ಭಾನುವಾರ, ನವೆಂಬರ್ 17, 2019
24 °C

ಯೋಜನೆಗಳ ಮಹಾಪೂರ: ಜನಾರ್ದನಸ್ವಾಮಿ

Published:
Updated:

ಚಿತ್ರದುರ್ಗ: ಹಿಂದುಳಿದ ಜಿಲ್ಲೆ ಹಣೆಪಟ್ಟಿ ಹೋಗಲಾಡಿಸಲು ಬಿಜೆಪಿ ಸರ್ಕಾರ ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದು, ಭದ್ರಾ ಮೇಲ್ದಂಡೆ ಕಾಮಗಾರಿ ಸೇರಿದಂತೆ ವಿವಿಧ ಯೋಜನೆಗಳಿಗಾಗಿ ಜಿಲ್ಲೆಗೆ 2009ರಿಂದ ಇಲ್ಲಿವರೆಗೆ ಸುಮಾರುರೂ17,500 ಕೋಟಿ  ಅನುದಾನ ಹರಿದು ಬಂದಿದೆ ಎಂದು ಸಂಸತ್ ಸದಸ್ಯ ಜನಾರ್ದನಸ್ವಾಮಿ ತಿಳಿಸಿದರು.ಕಳೆದ 60 ವರ್ಷಗಳಿಂದ ಜಿಲ್ಲೆ ಅನುಭವಿಸಿದ್ದ ಅಭಿವೃದ್ಧಿಯ ಹಿನ್ನೆಡೆಯನ್ನು ಬಿಜೆಪಿ ಸರ್ಕಾರ ಕೇವಲ 3 ವರ್ಷಗಳಲ್ಲಿ ಸರಿದೂಗಿಸುವ ಪ್ರಯತ್ನ ನಡೆಸಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಎಲ್ಲ ರೀತಿಯ ಕ್ರಮಕೈಗೊಂಡಿದೆ ಎಂದು ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜನತೆಗೆ ಕೊಟ್ಟ ಆಶ್ವಾಸನೆಯಂತೆ ಭದ್ರಾ ಮೇಲ್ದಂಡೆ  ಯೋಜನೆಗೆ  ಅಡಿಗಲ್ಲು  ಹಾಕಿದರು.   ಎಂದರು.ವಾಣಿವಿಲಾಸ  ಸಾಗರದ ಅಭಿವೃದ್ಧಿಗೆ   5 ಕೋಟಿ  ಬಿಡುಗಡೆಯಾಗಿದೆ. ಕೋಟೆ ಅಭಿವೃದ್ಧಿಗೆರೂ70 ಕೋಟಿ ನೀಡಲು ಮನವಿ ಮಾಡಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಗಮನಹರಿಸಲಿಲ್ಲ. ಜತೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಿಂದ ಜಿಲ್ಲೆಯಲ್ಲಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸುವಂತೆ ಕೋರಲಾಗಿದ್ದು, ಕುಲಪತಿ ಒಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಸುಮಾರು 150 ಎಕರೆ ಪ್ರದೇಶದಲ್ಲಿ ಕಾಲೇಜು ತಲೆ ಎತ್ತಲಿದೆ ಎಂದು ಮಾಹಿತಿ ನೀಡಿದರು.

ಸ್ಪಂದಿಸದ ವೈಜ್ಞಾನಿಕ ಸಂಸ್ಥೆಗಳು:  ಚಳ್ಳಕೆರೆ ತಾಲ್ಲೂಕಿನ ಕುದಾಪುರ ಅಮೃತ ಮಹಲ್ ಕಾವಲ್‌ನಲ್ಲಿ ಸ್ಥಾಪಿಸಲಾಗುತ್ತಿರುವ ಐಐಎಸ್ಸಿ, ಡಿಆರ್‌ಡಿಓ, ಬಿಎಆರ್‌ಸಿ, ಇಸ್ರೋ ಮುಂತಾದ ಸಂಸ್ಥೆಗಳು ಸ್ಥಳೀಯರ ಜತೆ ಉತ್ತಮ ಬಾಂಧವ್ಯ ಹೊಂದಬೇಕು. ನಮ್ಮದೇ ಭೂಮಿ, ನಮ್ಮದೇ ಪ್ರಪಂಚ ಎನ್ನುವಂತೆ ವರ್ತಿಸಬಾರದು. ಈ ಕುರಿತಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಾಗೂ ವೈಜ್ಞಾನಿಕ ಸಂಸ್ಥೆಗಳ ನಡುವೆ ಮಧ್ಯವರ್ತಿಯಾಗಿ ಪರಿಸ್ಥಿತಿ ತಿಳಿಪಡಿಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.

ನಗರಸಭೆ ಅವ್ಯವಸ್ಥೆ: ವಿವಿ ಸಾಗರ ಹಾಗೂ ಶಾಂತಿ ಸಾಗರದಿಂದ ನಗರಕ್ಕೆ ಶೇ 50ರಷ್ಟು ಕುಡಿಯುವ ನೀರು ಬರುತ್ತಿದೆ. ಯೋಜನೆಯ ಆರಂಭದಲ್ಲಿ ಎಷ್ಟು ನೀರು ಬರುತ್ತಿದೆ ಎನ್ನುವುದನ್ನು ಮೀಟರ್ ಅಳವಡಿಸಿ ಪರೀಕ್ಷಿಸಲಾಗಿತ್ತು. ಆದರೆ, ಕಳೆದ ವರ್ಷಗಳಲ್ಲಿ ಎಷ್ಟು ನೀರು ಬಂದಿದೆ, ಎಲ್ಲಿ ಸೋರಿಕೆಯಾಗುತ್ತಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ನೀರಿನ ಅಗತ್ಯತೆ ಹಾಗೂ ಸರಬರಾಜಿನ ನಡುವೆ ದೊಡ್ಡ ಕಂದರ ನಿರ್ಮಾಣವಾಗಿದೆ ಎಂದರು.ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಜಿ.ಎಂ. ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ವಕ್ತಾರ ಎಚ್. ಮೋಹನ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)