂ ಸಕಾರಾತ್ಮಕವಾಗಿ ನೋಡುವುದನ್ನು ಕಲಿತುಕೊಳ್ಳಿ. ಯಾರನ್ನಾದರೂ ಪ್ರೀತಿಸುವುದು ಸಾಧ್ಯವಾಗದಿದ್ದಲ್ಲಿ, ಅವರನ್ನು ದ್ವೇಷಿಸುವುದನ್ನಾದರೂ ಬಿಡಿ. ತಟಸ್ಥವಾಗಿರಿ. ತಟಸ್ಥ ಸ್ಥಿತಿಯಲ್ಲಿ ಇದ್ದಾಗ ನಿಮ್ಮ ಆಲೋಚನೆಗಳು ನಿಮಗೆ ನೋವು ಉಂಟು ಮಾಡುವುದಿಲ್ಲ. ಹಾನಿ ಉಂಟು ಮಾಡುವುದಿಲ್ಲ. ಆರೋಗ್ಯಕರ ಜೀವನಕ್ಕೆ ಇದು ಮೊದಲ ಹೆಜ್ಜೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry