ಯೋಜನೆ ಕೇಂದ್ರದ್ದು, ಪ್ರಚಾರ ರಾಜ್ಯಕ್ಕೆ

7

ಯೋಜನೆ ಕೇಂದ್ರದ್ದು, ಪ್ರಚಾರ ರಾಜ್ಯಕ್ಕೆ

Published:
Updated:

ಉಡುಪಿ: ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ರೂಪಿಸಿದ ಹಲವು ಯೋಜನೆಗಳನ್ನು ರಾಜ್ಯ ಸರ್ಕಾರ ತನ್ನದೆಂದು ಬಿಂಬಿಸಿಕೊಳ್ಳುತ್ತಿದ್ದು ಈ ಬಗ್ಗೆ  ಮತದಾರರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಪೂರ್ವಸಿದ್ಧತೆಗಾಗಿ ಭಾವಿ ಸಿದ್ಧತಾ ಸಭೆಯನ್ನು ಇದೇ 11ರಂದು ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿಯ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಅಧ್ಯಕ್ಷ ಸಿ.ಎಂ.ಧನಂಜಯ ಇಲ್ಲಿ ತಿಳಿಸಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, `ಈ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಎಐಸಿಸಿ ಪ್ರದಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ , ಕೇಂದ್ರ ಸಚಿವರಾದ ಎಂ ವೀರಪ್ಪ ಮೊಯಿಲಿ, ಕೆ.ಎಚ್.ಮುನಿಯಪ್ಪ, ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ , ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್. ಶಂಕರ್, ಶಾಸಕರು ಹಾಗೂ ಇತರ ಮುಖಂಡರು ಭಾಗವಹಿಸಲಿದ್ದಾರೆ~ ಎಂದರು.ಕೇಂದ್ರ ಸರ್ಕಾರವು `ಭಾರತ್ ನಿರ್ಮಾಣ್~ ಯೋಜನೆ ಮೂಲಕ ರಾಜ್ಯಗಳಿಗೆ ಸಾಕಷ್ಟು ಅನುದಾನ ಒದಗಿಸಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರ ಜೀವನ ಸುಧಾರಣೆಗಾಗಿ, ಗ್ರಾಮದ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಗುಣಮಟ್ಟದ ಜೀವನ ನಿರ್ವಹಣೆಗಾಗಿ ಅನೇಕ ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದ ಅವರು, ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹಲವು ಕಾರ್ಯಕ್ರಮ ರೂಪಿಸಿದೆ. ಅವುಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು.`ಹಲವು ಯೋಜನೆಗಳಲ್ಲಿ ರಾಜ್ಯ ಸರ್ಕಾರ ಶೇ 100ರಷ್ಟು ಅನುದಾನ ಪಡೆಯುತ್ತಿದೆ. ಇನ್ನು ಕೆಲವು ಯೋಜನೆಗಳಲ್ಲಿ ಶೇ 90ರಷ್ಟು, 80ರಷ್ಟು,ಶೆ 75ರಷ್ಟು ಅನುದಾನ ಪಡೆಯುತ್ತಿದೆ. ಆದರೂ ಅವೆಲ್ಲವೂ ತನ್ನದೇ ಯೋಜನೆ ಎನ್ನುವಂತೆ ಬಿಂಬಿಸುತ್ತದೆ. ಕಾಂಗ್ರೆಸ್ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಯೋಜನೆಗಳನ್ನು ಬಿಡುಗಡೆ ಮಾಡಿದರೆ ಸೌಜನ್ಯಕ್ಕೂ ರಾಜ್ಯ ಸರ್ಕಾರ ಆ ಯೋಜನೆಗಳಲ್ಲಿ  ಕೇಂದ್ರದ ಪಾಲಿದೆ ಎಂದು ಹೇಳುವುದಿಲ್ಲ, ಹೀಗಾಗಿ ಈ ಯೋಜನೆ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡಬೇಕಾದ ಸ್ಥಿತಿ ಇದೆ~ ಎಂದರು.`ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಹಿಂದೆಂದೂ ಕಾಣದಷ್ಟು ಭ್ರಷ್ಟಾಚಾರ ನಡೆಸಿ ಪ್ರಜಾಸತ್ತೆಯ ಮೌಲ್ಯ್ನ ಮಣ್ಣುಪಾಲು ಮಾಡಿದೆ.  ಈ ವೈಫಲ್ಯಗಳನ್ನು ಪಟ್ಟಿ ಮಾಡಿ ಜನತೆಯ ಮುಂದಿಡಲಿದ್ದೇವೆ~ ಎಂದರು. ಸದನದಲ್ಲಿ ಬ್ಲೂ ಫಿಲಂ ವೀಕ್ಷಣೆ- ಕ್ರಮಕ್ಕೆ ಆಗ್ರಹ:`ವಿಧಾನಸೌಧದಲ್ಲಿ  ಬ್ಲೂಫಿಲಂ ವೀಕ್ಷಿಸಿ ರಾಜೀನಾಮೆ ಸಲ್ಲಿಸಿದ ಮೂವರು ಕಳಂಕಿತ ಸಚಿವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೇ ವಿಧಾನ ಸಭೆಯನ್ನ ವಿಸರ್ಜಿಸಿ ಚುನಾವಣೆಗೆ ಹೋಗಬೇಕು~ ಎಂದು ಅವರು ಆಗ್ರಹಿಸಿದರು.ಸಮನ್ವಯಾಧಿಕಾರಿ ಎ,ಜಿ.ಶಿವಣ್ಣ, ಸಂಚಾಲಕ ಮುನಿಯಪ್ಪ, ಲಕ್ಷ್ಮಣ ಶೆಣೈ ಹಾಗೂ ಪ್ರಕಾಶ್ ಶೆಟ್ಟಿ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry